ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಐ ಆ್ಯಪ್: ಇರಲಿ ಎಚ್ಚರ

Last Updated 19 ಫೆಬ್ರುವರಿ 2019, 19:30 IST
ಅಕ್ಷರ ಗಾತ್ರ

ನಾವು ಬ್ಯಾಂಕ್‌ನಿಂದ ಮಾತನಾಡುತ್ತಿದ್ದೇವೆ. ನಿಮ್ಮ ಮೊಬೈಲ್‌ ಫೋನ್‌ಗೆ ಬಂದಿರುವ ಸಂದೇಶ ತಿಳಿಸಿ, ನಿಮ್ಮ ಕಾರ್ಡ್ ವಿವರಗಳನ್ನು ನೀಡಿ’ ಎಂದು ಹೇಳುವವರೆಲ್ಲಾ ಮೋಸ ಮಾಡುವವರೇ ಎಂದು ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ಸೈಬರ್ ವಂಚನೆಗೆ ಗುರಿಯಾಗುತ್ತಿರುವವರ ಸಂಖ್ಯೆ ಏರುತ್ತಲೇ ಇದೆ.

ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರೂ ತಂತ್ರಜ್ಞಾನ ಅಭಿವೃದ್ಧಿಯಾಗುತ್ತಿದ್ದರೂ ಸೈಬರ್ ಕಳ್ಳರು ಕನ್ನ ಹಾಕುವುದಕ್ಕೆ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಮೊಬೈಲ್‌ ಫೋನ್‌ ಮೂಲಕ ನಗದು ವಹಿವಾಟು ನಡೆಸುತ್ತಿರುವವ ಮಾಹಿತಿ ಪಡೆಯುವುದಕ್ಕೆ ಹೊಸ ತಂತ್ರಗಳನ್ನು ಹೆಣೆಯುತ್ತಿದ್ದಾರೆ.

ಮೊಬೈಲ್‌ಫೋನ್‌ಗಳಲ್ಲಿ ಯುಪಿಐ ಆ್ಯಪ್ ಬಳಸುತ್ತಿರುವವರೆಲ್ಲರೂ ಭವಿಷ್ಯದಲ್ಲಿ ಸೈಬರ್‌ ಕಳ್ಳರ ವಂಚನೆಗೆ ತುತ್ತಾಗುವ ಸಾಧ್ಯತೆ ಇದೆ ಎಂದು ಸೈಬರ್ ಪೊಲೀಸರು ಎಚ್ಚರಿಸುತ್ತಿದ್ದಾರೆ.

ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಬದಲಿಗೆ ಮೊಬೈಲ್‌ ವಾಲೆಟ್‌ಗಳ ಬಳಕೆ ಹೆಚ್ಚಾಗುತ್ತಿದೆ. ಈ ಹಿಂದೆ ವಾಲೆಟ್‌ಗಳ ಮೂಲಕ ಕೇವಲ ₹5 ಸಾವಿರದವರೆಗೆ ಮಾತ್ರ ಹಣ ವರ್ಗಾವಣೆಗೆ ಅವಕಾಶವಿತ್ತು. ಪ್ರಸ್ತುತ ಈ ಮಿತಿ ₹1ಲಕ್ಷಕ್ಕೆ ಏರಿಕೆಯಾಗಿರುವುದರಿಂದ ಸೈಬರ್‌ ಕಳ್ಳರಿಗೆ ಬ್ರಹ್ಮಾಸ್ತ್ರ ಸಿಕ್ಕಂತಾಗಿದೆ.

ಸೌಲಭ್ಯವೇ ಕುತ್ತು!

ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಕ್ಷಣಗಳಲ್ಲಿ ಹಣ ವರ್ಗಾವಣೆ ಮಾಡಲು, ಯಾವುದಾದರೂ ವಸ್ತು, ಉಪಕರಣ ಖರೀದಿಸಿದಾಗ ಹಣ ಪಾವತಿಸಲು ಈ ಯುಪಿಐ ಪಿನ್ ಬೇಕಾಗುತ್ತದೆ.ಹಣ ವರ್ಗಾವಣೆ ಮಾಡಬೇಕಿರುವ ವ್ಯಕ್ತಿಯು ತನ್ನ ಬ್ಯಾಂಕ್‌ ಖಾತೆಗೆ ಜೋಡಿಸಿರುವ ಮೊಬೈಲ್‌ಫೋನ್ ಸಂಖ್ಯೆಯನ್ನು ಹೇಳಿದರೆ ಸಾಕು, ಹಣ ವರ್ಗಾವಣೆ ಮಾಡಬಹುದು.

ಈ ಅಂಶವನ್ನೆ ವರವಾಗಿ ಪರಿಗಣಿಸಿರುವ ಹ್ಯಾಕರ್ಸ್‌, ಇ–ವಾಲೆಟ್‌ ಮತ್ತು ಯುಪಿಐ ಆಧಾರಿತ ಆ್ಯಪ್‌ಗಳನ್ನು ಬಳಸುತ್ತಿರುವವರೊಂದಿಗೆ ಮಾತನಾಡಿಸಿ ವಹಿವಾಟು ನಡೆಸುವುದಕ್ಕೆ ನೆರವು ನೀಡುವುದಾಗಿ ಹೇಳಿ ಅವರ ಖಾತೆಯಿಂದ ಲಕ್ಷಗಟ್ಟಲೇ ಹಣ ಎಗರಿಸುತ್ತಿದ್ದಾರೆ.

ಒಟಿಪಿ ಇಲ್ಲದೇ ಇರುವುದೇ ಅಸ್ತ್ರ

ಈ ಹಿಂದೆ ಮೊಬೈಲ್‌ ವಾಲೆಟ್‌ ಮೂಲಕ ಹಣ ವರ್ಗಾವಣೆ ಮಾಡಿದರೆ, ವಸ್ತುಗಳನ್ನು ಖರೀದಿಸಿದರೆ ಬ್ಯಾಂಕ್‌ನಿಂದ ಒಟಿಪಿ (ಒನ್ ಟೈಮ್ ಪಾಸ್‌ವರ್ಡ್‌) ಬರುತ್ತಿತ್ತು. ಈ ಒಟಿಪಿ ಕಾರ್ಯಾವಧಿ 15 ನಿಮಿಷಗಳ ವರೆಗೆ ಮಾತ್ರ ಇರುತ್ತಿತ್ತು. ಈ ಅವಧಿಯಲ್ಲಿ ವಹಿವಾಟು ಪೂರ್ಣಗೊಳ್ಳದಿದ್ದರೆ ಅದು ನಾಶವಾಗುತ್ತಿತ್ತು. ಆದರೆ ಯುಪಿಐ ಬಳಕೆಗೆ ಬಂದ ಮೇಲೆ, ಒಟಿಪಿ ಅಗತ್ಯವಿಲ್ಲದೇ ಇರುವುದರಿಂದ ಸೈಬರ್ ಕಳ್ಳರು ಕನ್ನ ಹಾಕುವುದಕ್ಕೆ ಇದನ್ನೇ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ.

ಬ್ಯಾಂಕ್ ಅಧಿಕಾರಿಗಳೆಂದು, ಮೊಬೈಲ್‌ ವಾಲೆಟ್ ಸೇವೆ ಒದಗಿಸುವ ಸಂಸ್ಥೆಯ ಅಧಿಕಾರಿಗಳು ಎಂದು ಹೇಳಿ ಯುಪಿಐ ಪಿನ್ ಪಡೆಯುತ್ತಿದ್ದಾರೆ. ಅವರು ಕೇಳಿದ ವಿವರಗಳನ್ನು ನೀಡುವುದು, ಅವರು ಕಳುಹಿಸುವ ಲಿಂಕ್‌ಗಳನ್ನು ತೆರೆಯುವುದು, ಅದರಲ್ಲಿ ಯುಪಿಐನ್‌ ನಾಲ್ಕು ಅಂಕಿಗಳ ಪಿನ್ ನೀಡಿದರೆ ಸಾಕು ಹಣ ಎಗರಿಸುವುದು ಅವರಿಗೆ ಸುಲಭವಾಗುತ್ತದೆ.

ಕ್ರೆಡಿಟ್ ಕಾರ್ಡ್‌ನಲ್ಲಿರುವ ಹಣ ಕಳುವಾದಾಗ ಕೂಡಲೇ ಬ್ಯಾಂಕಿನವರಿಗೆ ತಿಳಿಸಿದರೆ, ಕಾರ್ಡ್‌ ಚಟುವಟಿಕೆಯನ್ನು ಸ್ಥಗಿತಗೊಳಿಸುತ್ತಾರೆ.

90 ದಿನಗಳಿಗಾದರೂ ಬದಲಾಯಿಸಿ

ಮೊಬೈಲ್ ವಾಲೆಟ್‌, ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ಗಳ ಪಿನ್‌ ಸಂಖ್ಯೆ, ನೆಟ್‌ಬ್ಯಾಂಕಿಂಗ್ ಪಾಸ್‌ವರ್ಡ್‌, ರಹಸ್ಯವಾಗಿ ಇರಬೇಕೆಂದರೆ ಆಗಾಗ್ಗೆ ಬದಲಾಯಿಸುತ್ತಿರಬೇಕು. ಕನಿಷ್ಠ 90 ದಿನಗಳಿಗೆ ಒಮ್ಮೆಯಾದರೂ ಬದಲಾಯಿಸಿದರೆ ಸೈಬರ್‌ ಕಳ್ಳರಿಂದ ಪಾರಾಗುವ ಸಾದ್ಯತೆ ಇರುತ್ತದೆ. ಕಾರ್ಡ್‌ಗಳಿಗೆ, ಖಾತೆಗಳಿಗೆ ಒಂದೇ ತೆರನಾದ ಪಾಸ್‌ವರ್ಡ್‌, ಪಿನ್‌ಗಳನ್ನು ಬಳಸುವುದು ಅಪಾಯಕಾರಿ. ಹ್ಯಾಕರ್‌ಗಳು ಹಣಕ್ಕೆ ಕನ್ನ ಹಾಕಲು, ಗ್ರಾಹಕರ ಯುಪಿಐ ಪಿನ್‌, ಒಟಿಪಿಗಳು ಅಗತ್ಯ. ಗ್ರಾಹಕರು ಗೊತ್ತಿದ್ದು, ಗೊತ್ತಿಲ್ಲದೆಯೇ ಇಂತಹ ಮಾಹಿತಿ
ಗಳನ್ನು ನೀಡುತ್ತಿರುವುದರಿಂದಲೇ ಶೇ 99ರಷ್ಟು ಸೈಬರ್ ವಂಚನೆಗಳು ನಡೆಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT