ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಟಾ ಟ್ರಸ್ಟ್‌ಗೆ ವೆಂಕಟ್‌ ರಾಜೀನಾಮೆ

ಏರ್‌ ಏಷ್ಯಾ ಇಂಡಿಯಾ ಅಕ್ರಮದಲ್ಲಿ ಹೆಸರು ತಳಕು
Last Updated 13 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಟಾಟಾ ಟ್ರಸ್ಟ್‌ನ ಮ್ಯಾನೇಜಿಂಗ್‌ ಟ್ರಸ್ಟಿ ಆರ್‌. ವೆಂಕಟರಮಣನ್‌ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

‘ಮ್ಯಾನೇಜಿಂಗ್‌ ಟ್ರಸ್ಟಿ ಹುದ್ದೆಯ ಐದು ವರ್ಷಗಳ ಅವಧಿ ಪೂರ್ಣಗೊಳಿಸಿರುವೆ. ನನ್ನ ಎದುರು ಇತರ ಆಯ್ಕೆಗಳಿವೆ. ಈ ಕಾರಣಕ್ಕೆ ನನ್ನನ್ನು ಈ ಹೊಣೆಗಾರಿಕೆಯಿಂದ ಮುಕ್ತಗೊಳಿಸಬೇಕು’ ಎಂದು ವೆಂಕಟ್‌ ಅವರು ಟ್ರಸ್ಟ್‌ನ ಆಡಳಿತ ಮಂಡಳಿಗೆ ಮನವಿ ಮಾಡಿಕೊಂಡಿದ್ದರು.

ಈ ಮನವಿಯನ್ನು ವಿಷಾದದಿಂದಲೇ ಅಂಗೀಕರಿಸಲಾಗಿದೆ ಎಂದು ಟಾಟಾ ಟ್ರಸ್ಟ್‌ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಮಾರ್ಚ್‌ 31ರಂದು ಅವರು ಹುದ್ದೆಯಿಂದ ನಿರ್ಗಮಿಸಲಿದ್ದಾರೆ. ರತನ್‌ ಟಾಟಾ, ವಿಜಯ್‌ ಸಿಂಗ್‌ ಮತ್ತು ವೇಣು ಶ್ರೀನಿವಾಸನ್‌ ಅವರನ್ನು ಒಳಗೊಂಡಿರುವ ಟ್ರಸ್ಟಿಗಳ ಸಮಿತಿಯು ಟ್ರಸ್ಟ್‌ನ ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಆಯ್ಕೆ ಪ್ರಕ್ರಿಯೆ ನಡೆಸಲಿದೆ.

ವೆಂಕಟರಮಣನ್‌ ಅವರಿಗೆ ನೀಡಲಾಗುತ್ತಿದ್ದ ₹ 2.66 ಕೋಟಿಯ ವಾರ್ಷಿಕ ಭತ್ಯೆಯು ಆದಾಯ ತೆರಿಗೆ ಇಲಾಖೆಯ ಪರಿಶೀಲನೆಗೆ ಒಳಪಟ್ಟಿತ್ತು. ಇದೇ ಕಾರಣಕ್ಕೆ ಸರ್‌ ದೋರಬ್ಜಿ ಟಾಟಾ ಟ್ರಸ್ಟ್‌ಗೆ ಇದ್ದ ತೆರಿಗೆ ವಿನಾಯ್ತಿ ಸೌಲಭ್ಯವನ್ನು 2018ರ ಡಿಸೆಂಬರ್‌ ತಿಂಗಳಲ್ಲಿ ಹಿಂತೆಗೆದುಕೊಳ್ಳಲಾಗಿತ್ತು.

ವೆಂಕಟ್‌ ರಾಜೀನಾಮೆ ನೀಡಲಿರುವ ಬಗ್ಗೆ ಕಳೆದ ಒಂದು ವಾರದಿಂದಲೇ ಊಹಾಪೋಹಗಳು ಕೇಳಿ ಬಂದಿದ್ದವು. ಅವರಿಗೆ ನೀಡಲಾಗಿದ್ದ ಗರಿಷ್ಠ ಪ್ರಮಾಣದ ಭತ್ಯೆಗೆ ಕೆಲ ಟ್ರಸ್ಟಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು ಎಂದೂ ವರದಿಯಾಗಿತ್ತು.

ದೇಶದ ಅತ್ಯಂತ ಹಳೆಯ ಸಾರ್ವಜನಿಕ ದತ್ತಿ ಸಂಸ್ಥೆಯ ತೆರಿಗೆ ವಿನಾಯ್ತಿ ರದ್ದಾಗಿರುವುದೂ ಟ್ರಸ್ಟಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ತೆರಿಗೆ ಇಲಾಖೆಯ ಆದೇಶದ ವಿರುದ್ಧ ಟ್ರಸ್ಟ್‌ ಮೇಲ್ಮನವಿ ಸಲ್ಲಿಸಿದೆ.

ಹೊಸ ಹುದ್ದೆ?: ವೆಂಕಟ್‌ ಎಂದೇ ಜನಪ್ರಿಯವಾಗಿರುವ ವೆಂಕಟರಮಣನ್‌, ಟಾಟಾ ಗ್ರೂಪ್‌ನಲ್ಲಿಯೇ ಹೊಸ ಹುದ್ದೆ ನಿರ್ವಹಿಸಲು ಲಂಡನ್‌ಗೆ ತೆರಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಟಾಟಾ ಸಮೂಹದ ಹಿರಿಯ ರತನ್‌ ಟಾಟಾ ಅವರಿಗೆ ಪರಮಾಪ್ತರು ಎಂದೇ ಪರಿಗಣಿತರಾಗಿದ್ದ ವೆಂಕಟ್‌ ಅವರ ಹೆಸರು ಅಗ್ಗದ ವಿಮಾನ ಯಾನ ಸಂಸ್ಥೆ ಏರ್‌ ಏಷ್ಯಾ ಇಂಡಿಯಾದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕೇಳಿ ಬಂದಿತ್ತು. ಈ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದೆ.

ನೋಯೆಲ್‌ ಟಾಟಾ ನೇಮಕ: ಇನ್ನೊಂದು ಮಹತ್ವದ ಬೆಳವಣಿಗೆಯಲ್ಲಿ, ರತನ್‌ ಟಾಟಾ ಅವರ ಮಲ ಸೋದರ ನೋಯೆಲ್‌ ಟಾಟಾ ಅವರನ್ನು ರತನ್ ಟಾಟಾ ಟ್ರಸ್ಟ್‌ನ ಟ್ರಸ್ಟಿಯಾಗಿ ನೇಮಕ ಮಾಡಲಾಗಿದೆ.

ವೈವಿಧ್ಯಮಯ ಉದ್ದಿಮೆ ವಹಿವಾಟಿನ ಟಾಟಾ ಸನ್ಸ್‌ನಲ್ಲಿ ಟಾಟಾ ಟ್ರಸ್ಟ್‌ ಶೇ 66ರಷ್ಟು ಪಾಲು ಬಂಡವಾಳ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT