ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ ಬ್ಯಾಂಕ್‌ ವಿಲೀನಕ್ಕೆ ಅಸಮಾಧಾನ

ಕೇಂದ್ರ ಸರ್ಕಾರದ ಕ್ರಮಕ್ಕೆ ಕರಾವಳಿ ಜನರ ಆಕ್ಷೇಪ
Last Updated 4 ಜನವರಿ 2019, 17:09 IST
ಅಕ್ಷರ ಗಾತ್ರ

ಮಂಗಳೂರು: ನಗರದಲ್ಲಿ ಜನ್ಮ ತಾಳಿದ ವಿಜಯ ಬ್ಯಾಂಕ್‌ನ ಹೆಸರು ಇನ್ನು ಅಳಿಸಿಹೋಗಲಿದೆ. ವಿಜಯ ಬ್ಯಾಂಕಿನ ಶಾಖೆಗಳ ಎದುರು ಬ್ಯಾಂಕ್‌ ಆಫ್‌ ಬರೋಡಾದ ಹೆಸರು ರಾರಾಜಿಸಲಿದೆ. ಕರಾವಳಿಯ ಹೆಮ್ಮೆ ಇನ್ನು ನೆನಪು ಮಾತ್ರ...

ಬ್ಯಾಂಕ್‌ ಆಫ್‌ ಬರೋಡಾದೊಂದಿಗೆ ವಿಜಯ ಬ್ಯಾಂಕ್‌ ಹಾಗೂ ದೇನಾ ಬ್ಯಾಂಕ್‌ ವಿಲೀನಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದ ನಂತರ ಕರಾವಳಿಯಲ್ಲಿ ಇಂತಹ ಮಾತು ಕೇಳಿ ಬರುತ್ತಿದೆ. ಕೇಂದ್ರ ಸರ್ಕಾರದ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಲಾಭದಲ್ಲಿರುವ ಬ್ಯಾಂಕ್‌ ಅನ್ನು ನಷ್ಟದಲ್ಲಿರುವ ಬ್ಯಾಂಕ್‌ನಲ್ಲಿ ವಿಲೀನ ಮಾಡುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಎದ್ದಿದೆ.

ಬ್ಯಾಂಕ್‌ಗಳ ತವರೂರಾದ ಕರಾವಳಿಯಲ್ಲಿ ಈಗ ಉಳಿದಿರುವುದು ಕೇವಲ ಎರಡೇ ಬ್ಯಾಂಕ್‌ಗಳು. ಕೆನರಾ ಬ್ಯಾಂಕ್‌, ವಿಜಯ ಬ್ಯಾಂಕ್‌, ಪ್ರಧಾನ ಕಚೇರಿಗಳು ಈಗಾಗಲೇ ಬೆಂಗಳೂರಿಗೆ ಸ್ಥಳಾಂತರವಾಗಿದ್ದು, ಕಾರ್ಪೊರೇಷನ್‌ ಬ್ಯಾಂಕ್‌, ಕರ್ಣಾಟಕ ಬ್ಯಾಂಕ್‌ ಪ್ರಧಾನ ಕಚೇರಿ ಮಂಗಳೂರಿನಲ್ಲಿವೆ. ಸಿಂಡಿಕೇಟ್‌ ಬ್ಯಾಂಕ್‌ ಪ್ರಧಾನ ಕಚೇರಿ ಮಣಿಪಾಲದಲ್ಲಿದೆ.

ದೇಶದಲ್ಲಿ ಒಟ್ಟಾರೆ 2,129 ಶಾಖೆ ಹಾಗೂ ಕರ್ನಾಟಕದಲ್ಲಿಯೇ 583 ಶಾಖೆಗಳನ್ನು ಹೊಂದಿರುವ ವಿಜಯ ಬ್ಯಾಂಕ್‌, ಎರಡು ವರ್ಷಗಳಿಂದ ಲಾಭದಲ್ಲಿಯೇ ಮುನ್ನಡೆಯುತ್ತಿದೆ. ಹಿಂದಿನ ಆರ್ಥಿಕ ವರ್ಷದಲ್ಲಿ ₹ 727 ಕೋಟಿ ಲಾಭ ಗಳಿಸಿದ್ದ ಬ್ಯಾಂಕ್‌, ಈ ವರ್ಷ ₹ 1 ಸಾವಿರ ಕೋಟಿ ಲಾಭದ ಗುರಿ ಹೊಂದಿತ್ತು.

ಕೇಂದ್ರದ ಲೆಕ್ಕಾಚಾರ: ಬ್ಯಾಂಕ್ ಆಫ್ ಬರೋಡಾ ₹10.29 ಲಕ್ಷ ಕೋಟಿ ವಹಿವಾಟು ನಡೆಸುತ್ತಿದ್ದರೆ, ವಿಜಯ ಬ್ಯಾಂಕ್ ₹2.79 ಲಕ್ಷ ಕೋಟಿ ಮತ್ತು ದೇನಾ ಬ್ಯಾಂಕ್ ₹1.72 ಲಕ್ಷ ಕೋಟಿ ವಹಿವಾಟು ನಡೆಸುತ್ತಿವೆ. ಇವುಗಳ ವಿಲೀನದಿಂದ ₹14.82 ಲಕ್ಷ ಕೋಟಿ ವಹಿವಾಟು ಒಂದೇ ಬ್ಯಾಂಕ್‌ನಲ್ಲಿ ನಡೆಯಲಿದೆ ಎಂಬುದು ಕೇಂದ್ರ ಸರ್ಕಾರದ ಲೆಕ್ಕಾಚಾರವಾಗಿದೆ ಎಂದು ಬ್ಯಾಂಕ್‌ ಉದ್ಯೋಗಿಗಳು ಹೇಳುತ್ತಿದ್ದಾರೆ.

ಬ್ಯಾಂಕ್ ಆಫ್ ಬರೋಡಾದಲ್ಲಿ 56,361, ವಿಜಯ ಬ್ಯಾಂಕ್‌ನಲ್ಲಿ 15,874 ಮತ್ತು ದೇನಾ ಬ್ಯಾಂಕ್‌ನಲ್ಲಿ 13,440 ಉದ್ಯೋಗಿಗಳಿದ್ದು, ಮೂರೂ ಬ್ಯಾಂಕುಗಳಿಂದ ಒಟ್ಟು 85,675 ಉದ್ಯೋಗಿಗಳು ಒಂದು ಬ್ಯಾಂಕ್‌ಅಡಿ ಬರಲಿದ್ದಾರೆ. ಮೂರೂ ಬ್ಯಾಂಕುಗಳ ವಿಲೀನದಿಂದ ಒಟ್ಟು 9,489 ಶಾಖೆಗಳು ಒಂದುಗೂಡಲಿವೆ ಎಂದು ಅಂದಾಜಿಸಲಾಗಿದೆ.

ವಿಜಯ ಬ್ಯಾಂಕಿನ ಪಯಣ

1931ರ ಅಕ್ಟೋಬರ್‌ 23ರಂದು ಮಂಗಳೂರಿನ ಬಂಟ್ಸ್‌ ಹಾಸ್ಟೆಲ್‌ನಲ್ಲಿ ಆರಂಭವಾದ ವಿಜಯ ಬ್ಯಾಂಕ್‌, 1958ರಲ್ಲಿ ಷೆಡ್ಯೂಲ್ಡ್ ಬ್ಯಾಂಕ್ ಆಗಿ ಪರಿವರ್ತನೆ ಹೊಂದಿತು. 1960–68ರ ಅವಧಿಯಲ್ಲಿ 9 ಸಣ್ಣ ಬ್ಯಾಂಕ್‌ಗಳನ್ನು ತನ್ನೊಳಗೆ ವಿಲೀನ ಮಾಡಿಕೊಂಡಿತು.

1965ರಲ್ಲಿ ತನ್ನದೇ ಆದ ಲಾಂಛನವನ್ನು ಹೊಂದಿದ ಬ್ಯಾಂಕ್‌, 1969 ರ ನವೆಂಬರ್‌ 11 ರಂದು ತನ್ನ ಪ್ರಧಾನ ಕಚೇರಿಯನ್ನು ಬೆಂಗಳೂರಿಗೆ ಸ್ಥಳಾಂತರಿಸಿತು. 1980ರ ಏಪ್ರಿಲ್‌ 15ರಂದು ಬ್ಯಾಂಕಿನ ರಾಷ್ಟ್ರೀಕರಣವಾಯಿತು. 2018ರ ಸೆಪ್ಟೆಂಬರ್ 17ರಂದು ವಿಜಯ ಬ್ಯಾಂಕ್‌ ಅನ್ನು ವಿಲೀನಗೊಳಿಸಲು ಕೇಂದ್ರ ಸರ್ಕಾರ ಪ್ರಸ್ತಾವ ಮಾಡಿತು. 2019 ರ ಜನವರಿ 2 ರಂದು ಕೇಂದ್ರ ಸಚಿವ ಸಂಪುಟ ವಿಲೀನಕ್ಕೆ ಒಪ್ಪಿಗೆ ನೀಡಿತು.

***

ನಷ್ಟದಲ್ಲಿ ಇರುವ ಬ್ಯಾಂಕ್‌ಗಳನ್ನು ಲಾಭದಲ್ಲಿರುವ ಬ್ಯಾಂಕ್‌ಗಳ ಜತೆಗೆ ವಿಲೀನ ಮಾಡಬೇಕು. ಆದರೆ, ಇಲ್ಲಿ ಲಾಭದಲ್ಲಿರುವ ವಿಜಯ ಬ್ಯಾಂಕ್‌ ವಿಲೀನ ಮಾಡಲಾಗುತ್ತಿದೆ.

–ಯು.ಟಿ. ಖಾದರ್‌,ಜಿಲ್ಲಾ ಉಸ್ತುವಾರಿ ಸಚಿವ

ವಿಜಯ ಬ್ಯಾಂಕ್ ಶಾಖೆಗಳ ಎದುರು ಬ್ಯಾಂಕ್‌ ಆಫ್‌ ಬರೋಡಾದ ಫಲಕ ಅಳವಡಿಸಿದ ದಿನವು ದಕ್ಷಿಣ ಕನ್ನಡ ಜಿಲ್ಲೆಗೆ ಕರಾಳ ದಿನವಾಗಲಿದೆ.

–ಬಿ.ರಮಾನಾಥ ರೈ,ಮಾಜಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT