ಶನಿವಾರ, ನವೆಂಬರ್ 28, 2020
18 °C

ಸಂಕಷ್ಟದಲ್ಲಿ ವೊಡಾಫೋನ್‌ ಐಡಿಯಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ವೊಡಾಫೋನ್‌ ಐಡಿಯಾ (ವಿಐಎಲ್‌) ಕಂಪನಿಯು ನಿರಂತರವಾಗಿ ಚಂದಾದಾರರನ್ನು ಕಳೆದುಕೊಳ್ಳುತ್ತಿದ್ದು, ನೆಟ್‌ವರ್ಕ್‌ ಗುಣಮಟ್ಟ ಸುಧಾರಣೆಗೆ ಮಾಡುತ್ತಿರುವ ಹೂಡಿಕೆ ಕಡಿಮೆ ಇದೆ. ಇದರ ಜತೆಗೆ, ಕಂಪನಿಯ ಸಾಲದ ಹೊರೆಯೂ ಹೆಚ್ಚುತ್ತಿದೆ. ಈ ಕಾರಣಗಳಿಂದಾಗಿ ಉಳಿದ ಕಂಪನಿಗಳೊಂದಿಗೆ ಪೈಪೋಟಿ ನಡೆಸಲು ಸಾಧ್ಯವಾಗದೇ ಇರುವ ಸ್ಥಿತಿಗೆ ತಲುಪುತ್ತಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಜುಲೈ–ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕಂಪನಿಯ ಒಟ್ಟಾರೆ ನಷ್ಟ ₹ 7,218 ಕೋಟಿಗಳಷ್ಟಾಗಿದೆ. ವರ್ಷದಿಂದ ವರ್ಷಕ್ಕೆ ಚಂದಾದಾರರ ಸಂಖ್ಯೆ 4 ಕೋಟಿಗಳಷ್ಟು ಕಡಿಮೆ ಆಗಿದ್ದು, 27.98 ಕೋಟಿಗೆ ತಲುಪಿದೆ. ಸಾಲವು ₹ 1,15,940 ಕೋಟಿಗಳಷ್ಟಿದೆ.

ವೊಡಾಫೋನ್‌ ಐಡಿಯಾ ಕಂಪನಿಯು ಹೊಂದಾಣಿಕೆ ಮಾಡಿದ ವರಮಾನದ (ಎಜಿಆರ್) ಒಟ್ಟಾರೆ ಬಾಕಿ ₹ 65,440 ಕೋಟಿಯನ್ನು ದೂರಸಂಪರ್ಕ ಇಲಾಖೆಗೆ ನೀಡಬೇಕಿದೆ.

‘ವಿಐಎಲ್‌ ಅತ್ಯಂತ ದುರ್ಬಲವಾದ ಖಾಸಗಿ ದೂರಸಂಪರ್ಕ ಕಂಪನಿಯಾಗಿದೆ. ಎಜಿಆರ್‌ ಬಾಕಿ ಪಾವತಿ ಅವಧಿ ವಿಸ್ತರಣೆಯು ಅಲ್ಪಾವಧಿಯಲ್ಲಿ ನಿರಾಳ ಭಾವ ಮೂಡಿಸಬಹುದಾದರೂ, ಕಂಪನಿಯ ಉಳಿಯುವಿಕೆಯು ತಕ್ಷಣದ ಬಂಡವಾಳ ಹೂಡಿಕೆ, ಮೊಬೈಲ್ ಸೇವಾ ಶುಲ್ಕ ಹೆಚ್ಚಳ ಮತ್ತು ಮೊಬೈಲ್‌ ಸೇವೆಗಳಿಗೆ ಕನಿಷ್ಠ ಶುಲ್ಕ ಜಾರಿಗೊಳಿಸುವಿಕೆಯ ಮೇಲೆ ನಿರ್ಧಾರವಾಗಲಿದೆ’ ಎಂದು ಐಸಿಐಸಿಐ ಸೆಕ್ಯುರಿಟೀಸ್‌ನ ವರದಿ ಹೇಳಿದೆ.

₹ 25 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ಕಂಪನಿಯ ಆಡಳಿತ ಮಂಡಳಿ ಒಪ್ಪಿಗೆ ನೀಡಿದೆ. ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಟಕ್ಕರ್‌ ಅವರ ಪ್ರಕಾರ ಮುಂದಿನ ಮೂರರಿಂದ ನಾಲ್ಕು ತಿಂಗಳುಗಳಲ್ಲಿ ಬಂಡವಾಳ ಸಂಗ್ರಹವಾಗಲಿದೆ.

ಕಂಪನಿಯ ಸಕ್ರಿಯ ಚಂದಾದಾರರ ಸಂಖ್ಯೆಯು 1.18ಕೋಟಿಯಷ್ಟು ಇಳಿಕೆಯಾಗಿದ್ದು, 26.12 ಕೋಟಿಗೆ ತಲುಪಿದೆ ಎಂದು ಐಸಿಐಸಿಐ ಸೆಕ್ಯುರಿಟೀಸ್‌ ವರದಿ ತಿಳಿಸಿದೆ. ಎರಡನೇ ತ್ರೈಮಾಸಿಕದಲ್ಲಿ ಕಂಪನಿಯು ಅತ್ಯಂತ ಕಡಿಮೆ ಪ್ರಮಾಣದ ನಗದು ಅಂದರೆ ₹ 1,720 ಕೋಟಿ ಹೊಂದಿದೆ ಎಂದು ಮೋತಿಲಾಲ್‌ ಓಸ್ವಾಲ್‌ ರಿಟೇಲ್‌ ರಿಸರ್ಚ್‌ ಹೇಳಿದೆ.

‘ಕಂಪನಿಯ ಮಾರುಕಟ್ಟೆ ಪಾಲು ನಷ್ಟ ಆಗುವುದಿಲ್ಲ ಎಂದು ಊಹಿಸಿದರೂ, ಪ್ರತಿ ಗ್ರಾಹಕನಿಂದ ಕಂಪನಿಗೆ ದೊರೆಯುವ ಆದಾಯದಲ್ಲಿ (ಎಆರ್‌ಪಿಯು) ಸರಿಸುಮಾರು ಶೇ 70ರಷ್ಟು ಹೆಚ್ಚಾಗಬೇಕು. ಆಗ ಕಂಪನಿಗೆ 2022ರಲ್ಲಿ ಎಜಿಆರ್ ಪಾವತಿ, ಬಡ್ಡಿ ಪಾವತಿ, ಬಂಡವಾಳ ವೆಚ್ಚ ಮಾಡಲು ಸಾಧ್ಯವಾಗುತ್ತದೆ. ಆದರೆ, ನೆಟ್‌ವರ್ಕ್‌ ಗುಣಮಟ್ಟದ ಸಮಸ್ಯೆಯಿಂದಾಗಿ ಚಂದಾದಾರರನ್ನು ಕಳೆದುಕೊಳ್ಳುತ್ತಿರುವುದರಿಂದ ಎಆರ್‌ಪಿಯು ಸುಧಾರಿಸುವುದು ಕಷ್ಟ’ ಎಂದು ತಿಳಿಸಿದೆ.

ಸ್ಮಾರ್ಟ್‌ಫೋನ್‌ ಬಳಕೆ ಹೆಚ್ಚಾಗುತ್ತಿದ್ದರೂ ವೊಡಾಫೋನ್‌ನ 4ಜಿ ಸೌಲಭ್ಯ ಪಡೆಯುತ್ತಿರುವವರ ಸಂಖ್ಯೆ ಕಡಿಮೆ ಮಟ್ಟದಲ್ಲಿದೆ. ಹೀಗಾಗಿ ಗ್ರಾಹಕರು ಡೇಟಾ ಬಳಸುವಂತೆ ಪರಿವರ್ತಿಸುವ ಸಾಮರ್ಥ್ಯವೂ ದುರ್ಬಲವಾಗಿದೆ ಎಂದು ಜೆ.ಪಿ. ಮೋರ್ಗನ್‌ ವರದಿ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು