ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೊಡಾಫೋನ್ ಐಡಿಯಾ ಆಡಳಿತ ನಿರ್ವಹಣೆಯಲ್ಲಿ ಸರ್ಕಾರಕ್ಕಿಲ್ಲ ಆಸಕ್ತಿ: ಕಂಪನಿ ಮಾಹಿತಿ

Last Updated 12 ಜನವರಿ 2022, 12:48 IST
ಅಕ್ಷರ ಗಾತ್ರ

ನವದೆಹಲಿ: ವೊಡಾಫೋನ್ ಐಡಿಯಾ ಲಿಮಿಟೆಡ್ (ವಿಐಎಲ್) ಕಂಪನಿಯನ್ನು ಮುನ್ನಡೆಸುವ ಹೊಣೆ ಹೊತ್ತುಕೊಳ್ಳುವ ಬಯಕೆ ತನಗಿಲ್ಲ ಎಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ ಎಂದು ವಿಐಎಲ್‌ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ರವೀಂದರ್ ಟಕ್ಕರ್ ಹೇಳಿದರು. ಪ್ರವರ್ತಕರಾದ ವೊಡಾಫೋನ್ ಸಮೂಹ ಮತ್ತು ಆದಿತ್ಯ ಬಿರ್ಲಾ ಸಮೂಹ ಕಂಪನಿಯನ್ನು ಮುನ್ನಡೆಸಲಿವೆ ಎಂದು ಅವರು ತಿಳಿಸಿದರು.

ಕೇಂದ್ರ ಸರ್ಕಾರಕ್ಕೆ ಪಾವತಿಸಬೇಕಿರುವ ಬಡ್ಡಿಯ ಮೊತ್ತವಾದ ₹ 16 ಸಾವಿರ ಕೋಟಿಯ ಬದಲು ಅಷ್ಟು ಮೌಲ್ಯದ ಷೇರುಗಳನ್ನು ನೀಡಲು ವಿಐಎಲ್ ಮಂಗಳವಾರ ತೀರ್ಮಾನಿಸಿದೆ. ಅಷ್ಟು ಷೇರುಗಳನ್ನು ನೀಡಿದ ನಂತರದಲ್ಲಿ ಕೇಂದ್ರ ಸರ್ಕಾರವು ವಿಐಎಲ್‌ನ ಅತಿದೊಡ್ಡ ಷೇರುದಾರ ಆಗಲಿದೆ.

ಬುಧವಾರ ಸುದ್ದಿಗೋಷ್ಠಿ ನಡೆಸಿದ ಟಕ್ಕರ್, ‘ದೂರಸಂಪರ್ಕ ಸೇವಾ ವಲಯದಲ್ಲಿ ಮೂರು ಖಾಸಗಿ ಕಂಪನಿಗಳು ಇರಬೇಕು ಎಂಬುದು ಸರ್ಕಾರದ ಬಯಕೆ. ಈ ಕ್ಷೇತ್ರದಲ್ಲಿ ಏಕಸ್ವಾಮ್ಯ ಸೃಷ್ಟಿಯಾಗುವುದು ಅಥವಾ ಎರಡೇ ಕಂಪನಿಗಳ ಪಾರಮ್ಯ ಇರುವುದನ್ನು ಸರ್ಕಾರ ಬಯಸುತ್ತಿಲ್ಲ’ ಎಂದು ವಿವರಿಸಿದರು. ಕೇಂದ್ರ ಸರ್ಕಾರಕ್ಕೆ ಷೇರುಗಳನ್ನು ವರ್ಗಾಯಿಸುವ ಪ್ರಕ್ರಿಯೆಯು ಮುಂದಿನ ತಿಂಗಳುಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದರು.

ಕಂಪನಿಯು ಪಾವತಿಸಬೇಕಿರುವ ಸಾಲದಲ್ಲಿ ಹೆಚ್ಚಿನ ಪಾಲು ಕೇಂದ್ರ ಸರ್ಕಾರಕ್ಕೆ ಸೇರಿದ್ದು. ಹಾಗಾಗಿ, ಸಾಲದಲ್ಲಿ ಒಂದಿಷ್ಟು ಮೊತ್ತವನ್ನು ಷೇರುಗಳನ್ನಾಗಿ ಪರಿವರ್ತಿಸುವುದು ಸಾಲದ ಹೊರೆ ಇಳಿಸಿಕೊಳ್ಳಲು ಉತ್ತಮ ಮಾರ್ಗವಾಗಿತ್ತು ಎಂದು ಅವರು ಕಂಪನಿಯ ತೀರ್ಮಾನದ ಕುರಿತು ವಿವರಿಸಿದರು.

ದೂರಸಂಪರ್ಕ ವಲಯದಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ಸುಧಾರಣಾ ಕ್ರಮಗಳು ಹೂಡಿಕೆದಾರರಲ್ಲಿ ಇದ್ದ ಆತಂಕವನ್ನು ತಗ್ಗಿಸುವಲ್ಲಿ ನೆರವಾಗಿವೆ ಎಂದರು. ‘ಹಲವು ತಿಂಗಳುಗಳಿಂದ ನಾವು ಹೂಡಿಕೆದಾರರ ಜೊತೆ ಸಮಾಲೋಚನೆಯಲ್ಲಿ ಇದ್ದೇವೆ. ಭಾರತದಲ್ಲಿ ಹೂಡಿಕೆ ಮಾಡುವ ವಿಚಾರದಲ್ಲಿ ಹೂಡಿಕೆದಾರರಲ್ಲಿ, ಅದರಲ್ಲೂ ಮುಖ್ಯವಾಗಿ ಅಂತರರಾಷ್ಟ್ರೀಯ ಹೂಡಿಕೆದಾರರಲ್ಲಿ, ದೊಡ್ಡ ಮಟ್ಟದ ವಿಶ್ವಾಸ ಇದೆ ಎಂಬುದನ್ನು ನಾನು ಖಚಿತವಾಗಿ ಹೇಳಬಲ್ಲೆ. ದೂರಸಂಪರ್ಕ ಕ್ಷೇತ್ರದಲ್ಲಿ ಹೂಡಿಕೆಗೂ ಅವರು ಆಸಕ್ತಿ ತೋರಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT