ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಕ್ಸ್ ಮಾಡಿ ನೋಡಿ ವಿಆರ್+ಎಆರ್=ಎಂಆರ್

Last Updated 16 ಅಕ್ಟೋಬರ್ 2018, 19:33 IST
ಅಕ್ಷರ ಗಾತ್ರ

ಒಂದು ಚಿತ್ರ ನೂರು ಪದಗಳಿಗೆ ಸಮಾನ. ಹೇಳಬೇಕಾಗಿರುವುದನ್ನು, ಮಾತಿನಲ್ಲಿ ಹೇಳುವುದಕ್ಕಿಂತ ಚಿತ್ರದ ರೂಪದಲ್ಲಿ ತೋರಿಸಿದರೆ ಸುಲಭವಾಗಿ ಅರ್ಥವಾಗುತ್ತದೆ. ಪವರ್ ಪಾಯಿಂಟ್ ಪ್ರೆಸಂಟೇಷನ್‌, ಡೆಮೊ ವಿಡಿಯೊಗಳನ್ನು ಇದಕ್ಕಾಗಿಯೇ ಬಳಸಲಾಗುತ್ತಿದೆ. ತಂತ್ರಜ್ಞಾನ ಅಭಿವೃದ್ಧಿಯಾದಂತೆಲ್ಲಾ ವರ್ಚುವಲ್ ರಿಯಾಲಿಟಿ (ವಿಆರ್), ಅಗ್ಮೆಂಟೆಡ್ ರಿಯಾಲಿಟಿ (ಎಆರ್) ಬಳಕೆಗೆ ಬಂದಿವೆ. ಈಗ ಇದನ್ನೂ ಮೀರಿಸುವಂತಹ ಮಿಕ್ಸ್ಡ್ ರಿಯಾಲಿಟಿ (ಎಂಆರ್‌) ಸದ್ದು ಮಾಡಲು ಬರುತ್ತಿದೆ.

ಮಾತಿನಲ್ಲಿ ಹೇಳಲಾಗದ ಹಲವು ವಿಷಯಗಳನ್ನು ಇದರ ಮೂಲಕ ಮಾಡಿ ತೋರಿಸಬಹುದು. ಶಿಕ್ಷಣ, ವಾಣಿಜ್ಯ, ವೈದ್ಯಕೀಯ ಕ್ಷೇತ್ರಗಳಲ್ಲಿ ಈ ತಂತ್ರಜ್ಞಾನವೇ ಹೆಚ್ಚು ಬಳಕೆಯಾಗಲಿದೆ. ಈಗಾಗಲೇ ಹಲವು ಸಂಸ್ಥೆಗಳು ತಮ್ಮ ಉತ್ಪನ್ನಗಳ ಪ್ರಚಾರಕ್ಕಾಗಿ ಎಂಆರ್ ತಂತ್ರಜ್ಞಾನವನ್ನು ಬಳಸಿ ಗ್ರಾಹಕರ ಗಮನ ಸೆಳೆಯುತ್ತಿವೆ.

ಏನಿದು ಎಂಆರ್?
ಸುಲಭವಾಗಿ ಹೇಳುವುದಾದರೆ, ವಿಆರ್ ವಿಡಿಯೊಗಳಿಗೆ ಎಆರ್ ಬೊಂಬೆಗಳನ್ನು ಜೋಡಿಸುವುದಷ್ಟೇ! ಎಂಆರ್ ತಂತ್ರಜ್ಞಾನದ ಸಹಾಯದಿಂದ ಬೊಂಬೆಗಳು ಅಥವಾ ವಸ್ತುಗಳನ್ನು ಮೋಷನ್ ಸೆನ್ಸರ್ (ರಿಮೋಟ್) ಸಹಾಯದಿಂದ ನಿಮಗಿಷ್ಟ ಬಂದಂತೆ ಕದಲಿಸಬಹುದು. ಅಷ್ಟೇ ಅಲ್ಲ, ಒಂದು ವರ್ಚುವಲ್ ಪ್ರಪಂಚವನ್ನೇ ಸೃಷ್ಟಿಸಬಹುದು. ಇದನ್ನು ಬಳಸಬೇಕೆಂದರೆ ಹೆಡ್‌ಸೆಟ್ ಮತ್ತು ಮೋಷನ್ ಕಂಟ್ರೋಲರ್ ಇರಬೇಕು.

ಕಂಪ್ಯೂಟರ್‌ಗೆ ಜೋಡಿಸಿದ ಎಂಆರ್ ಹೆಡ್‌ಸೆಟ್ ಅನ್ನು ತಲೆಗೆ ಧರಿಸಿದರೆ ಸಾಕು, ವರ್ಚುವಲ್ ಪ್ರಪಂಚ ಕಣ್ಣ ಮುಂದೆ ಕಾಣಿಸುತ್ತದೆ. ಇದರಿಂದ ವಸ್ತುಗಳನ್ನು ನೋಡುವುದಷ್ಟೇ ಅಲ್ಲ, ಅವುಗಳನ್ನು ಜರುಗಿಸುವುದು, ಎಸೆಯುವುದು, ಹೊಸ ವಸ್ತುಗಳನ್ನು ಜೋಡಿಸುವಂತಹ ಕೆಲಸಗಳನ್ನು ಮಾಡಬಹುದು.

ಮೋಷನ್ ಕಂಟ್ರೋಲರ್ಸ್‌ನಲ್ಲಿ ವಿಂಡೋಸ್ ಮೆನು ಬಟನ್, ಫ್ರಂಟ್ ಬಟನ್ (ಟ್ರಿಗರ್‌), ಗ್ರಿಪ್ ಬಟನ್, ಕಂಟ್ರೋಲರ್ (ಅನಲಾಗ್ ಸ್ಟಿಕ್), ಟ್ರ್ಯಾಕ್‌ಪ್ಯಾಡ್‌ಗಳು ಇರುತ್ತವೆ. ಇವುಗಳ ಸಹಾಯದಿಂದ ನಿಮ್ಮ ಕಂಪ್ಯೂಟರ್ ಅನ್ನೇ ವರ್ಚುವಲ್ ವಿಶ್ವ ಮಾಡಬಹುದು. ಇದರಲ್ಲಿನ ಬ್ರೌಸರ್ ನೆರವಿನಿಂದ ಅಂತರ್ಜಾಲವನ್ನು ವಿಶಿಷ್ಟವಾಗಿ ಬಳಸಬಹುದು. ಬಗೆ ಬಗೆಯ ಆ್ಯಪ್‌ ಮತ್ತು ಸಾಫ್ಟ್‌ವೇರ್‌ಗಳನ್ನು ಡೌನ್‌ಲೋಡ್‌ ಮಾಡಿ ಬಳಸಿಕೊಳ್ಳಬಹುದು.

ಎಲ್ಲಿ ಬಳಕೆಯಾಗುತ್ತಿದೆ?
ಈ ತಂತ್ರಜ್ಞಾನವನ್ನು ಸಿಮ್ಯುಲೇಟರ್ ತಂತ್ರಜ್ಞಾನ ಆಧಾರಿತ ಶಿಕ್ಷಣ, ತರಬೇತಿಗೆ ಹೆಚ್ಚಾಗಿ ಬಳಸಲಾಗುತ್ತಿದೆ. ಈಚೆಗೆ ಕಾರು, ವಿಮಾನ ಚಾಲನಾ ತರಬೇತಿ, ಕೆಲವು ದೇಶಗಳಲ್ಲಿ ಸೇನಾ ತರಬೇತಿಗೂ ಸಿಮ್ಯುಲೇಟರ್ ತಂತ್ರಜ್ಞಾನವೇ ಬಳಕೆಯಾಗುತ್ತಿದೆ.

ಬಾಹ್ಯಾಕಾಶ ವಿಜ್ಞಾನಿಗಳು ಈ ತಂತ್ರಜ್ಞಾನದ ಮೂಲಕವೇ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ನಿಜವಾದ ವಿಮಾನಗಳನ್ನು ಪ್ರಯೋಗಗಳಿಗೆ ಬಳಸಿಕೊಂಡರೆ ನಷ್ಟವಾಗುವ ಭಯ ಕಾಡುತ್ತಿರುತ್ತದೆ. ಹೀಗಾಗಿ ಸಿಮ್ಯುಲೇಟರ್‌ಗಳನ್ನು ಬಳಸುತ್ತಿದ್ದಾರೆ. ಇನ್ನೂ ಸುಲಭವಾಗಿ ಹೇಳುವುದಾದರೆ ಸಿಮ್ಯುಲೇಟರ್‌ ವಿಮಾನವೆಂದರೆ, ಎಲ್ಲ ಸೌಲಭ್ಯಗಳೂ ಇರುವಂತಹ ಒಂದು ನಕಲಿ ವಿಮಾನವಷ್ಟೇ!

ಇದಷ್ಟೇ ಅಲ್ಲ. ವೈದ್ಯರಿಗೆ ಶಸ್ತ್ರಚಿಕಿತ್ಸೆ ತರಬೇತಿ ನೀಡುವುದಕ್ಕೂ ಇದೇ ತಂತ್ರಜ್ಞಾನ ಬಳಕೆಯಾಗುತ್ತಿದೆ. ಇನ್ನು ಗೇಮಿಂಗ್ ಕ್ಷೇತ್ರದಲ್ಲೂ ಈ ತಂತ್ರಜ್ಞಾನದಿಂದಾಗಿ ಮಹತ್ತರ ಬದಲಾವಣೆಗಳು ಆಗುತ್ತಿವೆ. ಒಂದೇ ಕಡೆ ಅಲುಗಾಡದಂತೆ ಕೂತು ಆಡುವ ಆಟಗಳಿಗೆ ಗುಡ್ ಬೈ ಹೇಳಿ… ಕೋಣೆಯನ್ನೇ ಮೈದಾನ ಮಾಡಿ ಆಡಬಹುದು!

ಎಂತಹ ಹೆಡ್‌ಸೆಟ್ ಇದು?
ಮೈಕ್ರೊಸಾಫ್ಟ್ ಒಎಸ್ ಆಧಾರಿತ ಮಿಕ್ಡ್ಸ್ ರಿಯಾಲಿಟಿ ತಂತ್ರಜ್ಞಾನದಿಂದ ಕೆಲಸ ಮಾಡುವ ಕೆಲವು ಸಾಧನಗಳು ಬಳಕೆಗೆ ಬಂದಿವೆ. ಡೈನಮಿಕ್ಸ್ 365 ಹೆಡ್‌ಸೆಟ್ ಕೂಡ ಅದರಲ್ಲೊಂದು. ಜತೆಗೆ ರಿಮೋಟ್ ಅಸಿಸ್ಟೆಂಟ್, ಮತ್ತು ಲೇಔಟ್ ಇರುತ್ತವೆ. ಇದರೊಂದಿಗೆ ಹಾಲೊಲೆನ್ಸ್ ಇರುವಂತಹ ಕನ್ನಡಕ ಧರಿಸಿ, ಇದ್ದ ಸ್ಥಳದಲ್ಲಿಯೇ ಗಾಳಿಯಲ್ಲಿ ಕೈ ಆಡಿಸುತ್ತಾ ಅಪ್ಲಿಕೇಷನ್‌ಗಳನ್ನು ರನ್ ಮಾಡಬಹುದು.

ದೊಡ್ಡ ದೊಡ್ಡ ಕೈಗಾರಿಕೆಗಳಲ್ಲಿ ಬಳಸುತ್ತಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಯಂತ್ರೋಪಕರಣಗಳ ನಿರ್ವಹಣೆಯಲ್ಲಿ ಏನಾದರೂ ಸಮಸ್ಯೆ ಎದುರಾದರೆ, ಜರ್ಮನ್, ಜಪಾನ್, ಅಮೆರಿಕದಂತಹ ದೇಶಗಳಲ್ಲಿರುವ ನಿಪುಣರನ್ನು ಹಾಲೊಲೆನ್ಸ್ ಮತ್ತು ಈ ಹೆಡ್‌ಸೆಟ್‌ ಧರಿಸಿ ಸಂಪರ್ಕಿಸಿದರೆ, ಅವರು ಸಮಸ್ಯೆಯನ್ನು ಅಲ್ಲಿಂದಲೇ ಗಮನಿಸಿ ಸೂಚನೆ ನೀಡಲು ನೆರವಾಗುತ್ತದೆ. ಅದೇ ರೀತಿ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಶಸ್ತ್ರಚಿಕಿತ್ಸೆಗೆ ತಜ್ಞರ ನೆರವು ಬೇಕಿದ್ದರೆ ಪಡೆಯಬಹುದು.

ಏಸರ್, ಏಸುಸ್, ಡೆಲ್, ಎಚ್‌ಪಿ ಮತ್ತು ಲೆನೊವಾ ಸಂಸ್ಥೆಗಳೂ ಹಾಲೊಲೆನ್ಸ್ ಒಳಗೊಂಡಿರುವಂತಹ ಮಿಕ್ಸ್ಡ್ ರಿಯಾಲಿಟಿ ಹೆಡ್‌ಸೆಟ್‌ಗಳನ್ನು ತಯಾರಿಸುತ್ತಿವೆ. ವೆಬ್ ತಾಣಗಳಲ್ಲೂ ಇದನ್ನು ಬಳಸಲು ನೆರವಾಗುವಂತೆ ಬ್ರೌಸರ್‌ಗಳ ಕಾರ್ಯವೈಖರಿಯೂ ಬದಲಾಗುತ್ತಿದೆ. ಈಗಾಗಲೇ ಫೈರ್‌ಫಾಕ್ಸ್ ಸಂಸ್ಥೆ ಫೈರ್‌ಫಾಕ್ಸ್‌ ರಿಯಾಲಿಟಿ ಹೆಸರಿನಲ್ಲಿ ಮೊದಲ ವರ್ಷನ್ ಬಿಡುಗಡೆ ಮಾಡಿದೆ.

ಮಕ್ಕಳಿಗೆ ಹೆಚ್ಚು ನೆರವಾಗಲಿದೆ
ನಮ್ಮ ಹಿಂದಿನ ತಲೆಮಾರಿನವರೆಲ್ಲಾ ಪ್ರಕೃತಿಯ ಮಡಿಲಲ್ಲಿ ಬೆಳೆದವರು. ಅವರು ಚಿಕ್ಕವರಿದ್ದಾಗ ಹೊರಗಡೆ ಸುತ್ತಾಡುತ್ತಾ ಚಿಟ್ಟೆಗಳು, ಪ್ರಾಣಿ ಪಕ್ಷಿಗಳ ಹಿಂದೆ ಬಿದ್ದು ಆಟವಾಡುತ್ತಿದ್ದರು. ಈಗಿನ ಮಕ್ಕಳಿಗೆ ಪ್ರಕೃತಿಯೊಂದಿಗೆ ಬೆರೆಯುವ ಸೌಭಾಗ್ಯ ಮರೀಚಿಕೆಯಾಗುತ್ತಿದೆ.

ಕಾಂಕ್ರೀಟ್ ಕಾಡುಗಳಲ್ಲಿ ವಾಸಿಸುತ್ತಿರುವ ಮಕ್ಕಳು ಗುಬ್ಬಚ್ಚಿ ನೋಡಿರಲು ಸಾಧ್ಯವೇ ಇಲ್ಲ. ವಾಸ್ತವ ಪ್ರಪಂಚದಲ್ಲಿ ಅವರು ಪ್ರಕೃತಿಯಿಂದ
ದೂರವೇ ಉಳಿಯಬೇಕು. ಆದರೆ ವರ್ಚುವಲ್ ವಿಶ್ವದಲ್ಲಿ ಕಾಲಿಟ್ಟರೆ ಅವರೂ ಪ್ರಕೃತಿಯನ್ನೂ ನೋಡಬಹುದು.

ಮಕ್ಕಳಿಗೆ ನೆರವಾಗುವಂತೆ ಮಿಕ್ಸ್ಡ್ ರಿಯಾಲಿಟಿ ಹೆಲ್ಮೆಟ್ ಬಳಕೆಗೆ ಬರಲಿದೆ. ಇದರ ಹೆಸರು ಹಾಲೊ ಕ್ಯಾಪ್. ಮಕ್ಕಳು ಸುಲಭವಾಗಿ ಧರಿಸಲು ನೆರವಾಗುವಂತೆ ಇದನ್ನು ತಯಾರಿಸಲಾಗಿದೆ. ಚಿಟ್ಟೆಗಳನ್ನು ಹಕ್ಕಿಗಳನ್ನು ಹತ್ತಿರಕ್ಕೆ ಕರೆದು ಆಡಬಹುದು. ತರಕಾರಿ ಕತ್ತರಿಸಬಹುದು. ಅಡುಗೆ ಮಾಡುವುದನ್ನೂ ಕಲಿಯಬಹುದು. ಸದ್ಯ ಇನ್ನೂ ಇದು ಪ್ರಯೋಗ ಹಂತದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT