ಗುರುವಾರ , ಆಗಸ್ಟ್ 6, 2020
28 °C
ವಾಣಿಜ್ಯ ಉದ್ದೇಶಕ್ಕೆ ಆಸ್ತಿಗಳನ್ನು ಬಾಡಿಗೆಗೆ ನೀಡಿದ ಕಾರಣ

ಜಿಎಸ್‌ಟಿ: ವಕ್ಫ್‌ ಮಂಡಳಿಗೆ ನೋಟಿಸ್

ಪಿಟಿಐ Updated:

ಅಕ್ಷರ ಗಾತ್ರ : | |

ನ‌ವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮತ್ತು ಈ ಹಿಂದೆ ಜಾರಿಯಲ್ಲಿದ್ದ ಸೇವಾ ತೆರಿಗೆ ಪಾವತಿಸುವಂತೆ ದೇಶದಲ್ಲಿರುವ ವಿವಿಧ ವಕ್ಫ್‌ ಮಂಡಳಿಗಳಿಗೆ ತೆರಿಗೆ ಇಲಾಖೆ ಷೋಕಾಸ್‌ ನೋಟಿಸ್‌ ಜಾರಿಮಾಡಲಾರಂಭಿಸಿದೆ.

ವಕ್ಫ್‌ ಆಸ್ತಿಗಳನ್ನು ವಾಣಿಜ್ಯ ಉದ್ದೇಶಕ್ಕೆ ಗುತ್ತಿಗೆ ನೀಡಿದ್ದು, ಅದರ ಮೇಲೆ ಬರುತ್ತಿರುವ ಬಾಡಿಗೆಗೆ ತೆರಿಗೆ ಪಾವತಿಸುವಂತೆ ಇಲಾಖೆಯು ನೋಟಿಸ್‌ ನೀಡುತ್ತಿದೆ ಎಂದು ಮೂಲಗಳು ತಿಳಿಸಿವೆ.

ದೇಶದಲ್ಲಿ ಒಟ್ಟು 30 ವಕ್ಫ್‌ ಮಂಡಳಿಗಳಿದ್ದು, ಕೇರಳ ರಾಜ್ಯ ವಕ್ಫ್‌ ಮಂಡಳಿ ಮತ್ತು ಮುಂಬೈನ ದಾವೂದಿ ಬೊಹ್ರಾ ವಕ್ಫ್‌ ಮಂಡಳಿಗಳು ಮಾತ್ರವೇ ಜಿಎಸ್‌ಟಿ ಅಡಿ ನೋಂದಣಿ ಮಾಡಿಕೊಂಡಿವೆ.

ರಕ್ಷಣಾ ಮತ್ತು ರೈಲ್ವೆ ಇಲಾಖೆಗಳ ನಂತರ ವಕ್ಫ್‌ ಮಂಡಳಿಗಳು ದೇಶದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಆಸ್ತಿಗಳನ್ನು ಹೊಂದಿವೆ. ಒಂದು ವರ್ಷಕ್ಕೆ ತೆರಿಗೆ ವರಮಾನವು ₹ 100 ಕೋಟಿಯಷ್ಟು ಇರಲಿದೆ ಎಂದು ಅಂದಾಜು ಮಾಡಲಾಗಿದೆ. ವಕ್ಫ್‌ ಬೋರ್ಡ್‌ಗಳ ವರಮಾನಕ್ಕೆ ಆದಾಯ ತೆರಿಗೆಯಿಂದ ವಿನಾಯ್ತಿ ನೀಡಲಾಗಿದೆ. ಜಿಎಸ್‌ಟಿ ಮತ್ತು ಸೇವಾ ತೆರಿಗೆಯಿಂದ ವಿನಾಯ್ತಿ ಇಲ್ಲ. ವಾಣಿಜ್ಯ ಉದ್ದೇಶಕ್ಕೆ ಆಸ್ತಿಗಳನ್ನು ಗುತ್ತಿಗೆ  ನೀಡಿದ್ದರೆ ಅದಕ್ಕೆ ಬರುವ ಬಾಡಿಗೆಗೆ ತೆರಿಗೆ ಪಾವತಿಸಬೇಕಾಗುತ್ತದೆ. ನಿರ್ದಿಷ್ಟ ದತ್ತಿ ಮತ್ತು ಧಾರ್ಮಿಕ ಉದ್ದೇಶಗಳಿಗಾಗಿ ಆಸ್ತಿಗಳನ್ನು ಬಳಸಿದ್ದರೆ ಅದರಿಂದ ಬರುವ ವರಮಾನಕ್ಕೆ ತೆರಿಗೆ ವಿನಾಯ್ತಿ ಸಿಗಲಿದೆ.

ಐ.ಟಿ ಮರುಪಾವತಿ ಇನ್ನಷ್ಟು ಸರಳ

‘24 ಗಂಟೆಯೊಳಗೆ ಆದಾಯ ತೆರಿಗೆ ಮರುಪಾವತಿ ಆಗುವಂತಹ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ. ಎರಡು ವರ್ಷದೊಳಗೆ ಜಾರಿಗೆ ಬರಲಿದೆ’ ಎಂದು ರೆವಿನ್ಯೂ ಕಾರ್ಯದರ್ಶಿ ಅಜಯ್‌ ಭೂಷಣ್ ಪಾಂಡೆ ತಿಳಿಸಿದ್ದಾರೆ.

ರಿಟರ್ನ್ಸ್‌, ಪರಿಶೀಲನೆ ಮತ್ತು ಮರುಪಾವತಿ ತ್ವರಿತಗೊಳಿಸುವ ಸಲುವಾಗಿ ಕೇಂದ್ರೀಯ ನೇರ ತೆರಿಗೆ ಮಂಡಳಿಯ (ಸಿಬಿಡಿಟಿ) ಮಾಹಿತಿ ತಂತ್ರಜ್ಞಾನ ಮತ್ತು ಮೂಲಸೌಕರ್ಯ ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರ ಈಗಾಗಲೇ ₹ 4,200 ಕೊಟಿ ಬಿಡುಗಡೆ ಮಾಡಿದೆ. 

‘ಸದ್ಯಕ್ಕೆ, ಆನ್‌ಲೈನ್‌ ಮೂಲಕ ಸ್ವಯಂಚಾಲಿತವಾಗಿ ಮರುಪಾವತಿ ಪ್ರಕ್ರಿಯೆ ನಡೆಯುತ್ತಿದೆ. ಪ್ರಸಕ್ತ ಸಾಲಿನಲ್ಲಿ ₹ 1.50 ಕೋಟಿ ಮರುಪಾವತಿ ಮೊತ್ತ ನೇರವಾಗಿ ತೆರಿಗೆದಾರರ ಬ್ಯಾಂಕ್‌ ಖಾತೆಗಳಿಗೆ ವರ್ಗಾವಣೆಯಾಗಿದೆ. ಈ ವ್ಯವಸ್ಥೆಯಲ್ಲಿ ಇನ್ನಷ್ಟು ಸುಧಾರಣೆ ತರಲಾಗುತ್ತಿದೆ. 24 ಗಂಟೆಗಳ ಒಳಗೆ ಮರುಪಾವತಿ ಮೊತ್ತ ಸಿಗುವಂತೆ ಮಾಡಲಾಗುವುದು’ ಎಂದು ಪಾಂಡೆ ತಿಳಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು