ಶುಕ್ರವಾರ, ಡಿಸೆಂಬರ್ 13, 2019
24 °C

ಗೆಸ್ಚರ್‌ನ ಸುಸಜ್ಜಿತ ವಸತಿ ಸೌಲಭ್ಯ

ಕೇಶವ ಜಿ. ಝಿಂಗಾಡೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರಿನಂತಹ ದೊಡ್ಡ ನಗರಗಳಿಗೆ ಉನ್ನತ ಶಿಕ್ಷಣ ಪಡೆಯಲು ಮತ್ತು ಉದ್ಯೋಗ ಅರಸಿಕೊಂಡು ಬರುವವರಿಗೆ ಬಾಡಿಗೆ ಕೋಣೆ / ಮನೆ ಹುಡುಕುವುದು, ದೊಡ್ಡ ಮೊತ್ತದ ಠೇವಣಿ ಹೊಂದಿಸುವುದು, ಮನೆ ಮಾಲೀಕರ ಇಷ್ಟಾನಿಷ್ಟಗಳಿಗೆ ಒಗ್ಗಿಕೊಳ್ಳುವುದು, ಅಗತ್ಯ ಪೀಠೋಪಕರಣ ಹೊಂದಿಸಿಕೊಳ್ಳುವ ಹತ್ತಾರು ಸಮಸ್ಯೆಗಳು ಏಕಕಾಲಕ್ಕೆ ಎದುರಾಗುತ್ತವೆ. ಇದರ ಜತೆಗೆ, ಕುಟುಂಬ ಸದಸ್ಯರನ್ನು ಬಿಟ್ಟುಬಂದಿದ್ದರಿಂದ ಎದುರಾಗುವ ಏಕಾಂಗಿತನ, ಖಿನ್ನತೆಗೆ  ಒಳಗಾಗುವಂತಹ ಸಮಸ್ಯೆಗಳನ್ನೂ ಎದುರಿಸಬೇಕಾಗುತ್ತದೆ. ನಗರಗಳಿಗೆ ಹೊಸದಾಗಿ ಬರುವವರಿಗೆ ಪೇಯಿಂಗ್‌ ಗೆಸ್ಟ್‌ಗಳು ಅಗತ್ಯ ರೂಪದಲ್ಲಿ ನೆರವಿಗೆ ಬರುತ್ತವೆ. ಹೊಸ ಪರಿಸರದಲ್ಲಿ ನೆಲೆಸಲು ಸಹಾಯ ಹಸ್ತವನ್ನೂ ನೀಡುತ್ತಿವೆ. ಪರ ಊರಿನಿಂದ ಬಂದ ಯುವಕ – ಯುವತಿಯರು ನಗರದ ಬದುಕಿಗೆ ಹೊಂದಿಕೊಳ್ಳಲು ಇವುಗಳ ಕೊಡುಗೆ ಗಮನಾರ್ಹವಾಗಿದೆ. ಶಿಕ್ಷಣ ಕ್ಷೇತ್ರ ಮತ್ತು ಕೆಲಸದ ಸ್ಥಳಗಳಿಗೆ ಹತ್ತಿರದಲ್ಲಿಯೇ ವಸತಿ ಸೌಲಭ್ಯ ಕಲ್ಪಿಸಿಕೊಡುವಲ್ಲಿ ಇವುಗಳು ಪ್ರಮುಖ ಪಾತ್ರ ನಿರ್ವಹಿಸುತ್ತಿವೆ.

ಆದರೆ, ಈ ಪೇಯಿಂಗ್‌ ಗೆಸ್ಟ್‌ಗಳ ಸೇವೆ ಸಂಘಟಿತ ಸ್ವರೂಪದಲ್ಲಿ ಇಲ್ಲದಿರುವುದು ದೊಡ್ಡ ಕೊರತೆಯಾಗಿ ಕಾಡುತ್ತದೆ. ಅಸಂಘಟಿತ ವಲಯದಲ್ಲಿ ಇರುವ ಇವುಗಳ ಸೇವೆ, ಬಾಡಿಗೆ ದರ, ಸುರಕ್ಷತೆ ಸೇರಿದಂತೆ ಬಳಕೆ
ದಾರರಿಗೆ ಒದಗಿಸುವ ಸೌಲಭ್ಯ ಮತ್ತಿತರ ವಿಷಯಗಳಲ್ಲಿ ಏಕರೂಪತೆ ಇಲ್ಲ. ಅವುಗಳ ಮೇಲೆ ಯಾವುದೇ ನಿಯಂತ್ರಣ ಮತ್ತು ನಿರ್ಬಂಧಗಳೂ ಇಲ್ಲ. ಹೀಗಾಗಿ ಕೆಲವರು ಪೇಯಿಂಗ್‌ ಗೆಸ್ಟ್‌ಗಳಲ್ಲಿ ವಾಸಿಸಲು ಬಯಸುವುದಿಲ್ಲ. ಹೆಚ್ಚು ಸುರಕ್ಷಿತವಾದ, ಸಕಲ ಸೌಲಭ್ಯ ಸಜ್ಜಿತ, ಆರೋಗ್ಯಕರ ಪರಿಸರ ಹೊಂದಿದ ವಸತಿ ಸೌಲಭ್ಯಗಳಿಗಾಗಿ ಅವರು ಹುಡುಕಾಟ ನಡೆಸುತ್ತಿರುತ್ತಾರೆ.

ಕೈಗೆಟುಕುವ ದರಗಳಲ್ಲಿ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ರಿಯಲ್‌ ಎಸ್ಟೇಟ್‌ ಸಂಸ್ಥೆ ಶಾಂಡರ್ಸ್‌ ಗ್ರೂಪ್‌ (Shanders Group) ಮುಂದೆ ಬಂದಿದೆ. ಗ್ರೂಪ್‌ನ ಸ್ಥಾಪಕ ಶ್ರೀರಾಂ ಚಿತ್ತೂರಿ ಅವರು, ಈ ಬಗೆಯ ‘ಕೊ–ಲಿವಿಂಗ್’ ವಸತಿ ಯೋಜನೆ ನಿರ್ವಹಿಸುವ ಗೆಸ್ಟರ್‌ (Guesture) ಸಂಸ್ಥೆ ಆರಂಭಿಸಿದ್ದಾರೆ. ಒಂದೇ ಕೋಣೆಯನ್ನು ಇಬ್ಬರು ಅಥವಾ ಮೂವರು ಹಂಚಿಕೊಳ್ಳುವ, ಕೋಣೆಯೊಂದರಲ್ಲಿ ಒಬ್ಬರೇ ವಾಸಿಸಲೂ ಅವಕಾಶ ಇರುವ ಬಾಡಿಗೆ ವಸತಿ ಸೌಲಭ್ಯವನ್ನು ವೃತ್ತಿಪರರು ನಿರ್ವಹಿಸುತ್ತಿರುವ ಸಂಸ್ಥೆ ಇದಾಗಿದೆ.  

‘ಗೆಸ್ಚರ್‌, ಸದ್ಯಕ್ಕೆ ಬೆಂಗಳೂರಿನಲ್ಲಿ ಅಲ್ಟಾ ವಿಸ್ತಾ ಮತ್ತು ಡ್ವೆಲಿಂಗ್‌ಟನ್‌ ಹೆಸರಿನ ಎರಡು ವಸತಿ ಯೋಜನೆಗಳನ್ನು ಹೊಂದಿದೆ. ಎಲೆಕ್ಟ್ರಾನಿಕ್‌ ಸಿಟಿಯ ಎರಡನೇ ಹಂತದಲ್ಲಿ ’ಯೂಥ್‌ ಸಿಟಿ‘ ಹೆಸರಿನ ಇದೇ ಬಗೆಯ ಬೃಹತ್‌ ವಸತಿ ಯೋಜನೆ ಅಭಿವೃದ್ಧಿಪಡಿಸುತ್ತಿದೆ. ಗರಿಷ್ಠ ವೇಗದ ವೈ–ಫೈ, ಈಜುಗೊಳ, ಆಟದ ಮೈದಾನ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸ್ಥಳಾವಕಾಶ, ಲಾಂಡ್ರಿ, ಸ್ವಚ್ಛತೆ, ಊಟ, ಸಾರಿಗೆ ವ್ಯವಸ್ಥೆ ಮುಂತಾದವೂ ಇಲ್ಲಿ ದೊರೆಯಲಿವೆ. ಈ ಎಲ್ಲ ಸೌಲಭ್ಯಗಳು ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳ ದೈನಂದಿನ ಒತ್ತಡ ನಿವಾರಿಸುವಲ್ಲಿ ನೆರವಾಗುತ್ತವೆ’ ಎಂದು ಗೆಸ್ಚರ್‌ನ ನಿರ್ದೇಶಕ ಪ್ರಮೋದ್‌ ಕುಮಾರ್‌ ಹೇಳುತ್ತಾರೆ. 

‘ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಈಗಾಗಲೇ ’ಗೆಸ್ಚರ್‌‘ನ ಪ್ರಯೋಜನ ಪಡೆದುಕೊಂಡಿದ್ದಾರೆ. ಖಾಸಗಿತನಕ್ಕೆ ಆದ್ಯತೆ, ಸಂಪೂರ್ಣ ಸುರಕ್ಷತೆ ಮತ್ತು ಇತರರ ಜತೆ ಬೆರೆಯಲು ಅವಕಾಶ  ಒದಗಿಸುವ ಕಾರ್ಯಕ್ರಮಗಳಿಗೂ ಇಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ. ಕಲಿಕೆ ಮತ್ತು ಉದ್ಯೋಗ ನಿರ್ವಹಣೆ ಸಂದರ್ಭದಲ್ಲಿನ ತಾತ್ಕಾಲಿಕ ಅಗತ್ಯಗಳನ್ನು ಒದಗಿಸುವ ಹೊಸ ಸವಾಲುಗಳನ್ನು ಪೂರೈಸುವುದು ಗೆಸ್ಚರ್‌ನ ಉದ್ದೇಶವಾಗಿದೆ.

‘ಕೊ–ಲಿವಿಂಗ್ ಹೆಸರಿನಲ್ಲಿ ನಾಲ್ಕು ವರ್ಷಗಳಿಂದ 650 ಹಾಸಿಗೆಗಳ ವಸತಿ ಸೌಲಭ್ಯವನ್ನು ನಿರ್ವಹಣೆ ಮಾಡುತ್ತಿದೆ. ದೇಶದ ವಿವಿಧ  ಭಾಗದಲ್ಲಿನ 20 ನಗರಗಳಲ್ಲಿ 2025ರ ವೇಳೆಗೆ ಗರಿಷ್ಠ ಪ್ರಮಾಣದಲ್ಲಿ ಸುಸಜ್ಜಿತ ವಸತಿ ಸೌಲಭ್ಯ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಂಸ್ಥೆಯು ಕಾರ್ಯಪ್ರವೃತ್ತವಾಗಿದೆ. ‘ಯೂಥ್‌ ಸಿಟಿ’ ಯೋಜನೆಯಲ್ಲಿ ಈಗಾಗಲೇ ₹ 75 ಕೋಟಿ ಬಂಡವಾಳ ತೊಡಗಿಸಲಾಗಿದೆ. ಇತರ ಹೂಡಿಕೆದಾರರಿಂದಲೂ ಅಗತ್ಯ ಬಂಡವಾಳ ಸಂಗ್ರಹಿಸಲಾಗುತ್ತಿದೆ.

‘ಇತ್ತೀಚಿನ ದಿನಗಳಲ್ಲಿ 18 ರಿಂದ 35 ವರ್ಷದ ಒಳಗಿನವರ ಆದ್ಯತೆಗಳು ಬದಲಾಗಿವೆ. ಪೇಯಿಂಗ್‌ ಗೆಸ್ಟ್‌ ಪರಿಕಲ್ಪನೆಯನ್ನೇ ದೊಡ್ಡ ಪ್ರಮಾಣದಲ್ಲಿ ಹೆಚ್ಚು ಸುಸಜ್ಜಿತ ಬಗೆಯಲ್ಲಿ ಒದಗಿಸಿಕೊಡುವ ವಸತಿ ಸೌಲಭ್ಯಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಇದಕ್ಕೆ  ಕೋ–ಲಿವಿಂಗ್‌ ಎನ್ನುತ್ತಾರೆ. ಒಂದೆಡೆಯೇ ಹೆಚ್ಚು ಜನರು ಕೆಲಸ ಮಾಡುವ ಕೋ–ವರ್ಕಿಂಗ್‌ ಮಾದರಿಯಲ್ಲಿಯೇ ಒಂದೆಡೆಯೇ ಹೆಚ್ಚು ಜನರು ಬಾಡಿಗೆ ನೆಲೆಯಲ್ಲಿ ವಾಸಿಸುವ ಕೋ–ಲಿವಿಂಗ್‌ ಪರಿಕಲ್ಪನೆ ಜಾರಿಗೆ ಬರುತ್ತಿದೆ. ಸುಸಜ್ಜಿತ ವಸತಿ ಸೌಲಭ್ಯವನ್ನು ಬಾಡಿಗೆಗೆ ಹಂಚಿಕೊಳ್ಳುವ (shared rental accommodation) ಸೌಲಭ್ಯ ಎಂದೂ ಇದನ್ನು ವ್ಯಾಖ್ಯಾನಿಸಬಹುದು.

‘ಇಂತಹ ಸುಸಜ್ಜಿತ ವಸತಿ ಸೌಲಭ್ಯಕ್ಕೆ ಬೆಂಗಳೂರಿನಲ್ಲಿ ಬೇಡಿಕೆ ದಿನೇ ದಿನೇ ಹೆಚ್ಚುತ್ತಿದೆ. ಐ.ಟಿ ಹಬ್‌, ಶಿಕ್ಷಣ, ಆಸ್ಪತ್ರೆಗಳು ಇರುವ ಎಲೆಕ್ಟ್ರಾನಿಕ್‌ ಸಿಟಿ ಪ್ರದೇಶದಲ್ಲಿ ಈ ಬಗೆಯ ಸೌಲಭ್ಯಗಳಿಂದ ಸುಸಜ್ಜಿತವಾದ ವಸತಿ ಸೌಲಭ್ಯಕ್ಕೆ ಸಾಕಷ್ಟು ಬೇಡಿಕೆ ಇದೆ.  ಸಿಂಗಲ್‌ ಪೇರೆಂಟ್ಸ್‌ ಮತ್ತು 60 ಕ್ಕಿಂತ ಹೆಚ್ಚಿನ ವಯಸ್ಸಿನವರಿಗೂ ಇಲ್ಲಿ ನೆಲೆಸಲು ಅವಕಾಶ ಕಲ್ಪಿಸಿಕೊಡಲಾಗುವುದು. ಸಮಾನ ಮನಸ್ಕರ ಒಲವು – ನಿಲುವು ಆಧರಿಸಿ ಕೋಣೆ ಹಂಚಿಕೆಯೂ ವೈಜ್ಞಾನಿಕ ಸ್ವರೂಪದಲ್ಲಿ ಇರಲಿದೆ.

‘ಮಹಿಳೆಯರಿಗೆ ಪ್ರತ್ಯೇಕ ಸೌಲಭ್ಯ ಕಲ್ಪಿಸಿಕೊಡಲಾಗಿದೆ. ಅವರ ಉಸ್ತುವಾರಿಗೆ ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇಲ್ಲಿ ನೆಲೆಸಿದವರು ಪರಸ್ಪರ ಬೆರೆಯಲು ಅವಕಾಶ ಕಲ್ಪಿಸಲಾಗುವುದು. ವೈಯಕ್ತಿಕ  ಪೇಂಟಿಂಗ್ಸ್‌, ನೃತ್ಯ ಮತ್ತಿತರ ಪ್ರತಿಭೆ ಪ್ರದರ್ಶನಕ್ಕೂ ಅವಕಾಶ ಇರುತ್ತದೆ. ಮಕ್ಕಳನ್ನು ಕಾಣಲು ಬರುವ ಪಾಲಕರಿಗೆ ಗೆಸ್ಟ್‌ ರೂಂ ಸೌಲಭ್ಯ ಒದಗಿಸಲಾಗಿದೆ. ನಗರಕ್ಕೆ ಬಂದಿಳಿಯುವ ಪಾಲಕರನ್ನು ನಿಲ್ದಾಣಗಳಿಂದ ಕರೆದುಕೊಂಡು ಬರುವ, ಬಿಟ್ಟು ಬರಲು ವಾಹನ ಸೌಲಭ್ಯವನ್ನು ಬಾಡಿಗೆ ರೂಪದಲ್ಲಿ ಒದಗಿಸುವ ಸೌಲಭ್ಯವನ್ನೂ ಕಲ್ಪಿಸಿಕೊಡಲಾಗುತ್ತಿದೆ.

‘ನಗರದಿಂದ ನಗರಕ್ಕೆ ಕೆಲಸ ಬದಲಿಸುವ 18 ರಿಂದ 40 ವರ್ಷದ ಅನೇಕರಿಗೆ ಈ ಧಾವಂತದ ಬದುಕಿನಲ್ಲಿ ಸ್ವಂತ ಮನೆ, ಕಾರ್‌ ಹೊಂದುವ ಅಗತ್ಯ ಇರುವುದಿಲ್ಲ. ಅವರಿಗೆ ಊಟ, ವಸತಿ, ಸಾರಿಗೆಯ ಸುಸಜ್ಜಿತ ಸೌಲಭ್ಯಗಳು ಒಂದೆಡೆಯೇ ದೊರೆಯುವುದು ಅಗತ್ಯವಾಗಿರುತ್ತದೆ. ಈ ಬೇಡಿಕೆಯನ್ನು ’ಗೆಸ್ಚರ್‌‘ ಪರಿಪೂರ್ಣವಾಗಿ ಕಲ್ಪಿಸಲು ಶ್ರಮಿಸುತ್ತಿದೆ. ಪ್ರತಿಯೊಂದು ಹಾಸಿಗೆಗೆ ತಿಂಗಳಿಗೆ ₹ 8 ಸಾವಿರದಿಂದ ಬಾಡಿಗೆ ಆರಂಭವಾಗುತ್ತದೆ.  ಊಟ – ತಿಂಡಿಗೆ  ಪ್ರತ್ಯೇಕವಾಗಿ ₹ 3 ಸಾವಿರ ಪಾವತಿಸಬೇಕು’  ಎಂದೂ ಪ್ರಮೋದ್ ಕುಮಾರ್‌ ಹೇಳುತ್ತಾರೆ.

ಮುಂಬರುವ ದಿನಗಳಲ್ಲಿ  ಚೆನ್ನೈ, ಹೈದರಾಬಾದ್‌, ಮುಂಬೈ ಸೇರಿದಂತೆ 6 ಪ್ರಮುಖ ನಗರಗಳಲ್ಲಿ ಇದೇ ಬಗೆಯ ಸೌಲಭ್ಯ ಕಲ್ಪಿಸಲು ‘ಗೆಸ್ಚರ್‌’ ಕಾರ್ಯಪ್ರವೃತ್ತವಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು