ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿಪ್‌’: ಗುರಿ ಸಾಧನೆಯ ಉತ್ತಮ ಹೂಡಿಕಾ ವಿಧಾನ

Last Updated 16 ಏಪ್ರಿಲ್ 2019, 19:31 IST
ಅಕ್ಷರ ಗಾತ್ರ

ವ್ಯವಸ್ಥಿತ ಹೂಡಿಕೆ ಯೋಜನೆ (‘ಎಸ್‌ಐಪಿ’) ಮೂಲಕ ದೇಶದಲ್ಲಿ ಪ್ರತಿ ತಿಂಗಳು ಸುಮಾರು ₹ 7000 ಕೋಟಿಗೂ ಹೆಚ್ಚಿನ ಹೂಡಿಕೆ ನಡೆಯುತ್ತಿದ್ದು, ‘‘ಎಸ್‌ಐಪಿ’’ ಎಂಬುದು ಹೂಡಿಕೆಗೆ ಪರ್ಯಾಯ ಪದ ಎಂಬಂತಾಗಿದೆ. ‘ಎಸ್‌ಐಪಿ’ ಎಂಬ ಪದ ಇಷ್ಟೊಂದು ಜನಪ್ರಿಯವಾಗಿದ್ದರೂ ಅದರ ಪರಿಕಲ್ಪನೆ ಏನು, ಅದು ಹೇಗೆ ಕಾರ್ಯನಿರ್ವಹಿಸುತ್ತದೆ, ಅದರ ಉಪಯೋಗವೇನು ಮುಂತಾದ ವಿಚಾರಗಳು ಗೌಣವಾಗಿವೆ. ಕಳೆದ ವರ್ಷ ‘ಎಸ್‌ಐಪಿ’ ಮೂಲಕ ಮಾಡಿರುವ ಹೂಡಿಕೆಯ ಗಳಿಕೆಯ ಪ್ರಮಾಣ ಇಳಿಕೆಯಾದ ನಂತರ ಈ ಎಲ್ಲ ವಿಚಾರಗಳು ಮತ್ತೆ ಚರ್ಚೆಗೆ ಬರುತ್ತಿವೆ.

‘ಎಸ್‌ಐಪಿ’ ಒಂದು ಹೂಡಿಕಾ ವಿಧಾನ

‘ಎಸ್‌ಐಪಿ’ ಎಂಬುದು ಮ್ಯೂಚುವಲ್‌ ಫಂಡ್‌ನಲ್ಲಿ ಅಥವಾ ಷೇರುಪೇಟೆಯಲ್ಲಿ ಹೂಡಿಕೆ ಮಾಡುವ ವಿಧಾನವೇ ವಿನಾ ಅದೇ ಹೂಡಿಕೆಯ ಉತ್ಪನ್ನವಲ್ಲ. ಯಾವಾಗ ಮತ್ತು ಎಷ್ಟು ಹೂಡಿಕೆ ಮಾಡಬೇಕು ಎಂಬುದನ್ನು ಹೂಡಿಕೆದಾರರು ನಿರ್ಧರಿಸಬೇಕು. ಪ್ರತಿ ತಿಂಗಳೂ ಒಂದಿಷ್ಟು ಹಣವನ್ನು ಹೂಡಿಕೆ ಮಾಡಬಹುದು. ಹೂಡಿಕೆದಾರರಿಗೆ ಬೇಕೆನಿಸಿದಾಗ ಅದರ ಪ್ರಮಾಣವನ್ನು ಕಡಿಮೆ ಮಾಡಲು ಅಥವಾ ಹೆಚ್ಚಿಸಲು ಅವಕಾಶ ಇದೆ. ಅಂದರೆ, ‘ಎಸ್‌ಐಪಿ’ ಬೇರೆ, ಮ್ಯೂಚುವಲ್‌ ಫಂಡ್‌ ಬೇರೆ ಅಲ್ಲ. ಬದಲಿಗೆ ‘ಎಸ್‌ಐಪಿ’ ಮೂಲಕ ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮಾಡಲಾಗುತ್ತದೆ.

ಷೇರುಪೇಟೆಯ ಆಧಾರದಲ್ಲಿ ಗಳಿಕೆ

‘ಎಸ್‌ಐಪಿ’ ಎಂಬುದು ಸ್ವತಂತ್ರ ಹೂಡಿಕಾ ಉತ್ಪನ್ನವಲ್ಲದ ಕಾರಣ ಅದಕ್ಕೆ ತನ್ನದೇ ಆದ ಗಳಿಕೆ ಎಂಬುದಿಲ್ಲ. ಹೂಡಿಕೆದಾರರು ಯಾವ ಫಂಡ್‌ನಲ್ಲಿ ಹಣವನ್ನು ತೊಡಗಿಸಿದ್ದಾರೋ ‘ಎಸ್‌ಐಪಿ’ಯ ಗಳಿಕೆಯು ಆ ಫಂಡ್‌ನ ಗಳಿಕೆಯನ್ನು ಆಧ‌ರಿಸಿರುತ್ತದೆ. ಷೇರುಪೇಟೆಯ ಏರುಪೇರುಗಳು (ಷೇರು ಮತ್ತು ಸಾಲನಿಧಿ ಎರಡೂ) ಮ್ಯೂಚುವಲ್‌ ಫಂಡ್‌ಗಳ ಗಳಿಕೆಯ ಮೇಲೆ ಪರಿಣಾಮ ಉಂಟುಮಾಡುತ್ತವೆ. ಅದಕ್ಕೆ ಅನುಗುಣವಾಗಿ ಫಂಡ್‌ಗಳ ಗಳಿಕೆ ದಾಖಲಾಗುತ್ತದೆ. ಆದ್ದರಿಂದ ಇಂತಿಷ್ಟೇ ಗಳಿಕೆ ಸಾಧ್ಯ ಎಂದು ‘ಎಸ್‌ಐಪಿ’ ಖಾತರಿ ನೀಡುವುದಿಲ್ಲ. ಒಂದು ಉದಾಹರಣೆ ತೆಗೆದುಕೊಳ್ಳೋಣ. ನೀವು ಒಂದು ಈಕ್ವಿಟಿ ಫಂಡ್‌ನಲ್ಲಿ ‘ಎಸ್‌ಐಪಿ’ ಮೂಲಕ ಹೂಡಿಕೆ ಮಾಡಿದ್ದೀರಿ ಎಂದಿಟ್ಟುಕೊಳ್ಳಿ. ಷೇರು ಸೂಚ್ಯಂಕ ಕುಸಿದರೆ ನಿಮ್ಮ ಫಂಡ್‌ನ ಗಳಿಕೆಯೂ ಕಡಿಮೆಯಾಗುತ್ತದೆ. ಹೀಗಿರುವಾಗ, ‘ಎಸ್‌ಐಪಿ’ ಹೇಗೆತಾನೇ ಹೆಚ್ಚಿನ ಗಳಿಕೆಯ ಭರವಸೆ ನೀಡಬಲ್ಲದು?

2016ರಲ್ಲಿ ನೀವು ಐಸಿಐಸಿಐ ಪ್ರುಡೆನ್ಷಿಯಲ್‌ ಬ್ಲೂಚಿಪ್‌ ಫಂಡ್‌ನಲ್ಲಿ ‘ಎಸ್‌ಐಪಿ’ ಮೂಲಕ ಹೂಡಿಕೆ ಆರಂಭಿಸಿದ್ದಿರಿ ಎಂದಿಟ್ಟುಕೊಳ್ಳಿ. ಈಗ ಆ ಫಂಡ್‌ನ ಗಳಿಕೆಯು ಶೇ 9.1 ರಷ್ಟಾಗುತ್ತಿತ್ತು. 2018ರ ಆರಂಭದಲ್ಲಿ ಅದರ ಗಳಿಕೆ ಶೇ 23.4ರಷ್ಟಿತ್ತು. 2018ರ ಬಳಿಕ ಮಾರುಕಟ್ಟೆ ಸತತವಾಗಿ ಕುಸಿತ ದಾಖಲಿಸಿದ ಪರಿಣಾಮ ಗಳಿಕೆಯೂ ಕಡಿಮೆಯಾಗುತ್ತ ಹೋಗಿದೆ. ಹೀಗೆ ದೀರ್ಘ ಕಾಲದವರೆಗೆ ಷೇರುಸೂಚ್ಯಂಕ ಇಳಿಕೆಯನ್ನೇ ದಾಖಲಿಸುತ್ತ ಹೋದರೆ ಗಳಿಕೆಯು ಋಣಾತ್ಮಕವಾಗಿ ನಷ್ಟ ದಾಖಲಿಸುವ ಸಾಧ್ಯತೆಯೂ ಇರುತ್ತದೆ.

2017ರಲ್ಲಿ ಎಚ್‌ಡಿಎಫ್‌ಸಿ ಮಿಡ್‌ಕ್ಯಾಪ್‌ ಫಂಡ್‌ನಲ್ಲಿ ಯಾರಾದರೂ ‘ಎಸ್‌ಐಪಿ’ ಹೂಡಿಕೆ ಆರಂಭಿಸಿದ್ದರೆ ಅವರ ಗಳಿಕೆಯು ಇಂದು ಶೇ –1.25ರಷ್ಟಾಗುತ್ತಿತ್ತು. 2018ರಲ್ಲಿ ನಿಫ್ಟಿ ಮಿಡ್‌ಕ್ಯಾಪ್‌ ಸೂಚ್ಯಂಕವು ಶೇ 15ರಷ್ಟು ಇಳಿಕೆ ದಾಖಲಿಸಿದ್ದು ಇದಕ್ಕೆ ಕಾರಣ. ಷೇರು ಸೂಚ್ಯಂಕ ಉತ್ತುಂಗದಲ್ಲಿದ್ದಾಗ ‘ಎಸ್‌ಐಪಿ’ ಆರಂಭಿಸಿದರೆ ಋಣಾತ್ಮಕ ಗಳಿಕೆ ದಾಖಲಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಬೇರೆಬೇರೆ ದರದಲ್ಲಿ ಖರೀದಿ

‘ಎಸ್‌ಐಪಿ’ ಎಂಬುದು ಪ್ರತಿ ತಿಂಗಳು ನಡೆಸುವ ಹೂಡಿಕೆ ಆಗಿರುವುದರಿಂದ ಯೂನಿಟ್‌ಗಳ ಖರೀದಿ ದರವೂ ಬೇರೆಬೇರೆಯಾಗಿರುತ್ತದೆ. ನೀವು ಹೂಡಿಕೆ ಮಾಡಿದ ದಿನ ಯೂನಿಟ್‌ ಮೌಲ್ಯ ಎಷ್ಟಿರುತ್ತದೆ ಎಂಬುದರ ಮೇಲೆ ಅದು ನಿಗದಿಯಾಗುತ್ತದೆ. ಸೂಚ್ಯಂಕ ಏರಿಕೆ ಆಗಿದ್ದರೆ ಲಭಿಸುವ ಯೂನಿಟ್‌ಗಳ ಸಂಖ್ಯೆ ಕಡಿಮೆ ಇರುತ್ತದೆ. ಇಳಿಕೆಯಾಗಿದ್ದಾಗ ಅದೇ ಮೊತ್ತಕ್ಕೆ ಹೆಚ್ಚಿನ ಯೂನಿಟ್‌ಗಳು ಲಭಿಸುತ್ತವೆ. ಎಚ್‌ಡಿಎಫ್‌ಸಿ ಮಿಡ್‌ಕ್ಯಾಪ್‌ ಉದಾಹರಣೆಯನ್ನೇ ತೆಗೆದುಕೊಳ್ಳೋಣ. 2017ರಲ್ಲಿ ಈ ಫಂಡ್‌ನಲ್ಲಿ ಹೂಡಿಕೆ ಆರಂಭಿಸಿದವರಿಗೆ ಪ್ರತಿ ಯೂನಿಟ್‌ ಖರೀದಿ ದರವು ಸರಾಸರಿ ₹ 43ರಿಂದ ₹ 52ರಷ್ಟಾಗಿದೆ. ಅದೇ ಫಂಡ್‌ನಲ್ಲಿ ಒಂದು ವೇಳೆ 2016ರಲ್ಲಿ ಹೂಡಿಕೆ ಆರಂಭಿಸಿದ್ದರೆ ಸರಾಸರಿ ದರ ₹ 37 ರಿಂದ ₹44ರ ಆಸುಪಾಸಿನಲ್ಲಿ ಇರುತ್ತಿತ್ತು. 2018ರಲ್ಲಿ ಸೂಚ್ಯಂಕ ಕುಸಿದಿರುವುದು ಈ ದರ ಏರಿಕೆಗೆ ಕಾರಣವಾಗಿದೆ.

ದೀರ್ಘಾವಧಿ ಅಗತ್ಯ

ಹಾಗಿದ್ದರೆ ‘ಎಸ್‌ಐಪಿ’ ಸರಿಯಾದ ಹೂಡಿಕಾ ವಿಧಾನ ಅಲ್ಲವೇ. ಖಂಡಿತವಾಗಿಯೂ ಇದು ಒಳ್ಳೆಯ ಹೂಡಿಕೆ ವಿಧಾನವೇ. ಆದರೆ ಗಳಿಕೆಗೆ ಕನಿಷ್ಠ 1ರಿಂದ 2 ವರ್ಷಗಳ ಕಾಲಾವಕಾಶ ಕೊಡಬೇಕಾಗುತ್ತದೆ. ಅಲ್ಪಾವಧಿಯಲ್ಲಿ ದೊಡ್ಡ ಗಳಿಕೆ ದಾಖಲಿಸಬೇಕು ಎನ್ನುವವರಿಗೆ ‘ಎಸ್‌ಐಪಿ’ಯ ಲಾಭಗಳೇನೆಂಬುದು ಅರ್ಥವಾಗದು.

ಷೇರು ಸೂಚ್ಯಂಕ ಏರುತ್ತಲೇ ಇದ್ದರೆ ‘ಎಸ್‌ಐಪಿ’ ಹೂಡಿಕೆ ದೊಡ್ಡ ಗಳಿಕೆ ತರಲಾರದು. ಸೂಚ್ಯಂಕದ ಇಳಿಕೆಯ ಅವಧಿಯನ್ನೂ ‘ಎಸ್‌ಐಪಿ’ ಅನುಭವಿಸಬೇಕು. ಇದರಿಂದ ಯೂನಿಟ್‌ ಮೇಲಿನ ವೆಚ್ಚ ಕಡಿಮೆಯಾಗುತ್ತದೆ. ಷೇರು ಸೂಚ್ಯಂಕ ಭಾರಿ ಇಳಿಕೆ ಕಂಡಿದ್ದಾಗ ನೀವು ಹೂಡಿಕೆ ಆರಂಭಿಸಿದ್ದೀರಿ ಎಂದಾದರೆ ಅದಾಗಲೇ ನೀವು ಲಾಭ ಗಳಿಸಿದ್ದೀರಿ ಎಂದು ತಿಳಿಯಬಹುದು. ಸೂಚ್ಯಂಕ ಏರಿಕೆಯಾದಾಗ ಮಾರಾಟ ಮಾಡಿದರೆ ಗಳಿಕೆಯ ಪ್ರಮಾಣ ಹೆಚ್ಚಿರುತ್ತದೆ. ಆದರೆ ಅದಕ್ಕಾಗಿ ಸ್ವಲ್ಪ ಕಾಲ ಕಾಯಬೇಕಾಗುತ್ತದೆ. ‘ಎಸ್‌ಐಪಿ’ ಎಂಬುದು ನಿಧಾನವಾಗಿ ಸಂಪತ್ತನ್ನು ವೃದ್ಧಿಸುವ ವಿಧಾನ.

ಲಾಭಗಳೇನು?

‘ಎಸ್‌ಐಪಿ’ಮೂಲಕ ಹೂಡಿಕೆ ಮಾಡುವುದರಿಂದ ಹೂಡಿಕೆಯಲ್ಲಿ ಒಂದು ಶಿಸ್ತು ಕಾಪಾಡಿದಂತಾಗುತ್ತದೆ. ಎರಡನೆಯದಾಗಿ ಮಾರುಕಟ್ಟೆಯ ಏರುಪೇರಿನ ಲಾಭ ಪಡೆದು ಹೂಡಿಕೆಯ ವೆಚ್ಚವನ್ನು ಕಡಿಮೆ ಮಾಡಲು ‘ಎಸ್‌ಐಪಿ’ಮೂಲಕ ಸಾಧ್ಯವಾಗುತ್ತದೆ. ಸತತ ಹತ್ತು ವರ್ಷಗಳ ಕಾಲ ಮಾಸಿಕ ₹ 10ಸಾವಿರ ಹೂಡಿಕೆ ಮಾಡುತ್ತ ಹೋದರೆ ಕೊನೆಯಲ್ಲಿ ₹ 22ಲಕ್ಷದಷ್ಟು ಗಳಿಸುವ ಸಾಧ್ಯತೆ ಇದರಲ್ಲಿದೆ. ಬೇರೆ ಹೂಡಿಕಾ ವಿಧಾನಗಳಲ್ಲಿ ಹತ್ತು ವರ್ಷಗಳಲ್ಲಿ ₹ 22 ಲಕ್ಷ ಗಳಿಸಬೇಕಾದರೆ ಈಗಲೇ ಕನಿಷ್ಠ ₹ 7ಲಕ್ಷ ಹೂಡಿಕೆ ಮಾಡಬೇಕು (ವಾರ್ಷಿಕ ಶೇ 12ರ ಗಳಿಕೆ ಇದ್ದರೆ).

ಬೇಡವೆಂದಾಗ ‘ಎಸ್‌ಐಪಿ’ಹೂಡಿಕೆಯನ್ನು ಸ್ಥಗಿತಗೊಳಿಸಲು, ಅಥವಾ ಕಡಿಮೆ ಮಾಡಲು ಅವಕಾಶ ಇರುತ್ತದೆ. ಆದರೆ ಹೀಗೆ ಮಾಡುವುದರಿಂದ ದೀರ್ಘಾವಧಿಯಲ್ಲಿ ಗಳಿಕೆಯೂ ಕಡಿಮೆ ಆಗುವ ಸಾಧ್ಯತೆ ಇದೆ. ಸರಳವಾಗಿ ಹೇಳಬೇಕೆಂದರೆ ‘ಎಸ್‌ಐಪಿ’ಎಂಬುದು ಪ್ರತಿ ತಿಂಗಳು ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡುತ್ತ, ದೀರ್ಘಾವಧಿಯಲ್ಲಿ ಒಳ್ಳೆಯ ಗಳಿಕೆಯನ್ನು ದಾಖಲಿಸುವ, ಆ ಮೂಲಕ ಆರ್ಥಿಕ ಗುರಿಯನ್ನು ಸಾಧಿಸಲು ಇರುವ ಅತ್ಯುತ್ತಮವಾದ ಹೂಡಿಕಾ ವಿಧಾನ.

(ಲೇಖಕಿ: ಫಂಡ್ಸ್ ಇಂಡಿಯಾ ಡಾಟ್‌ ಕಾಮ್‌ನ ಮ್ಯೂಚುವಲ್‌ ಫಂಡ್‌ ರಿಸರ್ಚ್‌ ಮುಖ್ಯಸ್ಥೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT