ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ದೇಶ‍ಪೂರ್ವಕ ಸುಸ್ತಿದಾರರ ಸಂಖ್ಯೆ ಇಳಿಕೆ

Last Updated 30 ಜೂನ್ 2021, 16:30 IST
ಅಕ್ಷರ ಗಾತ್ರ

ಮುಂಬೈ: ಸಾಂಕ್ರಾಮಿಕದ ವರ್ಷದಲ್ಲಿ ದೇಶದಲ್ಲಿ ‘ಉದ್ದೇಶಪೂರ್ವಕ ಸುಸ್ತಿದಾರರ ಪ್ರಕರಣ’ಗಳ ಪ್ರಮಾಣ ಕಡಿಮೆ ಆಗಿದೆ ಎಂದು ಟ್ರಾನ್ಸ್ ಯೂನಿಯನ್ ಸಿಬಿಲ್ ಸಂಸ್ಥೆ ವರದಿ ಹೇಳಿದೆ.

2020–21ನೆಯ ಆರ್ಥಿಕ ವರ್ಷದ ಅಂತ್ಯದ ವೇಳೆಗೆ, ಉದ್ದೇಶಪೂರ್ವಕವಾಗಿ ಬ್ಯಾಂಕ್ ಸಾಲವನ್ನು ಮರುಪಾವತಿ ಮಾಡದೆ ಇದ್ದವರ ಪ್ರಕರಣಗಳ ಪ್ರಮಾಣದಲ್ಲಿ ಶೇಕಡ 1.9ರಷ್ಟು ಇಳಿಕೆ ಕಂಡುಬಂದಿದೆ.

₹ 25 ಲಕ್ಷಕ್ಕಿಂತ ಹೆಚ್ಚಿನ ಸಾಲ ಪಡೆದವರ ಪೈಕಿ ‘ಉದ್ದೇಶಪೂರ್ವಕ ಸುಸ್ತಿದಾರರು’ ಎಂಬ ಹಣೆಪಟ್ಟಿ ಹೊತ್ತವರ ಸಂಖ್ಯೆಯಲ್ಲಿ ಕೂಡ ಇಳಿಕೆ ಕಂಡುಬಂದಿದೆ. ಇಂಥವರ ಸಂಖ್ಯೆಯು ಈ ವರ್ಷದ ಮಾರ್ಚ್‌ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ 10,898 ಆಗಿತ್ತು. ಇದು ಹಿಂದಿನ ಆರ್ಥಿಕ ವರ್ಷದಲ್ಲಿ 12,242 ಆಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.

ಸಾಲ ತೀರಿಸುವ ಸಾಮರ್ಥ್ಯ ಇದ್ದರೂ ಆ ಕೆಲಸ ಮಾಡದೆ ಇರುವವರನ್ನು ‘ಉದ್ದೇಶಪೂರ್ವಕ ಸುಸ್ತಿದಾರರು’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ವ್ಯಾಖ್ಯಾನಿಸಿದೆ. ಈ ರೀತಿಯ ಹಣೆಪಟ್ಟಿ ಹೊತ್ತುಕೊಂಡವರಿಗೆ ಯಾವುದೇ ಬ್ಯಾಂಕ್‌ನಿಂದ ಹೊಸ ಸಾಲ ಸಿಗುವುದಿಲ್ಲ. ಸಾಲ ಪಡೆದವರು ಸಕಾಲದಲ್ಲಿ ಮರುಪಾವತಿ ಮಾಡಲಿ ಎಂಬ ಉದ್ದೇಶದಿಂದ ಬ್ಯಾಂಕ್‌ಗಳು ಈ ಅಸ್ತ್ರ ಬಳಕೆ ಮಾಡುತ್ತವೆ.

ದೇಶದ ಅತಿದೊಡ್ಡ ಬ್ಯಾಂಕ್‌ ಆಗಿರುವ ಭಾರತೀಯ ಸ್ಟೇಟ್‌ ಬ್ಯಾಂಕ್‌ನಿಂದ (ಎಸ್‌ಬಿಐ) ಸಾಲ ಪಡೆದು, ಉದ್ದೇಶಪೂರ್ವಕವಾಗಿ ಅದನ್ನು ಮರುಪಾವತಿ ಮಾಡದವರ ಸಂಖ್ಯೆಯಲ್ಲಿ ಏರಿಕೆ ಆಗಿದೆ. ಹಿಂದಿನ ಆರ್ಥಿಕ ವರ್ಷದಲ್ಲಿ 1,640 ಇದ್ದ ಇಂಥವರ ಸಂಖ್ಯೆಯು ಈ ಬಾರಿಯ ಮಾರ್ಚ್‌ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ 1,801ಕ್ಕೆ ಏರಿಕೆ ಆಗಿದೆ. ಇಂಥವರಿಂದ ಎಸ್‌ಬಿಐಗೆ ಬರಬೇಕಿರುವ ಒಟ್ಟು ಮೊತ್ತ ₹ 67 ಸಾವಿರ ಕೋಟಿ.

ಎಲ್ಲ ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಪರಿಗಣಿಸಿದರೆ ಸಾಲವನ್ನು ಉದ್ದೇಶಪೂರ್ವಕವಾಗಿ ಬಾಕಿ ಉಳಿಸಿಕೊಂಡವರ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. ಹಿಂದಿನ ವರ್ಷದಲ್ಲಿ 8,781 ಇದ್ದ ಇಂಥವರ ಸಂಖ್ಯೆಯು ಮಾರ್ಚ್‌ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ 7,418ಕ್ಕೆ ತಗ್ಗಿದೆ. ಇವರಿಂದ ಬ್ಯಾಂಕ್‌ಗಳಿಗೆ ಬರಬೇಕಿರುವ ಒಟ್ಟು ಮೊತ್ತ ₹ 1.18 ಲಕ್ಷ ಕೋಟಿ.

ಖಾಸಗಿ ಬ್ಯಾಂಕ್‌ಗಳಿಂದ ಸಾಲ ಪಡೆದವರ ಪೈಕಿ 1,514 ಜನ ಉದ್ದೇಶಪೂರ್ವಕವಾಗಿ ಸಾಲವನ್ನು ಹಿಂದಿರುಗಿಸಿಲ್ಲ. ಇವರಿಂದ ಬರಬೇಕಿರುವ ಮೊತ್ತ ₹ 22,867 ಕೋಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT