ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗದು ಕೊರತೆ ಇಲ್ಲ: ಅಗತ್ಯ ಬಿದ್ದರೆ ಹೆಚ್ಚುವರಿ ಪೂರೈಕೆಗೆ ಆರ್‌ಬಿಐ ಭರವಸೆ

Last Updated 7 ಜನವರಿ 2019, 20:15 IST
ಅಕ್ಷರ ಗಾತ್ರ

ನವದೆಹಲಿ: ‘ದೇಶಿ ಅರ್ಥ ವ್ಯವಸ್ಥೆಯಲ್ಲಿ ಸದ್ಯಕ್ಕೆ ನಗದು ಕೊರತೆ ಇಲ್ಲ. ಅಂತಹ ಸಂದರ್ಭ ಉದ್ಭವಿಸಿದರೆ ಹೆಚ್ಚುವರಿ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್ ದಾಸ್‌ ಹೇಳಿದ್ದಾರೆ.

‘ಹಣಕಾಸು ಚಟುವಟಿಕೆಗಳ ನಗದು ಅಗತ್ಯವನ್ನು ಈಗ ಬಹುತೇಕ ಪೂರೈಸಲಾಗುತ್ತಿದೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಮುಖ್ಯಸ್ಥರ ಜತೆ ಮಂಗಳವಾರ ಸಭೆ ನಡೆಸಿ ನಗದು ಕೊರತೆ ಸಮಸ್ಯೆ ಉದ್ಭವಿಸಿರುವ ಬಗ್ಗೆ ಮಾಹಿತಿ ಪಡೆಯುವೆ.

‘ಕೊರತೆ ಇರುವುದು ಕಂಡು ಬಂದರೆ ಕೇಂದ್ರೀಯ ಬ್ಯಾಂಕ್‌ ಖಂಡಿತವಾಗಿಯೂ ಅಗತ್ಯ ಕ್ರಮ ಕೈಗೊಳ್ಳಲಿದೆ. ಈ ಬಗ್ಗೆ ಎಚ್ಚರಿಕೆಯ ಹೆಜ್ಜೆ ಇಡಲಾಗುವುದು. ಕೆಲವೊಮ್ಮೆ ಹೆಚ್ಚುವರಿ ನಗದು ಪ್ರತಿಕೂಲ ಪರಿಣಾಮಕ್ಕೂ ಎಡೆಮಾಡಿಕೊಡುತ್ತದೆ’ ಎಂದು ಹೇಳಿದ್ದಾರೆ.

ಎಂಎಸ್‌ಎಂಇ ವಲಯದ ಸಭೆ: ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕಾ (ಎಂಎಸ್‌ಎಂಇ) ವಲಯದ ಕಾರ್ಯನಿರ್ವಹಣೆ, ಎದುರಿಸುತ್ತಿರುವ ಸಮಸ್ಯೆಗಳು, ಇತ್ತೀಚೆಗೆ ಪ್ರಕಟಿಸಲಾದ ಒಂದು ಬಾರಿಯ ಸಾಲ ಮರು ಹೊಂದಾಣಿಕೆಯ ಜಾರಿ ಬಗ್ಗೆ ದಾಸ್‌ ಅವರು ಸೋಮವಾರ ಇಲ್ಲಿ ಉದ್ಯಮಿಗಳ ಜತೆ ಸಭೆ ನಡೆಸಿ ಚರ್ಚಿಸಿದರು.

‘ಈ ಉದ್ಯಮಿಗಳು ಹೇಳಿಕೊಂಡ ಅನೇಕ ಸಮಸ್ಯೆಗಳು ಸರ್ಕಾರದ ವ್ಯಾಪ್ತಿಗೆ ಬರುತ್ತವೆ’ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

ಶೀಘ್ರದಲ್ಲೇ ಮಧ್ಯಂತರ ಲಾಭಾಂಶ
ಕೇಂದ್ರ ಸರ್ಕಾರಕ್ಕೆ ನೀಡಬೇಕಾಗಿರುವ ಮಧ್ಯಂತರ ಲಾಭಾಂಶದ ಮೊತ್ತವನ್ನು ಶೀಘ್ರದಲ್ಲಿಯೇ ಪ್ರಕಟಿಸಲು ಆರ್‌ಬಿಐ ನಿರ್ಧರಿಸಿದೆ.

2018–19ನೆ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರವು ತನ್ನ ವಿತ್ತೀಯ ಕೊರತೆಯನ್ನು ‘ಜಿಡಿಪಿ’ಯ ಶೇ 3.3ಕ್ಕೆ ಕಾಯ್ದುಕೊಳ್ಳಲು ಆರ್‌ಬಿಐನಿಂದ ಮಧ್ಯಂತರ ಲಾಭಾಂಶ ನಿರೀಕ್ಷಿಸಿದೆ. ಆರ್‌ಬಿಐ, ಮಾರ್ಚ್‌ ವೇಳೆಗೆ ₹ 40 ಸಾವಿರ ಕೋಟಿಗಳಷ್ಟು ಮಧ್ಯಂತರ ಲಾಭಾಂಶ ವಿತರಿಸಲಿದೆ ಎಂದು ಮೂಲಗಳು ತಿಳಿಸಿವೆ.

‘ಮಧ್ಯಂತರ ಲಾಭಾಂಶದ ಬಗ್ಗೆ ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ತೀರ್ಮಾನ ಕೈಗೊಂಡ ಕೂಡಲೇ ಅದನ್ನು ಜಾರಿಗೆ ತರಲಾಗುವುದು’ ಎಂದು ದಾಸ್ ಹೇಳಿದ್ದಾರೆ.

ಆರ್‌ಬಿಐ ಪಾಲಿಸುವ ಜುಲೈನಿಂದ ಜೂನ್‌ವರೆಗಿನ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರಕ್ಕೆ ₹ 50 ಸಾವಿರ ಕೋಟಿ ಮಧ್ಯಂತರ ಲಾಭಾಂಶ ವಿತರಿಸುವುದಾಗಿ ಇದಕ್ಕೂ ಮೊದಲು ಪ್ರಕಟಿಸಿತ್ತು. ಇದುವರೆಗೆ ₹ 10 ಸಾವಿರ ಕೋಟಿಗಳಷ್ಟು ಲಾಭಾಂಶ ವಿತರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT