ಬೆಂಗಳೂರು: ದೇಶ ಪ್ರಗತಿ ಸಾಧಿಸಲು ನಿರ್ಮಾಣ ವಲಯದಲ್ಲಿ ಹೊಸ ತಂತ್ರಜ್ಞಾನ, ನಾವೀನ್ಯತೆ, ಆವಿಷ್ಕಾರದ ಅಗತ್ಯವಿದೆ. ಸರ್ಕಾರಗಳು ಸಹ ಈ ವಲಯಕ್ಕೆ ಅಗತ್ಯ ಪ್ರಾಧಾನ್ಯ ನೀಡುತ್ತಿವೆ ಎಂದು ಇನ್‌ಫಾರ್ಮಾ ಮಾರ್ಕೆಟ್ಸ್ ಸಮೂಹದ ಭಾರತದ ಹಿರಿಯ ನಿರ್ದೇಶಕ ರಜನೀಶ್ ಖಟ್ಟರ್ ಹೇಳಿದ್ದಾರೆ.
ಮುಂಬೈನ ಬಾಂಬೆ ಎಕ್ಸಿಬಿಷನ್ ಸೆಂಟರ್‌ನಲ್ಲಿ ಅಕ್ಟೋಬರ್ 16 ರಿಂದ 18ರ ವರೆಗೆ ಆಯೋಜಿಸಿರುವ ‘ವರ್ಲ್ಡ್ ಆಫ್ ಕಾಂಕ್ರೀಟ್ ಇಂಡಿಯಾ 2024ರ’ 10ನೇ ವಾರ್ಷಿಕೋತ್ಸವ ಕುರಿತು ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ನಡೆದ ವಲಯದ ಉದ್ಯಮಿಗಳು ಹಾಗೂ ಪತ್ರಕರ್ತರ ದುಂಡುಮೇಜಿನ ಸಭೆಯಲ್ಲಿ ಅವರು ಮಾತನಾಡಿದರು.
ಈ ಕಾರ್ಯಕ್ರಮವು 300 ಪ್ರದರ್ಶಕರು, 15 ಸಾವಿರ ವ್ಯಾಪಾರ ಸಂದರ್ಶಕರು, ನೀತಿ ನಿರೂಪಕರು, ತಾಂತ್ರಿಕ ತಜ್ಞರು, ವೃತ್ತಿಪರರನ್ನು ಒಳಗೊಂಡಿರಲಿದೆ. ಜರ್ಮನಿ, ಇಟಲಿ, ಅಮೆರಿಕ, ಕುವೈತ್, ದಕ್ಷಿಣ ಕೊರಿಯಾ, ಫಿನ್ಲೆಂಡ್, ಜಪಾನ್ ಸೇರಿ ಇತರೆ ದೇಶಗಳಿಂದ 350ಕ್ಕೂ ಹೆಚ್ಚು ಬ್ರ್ಯಾಂಡ್‌ಗಳು, ಪ್ರದರ್ಶಕರು ಭಾಗವಹಿಸಲಿದ್ದಾರೆ. ಕರ್ನಾಟಕದಿಂದ 30ಕ್ಕೂ ಪ್ರದರ್ಶಕರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.
ದೇಶದ ಮೂಲಸೌಕರ್ಯ ವಲಯವು ಜಿಡಿಪಿಗೆ ಶೇ 9ರಷ್ಟು ಕೊಡುಗೆ ನೀಡುತ್ತಿದೆ. ಜೊತೆಗೆ, ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರವಹಿಸುತ್ತಿದೆ. ನಿರ್ಮಾಣ ವಲಯವು ಪ್ರಸ್ತುತ ₹53 ಲಕ್ಷ ಕೋಟಿ ಮೌಲ್ಯದ್ದಾಗಿದ್ದು, ವಾರ್ಷಿಕ ಸರಾಸರಿ ಬೆಳವಣಿಗೆ ಶೇ 6ರಷ್ಟು ಪ್ರಗತಿಯಾಗುವ ನಿರೀಕ್ಷೆಯಿದೆ. ಇದು 2025ರ ವೇಳೆಗೆ ₹117 ಲಕ್ಷ ಕೋಟಿಗೆ ತಲುಪುವ ನಿರೀಕ್ಷೆಯಿದೆ ಎಂದರು.
ಸಿಂಗಪುರ, ಮಲೇಷ್ಯಾಕ್ಕೆ ಹೋಲಿಸಿದರೆ ಭಾರತದಲ್ಲಿನ ನಿರ್ಮಾಣ ವಲಯದಲ್ಲಿ ತಂತ್ರಜ್ಞಾನದ ಬಳಕೆ ಪ್ರಮಾಣ ಕಡಿಮೆ ಇದೆ. ಕಟ್ಟಡ ನಿರ್ಮಾಣ ಮಾಡುವಾಗ ಅನೇಕ ತ್ಯಾಜ್ಯ ವಸ್ತುಗಳು ಹಾಗೆಯೇ ಉಳಿದು ಬಿಡುತ್ತವೆ. ಇವುಗಳ ಪುನರ್ ಬಳಕೆ ಆಗಬೇಕು. ಪರಿಸರ ಸ್ನೇಹಿ ವಾತಾವರಣ ನಿರ್ಮಾಣವಾಗಬೇಕು. ಹಸಿರು ಕಟ್ಟಡ ಸಾಮಗ್ರಿಗಳು ಮತ್ತು ಬಿಐಎಂ ಮತ್ತು 3ಡಿ ಮುದ್ರಣದಂತಹ ಸುಧಾರಿತ ತಂತ್ರಜ್ಞಾನಗಳ ಅಳವಡಿಕೆಯು ಅಗತ್ಯವಿದೆ ಎಂದು ಹೇಳಿದರು.
ಮನೆ ನಿರ್ಮಿಸುವಾಗ ಸಿಮೆಂಟ್ ಪ್ಲಾಸ್ಟಿಂಗ್ ಇಲ್ಲದೆಯೇ ನಿರ್ಮಿಸಬಹುದು. ಇಂತಹ ಮನೆಗಳು ಬಾಳಿಕೆ ಸಹ ಬರುತ್ತವೆ. ಪೂರ್ವ ಕಾಲದಲ್ಲಿ ನಿರ್ಮಿಸುತ್ತಿದ್ದ ಕಟ್ಟಡಗಳಿಗೆ ಪ್ಲಾಸ್ಟಿಂಗ್ ಇದ್ದಿಲ್ಲ. ಅವು ಇಂದಿಗೂ ಬಾಳಿಕೆಯಲ್ಲಿವೆ. ಬೆಂಗಳೂರಿನಲ್ಲೂ ಇಂತಹ ಅನೇಕ ಕಟ್ಟಡಗಳಿವೆ. ಜನರಿಗೆ ನಿರ್ಮಾಣ ವಲಯದಲ್ಲಿ ಬಳಕೆ ಮಾಡುತ್ತಿರುವ ತಂತ್ರಜ್ಞಾನದ ಅರಿವನ್ನು ಮೂಡಿಸಬೇಕಿದೆ. 3 ಡಿ ತಂತ್ರಜ್ಞಾನದಿಂದ ನಮಗೆ ಬೇಕಾದ ರೀತಿ ಮನೆಯನ್ನು ಕಡಿಮೆ ಸಮಯದಲ್ಲಿಯೇ ನಿರ್ಮಿಸಿಕೊಳ್ಳಬಹುದಾಗಿದೆ. ಹೊರ ಜಗತ್ತಿನಲ್ಲಿ ನಡೆಯುತ್ತಿರುವ ನಾವೀನ್ಯತೆ ನೋಡಿ, ನಾವು ಅದನ್ನು ಅಳವಡಿಸಿಕೊಳ್ಳಬೇಕಿದೆ ಎಂದು ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ವಲಯದ ಪ್ರಮುಖರು ಹೇಳಿದರು.
ಆರ್ಡೆಕ್ಸ್ ಎಂಡುರಾ ವ್ಯವಸ್ಥಾಪಕ ನಿರ್ದೇಶಕ ಗೋಪಿನಾಥ್ ಕೃಷ್ಣನ್, ಎಂಎಪಿಇಐ ಮೂಲಸೌಕರ್ಯ ಮುಖ್ಯಸ್ಥ ಸುಬೋಧ್ ನೆನೆ, ಮೆರ್ಲಿನ್ ಆಟೊಮೇಷನ್ ಸಲ್ಯೂಷನ್ಸ್‌ನ ಸಿಇಒ ಶರಣ್ಯ ಸುಬ್ರಮಣಿಯನ್, ಜೆಎಸ್‌ಡಬ್ಲ್ಯು ಸಿಮೆಂಟ್‌ನ ಮುಖ್ಯ ಸುಸ್ಥಿರತೆ ಮತ್ತು ನಾವೀನ್ಯತೆ ಅಧಿಕಾರಿ ಮನೋಜ್ ರುಸ್ತಗಿ, ಕೋಹೆರೆಂಟ್ ಎಂಜಿನಿಯರಿಂಗ್ ಸೇವೆಗಳ ಸಂಸ್ಥಾಪಕ ರಾಜ್ ಪಿಳ್ಳೈ, ಡಿಯು ಬಿಲ್ಡ್ಸರ್ ಸಂಸ್ಥಾಪಕ ಮತ್ತು ಕರ್ನಾಟಕ ರಾಜ್ಯ ಚಾಪ್ಟರ್ ಗೌರವ ಕಾರ್ಯದರ್ಶಿ ಮತ್ತು ನರೆಡ್ಕೊ ರಾಷ್ಟ್ರೀಯ ಆಡಳಿತ ಮಂಡಳಿಯ ಸದಸ್ಯ ಹಾಲರಾಮೇಶ್ವರ ಚನ್ನವೀರಪ್ಪ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.