ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಗಟು ಹಣದುಬ್ಬರ ಏರಿಕೆ

3 ತಿಂಗಳ ಗರಿಷ್ಠ ಮಟ್ಟವಾದ ಶೇ 3.18ಕ್ಕೆ ಡಬ್ಲ್ಯುಪಿಐ
Last Updated 15 ಏಪ್ರಿಲ್ 2019, 17:58 IST
ಅಕ್ಷರ ಗಾತ್ರ

ನವದೆಹಲಿ: ಮಾರ್ಚ್‌ ತಿಂಗಳಲ್ಲಿನ ಸಗಟು ಹಣದುಬ್ಬರವು ಮೂರು ತಿಂಗಳ ಗರಿಷ್ಠ ಮಟ್ಟಕ್ಕೆ (ಶೇ 3.18) ಏರಿಕೆಯಾಗಿದೆ.

ಆಹಾರ ಪದಾರ್ಥ (ಶೇ 5.41) ಮತ್ತು ಇಂಧನ (ಶೇ 2.23) ದುಬಾರಿಯಾಗಿದ್ದರಿಂದ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧರಿಸಿದ ಹಣದುಬ್ಬರವು ಹೆಚ್ಚಳಗೊಂಡಿದೆ.

2018ರ ಡಿಸೆಂಬರ್‌ನಲ್ಲಿ ಇದು ಶೇ 3.46ರಷ್ಟು ಇದ್ದರೆ, ಹಿಂದಿನ ವರ್ಷದ ಇದೇ ಅವಧಿಯಲ್ಲಿ ಶೇ 2.74ರಷ್ಟಿತ್ತು. ಈ ವರ್ಷದ ಜನವರಿ ಮತ್ತು ಫೆಬ್ರುವರಿ ತಿಂಗಳಲ್ಲಿ ಕ್ರಮವಾಗಿ ಶೇ 2.76, ಶೇ 2.93 ರಷ್ಟು ದಾಖಲಾಗಿತ್ತು.

ಆಹಾರ ಪದಾರ್ಥಗಳ ಹಣದುಬ್ಬರವು ಮಾರ್ಚ್‌ನಲ್ಲಿ ಶೇ 5.68ರಷ್ಟಾಗಿತ್ತು. ಫೆಬ್ರುವರಿ ತಿಂಗಳಲ್ಲಿ ಇದು ಶೇ 4.28ರಷ್ಟಿತ್ತು. ತರಕಾರಿಗಳ ಬೆಲೆ ಏರಿಕೆಯು ಫೆಬ್ರುವರಿ ತಿಂಗಳ ಶೇ 6.82ಕ್ಕೆ ಹೋಲಿಸಿದರೆ ಮಾರ್ಚ್‌ನಲ್ಲಿ ಶೇ 28.13ರಷ್ಟಿತ್ತು.

ಆಲೂಗೆಡ್ಡೆ ಬೆಲೆ ಏರಿಕೆ ಮಾತ್ರ ಹಿಂದಿನ ತಿಂಗಳ ಶೇ 23.40ರ ಬದಲಿಗೆ ಶೇ 1.30ರಷ್ಟು ಕಡಿಮೆಯಾಗಿದೆ. ಬೇಳೆಕಾಳು ಮತ್ತು ಗೋಧಿ ಬೆಲೆ ಏರಿಕೆಯೂ ಕ್ರಮವಾಗಿ ಶೇ 10.63 ಮತ್ತು ಶೇ 10.13ರಷ್ಟು ಕಡಿಮೆಯಾಗಿದೆ. ಪ್ರೊಟೀನ್‌ ಸಮೃದ್ಧ ಮೊಟ್ಟೆ, ಮಾಂಸ ಮತ್ತು ಮೀನುಗಳ ಹಣದುಬ್ಬರವು ಶೇ 5.86ರಷ್ಟು ಇಳಿಕೆಯಾಗಿದೆ.

ಭಾರತೀಯ ರಿಸರ್ವ ಬ್ಯಾಂಕ್‌ ತನ್ನ ಅಲ್ಪಾವಧಿ ಬಡ್ಡಿ ದರಗಳನ್ನು ನಿರ್ಧರಿಸಲು ಗ್ರಾಹಕ ಬೆಲೆ ಸೂಚ್ಯಂಕ ಆಧರಿಸಿದ ಚಿಲ್ಲರೆ ಹಣದುಬ್ಬರವನ್ನು ಮಾತ್ರ ಗಣನೆಗೆ ತೆಗೆದುಕೊಳ್ಳುತ್ತದೆ. ವಾಡಿಕೆಯ ಮುಂಗಾರು, ಆಹಾರ ಮತ್ತು ಇಂಧನ ಬೆಲೆಗಳು ಅಗ್ಗವಾಗಿರುವ ಕಾರಣಕ್ಕೆ ಚಿಲ್ಲರೆ ಹಣದುಬ್ಬರ ಶೇ 2.9 ರಿಂದ ಶೇ 3ರ ಮಟ್ಟದಲ್ಲಿ ಇರಲಿದೆ ಎಂದೂ ಅಂದಾಜಿಸಿದೆ. ಇದೇ ಕಾರಣಕ್ಕೆ ರೆಪೊ ದರವನ್ನು ಶೇ 0.25ರಷ್ಟು ಕಡಿಮೆ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT