ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸೋಣ!’– ಇದು ಸಾಧ್ಯವೇ?

Last Updated 14 ಮಾರ್ಚ್ 2019, 15:17 IST
ಅಕ್ಷರ ಗಾತ್ರ

ಬೆಂಗಳೂರು: ಬೆಳಿಗ್ಗೆ ಕಣ್ಣು ಬಿಟ್ಟಾಗಿನಿಂದ ರಾತ್ರಿ ಮಲಗುವವರೆಗೂ ಮೊಬೈಲ್‌ ಫೋನ್‌ ನಮ್ಮ ದೃಷ್ಟಿಯಿಂದ ಮರೆಯಾಗುವಂತಿಲ್ಲ. ಸ್ಮಾರ್ಟ್‌ಫೋನ್‌ ಅರೆಕ್ಷಣ ಕಾಣದಾದಾರೆ, ಹ್ಯಾಂಗ್‌ ಆದರೆ, ಕೈ ಜಾರಿ ಸಣ್ಣಗೆ ಬಿರುಕು ಬಂದರೆ– ಇಡೀ ಜೀವವೇನಶ್ವರತೆಯಲ್ಲಿ ಸಿಲುಕಿದ ಭಾವ. ಎಂದೆಂದಿಗೂ ಎಲ್ಲೆಲ್ಲೂ ಬಿಟ್ಟಿರಲಾರದಷ್ಟು ಆಪ್ತವಾಗಿರುವ ನಮ್ಮ ಸ್ಮಾರ್ಟ್‌ಫೋನ್‌ಗಳ ಪೈಕಿ ಶೇ 90ರಷ್ಟು ಚೀನಾ ಮೂಲದವು. ಅವೇ ಸ್ಮಾರ್ಟ್‌ಫೋನ್‌ಗಳನ್ನು ಹಿಡಿದು ಸಾಮಾಜಿಕ ಮಾಧ್ಯಮಗಳಲ್ಲಿ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸೋಣಎಂದರೆ?

ಮಸೂದ್‌ ಅಜರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವ ಕುರಿತು ನಾಲ್ಕನೇ ಬಾರಿ ಆಕ್ಷೇಪ ವ್ಯಕ್ತಪಡಿಸಿರುವ ಚೀನಾ ವಿರುದ್ಧ ಸಹಜವಾಗಿಯೇ ಭಾರತೀಯರು ಕುಪಿತರಾಗಿದ್ದಾರೆ. ಆರ್ಥಿಕ ಸಮರಕ್ಕೆ ಸಜ್ಜಾಗುವಂತೆ ಕರೆಕೊಟ್ಟಿದ್ದಾರೆ.

ಆರ್ಥಿಕವಾಗಿ ಚೀನಾಗೆ ಭಾರತ ಬೃಹತ್‌ ಮಾರುಕಟ್ಟೆಯಾಗಿದೆ. ತನ್ನ ದೇಶದಿಂದ ರಫ್ತು ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನದಲ್ಲಿರುವ ಚೀನಾ, ಎಂದಿಗೂ ಸ್ಮಾರ್ಟ್‌ಫೋನ್‌ ಮೋಹಿಗಳಾದ ಭಾರತದ ಗ್ರಾಹಕರನ್ನು ಕಳೆದುಕೊಳ್ಳಲು ಸಿದ್ಧರಿಲ್ಲ. ಚೀನಾ ಉತ್ಪನ್ನಗಳ ಬಳಕೆ ಇಲ್ಲದೆ ನಿತ್ಯದ ಬದುಕು ಮುನ್ನಡೆಯವುದೇ ಇಲ್ಲ ಎಂಬಷ್ಟು ವ್ಯಾಪಕವಾಗಿ ಆಸರುಕುಗಳು ನಮ್ಮನ್ನು ಆವರಿಸಿಕೊಂಡಿವೆ. ನಾವು ಇಷ್ಟಪಡುವ, ಇಷ್ಟಪಟ್ಟು ಬಳಸುತ್ತಿರುವ ಬಹುತೇಕ ವಸ್ತುಗಳು ಚೀನಾ ಉತ್ಪನ್ನಗಳೇ ಆಗಿರುವಾಗ ಅವುಗಳನ್ನು ನಮ್ಮ ಜೀವನ ಕ್ರಮದಿಂದ ಬಹಿಷ್ಕರಿಸಿಕೊಳ್ಳಲು ತೊಡುವ ಸಂಕಲ್ಪ ಸಕಲವನ್ನೂ ತ್ಯಜಿಸುವಂತಿರಬೇಕು!

ಪ್ರೀತಿಯಿಂದ ಚೀರುವ, ಅಭಿಮಾನಿಗಳ ಅಭಿಮಾನದಿಂದಲೇ ಬೆಳೆಯುತ್ತಿರುವ ಭಾರತ ಕ್ರಿಕೆಟ್‌ ತಂಡದ ಪ್ರಮುಖ ಪ್ರಾಯೋಜಕರು ಚೀನಾ ಮೂಲದ ಸ್ಮಾರ್ಟ್‌ಫೋನ್‌ ಉತ್ಪಾದಕ ಸಂಸ್ಥೆ ಒಪ್ಪೊ. ಕೊಹ್ಲಿ, ಧೋನಿ, ರಾಹುಲ್‌, ಜಡೇಜ, ಪಾಂಡ್ಯ,..ಎಲ್ಲರು ತೊಡುವ ಜರ್ಸಿಯ ಮೇಲೂ ಒಪ್ಪೊ ಹೆಸರಿದೆ. ₹1,079 ಕೋಟಿ ಮೊತ್ತಕ್ಕೆ 2022ರ ವರೆಗೂ ಪ್ರಾಯೋಜಕತ್ವದ ಹಕ್ಕು ಪಡೆದಿಕೊಂಡಿರುವ ಒಪ್ಪೊ ಭರ್ಜರಿ ಪ್ರಚಾರ ಪಡೆದುಕೊಂಡು ಮಾರಾಟ ಗಾತ್ರಹೆಚ್ಚಿಸಿಕೊಂಡಿದೆ. ಅತ್ಯಂತ ಕಡಿಮೆ ದರದಲ್ಲಿ ಅತ್ಯಾಧುನಿಕ ಆಯ್ಕೆಗಳನ್ನು ಒದಗಿಸುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿರುವ ವಿವೊ, ಲಿನೋವಾ, ಎಂಐ ಸ್ಮಾರ್ಟ್‌ಫೋನ್‌ಗಳೂ ಸಹ ಚೀನಾದಿಂದಲೇ ಬರುವುದು. ಚೀನಾ ಮೂಲದಿಂದ ಹೊರತಾದ ಸ್ಯಾಮ್‌ಸಂಗ್‌ ಮತ್ತು ಐಫೋನ್‌ನ ಕೆಲ ಮಾದರಿಗಳು ಸಹ ಚೀನಾದಲ್ಲಿಯೇ ಉತ್ಪಾದನೆಯಾಗುತ್ತಿವೆ.

ಮೇಕ್‌ ಇನ್‌ ಇಂಡಿಯಾ ಎಂದು ದೊಡ್ಡ ಮಟ್ಟದಲ್ಲಿ ಘೋಷಣೆ ಕೂಗಿ, ಅದೇ ಸಂಸ್ಥೆಗಳು ಇಲ್ಲಿ ಬಂದು ನೆಲೆ ಕಂಡುಕೊಂಡರೂ; ಇಲ್ಲಿ

ನಡೆಯುವುದು ಸಿದ್ಧ ಬಿಡಿಭಾಗಗಳ ಜೋಡಣೆ ಕಾರ್ಯ ಮಾತ್ರ. ಇಡೀ ಸ್ಮಾರ್ಟ್‌ಫೋನ್‌ ರೂಪಿಸಲು ಅಗತ್ಯವಿರುವ ಚಿಪ್‌, ಪ್ರೊಸೆಸರ್‌, ಡಿಸ್‌ಪ್ಲೇ, ಬ್ಯಾಟರಿ, ಅದರ ಕವಚ, ಮೆಮೊರಿ ಕಾರ್ಡ್‌,..ಎಲ್ಲವೂ ಚೀನಾದಲ್ಲಿಯೇ ಸಿದ್ಧಗೊಳ್ಳುತ್ತವೆ. ಇಡೀ ಜಗತ್ತಿನಲ್ಲಿಯೇ ಅತ್ಯಂತ ಕಡಿಮೆ ದರದಲ್ಲಿ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಉತ್ಪಾದಿಸಿ ರಫ್ತು ಮಾಡುತ್ತಿದೆ. ಭಾರತದಲ್ಲಿಯೇ ತಯಾರಾಗುವ ಹಲವು ಉತ್ಪನ್ನಗಳಿಗೆ ಚೀನಾ ಉಪಕರಣಗಳೇ ಆಧಾರ. ಹಾಗಾದರೆ, ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವುದು ಹೇಗೆ?

ದೇಶೀಯ ಉತ್ಪನ್ನ ಹೆಚ್ಚಿಸುವುದು, ಸ್ವದೇಶಿನಿರ್ಮಿತ ಸಾಮಗ್ರಿ ಖರೀದಿಸಿ ದೇಶಿ ಮಾರುಕಟ್ಟೆಗೆ ಬಲ ನೀಡುವುದು ನಮ್ಮದೇ ಹೊಣೆ. ಕೆಲವು ವೆಬ್‌ಸೈಟ್‌ಗಳ ಅಂಕಿ–ಅಂಶಗಳ ಪ್ರಕಾರ,ದೇಶದ ಒಟ್ಟು ಆಮದು ಪೈಕಿ ಚೀನಾ ವಸ್ತುಗಳ ಪಾಲು ಶೇ 24. ಇದರಲ್ಲಿ ಸ್ಮಾರ್ಟ್‌ಫೋನ್‌ ಸೇರಿದಂತೆ ಎಲೆಕ್ಟ್ರಾನಿಕ್‌ ಉಪಕರಣಗಳ ಪ್ರಮಾಣವೇ ಅಧಿಕ.ಕಚ್ಚಾ ವಸ್ತುವಿಗಿಂತಲೂ ಕಡಿಮೆ ಬೆಲೆಗೆ ಸಿದ್ಧ ವಸ್ತುಗಳನ್ನು ಮಾರುಕಟ್ಟೆಗೆ ಬಿಡುವ ಮೂಲಕ ಭಾರತದಲ್ಲಿ ಚೀನಾ ಉತ್ಪನ್ನಗಳ ಪ್ರಾಬಲ್ಯ ಬೆಳೆಸಿಕೊಂಡಿದೆ.

ಚೀನಾದ ಮೊಬೈಲ್ ಫೋನ್‌ ಉತ್ಪಾದನಾ ಸಂಸ್ಥೆ
ಚೀನಾದ ಮೊಬೈಲ್ ಫೋನ್‌ ಉತ್ಪಾದನಾ ಸಂಸ್ಥೆ

ಏನೆಲ್ಲಾ...ಏನಿಲ್ಲ?

ಪರಿಸರ ಸ್ನೇಹಿ ಮಾರ್ಗವಾಗಿ ಪ್ರಚಲಿತಗೊಳ್ಳುತ್ತಿರುವ ಸೋಲಾರ್ ಪ್ಯಾನಲ್‌, ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬಳಕೆಯಾಗುವ ಉಪಕರಣಗಳು, ರಾಸಾಯನಿಕ, ರಸಗೊಬ್ಬರ, ಮಕ್ಕಳ ಆಟಿಕೆಗಳು, ಉಡುಗೊರೆ ಅಥವಾ ಪ್ರದರ್ಶನದ ವಸ್ತುಗಳನ್ನು ಚೀನಾ ಹೊರತಾಗಿ ಬೇರೆ ರಾಷ್ಟ್ರಗಳಿಂದ ಆಮದು ಮಾಡಿಕೊಂಡರೆ ದುಪ್ಪಟ್ಟು ಬೆಲೆ ತೆರಬೇಕಾಗುತ್ತದೆ. ಇಂಥ ಅನಿವಾರ್ಯ ಮತ್ತು ಆರ್ಥಿಕ ಕಾರಣಗಳಿಂದಾಗಿ ಬಹುತೇಕ ಸಿದ್ಧ ವಸ್ತುಗಳಿಗಾಗಿ ಚೀನಾವನ್ನು ನೆಚ್ಚಿಕೊಂಡಿದೆ. 2018ರಲ್ಲಿ ಚೀನಾದಿಂದ ಆಮದು ಮಾಡಿಕೊಳ್ಳುವ ಪ್ರಮಾಣ 2017ಕ್ಕಿಂತ ಏರಿಕೆಯಾಗಿದ್ದು, ಭಾರತದಿಂದ ಚೀನಾಕ್ಕೆ ಆಮದು ಆಗುವ ಹಾಗೂ ಅಲ್ಲಿಗೆ ರಫ್ತು ಆಗುವ ಪ್ರಮಾಣದಲ್ಲಿ ಭಾರೀ ವ್ಯತ್ಯಾಸವಿದೆ. ಆಮದು ಪ್ರಮಾಣವೇ ಹೆಚ್ಚಿರಿವುದರಿಂದ ಭಾರತ ಎದುರಿಸುತ್ತಿರುವ ವಹಿವಾಟು ಕೊರತೆ ಮೌಲ್ಯ ಅಂದಾಜು₹3.54 ಲಕ್ಷ ಕೋಟಿ. ಭಾರತ ಚೀನಾದಿಂದ ಆಮದು ಮಾಡಿಕೊಳ್ಳುತ್ತಿರುವ ಪ್ರಮಾಣ, ಚೀನಾ ಭಾರತದಿಂದ ಪಡೆಯುತ್ತಿರುವ ವಸ್ತುಗಳ ಮೌಲ್ಯಕ್ಕಿಂತ ಐದು ಪಟ್ಟು ಹೆಚ್ಚಿದೆ.

ಸರ್ಕಾರದಿಂದ ದೊರೆಯುವ ಸಬ್ಸಿಡಿ ಹಾಗೂ ಅಗ್ಗದ ದರದಲ್ಲಿ ಸಿಗುವ ಕಾರ್ಮಿಕರಿಂದಾಗಿ ಚೀನಾ ವಸ್ತುಗಳು ಅತಿ ಕಡಿಮೆ ಬೆಲೆಗೆ ಸಿಗುತ್ತವೆ. ಸ್ಥಳೀಯವಾಗಿ ಉತ್ಪಾದಿಸಿ ದೇಶಿ ಉತ್ಪನ್ನಗಳಿಗಿಂತಲೂ ಆ ವಸ್ತುಗಳ ಬೆಲೆ ಕಡಿಮೆ ಇರುತ್ತದೆ. ಗುಣಮಟ್ಟದ ಉತ್ಪನ್ನಗಳೂ ಸಹ ಕೈಗೆಟುಕುವ ಬೆಲೆಯಲ್ಲಿ ಭಾರತೀಯರಿಗೆ ದೊರೆಯುತ್ತಿವೆ. ಇ–ಮಾರುಕಟ್ಟೆಯಲ್ಲಿ ಇಂಥ ಉತ್ಪನ್ನ ಅಬ್ಬರ ಜೋರಾಗಿಯೇ ಇದೆ. ಆನ್‌ಲೈನ್‌ನಲ್ಲಿ ಮಾತ್ರವೇ ಕಾಣಸಿಗುತ್ತಿದ್ದ ಬ್ರ್ಯಾಂಡ್‌ಗಳು ಇದೀಗ ದೇಶದ ಪ್ರಮುಖ ನಗರಗಳಲ್ಲಿ ಮಳಿಗೆಗಳನ್ನು ಸೇವಾ ಕೇಂದ್ರಗಳನ್ನು ತೆರೆದಿವೆ. ಈ ಬೆಳವಣಿಗೆ ದೇಶದಲ್ಲಿ ಉದ್ಯೋಗ ಸೃಷ್ಟಿಗೆ ಮೂಲವಾದರೂ ಆರ್ಥಿಕ ಉನ್ನತಿಯೊಂದಿಗೆ ಲಕ್ಷಾಂತರ ಉದ್ಯೋಗ ಸೃಷ್ಟಿಯಾಗುವುದು ಉತ್ಪಾದನಾ ಕ್ಷೇತ್ರದಲ್ಲಿಯೇ.

ಯೋಗಾಯೋಗ: ಭಾರತೀಯರಲ್ಲಿ ಯೋಗದ ಬಗ್ಗೆ ಆಸಕ್ತಿ ಹೆಚ್ಚುತ್ತಿದ್ದು, ಶಾಲೆಗಳಲ್ಲಿ ಯೋಗಾಭ್ಯಾಸ, ಹವ್ಯಾಸವಾಗಿ ಯೋಗ ಹಾಗೂ ಯೋಗ ಶಿಕ್ಷಣ ಕೇಂದ್ರಗಳ ಸಂಖ್ಯೆಯೂ ಹೆಚ್ಚುತ್ತಿವೆ. ಇದರ ಪರಿಣಾಮ, ಯೋಗ ಮಾಡಲು ಬಳಸುವ ಮ್ಯಾಟ್‌ಗಳಿಗೆ ಬೇಡಿಕೆ

ಉಂಟಾಗಿದೆ. ವಾರೆಂಟಿ ಕೊಡುವ ಜತೆಗೆ ಕಡಿಮೆ ದರದಲ್ಲಿಯೂ ಯೋಗಾಸನ ಮಾಡುವ ಮ್ಯಾಟ್‌ಗಳನ್ನು ಪೂರೈಸುತ್ತಿರುವುದು ಚೀನಾ. ಪಿವಿಸಿ, ರಬ್ಬರ್‌ನಂತಹ ವಸ್ತುಗಳಿಂದ ಸಿದ್ಧಪಡಿಸಿರುವ ದೇಶೀಯ ಮ್ಯಾಟ್‌ಗಳು ಸಿಗುವುದು ಬಲು ಅಪರೂಪ. ಯಾವುದೇ ಮಳಿಗೆಯಲ್ಲಿಯೂ ಅಥವಾ ಆನ್‌ಲೈನ್‌ ದೊರೆಯುವುದು ಚೀನಾ ಉತ್ಪಾದಿತ ಮ್ಯಾಟ್‌ಗಳೇ.ಇನ್ನೂ ಕ್ರೀಡೆಗಳಿಗೆ ಬೇಕಾದ ಹಾಗೂ ಫಿಟ್ನೆಸ್‌ ಸಂಬಂಧಿತ ಪರಿಕರಗಳಿಗೂ ಚೀನಾನೇ ಮೂಲ.

ಮೂರು ತಿಂಗಳ ಮಗುವಿಗೆ ಬೇಕಾದ ಆಟಿಕೆಯಿಂದ ಹಿಡಿದು ಬ್ಯಾಟರಿ, ವಿದ್ಯುತ್‌ ಚಾಲಿತ ಆಟಿಕೆಗಳನ್ನೂಆಮದು ಮಾಡಿಕೊಳ್ಳಲಾಗುತ್ತಿದೆ. ಹಬ್ಬ, ವಿಶೇಷ ಸಂದರ್ಭಗಳಲ್ಲಿ ಬಳಕೆಯಾಗುವ ಅಲಂಕಾರಿಕ ವಸ್ತುಗಳು, ಬಣ್ಣ ಬಣ್ಣದ ಎಲ್ಇಡಿ ಬಲ್ಬ್‌ಗಳು, ಪ್ಲಾಸ್ಟಿಕ್‌ ಕವರ್‌ಗಳು,..ಯಾವುದು ಬೇಕು ಎಲ್ಲವೂ ಚೀನಾದಿಂದ ಲಭ್ಯ. ಐಫೋನ್‌ ಮೊಬೈಲ್‌, ರಿಬೋಕ್‌, ನೈಕಿ ಸೇರಿ ವಿಶ್ವಮಟ್ಟದ ಯಾವುದೇ ಬ್ರ್ಯಾಂಡ್‌ನ ಎಂಥದ್ದೇ ವಸ್ತುವಿನ ತದ್ರೂಪು ಸೃಷ್ಟಿಸಿ ಹೊರ ತರುವ ಚೀನಿ ಮಾಲುಗಳಿಗೆ ದೇಶದ ಪ್ರಮುಖ ನಗರಗಳಲ್ಲಿ ಪ್ರತ್ಯೇಕ ಮಾರುಕಟ್ಟೆಯೇ ಇದೆ. ಇತರೆ ಮಾರುಕಟ್ಟೆಗಳಲ್ಲಿ ನಡೆಯುವ ವಹಿವಾಟಿಗಿಂತಲೂ ಜೋರು ವಹಿವಾಟು ಈ ಚೈನಾ ಬಜಾರ್‌ಗಳಲ್ಲಿ ನಡೆಯುತ್ತವೆ. ಹೀಗಿರುವಾಗ ಚೀನಾ ಉತ್ಪನ್ನಗಳು ಬಹಿಷ್ಕರಿಸುವ ಪರಿ ಹೇಗೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT