ಸೋಮವಾರ, ಜನವರಿ 18, 2021
19 °C

₹2,892 ಕೋಟಿ ಸಾಲ; ಯೆಸ್ ಬ್ಯಾಂಕ್ ಸ್ವಾಧೀನಕ್ಕೆ ಅನಿಲ್ ಅಂಬಾನಿ ಗ್ರೂಪ್ ಕಚೇರಿ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಅನಿಲ್‌ ಅಂಬಾನಿ

ಮುಂಬೈ: ಅನಿಲ್‌ ಅಂಬಾನಿ ಅವರ ರಿಲಯನ್ಸ್‌ ಗ್ರೂಪ್‌ನ ಮುಖ್ಯ ಕಚೇರಿಯನ್ನು ಯೆಸ್‌ ಬ್ಯಾಂಕ್‌ ಸ್ವಾಧೀನ ಪಡಿಸಿಕೊಂಡಿದೆ. ಅನಿಲ್‌ ಅಂಬಾನಿ ಅವರು ಗ್ರೂಪ್‌ ₹2,892 ಕೋಟಿ ಸಾಲ ಮರುಪಾವತಿ ಬಾಕಿ ಉಳಿಸಿಕೊಂಡಿದೆ.

ಸಾಂತಾಕ್ರೂಜ್‌ನಲ್ಲಿ ಕಚೇರಿ ಜೊತೆಗೆ ದಕ್ಷಿಣ ಮುಂಬೈನಲ್ಲಿನ ಎರಡು ಫ್ಲ್ಯಾಟ್‌ಗಳನ್ನು ಬ್ಯಾಂಕ್‌ ಸ್ವಾಧೀನ ಪಡಿಸಿಕೊಂಡಿದೆ. ರಿಲಯನ್ಸ್‌ ಇನ್ಫ್ರಾಸ್ಟ್ರಕ್ಚರ್‌ ಸಾಲದ ಬಾಕಿ ಮೊತ್ತ ಪಾವತಿಸದ ಕಾರಣ ಸ್ವಾಧೀನ ಪ್ರಕ್ರಿಯೆ ನಡೆಸಿರುವುದು ಯೆಸ್‌ ಬ್ಯಾಂಕ್‌ ನೋಟಿಸ್‌ನ ಪತ್ರಿಕೆ ಪ್ರಕಟಣೆಯ ಮೂಲಕ ಬುಧವಾರ ತಿಳಿದು ಬಂದಿದೆ.

ಅನಿಲ್ ಧೀರುಭಾಯಿ ಅಂಬಾನಿ ಗ್ರೂಪ್‌ನ (ಎಡಿಎಜಿ) ಬಹುತೇಕ ಎಲ್ಲ ಪ್ರಮುಖ ಕಂಪನಿಗಳು ಸಾಂತಾಕ್ರೂಜ್‌ ಕಚೇರಿಯಿಂದ ಹೊರಗೆ 'ರಿಲಯನ್ಸ್ ಸೆಂಟರ್‌'ನಲ್ಲಿ ಕಾರ್ಯಾಚರಿಸುತ್ತಿವೆ. ಆದರೆ, ಕೆಲವು ವರ್ಷಗಳಿಂದ ಕಂಪನಿಗಳು ನಷ್ಟಕ್ಕೆ ಒಳಗಾಗಿವೆ, ಪಾಲು ಮಾರಾಟ ಮಾಡಿವೆ ಹಾಗೂ ದಿವಾಳಿ ಸಹ ಆಗಿವೆ. ಮೇ 6ರಂದು ರಿಲಯನ್ಸ್‌ ಇನ್ಫ್ರಾಸ್ಟ್ರಕ್ಚರ್‌ನಿಂದ ಯೆಸ್‌ ಬ್ಯಾಂಕ್‌ ₹2,892.44 ಕೋಟಿ ಬಾಕಿ ಪಡೆಯಲು ಮುಂದಾಯಿತು. ನೋಟಿಸ್‌ ನೀಡಿ 60 ದಿನಗಳ ನಂತರವೂ ಬಾಕಿ ಪಾವತಿಯಾಗದ್ದರಿಂದ ಜುಲೈ 22ರಂದು ಮೂರು ಆಸ್ತಿಗಳನ್ನು ಸ್ವಾಧೀನ ಪಡಿಸಿಕೊಂಡಿರುವುದಾಗಿ ಬ್ಯಾಂಕ್‌ ಹೇಳಿದೆ.

ರಿಲಯನ್ಸ್‌ ಇನ್ಫ್ರಾ ಒಟ್ಟು ₹6,000 ಕೋಟಿ ಸಾಲಕ್ಕೆ ಒಳಗಾಗಿದ್ದು, ಈ ಹಣಕಾಸು ವರ್ಷದಲ್ಲಿ ಸಾಲ ಮುಕ್ತವಾಗಲಿದೆ ಎಂದು ಜೂನ್‌ 23ರಂದು ಅನಿಲ್‌ ಅಂಬಾನಿ ಹೇಳಿದ್ದರು. 2018ರಲ್ಲಿ ಕಂಪನಿಯು ಮುಂಬೈನಲ್ಲಿನ ತನ್ನ ಇಂಧನ ಉದ್ಯಮವನ್ನು ಅದಾನಿ ಟ್ರಾನ್ಸ್‌ಮಿಷನ್‌ಗೆ ಮಾರಾಟ ಮಾಡುವ ಮೂಲಕ ₹18,000 ಕೋಟಿ ಸಂಗ್ರಹಿಸಿತ್ತು. ಈ ಮೂಲಕ ಸಾಲದ ಹೊರೆಯನ್ನು ₹7,500 ಕೋಟಿಗೆ ಇಳಿಸಿಕೊಂಡಿತ್ತು.

ಅನಿಲ್‌ ಅಂಬಾನಿ ಗ್ರೂಪ್‌ಗೆ ಸಂಬಂಧಿಸಿದ ಆಸ್ತಿಗಳ ಖರೀದಿ ಪ್ರಕ್ರಿಯೆಗಳಲ್ಲಿ ಭಾಗಿಯಾಗದಂತೆ ಸಾರ್ವಜನಿಕರಿಗೆ ಬ್ಯಾಂಕ್‌ ಎಚ್ಚರಿಕೆ ನೀಡಿದೆ. ಯೆಸ್ ಬ್ಯಾಂಕ್‌ ನೋಟಿಸ್ ಪ್ರಕಾರ, ಕಳೆದ ವರ್ಷ ಅನಿಲ್‌ ಅಂಬಾನಿ ಗ್ರೂಪ್‌ 21,432 ಚದರ ಮೀಟರ್‌ ಅಳತೆಯ ಪ್ರಧಾನ ಕಚೇರಿಯನ್ನು ಗುತ್ತಿಗೆಗೆ ನೀಡುವ ಮೂಲಕ ಸಾಲ ಪಾವತಿಗೆ ಹಣ ಸಂಗ್ರಹಿಸುವ ಪ್ರಯತ್ನ ನಡೆಸಿತ್ತು.

ದಕ್ಷಿಣ ಮುಂಬೈನಲ್ಲಿರುವ ಫ್ಲ್ಯಾಟ್‌ಗಳ ಅಳತೆ, 1,717 ಚದರ ಅಡಿ ಹಾಗೂ 4,936 ಚದರ ಅಡಿ ಇದೆ. ಅನಿಲ್‌ ಅಂಬಾನಿ ಗ್ರೂಪ್‌ಗೆ ನೀಡಿರುವ ಸಾಲದಿಂದಾಗಿಯೇ ಯೆಸ್‌ ಬ್ಯಾಂಕ್‌ನ ವಸೂಲಿಯಾಗದ ಸಾಲದ ಪ್ರಮಾಣದಲ್ಲಿ (ಎನ್‌ಪಿಎಸ್‌) ಹೆಚ್ಚಳವಾಗಿದೆ ಎನ್ನಲಾಗಿದೆ.

ಆರ್‌ಬಿಐ ಮಾರ್ಚ್‌ನಲ್ಲಿ ಯೆಸ್‌ ಬ್ಯಾಂಕ್‌ ಮೇಲೆ ನಿರ್ಬಂಧ ವಿಧಿಸುವ ಮೂಲಕ ಬ್ಯಾಂಕ್‌ನ ಎಲ್ಲ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಅನಂತರ ಬ್ಯಾಂಕ್‌ ಆಡಳಿತ ಮಂಡಳಿಗೆ ದೊಡ್ಡ ಬದಲಾವಣೆ ತರುವ ಮೂಲಕ ಪುನಶ್ಚೇತನ ಕಾರ್ಯಗಳಿಗೆ ಚಾಲನೆ ನೀಡಿತ್ತು. ಎಸ್‌ಬಿಐ ನೇತೃತ್ವದಲ್ಲಿ ಬ್ಯಾಂಕ್‌ಗಳು ಯೆಸ್‌ ಬ್ಯಾಂಕ್‌ ಪುನಶ್ಚೇತನಗೊಳಿಸಲು ₹10,000 ಕೋಟಿ ಹೂಡಿಕೆ ಮಾಡಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು