ಹಣಕಾಸು ನಿರ್ವಹಣೆಯಲ್ಲಿ ಮೊದಲ ಹೆಜ್ಜೆ ಉಳಿತಾಯ. ಯಾರು ಉಳಿತಾಯ ಮಾಡಿ ಹೂಡಿಕೆ ಮಾಡುತ್ತಾರೋ ಅವರ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುತ್ತದೆ. ಮನೆ ಖರೀದಿ, ಮಕ್ಕಳ ಶಿಕ್ಷಣ, ಕಾರು ಖರೀದಿ, ಮಕ್ಕಳ ಮದುವೆ, ನಿವೃತ್ತಿ ಜೀವನ ಹೀಗೆ ಪ್ರತಿಯೊಂದಕ್ಕೂ ಉಳಿತಾಯದ ಜೊತೆ ಹೂಡಿಕೆ ಮಾಡುವ ಅಭ್ಯಾಸ ಬೇಕು. ಎಷ್ಟು ಸಮರ್ಪಕವಾಗಿ ನಾವು ಉಳಿಸಿ ಹಣ ಬೆಳೆಸುತ್ತೆವೆಯೋ ಅಷ್ಟು ಉತ್ತಮ ರೀತಿಯಲ್ಲಿ ಸಂಪತ್ತು ಸೃಷ್ಟಿಯಾಗುತ್ತದೆ.
ಉಳಿತಾಯ ಹೆಚ್ಚಿಸಲು ಇರುವ ಕೆಲವು ಸರಳ ಮಾರ್ಗೋಪಾಯಗಳ ಬಗ್ಗೆ ತಿಳಿಯೋಣ.
1. ಗುಣಮಟ್ಟ, ಬೆಲೆಗೆ ಆದ್ಯತೆ ಕೊಡಿ: ಉತ್ತಮ ಗುಣಮಟ್ಟದ ವಸ್ತುಗಳನ್ನು ಸರಿಯಾದ ಬೆಲೆಗೆ ಖರೀದಿಸಬೇಕು ಎನ್ನುವ ಲೆಕ್ಕಾಚಾರಕ್ಕೆ ನಾವು ಅಂಚಿಕೊಳ್ಳಬೇಕೇ ಹೊರತು ಬ್ರಾಂಡೆಡ್ ಉತ್ಪನ್ನಗಳೇ ಬೇಕು ಎಂಬ ನಿಲುವು ಸರಿಯಲ್ಲ. ಕೆಲವರಿಗೆ ಬಟ್ಟೆ, ವಾಚ್, ಶೂ, ದಿನಸಿ... ಎಲ್ಲವೂ ಬ್ರಾಂಡೆಡ್ ಆಗಬೇಕು. ಎಲ್ಲದಕ್ಕೂ ‘ಬ್ರಾಡೆಂಡ್’ ಎನ್ನದೇ ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಗುಣಮಟ್ಟಕ್ಕಷ್ಟೇ ಒತ್ತು ಕೊಟ್ಟರೆ ಹಣ ಉಳಿಸಲು ಸಾಧ್ಯ.
2. ಬೇಡದ ಚಂದಾದಾರಿಕೆಗಳನ್ನು ನಿಲ್ಲಿಸಿ: ಎಷ್ಟೋ ಸಂದರ್ಭಗಳಲ್ಲಿ ನಾವು ಐದಾರು ಒಟಿಟಿ ಚಂದಾದಾರಿಕೆ ಪಡೆದಿರುತ್ತೇವೆ. ಆದರೆ ಒಂದೆರಡನ್ನು ಮಾತ್ರ ಬಳಸುತ್ತಿರುತ್ತೇವೆ. ಒಂದು ಒಟಿಟಿ ಪ್ಲಾಟ್‌ಫಾರಂನ ವಾರ್ಷಿಕ ಶುಲ್ಕ ಸುಮಾರು ₹1,500ರಿಂದ ₹2,000ವರೆಗೂ ಇರುತ್ತದೆ. ಇಷ್ಟು ದುಬಾರಿ ಶುಲ್ಕದ ಒಟಿಟಿಗಳನ್ನು ಬಳಸದಿದ್ದರೂ ಸ್ವಯಂಚಾಲಿತವಾಗಿ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್‌ನಿಂದ ಹಣ ಕಡಿತವಾಗುತ್ತಿದ್ದರೆ ಅದು ಅನಗತ್ಯ ವೆಚ್ಚವಲ್ಲವೇ? ಹಾಗಾಗಿ ಯಾವ ಚಂದಾದಾರಿಕೆ ಬಳಸುತ್ತಿಲ್ಲವೋ ಅದನ್ನು ಕೂಡಲೇ ನಿಲ್ಲಿಸಿ.
3. ಸಮೂಹ ಸಾರಿಗೆ ಬಳಸಿ: ಸಣ್ಣ–ಪುಟ್ಟ ಪ್ರಯಾಣಕ್ಕೂ ಆಟೊ ರಿಕ್ಷಾ, ಕ್ಯಾಬ್ ಬಳಸುವುದನ್ನು ಕಡಿಮೆ ಮಾಡಿ. ರೈಲು, ಬಸ್, ಮೆಟ್ರೊ ಬಳಸುವುದನ್ನು ರೂಢಿಸಿಕೊಳ್ಳಿ. ಆಟೊ ರಿಕ್ಷಾ ಅಥವಾ ಕ್ಯಾಬ್ ಪ್ರಯಾಣಕ್ಕೆ ಸಾಧ್ಯವಾದಲ್ಲೆಲ್ಲ ಕಡಿವಾಣ ಹಾಕಿ, ಸಮೂಹ ಸಾರಿಗೆ ಬಳಕೆಯಿಂದ ಉಳಿತಾಯವಾಗುವ ಹಣವನ್ನು ಪ್ರತಿ ತಿಂಗಳು
ಮ್ಯೂಚುವಲ್ ಫಂಡ್ ಎಸ್‌ಐಪಿಯಲ್ಲಿ ತೊಡಗಿಸಿ. ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ಮಾಡುವ ಹೂಡಿಕೆಗಳಿಗೆ ಶೇಕಡ 12ರಷ್ಟು ವಾರ್ಷಿಕ ಬಡ್ಡಿ ಲಾಭ ಸಿಗಬಹುದು. ಉಳಿತಾಯ ಮಾಡಿದ ಹಣವನ್ನು ಹೂಡಿಕೆ ಮಾಡುವುದರಿಂದ ಎಷ್ಟು ಮೊತ್ತದ ಹಣ ಪೇರಿಸಬಹುದು ಎಂಬ ಸರಳ ಲೆಕ್ಕವೊಂದನ್ನು ಹಾಕಿ. ಆಗ ಅದರಿಂದ ಸಿಗುವ ಪ್ರಯೋಜನ ಎಷ್ಟು ಎಂಬುದರ ಚಿತ್ರಣವೊಂದು ಸಿಗುತ್ತದೆ!
4. ಆನ್‌ಲೈನ್ ಖರೀದಿ: ವಿವಿಧ ಹೆಸರುಗಳಲ್ಲಿ ಆನ್‌ಲೈನ್ ಮಳಿಗೆಗಳಲ್ಲಿ ಖರೀದಿ ಉತ್ಸವಗಳು ನಡೆಯುತ್ತಿರುತ್ತವೆ. ಇಂತಹ ಸಂದರ್ಭಗಳಲ್ಲಿ ಗ್ರಾಹಕರು ತಮಗೆ ಯಾವ ವಸ್ತು ಅಗತ್ಯ ಎಂಬುದನ್ನು ಚಿಂತಸದೆ ಆಫರ್ ಇರುವ ವಸ್ತುಗಳ ಖರೀದಿಗೆ ಮುಂದಾಗುತ್ತಾರೆ. ₹1 ಸಾವಿರದ ಉತ್ಪನ್ನ ₹500ಕ್ಕೆ ಸಿಗುತ್ತದೆ ಎಂದಾಕ್ಷಣ ಆ ಉತ್ಪನ್ನ ತಮಗೆ ಅಗತ್ಯವೋ, ಅದು ಉಪಯೋಗಕ್ಕೆ ಬರುತ್ತದೆಯೋ ಎನ್ನುವುದನ್ನು ಆಲೋಚನೆ ಮಾಡದೆ ಖರೀದಿ ಮಾಡುತ್ತಾರೆ. ಯಾವುದೇ ಖರೀದಿಗೆ ಮೊದಲು ಶಾಪಿಂಗ್ ಲಿಸ್ಟ್ ಸಿದ್ಧಪಡಿಸಿಕೊಳ್ಳಬೇಕು. ಅದರಲ್ಲಿನ ಉತ್ಪನ್ನಗಳನ್ನು ಹೊರತುಪಡಿಸಿ ಬೇರೆ ಉತ್ಪನ್ನಗಳನ್ನು ಖರೀದಿಸಬಾರದು. ಶಾಪಿಂಗ್ ಲಿಸ್ಟ್ ಮಾಡುವಾಗ ನಾವು ಅಗತ್ಯ ವಸ್ತುಗಳ ಪಟ್ಟಿ ಮಾಡಿರುತ್ತೇವೆ. ಅಗತ್ಯ ವಸ್ತುಗಳ ಪಟ್ಟಿ ಮಾಡಿಕೊಳ್ಳದೆ ನೇರವಾಗಿ ಖರೀದಿಗೆ ಹೋದಾಗ ಅಗತ್ಯವಿಲ್ಲದ ವಸ್ತುಗಳನ್ನೂ ಖರೀದಿಸುವ ಸಾಧ್ಯತೆ ಇರುತ್ತದೆ.
5. ಕೂಪನ್ ಸೈಟ್ ಲಾಭ: ವಿವಿಧ ಉತ್ಪನ್ನಗಳನ್ನು ಖರೀದಿಸಲು ಡಿಸ್ಕೌಂಟ್ ಕೂಪನ್‌ಗಳನ್ನು ಕೊಡುವ ವೆಬ್‌ಸೈಟ್‌ಗಳಿವೆ. ಅಂತಹ ವೇದಿಕೆಗಳನ್ನು ಹಣ ಉಳಿತಾಯಕ್ಕೆ ಬಳಸಿಕೊಳ್ಳಿ. ಹೊಟೇಲ್ ಊಟ ಖರೀದಿಸಲು, ಫುಡ್ ಡೆಲಿವರಿ ಪಡೆಯಲು, ಔಷಧಿ ತರಿಸಲು, ಬಟ್ಟೆ ಖರೀದಿ, ಎಲೆಕ್ಟ್ರಾನಿಕ್ಸ್ ಉತ್ಪನ್ನ ಖರೀದಿ ಹೀಗೆ ಬಹುತೇಕ ಖರೀದಿಗಳಿಗೆ ರಿಯಾಯಿತಿ ಕೂಪನ್‌ಗಳು ಸಿಗುತ್ತವೆ.
6. ಮನೆ ಊಟ–ತಿಂಡಿ: ಉದ್ಯೋಗದಲ್ಲಿರುವ ಅನೇಕರು ಮನೆಯಿಂದ ತಿಂಡಿ, ಊಟ ತೆಗೆದುಕೊಂಡು ಕೆಲಸಕ್ಕೆ ಹೋಗುವುದಿಲ್ಲ. ಹೊಟೇಲ್ ಊಟ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಆದರೆ ಹೀಗೆ ಹೊರಗೆ ತಿನ್ನುವುದರಿಂದ ದುಡ್ಡು ಕರಗುವ ಜೊತೆಗೆ ಆರೋಗ್ಯಕ್ಕೂ ಹೊಡೆತ ಬೀಳಬಹುದು. ಮೂರು ಹೊತ್ತಿನ ಊಟ, ತಿಂಡಿಗೆ ದಿನಕ್ಕೆ ₹300 ಖರ್ಚಾಗುತ್ತದೆ ಎಂದಾದರೆ ತಿಂಗಳಿಗೆ ₹9,000 ಆಗುತ್ತದೆ. ಇದರಲ್ಲಿ ಅರ್ಧದಷ್ಟು ವ್ಯಯಿಸಿದರೆ ಸಾಕು, ಮನೆಯಲ್ಲೇ ತಯಾರಿಸಿದ ಗುಣಮಟ್ಟದ ರುಚಿಕರ ಆಹಾರ ಸೇವಿಸಬಹುದು. ಅನಿವಾರ್ಯ ಎಂದಾಗ ಹೊಟೇಲ್ ಅವಲಂಬನೆ ತಪ್ಪಲ್ಲ. ಆದರೆ ಅದೇ ಒಂದು ಚಟವಾಗಬಾರದು.
(ಲೇಖಕ ಚಾರ್ಟರ್ಡ್ ಅಕೌಂಟೆಂಟ್)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.