ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Mutual Funds: ಹೂಡಿಕೆ ವೈವಿಧ್ಯ ಹೇಗೆ?

Published : 16 ಸೆಪ್ಟೆಂಬರ್ 2024, 20:51 IST
Last Updated : 16 ಸೆಪ್ಟೆಂಬರ್ 2024, 20:51 IST
ಫಾಲೋ ಮಾಡಿ
Comments

ಹೂಡಿಕೆಯಲ್ಲಿ ವೈವಿಧ್ಯ ಕಾಯ್ದುಕೊಂಡು ಸಂಪತ್ತು ಬೆಳೆಸಲು ಮ್ಯೂಚುವಲ್ ಫಂಡ್ (ಎಂ.ಎಫ್) ಉತ್ತಮ ಮಾರ್ಗ. ಆದರೆ, ಒಬ್ಬ ಮ್ಯೂಚುವಲ್ ಫಂಡ್ ಹೂಡಿಕೆದಾರನ ಪೋರ್ಟ್ ಫೋಲಿಯೊದಲ್ಲಿ ಎಷ್ಟು ಫಂಡ್‌ಗಳಿರಬೇಕು? ಕೆಲವರು ಒಂದೆರಡು ಮ್ಯೂಚುವಲ್‌ ಫಂಡ್‌ ಹೊಂದಿದ್ದರೆ, ಮತ್ತೊಂದಿಷ್ಟು ಮಂದಿ ಹತ್ತಿಪ್ಪತ್ತು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿರುತ್ತಾರೆ.

ವಾಸ್ತವದಲ್ಲಿ ಕೆಲವೇ ಕೆಲವು ಫಂಡ್‌ಗಳಲ್ಲಿ ಹೂಡಿಕೆ ಮಾಡಿದರೆ ಹೂಡಿಕೆ ವೈವಿಧ್ಯದ ಕೊರತೆ ಎದುರಾಗುತ್ತದೆ. ಅಗತ್ಯಕ್ಕಿಂತ ಹೆಚ್ಚು ಮ್ಯೂಚುವಲ್ ಫಂಡ್‌ಗಳಲ್ಲಿ ತೊಡಗಿಸಿದರೆ ಅದು ಅತಿಯಾದ ಹೂಡಿಕೆ ವೈವಿಧ್ಯವಾಗುತ್ತದೆ.

ಹಾಗಾದರೆ ಹೂಡಿಕೆಗೆ ಫಂಡ್‌ಗಳನ್ನು ಆಯ್ಕೆ ಮಾಡುವಾಗ ಹದವಾದ ಮಿಶ್ರಣ ಯಾವುದು? ಬನ್ನಿ ತಿಳಿಯೋಣ.

ಹೂಡಿಕೆ ಗುರಿ ಆಧಾರದ ಮೇಲೆ ಆಯ್ಕೆ ಮಾಡಿ: ಮನೆ ಖರೀದಿ, ಕಾರು ಖರೀದಿ, ಮಕ್ಕಳ ಉನ್ನತ ಶಿಕ್ಷಣ, ನಿವೃತ್ತಿ ಜೀವನಕ್ಕಾಗಿ ಹೂಡಿಕೆ ಹೀಗೆ ಪ್ರತಿಯೊಬ್ಬರಿಗೂ ಹೂಡಿಕೆಯ ಗುರಿಗಳು ಇರುತ್ತವೆ. ಈ ನಿರ್ದಿಷ್ಟ ಗುರಿಗಳಿಗೆ ಎಷ್ಟು ಮೊತ್ತ ಬೇಕು ಎಂಬ ಬಗ್ಗೆ ಅರಿತುಕೊಂಡರೆ ನಿಮ್ಮ ಪೋರ್ಟ್ ಫೋಲಿಯೊದಲ್ಲಿ ಎಷ್ಟು ಮಾದರಿಯ ಮ್ಯೂಚುವಲ್ ಫಂಡ್ ಹೂಡಿಕೆಗಳಿರಬೇಕು ಎಂಬುದಕ್ಕೆ ಸ್ಪಷ್ಟತೆ ಸಿಗುತ್ತದೆ. ನಿಮ್ಮ ಉದ್ದೇಶ ದೀರ್ಘಾವಧಿ ಹೂಡಿಕೆಯೋ, ನಿರ್ದಿಷ್ಟ ಆದಾಯ ಗಳಿಸುವುದೋ, ಆದಾಯ ವೃದ್ಧಿಯೋ ಅಥವಾ ಬಂಡವಾಳದ ಸುರಕ್ಷತೆ ಕಾಯ್ದುಕೊಳ್ಳುವುದೋ ಎನ್ನುವುದನ್ನು ಆಧರಿಸಿ ಮ್ಯೂಚುವಲ್ ಫಂಡ್‌ಗಳನ್ನು ಆಯ್ಕೆ ಮಾಡಬೇಕಾಗುತ್ತದೆ.

ಲಾರ್ಜ್‌ ಕ್ಯಾಪ್, ಮಿಡ್ ಕ್ಯಾಪ್, ಸ್ಮಾಲ್ ಕ್ಯಾಪ್, ಸೆಕ್ಟೋರಲ್ ಫಂಡ್ಸ್, ಡೆಟ್ ಫಂಡ್, ಥಿಮ್ಯಾಟಿಕ್ ಫಂಡ್ ಹೀಗೆ ವಿವಿಧ ಮಾದರಿಯ ಫಂಡ್‌ಗಳಲ್ಲಿ ಹೂಡಿಕೆಯನ್ನು ವಿಭಜಿಸಿಕೊಂಡರೆ ರಿಸ್ಕ್ ಜೊತೆ ಲಾಭ ಪಡೆಯಲು ಸಾಧ್ಯವಾಗುತ್ತದೆ. ವಿವಿಧ ಮಾದರಿಯ ಗರಿಷ್ಠ ಎರಡು ಫಂಡ್‌ಗಳನ್ನು ಮಾತ್ರ ಮ್ಯೂಚುವಲ್ ಫಂಡ್ ಹೂಡಿಕೆಗೆ ಆಯ್ಕೆ ಮಾಡಿಕೊಳ್ಳಬೇಕು.

ಹೂಡಿಕೆಯ ಸರಿಯಾದ ಮಿಶ್ರಣ: ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆಯ ಸರಿಯಾದ ಮಿಶ್ರಣವಿರಬೇಕು. ಲಾರ್ಜ್ ಕ್ಯಾಪ್ ಮ್ಯೂಚುವಲ್ ಫಂಡ್‌ಗಳು ಹೂಡಿಕೆ ಮೊತ್ತಕ್ಕೆ ಸ್ಥಿರತೆ ತಂದುಕೊಟ್ಟರೆ, ಮಿಡ್ ಕ್ಯಾಪ್ ಕಂಪನಿಗಳು ಹೂಡಿಕೆ ಹಣದ ಬೆಳವಣಿಗೆಯ ಭರವಸೆ ಕೊಡುತ್ತವೆ. ಇನ್ನು ಸ್ಮಾಲ್ ಕ್ಯಾಪ್ ಮ್ಯೂಚುವಲ್ ಫಂಡ್‌ಗಳು ಹೂಡಿಕೆ ಮೊತ್ತದ ಮೇಲೆ ಗರಿಷ್ಠ ಗಳಿಕೆಯ ಅವಕಾಶ ಒದಗಿಸುತ್ತವೆ. ಡೆಟ್ ಫಂಡ್‌ಗಳು ಹೂಡಿಕೆ ಮೊತ್ತಕ್ಕೆ ಭದ್ರತೆ ಒದಗಿಸುತ್ತವೆ. ಯಾವುದೇ, ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವಾಗ ಈ ರೀತಿಯಲ್ಲಿ ಪೋರ್ಟ್ ಫೋಲಿಯೊ ಲೆಕ್ಕಾಚಾರ ಮಾಡಬೇಕಾಗುತ್ತದೆ.

ಯಾವ ಫಂಡ್ ಸೂಕ್ತ?: ಅಲ್ಪಾವಧಿ ಹೂಡಿಕೆಗೆ ಡೇಟ್ ಫಂಡ್‌ಗಳು ಸೂಕ್ತ. ಒಂದು ವಾರದ ಅವಧಿಯ ಹೂಡಿಕೆಗೆ ಓವರ್ ನೈಟ್ ಮ್ಯೂಚುವಲ್ ಫಂಡ್ ಸೂಕ್ತ. ಒಂದು ವಾರದಿಂದ ಒಂದು ತಿಂಗಳ ಅವಧಿಗೆ ಲಿಕ್ವಿಡ್ ಫಂಡ್ ಪರಿಗಣಿಸಬಹುದು. ಎರಡರಿಂದ ನಾಲ್ಕು ತಿಂಗಳ ಅವಧಿಗೆ ಅಲ್ಟ್ರಾ ಶಾರ್ಟ್ ಡುರೇಷನ್ ಫಂಡ್ ಸರಿ ಹೊಂದುತ್ತದೆ. ಮೂರದಿಂದ ಒಂಬತ್ತು ತಿಂಗಳ ಸಮಯದ ಹೂಡಿಕೆಗೆ ಲೋ ಡುರೇಷನ್ ಫಂಡ್ ಆಗಬಹುದು. ಆರರಿಂದ ಒಂದು ವರ್ಷದ ಹೂಡಿಕೆಗೆ ಮನಿ ಮಾರ್ಕೆಟ್ ಫಂಡ್ ಒಪ್ಪುತ್ತದೆ.

5 ವರ್ಷ ಮೇಲ್ಪಟ್ಟ ಅವಧಿಗೆ ಲಾರ್ಜ್ ಕ್ಯಾಪ್, ಮಿಡ್ ಕ್ಯಾಪ್, ಸ್ಮಾಲ್ ಕ್ಯಾಪ್, ಮಲ್ಟಿ ಕ್ಯಾಪ್, ಕೊಂಟ್ರಾ ಫಂಡ್, ಇಂಟರ್ ನ್ಯಾಷನಲ್ ಫಂಡ್, ಫೋಕಸ್ಟ್ ಫಂಡ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಹೂಡಿಕೆ ನಕಲು ಆಗದಂತೆ ನೋಡಿಕೊಳ್ಳಿ: ಮ್ಯೂಚುವಲ್ ಫಂಡ್ ಹೂಡಿಕೆಯಲ್ಲಾಗುವ ಸಾಮಾನ್ಯ ಸಮಸ್ಯೆ ಎಂದರೆ ಮ್ಯೂಚುವಲ್ ಫಂಡ್ ಓವರ್ ಲ್ಯಾಪ್ ಅರ್ಥಾತ್ ಹೂಡಿಕೆ ನಕಲಾಗುವುದು. ಉದಾಹರಣೆಗೆ ಎರಡು ಲಾರ್ಜ್ ಕ್ಯಾಪ್ ಮ್ಯೂಚುವಲ್ ಫಂಡ್‌ಗಳಲ್ಲಿ ನೀವು ಹೂಡಿಕೆ ಮಾಡುತ್ತೀರಿ, ಆ ಎರಡು ಲಾರ್ಜ್ ಕ್ಯಾಪ್ ಮ್ಯೂಚುವಲ್ ಫಂಡ್‌ಗಳು ಬಹುಪಾಲು ಹೂಡಿಕೆ ಮೊತ್ತವನ್ನು ಒಂದೇ ತರಹದ ಕಂಪನಿಗಳ ಮೇಲೆ ತೊಡಗಿಸಿದ್ದರೆ ಅದನ್ನು ಮ್ಯೂಚುವಲ್ ಫಂಡ್ ಓವರ್ ಲ್ಯಾಪ್ ಎನ್ನಲಾಗುತ್ತದೆ. ಈ ರೀತಿ ಮ್ಯೂಚುವಲ್ ಫಂಡ್ ಓವರ್ ಲ್ಯಾಪ್ ಜಾಸ್ತಿಯಾದಾಗ ಹೂಡಿಕೆಯಲ್ಲಿ ವೈವಿಧ್ಯ ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ.

ಉದಾಹರಣೆ: ಗ್ರೋಥ್ ಫಂಡ್, ವ್ಯಾಲ್ಯೂ ಫಂಡ್, ಇಂಟರ್ ನ್ಯಾಷನಲ್ ಈಕ್ವಿಟಿ ಫಂಡ್ ಹೀಗೆ ವಿವಿಧ ಫಂಡ್‌ಗಳನ್ನು ಆಯ್ಕೆ ಮಾಡಿಕೊಂಡು ಹೂಡಿಕೆ ಮಾಡಿದಾಗ ವೈವಿಧ್ಯ ಕಾಯ್ದುಕೊಳ್ಳಬಹುದು.

ಆದರೆ, ಒಂದೇ ವಲಯದ ಎರಡು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದರೆ ಹೂಡಿಕೆಯಲ್ಲಿ ಓವರ್ ಲ್ಯಾಪ್ ಆಗುತ್ತದೆ. ಈಗ ಮಾಹಿತಿ ತಂತ್ರಜ್ಞಾನ ವಲಯದ ಎರಡು ಮ್ಯೂಚುವಲ್ ಫಂಡ್‌ಗಳನ್ನು ಹೂಡಿಕೆಗೆ ಪರಿಗಣಿಸಿದರೆ ಅದು ತಪ್ಪಾಗುತ್ತದೆ. ಏಕೆಂದರೆ ಆ ವಲಯ ಭಾರಿ ಕುಸಿತ ಕಂಡರೆ ನಿಮ್ಮ ಪೋರ್ಟ್ ಫೋಲಿಯೊಗೆ ಪೆಟ್ಟು ಬೀಳುತ್ತದೆ. ಕಾಲಕಾಲಕ್ಕೆ ಪೋರ್ಟ್ ಫೋಲಿಯೊ ಪರಾಮರ್ಶಿಸಿ ಪೂರಕ ಹೂಡಿಕೆಗಳನ್ನು ಮಾತ್ರ ಪರಿಗಣಿಸಿದರೆ ಬೆಳವಣಿಗೆ ಸಾಧ್ಯವಾಗುತ್ತದೆ.

ಎಷ್ಟು ಫಂಡ್‌ಗಳಲ್ಲಿ ಹೂಡಿದರೆ ಉತ್ತಮ?: ಹೂಡಿಕೆ ಗುರಿಗಳು ಮತ್ತು ಹೂಡಿಕೆದಾರ ಎಷ್ಟು ರಿಸ್ಕ್ ತೆಗೆದುಕೊಳ್ಳಬಹುದು ಎನ್ನುವುದನ್ನು ಆಧರಿಸಿ ಒಂದು ಪೋರ್ಟ್ ಫೋಲಿಯೊಗೆ 8 ರಿಂದ 12 ಮ್ಯೂಚುವಲ್ ಫಂಡ್‌ಗಳನ್ನು ಪರಿಗಣಿಸಬಹುದು. ಇಷ್ಟು ಸಂಖ್ಯೆಯ ಮ್ಯೂಚುವಲ್ ಫಂಡ್‌ಗಳನ್ನು ಮಾತ್ರ ಹೂಡಿಕೆಗೆ ಆಯ್ದುಕೊಂಡರೆ ಅವುಗಳ ಕಾರ್ಯಕ್ಷಮತೆಯನ್ನು ಅಳತೆ ಮಾಡಿ ಕಾಲಕಾಲಕ್ಕೆ ಪರಾಮರ್ಶೆ ಮಾಡಿ ಪೋರ್ಟ್ ಫೋಲಿಯೊದಲ್ಲಿ ಸೂಕ್ತ ಬದಲಾವಣೆಗಳನ್ನು ತರಬಹುದು.

(ಲೇಖಕ: ಚಾರ್ಟರ್ಡ್ ಅಕೌಂಟೆಂಟ್)

ಗಳಿಕೆ ದಾಖಲಿಸಿದ ಸೂಚ್ಯಂಕಗಳು

ಸೆಪ್ಟೆಂಬರ್ 13ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಉತ್ತಮ ಗಳಿಕೆ ದಾಖಲಿಸಿವೆ. 82,890 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 2.1ರಷ್ಟು ಗಳಿಸಿಕೊಂಡಿದೆ. 25,356 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 2.03ರಷ್ಟು ಜಿಗಿದಿದೆ. ಎರಡು ತಿಂಗಳ ಅವಧಿಯಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕ ಪಡೆದುಕೊಂಡಿರುವ ಅತ್ಯುತ್ತಮ ವಾರದ ಗಳಿಕೆ ಇದಾಗಿದೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಎಫ್ಎಂಸಿಜಿ ಶೇ 3, ಮಾಧ್ಯಮ ಶೇ 2.71, ಮಾಹಿತಿ ತಂತ್ರಜ್ಞಾನ ಶೇ 2.68, ಬ್ಯಾಂಕ್ ಶೇ 2.61, ಲೋಹ ಶೇ 2.21, ರಿಯಲ್ ಎಸ್ಟೇಟ್ ಶೇ 2.09, ಫೈನಾನ್ಸ್ ಶೇ 1.84, ಫಾರ್ಮಾ ಶೇ 1.74, ಆಟೊ ಶೇ 1.14, ಸರ್ಕಾರಿ ಸ್ವಾಮ್ಯದ ಬ್ಯಾಂಕ್
ಶೇ 0.84 ಮತ್ತು ಎನರ್ಜಿ ಶೇ 0.03ರಷ್ಟು ಗಳಿಸಿಕೊಂಡಿವೆ. ಅನಿಲ ಮತ್ತು ತೈಲ ಸೂಚ್ಯಂಕ
ಶೇ 2.59ರಷ್ಟು ಕುಸಿತ ಕಂಡಿದೆ.

ಗಳಿಕೆ-ಇಳಿಕೆ: ನಿಫ್ಟಿಯಲ್ಲಿ ಬಜಾಜ್ ಆಟೊ ಶೇ 8.21, ಡಿವೀಸ್ ಲ್ಯಾಬ್ಸ್ ಶೇ 7.28, ಏರ್‌ಟೆಲ್ ಶೇ 6.2, ವಿಪ್ರೊ ಶೇ 5.79, ಎಕ್ಸಿಸ್‌ ಬ್ಯಾಂಕ್ ಶೇ 5.05, ಬ್ರಿಟಾನಿಯಾ ಇಂಡಸ್ಟ್ರಿಸ್‌ ಶೇ 4.88, ಶ್ರೀರಾಮ್ ಫೈನಾನ್ಸ್ ಶೇ 4.1, ಎಲ್‌ಟಿಐ ಮೈಂಡ್ ಟ್ರೀ ಶೇ 3.9, ಬಜಾಜ್ ಫೈನಾನ್ಸ್ ಶೇ 3.82, ಇಂಡಸ್‌ಇಂಡ್ ಬ್ಯಾಂಕ್ ಶೇ 3.66, ಗ್ರಾಸಿಮ್ ಇಂಡಸ್ಟ್ರಿಸ್‌ ಶೇ 3.6 ಮತ್ತು ಹಿಂದುಸ್ತಾನ್‌ ಯೂನಿಲಿವರ್ ಶೇ 3.58ರಷ್ಟು ಜಿಗಿದಿವೆ.

ಒಎನ್‌ಜಿಸಿ ಶೇ 5.58, ಟಾಟಾ ಮೋಟರ್ಸ್ ಶೇ 5.39, ಎಚ್‌ಡಿಎಫ್‌ಸಿ ಲೈಫ್ ಇನ್ಶೂರೆನ್ಸ್
ಶೇ 4.75, ಬಿಪಿಸಿಎಲ್ ಶೇ 2.88, ಎಸ್‌ಬಿಐ ಲೈಫ್ ಇನ್ಶೂರೆನ್ಸ್ ಶೇ 2.72, ಅದಾನಿ ಎಂಟರ್‌ಪ್ರೈಸಸ್ ಶೇ 0.28 ಮತ್ತು ಡಾ.ರೆಡ್ಡೀಸ್ ಲ್ಯಾಬ್ಸ್ ಶೇ 0.17ರಷ್ಟು ಕುಸಿದಿವೆ.

ಮುನ್ನೋಟ: ಅಮೆರಿಕ ಮುಕ್ತ ಮಾರುಕಟ್ಟೆ ಸಮಿತಿ (ಎಫ್ಒಎಂಸಿ) ಸಭೆಯ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಸೆಪ್ಟೆಂಬರ್ 17 ಮತ್ತು 18ರಂದು ಸಮಿತಿ ಸಭೆ ನಡೆಯಲಿದ್ದು ಬಡ್ಡಿ ದರ ಇಳಿಕೆ ಆಗಲಿದೆಯೇ ಎನ್ನುವುದಕ್ಕೆ ಸ್ಪಷ್ಟತೆ ಸಿಗಲಿದೆ. ಜಾಗತಿಕ ಮಾರುಕಟ್ಟೆಗಳು ಬಡ್ಡಿ ದರ ಇಳಿಕೆಯನ್ನು ಎದುರು ನೋಡುತ್ತಿದ್ದು, ಬಡ್ಡಿ ದರ ಇಳಿಕೆಯಾದರೆ ಮಾರುಕಟ್ಟೆ ಮೇಲೆ ಸಕಾರಾತ್ಮಕ ಪ್ರಭಾವ ಬೀರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT