ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂವು ಖರೀದಿಗಾಗಿ ಹೊಲಕ್ಕೆ ಬಂದ ಹೂಗಾರ

ಹೂವಿನ ಧಾರಣೆ ಗಗನಮುಖಿ; ಪುಷ್ಪ ಕೃಷಿಕರಲ್ಲಿ ಖುಷಿ
Last Updated 5 ನವೆಂಬರ್ 2018, 10:30 IST
ಅಕ್ಷರ ಗಾತ್ರ

ವಿಜಯಪುರ:ನೀರು ತುಂಬುವ ಹಬ್ಬದೊಂದಿಗೆ ಸೋಮವಾರ ದೀಪಾವಳಿಗೆ ವಿಧ್ಯುಕ್ತ ಚಾಲನೆ ಸಿಕ್ಕಿದೆ. ಬುಧವಾರದ ಅಮಾವಾಸ್ಯೆ ಪೂಜೆಗೆ ಸಿದ್ಧತೆ ಬಿರುಸುಗೊಂಡಿವೆ. ಲಕ್ಷ್ಮೀ ಆರಾಧನೆಗೆ ಹೂವಿಗೆ ಬೇಡಿಕೆ ಹೆಚ್ಚಿದೆ. ಇದು ಪುಷ್ಪ ಕೃಷಿಕರಲ್ಲಿ ಸಂತಸ ಮೂಡಿಸಿದೆ.

ಬರದ ಸಂಕಷ್ಟದಲ್ಲೂ ಕೊಳವೆಬಾವಿ, ತೆರೆದ ಬಾವಿಯ ನೀರಿನ ಆಸರೆಯಲ್ಲಿ ಪುಷ್ಪ ಕೃಷಿ ಕೈಗೊಂಡಿದ್ದ ಕೃಷಿಕರೀಗ ಕೊಂಚ ನಿರುಮ್ಮಳರಾಗಿದ್ದಾರೆ. ದಸರಾ ಹಬ್ಬದಲ್ಲಿ ಬೆಲೆ ಕುಸಿತದಿಂದ ಕಂಗಾಲಾಗಿದ್ದವರು; ಈಗಿನ ಧಾರಣೆಗೆ ಚೇತರಿಸಿಕೊಂಡಿದ್ದು, ಹೂ ನಗೆ ಬೀರಿದ್ದಾರೆ.

ವಿಜಯಪುರ ನಗರದ ಹೊರ ವಲಯ, ಸುತ್ತಮುತ್ತಲಿನ ಭೂತನಾಳ ತಾಂಡ, ಅತಾಲಟ್ಟಿ, ತೊರವಿ, ಅರಕೇರಿ ಸಿದ್ದಾಪುರ ಸೇರಿದಂತೆ ಇನ್ನುಳಿದ ಗ್ರಾಮಗಳಲ್ಲಿ ಅಲ್ಲಲ್ಲೇ ಪುಷ್ಪಕೃಷಿಯಿದ್ದು; ಹೂವು ಖರೀದಿಗಾಗಿ ರೈತರ ಹೊಲಕ್ಕೆ ಜಿಲ್ಲೆಯ ವಿವಿಧೆಡೆಯ ಹೂಗಾರರು ನೇರವಾಗಿ ಭೇಟಿ ನೀಡಿದ ಚಿತ್ರಣ ಸೋಮವಾರ ಗೋಚರಿಸಿತು.

10 ಕ್ವಿಂಟಲ್ ಹೂವು:‘ಹತ್ತು ವರ್ಷದಿಂದ ತಪ್ಪದೇ ಹೂವು ಬೆಳೆಯುತ್ತಿರುವೆ. ಒಂಭತ್ತು ತಿಂಗಳ ಹಿಂದೆ ದಸರಾ, ದೀಪಾವಳಿ, ಛಟ್ಟಿ ಅಮಾವಾಸ್ಯೆಗೆ ಹೂವು ಬರುವಂತೆ ಕೃಷಿ ಕೈಗೊಂಡಿದ್ದೆ. ಕರ್ನೂಲ್‌ ಬಿಳಿ ರಾಜಾ, ಗಲಾಟ ಹೂವು ಬೆಳೆದಿರುವೆ. ಇದಕ್ಕಾಗಿ ₹ 1.20 ಲಕ್ಷ ಖರ್ಚು ಮಾಡಿರುವೆ’ ಎಂದು ಭೂತನಾಳ ತಾಂಡದ ಪುಷ್ಪ ಕೃಷಿಕ ಲಕ್ಷ್ಮಣ ಕೇರಿ ತಿಳಿಸಿದರು.

‘ದೀಪಾವಳಿಗೆ ಕ್ಷಣಗಣನೆ ಆರಂಭಗೊಂಡಿದೆ. ಮಾರುಕಟ್ಟೆಯಲ್ಲಿ ಹೂವಿಗೆ ಬೇಡಿಕೆ ಬಂದಿದೆ. ಇದಕ್ಕಾಗಿಯೇ ಕಾದಿದ್ದು, ಸೋಮವಾರ ನಸುಕಿನಿಂದ ಆರು ಹೆಣ್ಣಾಳು, ನಾಲ್ವರು ಗಂಡಾಳನ್ನು ಕೂಲಿಗೆ ನಿಯೋಜಿಸಿ, ಹೂವು ಕೀಳಿಸಿದೆ. 10 ಕ್ವಿಂಟಲ್‌ಗೂ ಹೆಚ್ಚು ಹೂವು ಸಿಕ್ಕಿತು.

ವಿವಿಧೆಡೆಯ ಹೂಗಾರರು ಖರೀದಿಗಾಗಿ ಹೊಲಕ್ಕೆ ಬಂದಿದ್ದರು. ಧಾರಣೆ ಗಿಟ್ಟಿದ್ದರಿಂದ ಒಂದು ಕೆ.ಜಿ.ಗೆ ₹ 50ರಿಂದ ₹ 70ರಂತೆ ಮಾರಾಟ ಮಾಡಿದೆ. ದಸರಾದ ನಷ್ಟವನ್ನು ಈ ಬೆಲೆ ತುಂಬಿಕೊಟ್ಟಿತು. ಧಾರಣೆ ಇನ್ನಷ್ಟು ಹೆಚ್ಚಿದರೆ ಲಾಭ ನಿರೀಕ್ಷಿಸಬಹುದು. ಇಲ್ಲದಿದ್ದರೇ ಬಂಡವಾಳ, ನಮ್ಮ ಶ್ರಮದ ಕೂಲಿ ಕೈಸೇರಬಹುದು’ ಎಂದು ಲಕ್ಷ್ಮಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ದಸರಾ ಹಬ್ಬದ ಸಂದರ್ಭ ಮಾಲು ಹೆಚ್ಚಿಗೆ ಇದ್ದುದರಿಂದ ಧಾರಣೆಯೇ ಸಿಗಲಿಲ್ಲ. ₹ 2.5 ಕ್ವಿಂಟಲ್‌ ಹೂವು ಸಿಕ್ಕಿತ್ತು. ಕೆ.ಜಿ.ಗೆ ₹ 10ರಂತೆ ಬಿಕರಿಯಾಯ್ತು. ಲಾಭದ ಆಸೆಯನ್ನೇ ಮರೆತಿದ್ದೆ. ಬಂಡವಾಳ ಕೈ ಸೇರಿದರೆ ಸಾಕು ಎನ್ನುತ್ತಿದ್ದೆ. ಆದರೆ ಇದೀಗ ಧಾರಣೆಯಿರುವುದು ಕೊಂಚ ನೆಮ್ಮದಿ ಮೂಡಿಸಿದೆ.

ಛಟ್ಟಿ ಅಮಾವಾಸ್ಯೆ ತನಕವೂ ಹೂವು ಸಿಗಲಿದೆ. ನಿತ್ಯ 50 ಕೆ.ಜಿ. ಹೂವನ್ನು ಕೊಯ್ದುಕೊಂಡು ವಿಜಯಪುರದ ಉಪ್ಪಲಿ ಬುರುಜ್ ಬಳಿಯ ಮಾರುಕಟ್ಟೆಯಲ್ಲಿ ಮಾರುವೆ. ಒಂದು ಕೆ.ಜಿ.ಗೆ ₹ 10ರಿಂದ ₹ 20 ಸಿಕ್ಕರೆ ಹೆಚ್ಚು’ ಎಂದು ಕೇರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT