ಯಾವ ಹೂಡಿಕೆ ಮಾರ್ಗ ಸೂಕ್ತ?

ಮಂಗಳವಾರ, ಜೂನ್ 25, 2019
25 °C

ಯಾವ ಹೂಡಿಕೆ ಮಾರ್ಗ ಸೂಕ್ತ?

Published:
Updated:
Prajavani

ಪ್ರತಿಯೊಂದು ಹೂಡಿಕೆಯ ಉದ್ದೇಶ ಸಂಪತ್ತನ್ನು ವೃದ್ಧಿಸುವುದೇ ಆಗಿರುತ್ತದೆ. ಆದ್ದರಿಂದ ಷೇರು, ಸಾಲನಿಧಿ, ಚಿನ್ನ, ರಿಯಲ್‌ ಎಸ್ಟೇಟ್‌ ಇವೆಲ್ಲವೂ ಹಣ ವೃದ್ಧಿಸುವ ಹೂಡಿಕೆಯ ಉತ್ಪನ್ನಗಳೆನಿಸುತ್ತವೆ. ಆದರೆ ಎಲ್ಲದಕ್ಕೂ ಅದರದ್ದೇ ಆದ ಅಪಾಯಗಳಿವೆ.  ಈಗ ಹೂಡಿಕೆಯ ಅತಿ ಮುಖ್ಯವಾದ ಇತರ ಉತ್ಪನ್ನಗಳತ್ತ ಗಮನಹರಿಸೋಣ

ಪಿಪಿಎಫ್‌: ಪಬ್ಲಿಕ್ ಪ್ರಾವಿಡೆಂಟ್‌ ಫಂಡ್‌ (ಸಾರ್ವಜನಿಕ ಭವಿಷ್ಯನಿಧಿ– ಪಿಪಿಎಫ್‌) ಹೂಡಿಕೆಗೆ ಪ್ರತಿ ವರ್ಷವೂ ನಿರ್ದಿಷ್ಟ ಪ್ರಮಾಣದ ಬಡ್ಡಿ ನೀಡುವ ಉತ್ಪನ್ನವಾಗಿದೆ. ಇದರಲ್ಲಿ ವರ್ಷದಲ್ಲಿ ₹ 1.50ಲಕ್ಷ ಗರಿಷ್ಠ ಹೂಡಿಕೆಯ ಮಿತಿ ಇದೆ. ಇದರಲ್ಲಿ ಮಾಡಿದ ಹೂಡಿಕೆಗೆ 15 ವರ್ಷಗಳ ಲಾಕ್‌ ಇನ್‌ ಅವಧಿ ಇರುತ್ತದೆ (15ವರ್ಷಗಳ ವರೆಗೆ ಹಣವನ್ನು ಪೂರ್ತಿಯಾಗಿ ತೆಗೆಯಲು ಸಾಧ್ಯವಿಲ್ಲ). ಹೂಡಿಕೆಗೆ 80ಸಿ ಅಡಿ ಆದಾಯ ತೆರಿಗೆ ರಿಯಾಯ್ತಿ ಇರುತ್ತದೆ. ಪಿಪಿಎಫ್‌ ಹೂಡಿಕೆಗೆ ಸದ್ಯಕ್ಕೆ ಶೇ 8 ಬಡ್ಡಿ ಲಭಿಸುತ್ತದೆ.

ಪಿಪಿಎಫ್‌ನ ಗುಣಾತ್ಮಕ ಅಂಶವೆಂದರೆ– ದೀರ್ಘವಾದ ಲಾಕ್‌ಇನ್‌ ಅವಧಿ. ದೀರ್ಘಾವಧಿಯವರೆಗೆ ನೀವು ಒಂದಷ್ಟು ಹಣವನ್ನು ತೆಗೆದಿಟ್ಟಂತಾಗುತ್ತದೆ. ಇದರ ಬಡ್ಡಿಯೂ ಸಹ ತೆರಿಗೆ ಮುಕ್ತವಾಗಿದೆ. ಋಣಾತ್ಮಕ ಅಂಶವೆಂದರೆ ಇದರ ಗಳಿಕೆಗೆ ಒಂದು ಮಿತಿ ಇದೆ. ಗರಿಷ್ಠ ಮಿತಿಯ ಹಣವನ್ನು ಇದರಲ್ಲಿ ಹೂಡಿಕೆ ಮಾಡುತ್ತ ಹೋದರೂ ನಿವೃತ್ತಿಯ ನಂತರದ ಜೀವನಕ್ಕೆ ಆ ಹಣ ಸಾಕಾಗಲಾರದು.

ನಿಶ್ಚಿತ ಠೇವಣಿ: ಬ್ಯಾಂಕ್‌ಗಳಲ್ಲಿ ನಿಶ್ಚಿತ ಠೇವಣಿ ಇಡುವುದು ಸಾಮಾನ್ಯ. ಆದರೆ, ಕೆಲವು ಕಾರ್ಪೊರೇಟ್‌ ಸಂಸ್ಥೆಗಳೂ ನಿಶ್ಚಿತ ಠೇವಣಿ ಸ್ವೀಕರಿಸುತ್ತಿದ್ದು, ಅವುಗಳು ಬ್ಯಾಂಕ್‌ಗಿಂತಲೂ ಹೆಚ್ಚಿನ ಬಡ್ಡಿ ನೀಡುತ್ತವೆ. ಕನಿಷ್ಠ 7 ದಿನಗಳಿಂದ ಗರಿಷ್ಠ 10 ವರ್ಷ ಅವಧಿವರೆಗಿನ ನಿಶ್ಚಿತ ಠೇವಣಿಗಳು ಲಭ್ಯ ಇವೆ. ಕೆಲವು ಬ್ಯಾಂಕ್‌ಗಳು ನಿಗದಿತ ಅವಧಿಗೂ ಮುನ್ನ ಠೇವಣಿಯನ್ನು ಹಿಂದೆ ಪಡೆಯುವ ಅವಕಾಶ ನೀಡುತ್ತವೆಯಾದರೂ ಬಹುತೇಕ ಎಲ್ಲಾ ಠೇವಣಿಗಳಿಗೂ ಪರಿಪಕ್ವತೆಯ ಅವಧಿ ಇರುತ್ತದೆ. ನಿಶ್ಚಿತ ಠೇವಣಿಗಳಿಗೆ ಬ್ಯಾಂಕ್‌ಗಳು ಶೇ 6.5 ರಿಂದ ಶೇ 7ರಷ್ಟು ಬಡ್ಡಿ ನೀಡುತ್ತಿದ್ದರೆ ಕಾರ್ಪೊರೇಟ್‌ ಸಂಸ್ಥೆಗಳು ಶೇ 8.5 ರಿಂದ ಶೇ 9ರವರೆಗೂ ಬಡ್ಡಿ ನೀಡುತ್ತಿವೆ.

ಇದರಲ್ಲಿ ಅಪಾಯ ಕಡಿಮೆ. ಆದರೆ, ದೀರ್ಘಾವಧಿಯ ಹೂಡಿಕೆಗೆ ನಿಶ್ಚಿತ ಠೇವಣಿ ಸರಿ ಎನಿಸುವುದಿಲ್ಲ. ಯಾವತ್ತೂ ಹಣದುಬ್ಬರ ಮೀರಿ ನಿಲ್ಲಬಹುದಾದ ಗಳಿಕೆಯನ್ನು ಇವು ನೀಡಿಲ್ಲ. ನಿಶ್ಚಿತ ಠೇವಣಿಗೆ ಬರುವ ಬಡ್ಡಿಯು ಆದಾಯ ತೆರಿಗೆ ಆಕರ್ಷಿಸುತ್ತದೆ. ನಿಮ್ಮ ಎಲ್ಲ ಅಗತ್ಯಗಳಿಗೆ ನಿಶ್ಚಿತ ಠೇವಣಿಯನ್ನೇ ಅವಲಂಬಿಸುವುದಾದರೆ ದೊಡ್ಡ ಪ್ರಮಾಣದ ಹೂಡಿಕೆ ಮಾಡಬೇಕಾಗುತ್ತದೆ.

ಜೀವ ವಿಮೆ: ಜೀವ ವಿಮೆ ಮೂಲತಃ ಅನಿರೀಕ್ಷಿತವಾಗಿ ಬರುವ ಅಪಾಯ ಎದುರಿಸಲು ನೆರವಾಗುವ ಉತ್ಪನ್ನ. ಆದರೆ ಎಂಡೋಮೆಂಟ್‌ ಪಾಲಿಸಿ, ಮನಿಬ್ಯಾಕ್‌ ಪಾಲಿಸಿ ಮುಂತಾದವು ವಿಮೆಯ ಜೊತೆಗೆ ಹೂಡಿಕೆಯ ಉತ್ಪನ್ನವಾಗಿಯೂ ಕೆಲಸ ಮಾಡುತ್ತವೆ. ಇವು ಪರಿಪಕ್ವಗೊಂಡಾಗ  ಕೆಲವು ಸೌಲಭ್ಯಗಳನ್ನು ಒದಗಿಸುತ್ತವೆ. ‘ಯುಲಿಪ್‌’ ಗಳಲ್ಲಿ ಮಾಡಿದ ಹೂಡಿಕೆಯ ಒಂದು ಭಾಗ ವಿಮೆಗೆ ಬಳಕೆಯಾದರೆ ಇನ್ನೊಂದು ಭಾಗ ಹೂಡಿಕೆಯಾಗಿ ಮಾರ್ಪಡುತ್ತದೆ. ಇದೊಂದು ರೀತಿಯಲ್ಲಿ ಹೈಬ್ರಿಡ್‌ ಉತ್ಪನ್ನ. ಜೀವವಿಮೆಯ ಲಾಭಗಳೆಂದರೆ ಇದು ಭದ್ರತೆ ಒದಗಿಸುವುದರ ಜೊತೆಗೆ ಪಾವತಿಸಿದ ಕಂತಿನ ಮೌಲ್ಯವು ತೆರಿಗೆ ಮುಕ್ತವಾಗಿರುತ್ತದೆ.

ಆದರೆ, ವಿಮೆಯಲ್ಲಿ ತೊಡಗಿಸಿದ ಹಣವನ್ನು ಹೂಡಿಕೆ ಎಂದು ಪರಿಗಣಿಸಲಾಗದು. ಪಕ್ವಗೊಂಡಾಗ ದೊಡ್ಡ ಮೊತ್ತ ಲಭಿಸುತ್ತದೆ ಎಂಬುದು ಆಕರ್ಷಕವಾಗಿ ಕಾಣಿಸಬಹುದು. ಆದರೆ ನೀವು ಹೂಡಿಕೆ ಮಾಡಿದ ಅವಧಿಗೆ ಹೋಲಿಸಿದರೆ ನಿಮಗೆ ಬರುವ ಆದಾಯ ಕಡಿಮೆ. 

ಆಯ್ಕೆ ಹೇಗೆ? ಹೂಡಿಕಾ ಉತ್ಪನ್ನವನ್ನು ಆಯ್ಕೆ ಮಾಡುವಲ್ಲಿ ಎರಡು ಪ್ರಮುಖ ಅಂಶಗಳನ್ನು ಗಮನದಲ್ಲಿಡಬೇಕು.

ಮೊದಲನೆಯದು: ಎಷ್ಟು ದೀರ್ಘ ಅವಧಿಗೆ ಹೂಡಿಕೆ ಮಾಡಲು ಬಯಸುವಿರೋ ಅಷ್ಟು ಹೆಚ್ಚು ಅಪಾಯಗಳನ್ನು ಎದುರಿಸಲು ನೀವು ಶಕ್ತರಾಗಿರುತ್ತೀರಿ. ಹೂಡಿಕೆಯ ಅವಧಿ ಕಡಿಮೆಯಾಗಿದ್ದರೆ ಹೆಚ್ಚಿನ ಅಪಾಯ ತೆಗೆದುಕೊಳ್ಳುವುದು ಸೂಕ್ತವಲ್ಲ.

ಎರಡನೆಯದು: ಹೆಚ್ಚು ಅಪಾಯ ಎದುರಿಸಲು ಸಿದ್ಧರಿದ್ದೀರಿ ಎಂದಾದರೆ ಷೇರುಗಳಲ್ಲಿ ಹೆಚ್ಚು ಹೂಡಿಕೆ ಮಾಡಬಹುದು. ಇಲ್ಲದಿದ್ದಲ್ಲಿ ಕಡಿಮೆ ಹೂಡಿಕೆ ಮಾಡುವುದು ಸೂಕ್ತ.

ತುರ್ತು ಅಗತ್ಯ ಈಡೇರಿಸಿಕೊಳ್ಳಲು ಒಂದಿಷ್ಟು ಹಣ ಸಂಗ್ರಹಿಸಿ ಇಡಬೇಕು ಎಂಬುದು ಉದ್ದೇಶವಾದರೆ ಅದಕ್ಕೆ ಅಲ್ಪಾವಧಿಯ ನಿಶ್ಚಿತ ಠೇವಣಿ, ಸಾಲನಿಧಿ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ದೀರ್ಘ ಲಾಕ್‌ ಇನ್‌ ಅವಧಿ ಇರುವುದರಿಂದ ಇದಕ್ಕೆ ‘ಪಿಪಿಎಫ್‌’ ಸೂಕ್ತವಲ್ಲ. ಎಷ್ಟೇ ಆಕರ್ಷಕ ಎನಿಸಿದರೂ ಅಲ್ಪಾವಧಿಯ ಅಗತ್ಯಗಳಿಗಾಗಿ ಷೇರು ಆಧರಿತ ಹೂಡಿಕೆಗಳನ್ನು ಮಾಡುವುದು ಸೂಕ್ತವಲ್ಲ.

ಐದು ವರ್ಷ ಅಥವಾ ಅದಕ್ಕೂ ದೀರ್ಘ ಅವಧಿಯ ಹೂಡಿಕೆಯಾಗಿದ್ದರೆ ಷೇರು ಆಧಾರಿತ ಉತ್ಪನ್ನಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ದೀರ್ಘ ಅವಧಿಯದ್ದಾಗಿದ್ದರೆ ನಿಮ್ಮ ಹೂಡಿಕೆಯ ಶೇ 60 ರಿಂದ ಶೇ 80ರಷ್ಟನ್ನು ಷೇರುಗಳಲ್ಲಿ ಹೂಡಿಕೆ ಮಾಡಬಹುದು. ಉಳಿದ ಹಣವನ್ನು ಸಾಲನಿಧಿ ಆಧಾರಿತ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ಪೂರ್ತಿ ಹಣವನ್ನು ಷೇರುಗಳಲ್ಲಿ ಹೂಡಿಕೆ ಮಾಡಿದಿರೆಂದರೆ ಬಹುದೊಡ್ಡ ಅಪಾಯವನ್ನು ಆಹ್ವಾನಿಸಿದಂತಾಗಬಹುದು.

ಮಾರುಕಟ್ಟೆಯಲ್ಲಿ ನೂರಾರು ಹೂಡಿಕಾ ಉತ್ಪನ್ನಗಳು ಲಭ್ಯ ಇರುವುದರಿಂದ ಎಲ್ಲಿ ಹೂಡಿಕೆ ಮಾಡಬೇಕು ಎಂಬ ಗೊಂದಲ ನಿಮ್ಮಲ್ಲಿ ಮೂಡಿದ್ದರೆ, ಮೊದಲು ಯಾವ ಹೂಡಿಕೆಯ ಗಳಿಕೆ ಎಷ್ಟಿದೆ ಎಂಬುದನ್ನು ನೋಡಿಕೊಳ್ಳಿ. ಗಳಿಕೆಯು ಹೇಗೆ ಬರುತ್ತದೆ, ಅಪಾಯದ ಪ್ರಮಾಣ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಿ. ಎಷ್ಟು ದೀರ್ಘ ಅವಧಿಗೆ ನೀವು ಹೂಡಿಕೆ ಮಾಡಬಲ್ಲಿರಿ ಎಂಬುದು ನಿಮ್ಮ ಗಮನದಲ್ಲಿರಲಿ. ಅಗತ್ಯ ಬಿದ್ದಾಗ ಹೂಡಿಕೆಯನ್ನು ಹಿಂದೆ ಪಡೆಯುವುದು ಸರಳವೇ ಅಥವಾ ಹತ್ತಾರು ನಿಯಮಾವಳಿಗಳಿವೆಯೇ ಎಂಬುದನ್ನು ತಿಳಿದುಕೊಳ್ಳಿ. ಇವಿಷ್ಟು ವಿಚಾರಗಳನ್ನು ತಿಳಿದುಕೊಂಡು ನಿಮಗೆ ಅಗತ್ಯವೆನಿಸಿದಂತೆ ಬೇರೆಬೇರೆ ಕಡೆ ಹೂಡಿಕೆ ಮಾಡಿ.

(ಲೇಖಕ: ಸಂಶೋಧನಾ ವಿಶ್ಲೇಷಕರು, ಫಂಡ್ಸ್‌ ಇಂಡಿಯಾಡಾಟ್‌ಕಾಂ)

(ಇನ್ನಷ್ಟು ಹೂಡಿಕೆ ಆಯ್ಕೆಗಳ ವಿವರ ಮುಂದಿನ ವಾರ) 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !