ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆ ಪ್ರವೇಶಿಸಿದ ಕಲ್ಲಂಗಡಿ–ಕರಬೂಜ

ಬಿಸಿಲು ಹೆಚ್ಚಿದಂತೆ ವಹಿವಾಟು ಹೆಚ್ಚಳ; ಮೂರು ತಿಂಗಳು ಬಲು ಬೇಡಿಕೆ
Last Updated 21 ಫೆಬ್ರುವರಿ 2019, 11:32 IST
ಅಕ್ಷರ ಗಾತ್ರ

ವಿಜಯಪುರ:ಮಕರ ಸಂಕ್ರಾಂತಿ ಹಬ್ಬದ ಆಸುಪಾಸಿನಲ್ಲೇ ವಿಜಯಪುರದ ಮಾರುಕಟ್ಟೆ ಪ್ರವೇಶಿಸಿದ್ದ ಕಲ್ಲಂಗಡಿ, ಕರಬೂಜ ಹಣ್ಣಿಗೆ ಇದೀಗ ಬೇಡಿಕೆ ಕೊಂಚ ಹೆಚ್ಚುತ್ತಿದೆ.ಬಿಸಿಲ ಝಳ ಹೆಚ್ಚಿದಂತೆ ಹಣ್ಣಿನ ಬೇಡಿಕೆಯೂ ಹೆಚ್ಚಲಿದ್ದು, ಇದಕ್ಕೆ ಪೂರಕವಾಗಿ ಧಾರಣೆಯೂ ತುಟ್ಟಿಯಾಗಲಿದೆ. ವಹಿವಾಟು ಸಹ ಬಿರುಸುಗೊಳ್ಳಲಿದೆ.

ಇದೀಗ ನಗರದ ಪ್ರಮುಖ ರಸ್ತೆ ಬದಿಯಲ್ಲಿ ಕಲ್ಲಂಗಡಿ, ಕರಬೂಜ ಹಣ್ಣಿನ ತಾತ್ಕಾಲಿಕ ಅಂಗಡಿಗಳು ಆರಂಭಗೊಂಡಿವೆ. ಜೂನ್‌ ಮೊದಲ ವಾರದವರೆಗೂ ಮುಂದಿನ ಮೂರುವರೆ ತಿಂಗಳು ಭರ್ಜರಿ ವಹಿವಾಟು ನಡೆಸಲಿವೆ.

ಭಾರತ ಹುಣ್ಣಿಮೆ ಮುಗಿದಿದೆ. ಶಿವರಾತ್ರಿಗೆ ದಿನಗಣನೆ ಆರಂಭಗೊಂಡಿದೆ. ಹಬ್ಬದ ಆಸುಪಾಸಿನಿಂದಲೇ ಬಿಸಿಲ ಝಳ ಸಹಜವಾಗಿಯೇ ಹೆಚ್ಚಲಿದೆ. ಹಬ್ಬ ಮುಗಿದ ಬಳಿಕ ಬೇಸಿಗೆ ಬಿಸಿಲು, ಯುಗಾದಿ ವೇಳೆಗೆ ಕಡು ಬೇಸಿಗೆಯ ಬಿಸಿಲ ಧಗೆ ವಿಜಯಪುರಿಗರನ್ನು ಹೈರಾಣಾಗಿಸಲಿದೆ. ಈ ಸಂದರ್ಭ ಕಲ್ಲಂಗಡಿ, ಕರಬೂಜ ಹಣ್ಣಿಗೆ ಬೇಡಿಕೆ ಸಾಕಷ್ಟು ಹೆಚ್ಚಲಿದೆ.

ಸೀಝನ್‌ ಶುರು:‘ಕಲ್ಲಂಗಡಿ ಸೀಝನ್‌ ಈಗಾಗಲೇ ಶುರುವಾಗಿದೆ. ಗ್ರಾಹಕರಿಂದ ಖರೀದಿಯೂ ನಡೆದಿದೆ. ತಿಂಗಳ ಹಿಂದಿನಿಂದಲೇ ಮಾರುಕಟ್ಟೆಯಲ್ಲಿ ವಹಿವಾಟು ನಡೆದಿದೆ’ ಎಂದು ಸಿದ್ಧೇಶ್ವರ ದೇಗುಲ ರಸ್ತೆಯಲ್ಲಿ ವ್ಯಾಪಾರ ನಡೆಸುತ್ತಿರುವ ಬಾಲಚಂದ್ರ ಭಜಂತ್ರಿ ತಿಳಿಸಿದರು.

‘ಕೊಲ್ಹಾರ, ಚಡಚಣ ಸೇರಿದಂತೆ ಕೃಷ್ಣಾ ಹೊಳೆ ಸುತ್ತಮುತ್ತಲಿನ ಪ್ರದೇಶಗಳಿಂದ ವಿಜಯಪುರದ ಮಾರುಕಟ್ಟೆಗೆ ಕಲ್ಲಂಗಡಿ ಸಾಕಷ್ಟು ಬರುತ್ತಿದೆ. ಗ್ರಾಹಕರ ಬೇಡಿಕೆ ಪೂರೈಸಿದೆ. ಬಿಸಿಲು ಹೆಚ್ಚಿದಂತೆ ಬೇಡಿಕೆಯೂ ಮತ್ತಷ್ಟು ಹೆಚ್ಚಾಗಲಿದೆ. ಮಾರುಕಟ್ಟೆಗೆ ಆವಕವೂ ವ್ಯಾಪಕವಾಗಿರಲಿದೆ. ಹೊರ ರಾಜ್ಯದ ಹಣ್ಣು ಸಹ ಇಲ್ಲಿಗೆ ಬರಲಿದೆ. ಖರೀದಿಯೂ ಬಿರುಸುಗೊಳ್ಳಲಿದೆ. ಇದರ ನಡುವೆ ಆಗ ಹಣ್ಣಿನ ಧಾರಣೆಯೂ ತುಟ್ಟಿಯಾಗಲಿದೆ’ ಎಂದು ಭಜಂತ್ರಿ ಹೇಳಿದರು.

‘ಆಂಧ್ರಪ್ರದೇಶದ ವಿವಿಧೆಡೆಯಿಂದ ಕರಬೂಜ ವಿಜಯಪುರಕ್ಕೆ ಬರುತ್ತಿದೆ. ಪ್ರಸ್ತುತ ಒಂದು ಹಣ್ಣಿನ ಧಾರಣೆ ₹ 15ರಿಂದ 20 ಇದೆ. ಒಂದು ಕಲ್ಲಂಗಡಿ ಹಣ್ಣಿನ ಧಾರಣೆ ಸಹ ₹ 20ರಿಂದ 40 ಇದೆ. ಗಾತ್ರದ ಮೇಲೆ ದರ ವ್ಯತ್ಯಾಸವಿರಲಿದೆ’ ಎಂದು ಅವರು ಮಾಹಿತಿ ನೀಡಿದರು.

‘ಕಲ್ಲಂಗಡಿಯ ಧಾರಣೆ ಮಾರುಕಟ್ಟೆಯಲ್ಲಿ ಪ್ರಸ್ತುತ ಕಡಿಮೆಯಿದೆ. ಬಿಸಿಲ ಝಳ ಇನ್ನೂ ಹೆಚ್ಚಳವಾಗಿಲ್ಲ. ದಿನ ಕಳೆದಂತೆ ಧಗೆ ಹೆಚ್ಚುತ್ತಿದೆ. ಶಿವರಾತ್ರಿ ಬಳಿಕ ವಾತಾವರಣದ ತಾಪಮಾನ ಹೆಚ್ಚೆಚ್ಚು ದಾಖಲಾಗಲಿದ್ದು, ಹಣ್ಣಿಗೆ ಬೇಡಿಕೆ ಹೆಚ್ಚಲಿದೆ’ ಎಂದು ಗ್ರಾಹಕ ಗುರುರಾಜ ನಿಡೋಣಿ ತಿಳಿಸಿದರು.

ಧಾರಣೆಯಿಲ್ಲ; ಕೈಸುಟ್ಟ ಕಲ್ಲಂಗಡಿ:‘ಕಲ್ಲಂಗಡಿ ಎರಡು ತಿಂಗಳ ಹಣ್ಣಿನ ಬೆಳೆ. ₹ 60,000 ಖರ್ಚು ಮಾಡಿ ಒಂದು ಎಕರೆಯಲ್ಲಿ ಬೆಳೆದಿದ್ದೆ. ಎರಡ್ಮೂರು ದಿನಗಳ ಹಿಂದೆ ಇಡೀ ಹೊಲದಲ್ಲಿನ ಹಣ್ಣನ್ನು ವ್ಯಾಪಾರಿಗಳಿಗೆ ಮಾರಿದೆ. ಒಂದು ಕೆ.ಜಿ.ಗೆ ₹ 3ರಂತೆ ಖರೀದಿಸಿದರು. ಒಟ್ಟು ಮೊತ್ತ ₹ 32,000 ಸಿಕ್ಕಿತು. ಹಾಕಿದ ಬಂಡವಾಳವೂ ಅರ್ಧದಷ್ಟು ಕೈ ಸೇರಲಿಲ್ಲ’ ಎಂದು ಬಬಲೇಶ್ವರ ತಾಲ್ಲೂಕಿನ ಕಿಲಾರಹಟ್ಟಿಯ ನಾನು ದರಗುಡೆ ಅಳಲು ತೋಡಿಕೊಂಡರು.

‘ನಾನು ಮಾರಾಟ ಮಾಡಿದ ಮರುದಿನವೇ ಒಂದು ಕೆ.ಜಿ. ಕಲ್ಲಂಗಡಿ ಧಾರಣೆ ₹ 5, ₹ 6 ಆಯ್ತು. ನನ್ನ ಶ್ರಮವೆಲ್ಲಾ ನೀರಿನಲ್ಲಿ ಹೋಮ ಮಾಡಿದಂತಾಯ್ತು. ಎರಡು ತಿಂಗಳ ಪರಿಶ್ರಮದ ಕೂಲಿಯೂ ಸಿಗಲಿಲ್ಲ. ಕಲ್ಲಂಗಡಿ ಕಿಸೆ ಖಾಲಿ ಮಾಡಿ, ಕೈ ಸಹ ಸುಟ್ಟಿತು’ ಎಂದು ನಾನು ಬೇಸರ ವ್ಯಕ್ತಪಡಿಸಿದರು.

‘ಭಾಳ ಖರ್ಚು ಮಾಡಿ ಕಲ್ಲಂಗಡಿ ಹಣ್ಣು ಬೆಳೆದಿದ್ದೆ. ಎರಡು ದಿನದ ಅಂತರದಲ್ಲೇ ಸಾಕಷ್ಟು ನಷ್ಟ ಅನುಭವಿಸಿದೆ. ಮನಸ್ಸಿಗೆ ತುಂಬಾ ನೋವಾಗಿದೆ. ಕಲ್ಲಂಗಡಿಯ ಸಹವಾಸವೇ ಬೇಡ ಎನಿಸಿದೆ’ ಎಂದು ‘ಪ್ರಜಾವಾಣಿ’ ಬಳಿ ಅಲವತ್ತುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT