ಶನಿವಾರ, ನವೆಂಬರ್ 23, 2019
18 °C
ಸ್ಥಗಿತಗೊಂಡ ಕಾರ್ಖಾನೆಗಳು; ಬೆಲ್ಲಕ್ಕೆ ಬೆಲೆ ಇದ್ದರೂ ರೈತರಿಗೆ ಸಿಗದ ಲಾಭ

ಆಲೆಮನೆ: ಕುಸಿದ ಕಬ್ಬಿನ ದರ

Published:
Updated:
Prajavani

ಮಂಡ್ಯ: ಜಿಲ್ಲೆಯ ಪ್ರಮುಖ ಸಕ್ಕರೆ ಕಾರ್ಖಾನೆಗಳು ಸದ್ದು ನಿಲ್ಲಿಸಿದ್ದು, ರೈತರು ಅನಿವಾರ್ಯವಾಗಿ ಆಲೆಮನೆಗಳಿಗೆ ಕಬ್ಬು ಪೂರೈಕೆ ಮಾಡುತ್ತಿದ್ದಾರೆ. ಆದರೆ, ಆಲೆಮನೆಗಳಲ್ಲಿ ಕಬ್ಬಿನ ದರ ಪಾತಾಳಕ್ಕೆ ಇಳಿದಿದೆ. ಇದರಿಂದ ರೈತರ ಜಂಘಾಬಲವೇ ಉಡುಗಿದಂತಾಗಿದೆ.

ಮೈಷುಗರ್‌, ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಗಳು ಈ ಹಂಗಾಮಿನಲ್ಲಿ ಕಬ್ಬು ಅರೆಯುತ್ತಿಲ್ಲ. ಜಿಲ್ಲೆಯಲ್ಲಿ 70 ಲಕ್ಷ ಟನ್‌ನಷ್ಟು ಕಬ್ಬು, ಕಟಾವು ಅವಧಿಯನ್ನು ಮೀರುತ್ತಿದೆ. ಖಾಸಗಿ ಕಾರ್ಖಾನೆಗಳಿಗೂ ಸಂಪೂರ್ಣವಾಗಿ ಅರೆಯಲು ಸಾಧ್ಯವಾಗುತ್ತಿಲ್ಲ. ಮೈಸೂರು ಜಿಲ್ಲೆಯ ನಂಜನಗೂಡಿನ ಬಣ್ಣಾರಿ ಅಮ್ಮನ್‌ ಸಕ್ಕರೆ ಕಾರ್ಖಾನೆ, ಚಾಮರಾಜನಗರ ಜಿಲ್ಲೆ ಕುಂತೂರು ಸಕ್ಕರೆ ಕಾರ್ಖಾನೆಗಳು ಮಂಡ್ಯ ಜಿಲ್ಲೆಯ ಕಬ್ಬನ್ನೂ ಅರೆಯಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಆದರೆ, ಆ ವ್ಯಾಪ್ತಿಯಲ್ಲೇ ಭಾರಿ ಪ್ರಮಾಣದ ಕಬ್ಬು ಕಟಾವಿಗೆ ಬಂದಿದ್ದು, ಮಂಡ್ಯದ ಕಬ್ಬಿನ ಮೇಲೆ ಆಸಕ್ತಿ ತೋರುತ್ತಿಲ್ಲ.

ಹೀಗಾಗಿ, ರೈತರು ಬೇರೆ ದಾರಿ ಕಾಣದೆ ಆಲೆಮನೆಗಳಿಗೆ ಕಬ್ಬು ಪೂರೈಸುತ್ತಿದ್ದಾರೆ. ಆದರೆ, ಆಲೆಮನೆಯಲ್ಲಿ ಟನ್‌ ಕಬ್ಬಿನ ದರ ₹1,200ಕ್ಕೆ ಕುಸಿದಿದೆ. ಕೇಂದ್ರ ಸರ್ಕಾರ ನಿಗದಿ ಮಾಡಿರುವ ನ್ಯಾಯಯುತ ಬೆಲೆ (ಎಫ್‌ಆರ್‌ಪಿ) ಅನ್ವಯ ಸಕ್ಕರೆ ಕಾರ್ಖಾನೆಗಳು ಟನ್‌ ಕಬ್ಬಿಗೆ ₹2,750 ನೀಡುತ್ತವೆ. ಆದರೆ, ಆಲೆಮನೆಗಳು ಅದಕ್ಕಿಂತ ಶೇ 60ರಷ್ಟು ಕಡಿಮೆ ದರ ನೀಡುತ್ತಿವೆ.

‘ಎರಡೂವರೆ ಎಕರೆಯಲ್ಲಿ ಕಬ್ಬು ಬೆಳೆದು ನಿಂತಿದೆ. 19 ತಿಂಗಳು ಮುಗಿಯುತ್ತಾ ಬಂದರೂ ಕಟಾವು ಮಾಡಿಲ್ಲ. ಕಬ್ಬು ನೆಲಕ್ಕುರುಳಿ ಮೊಳಕೆಯೊಡೆಯುತ್ತಿದೆ. ಮೈಷುಗರ್‌ ಕಾರ್ಖಾನೆಗೆ ನೋಂದಣಿ ಮಾಡಿಸಿದ್ದೆ, ಆದರೆ, ಅದು ಆರಂಭವಾಗಲಿಲ್ಲ. ನಷ್ಟವಾದರೂ ಸರಿ; ಗದ್ದೆ ಖಾಲಿಯಾದರೆ ಸಾಕಾಗಿದೆ. ಹೀಗಾಗಿ ಆಲೆಮನೆಗೆ ಕಬ್ಬು ಪೂರೈಸುತ್ತಿದ್ದೇನೆ’ ಎಂದು ಹೊಳಲು ಗ್ರಾಮದ ರೈತರ ರುದ್ರಪ್ಪ ಹೇಳಿದರು.

ಬೆಲ್ಲದ ಲಾಭವೂ ರೈತರಿಗಿಲ್ಲ: ಆಲೆಮನೆಯಲ್ಲಿ ಉತ್ಪಾದನೆಯಾಗುವ ಬೆಲ್ಲಕ್ಕೆ ಉತ್ತಮ ದರ ಸಿಗುತ್ತದೆ. ಆದರೆ, ಅದರ ಲಾಭ ರೈತರಿಗೆ ದೊರೆಯುತ್ತಿಲ್ಲ. ರೈತರು ತಮ್ಮ ಆಲೆಮನೆಗಳನ್ನು ಉತ್ತರ ಪ್ರದೇಶ, ಬಿಹಾರದಿಂದ ಬಂದ ಗುತ್ತಿಗೆದಾರರಿಗೆ ಬಾಡಿಗೆ ಕೊಟ್ಟಿದ್ದಾರೆ.

ಆಲೆಮನೆಯಲ್ಲಿ ತಯಾರಾಗುವ ಕ್ವಿಂಟಲ್‌ ಅಚ್ಚುಬೆಲ್ಲ, ಬಾಕ್ಸ್‌ ಬೆಲ್ಲ, ಕುರಿ ಕಾಲಚ್ಚು ಬೆಲ್ಲ, ಬಕೆಟ್‌ ಬೆಲ್ಲಕ್ಕೆ ಕ್ರಮವಾಗಿ ₹3,430, ₹3,580, ₹3,300, ₹3,280 ದರವಿದೆ. ಆದರೆ, ಬೆಲ್ಲದ ಹಣ ಆಲೆಮನೆ ಗುತ್ತಿಗೆದಾರರು, ವ್ಯಾಪಾರಿಗಳು, ಮಧ್ಯವರ್ತಿಗಳ ಪಾಲಾಗುತ್ತಿದೆ.

ಸಂಕಷ್ಟ ಹೆಚ್ಚಳ ಆತಂಕ‌
‘ಜಿಲ್ಲೆಯಲ್ಲಿ ಈಗಲೂ ಪ್ರತಿದಿನ ಒಂದಲ್ಲಾ ಒಂದು ಕಡೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈಗ ಬೆಳೆದು ನಿಂತಿರುವ ಕಬ್ಬಿನಿಂದ ನಷ್ಟವಾದರೆ ರೈತರ ಸಂಕಷ್ಟ ಹೆಚ್ಚಾಗುತ್ತದೆ’ ಎಂದು ರೈತಸಂಘ ಜಿಲ್ಲಾ ಘಟಕದ ಅಧ್ಯಕ್ಷ ಶಂಭೂನಹಳ್ಳಿ ಸುರೇಶ್‌ ಆತಂಕ ವ್ಯಕ್ತಪಡಿಸಿದರು.

**
ಜಿಲ್ಲೆಯಲ್ಲಿ ಪ್ರತಿದಿನ ಒಂದಲ್ಲಾ ಒಂದು ಕಡೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈಗ ಬೆಳೆದು ನಿಂತಿರುವ ಕಬ್ಬಿನಿಂದ ನಷ್ಟವಾದರೆ ರೈತರ ಸಂಕಷ್ಟ ಹೆಚ್ಚಾಗುತ್ತದೆ.
-ಶಂಭೂನಹಳ್ಳಿ ಸುರೇಶ್‌, ರೈತಸಂಘ ಜಿಲ್ಲಾ ಘಟಕದ ಅಧ್ಯಕ್ಷ

**

ಈ ಬಾರಿ ಉತ್ತಮ ಮಳೆಯಾಗಿ, ಕೆಆರ್‌ಎಸ್‌ ಜಲಾಶಯವೂ ತುಂಬಿದ್ದು ಎಲ್ಲರೂ ಕಬ್ಬು ಬೆಳೆದಿದ್ದಾರೆ. ಇದೇ ನಷ್ಟಕ್ಕೆ ಕಾರಣ.
-ಬಿ.ಎಸ್‌.ಚಂದ್ರಶೇಖರ್‌, ಕೃಷಿ ಇಲಾಖೆ ಉಪ ನಿರ್ದೇಶಕ

ಪ್ರತಿಕ್ರಿಯಿಸಿ (+)