ಹೊಸ ಅಧಿಸೂಚನೆ: ಬದಲಾವಣೆಗೆ ಮನವಿ

7
ಕರಾವಳಿ ನಿಯಂತ್ರಣ ವಲಯದಲ್ಲಿ ಪ್ರವಾಸೋದ್ಯಮಕ್ಕೆ ಅವಕಾಶ

ಹೊಸ ಅಧಿಸೂಚನೆ: ಬದಲಾವಣೆಗೆ ಮನವಿ

Published:
Updated:

ಮಂಗಳೂರು: ಕರಾವಳಿ ನಿಯಂತ್ರಣ ವಲಯದ (ಸಿಆರ್‌ಜೆಡ್‌) ಹೊಸ ಅಧಿಸೂಚನೆಯ ಕರಡು ಪ್ರಕಾರ, ಸಿಆರ್‌ಜೆಡ್‌ ಮೊದಲನೇ ವಲಯದಲ್ಲಿ ಪರಿಸರ ಸ್ನೇಹಿ ತಾತ್ಕಾಲಿಕ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಆದರೆ 2 ಮತ್ತು 3ನೇ ವಲಯಕ್ಕೆ ಸಂಬಂಧಿಸಿದ ನಿಯಮಗಳಲ್ಲಿ ಸಡಿಲಿಕೆ ಮಾಡುವಂತೆ ಪ್ರವಾಸೋದ್ಯಮ ಇಲಾಖೆ ಸರ್ಕಾರಕ್ಕೆ ಮನವಿ ಮಾಡಿದೆ. 

ಕರಡು ಪ್ರಸ್ತಾವದ ಪ್ರಕಾರ, ಸಿಆರ್‌ಜೆಡ್‌ ಒಂದನೇ ವಲಯದಲ್ಲಿ ಪರಿಸರ ಸ್ನೇಹಿ ‌ತಾತ್ಕಾಲಿಕ ಗುಡಿಸಲು, ಅಂಗಡಿಗಳಿಗೆ ಅವಕಾಶ ದೊರೆಯುವ ನಿರೀಕ್ಷೆ ಇದೆ. ಇದು ಪ್ರವಾಸೋದ್ಯಮ ಚಟುವಟಿಕೆಗಳಿಗೆ ತಕ್ಕಮಟ್ಟಿಗೆ ಉತ್ತೇಜನ ನೀಡಬಹುದು ಎಂಬ ಮಾತು ಕೇಳಿಬಂದಿದೆ.

ಸಿಆರ್‌ಜೆಡ್‌ 2ನೇ ವಲಯದ ಪ್ರಕಾರ, ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಕಡಲ ದಂಡೆ ಪ್ರದೇಶದಲ್ಲಿ ಮಾತ್ರ ಅಭಿವೃದ್ಧಿ ಕಾಮಗಾರಿಗಳಿಗೆ ಅವಕಾಶ ನೀಡಲಾಗಿದೆ. ಅಂದರೆ ಈಗಾಗಲೇ ಒಳಚರಂಡಿ, ರಸ್ತೆ ಸಂಪರ್ಕ ಮತ್ತಿತರ ಸೌಲಭ್ಯ ಇರುವ ನಗರ ಪ್ರದೇಶಕ್ಕೆ ಅವಕಾಶ ಸಿಗಲಿದೆ. ಇದಕ್ಕೆ ಬದಲಾಗಿ ಗ್ರಾಮ ಪಂಚಾಯಿತಿ ಮತ್ತು ಪಟ್ಟಣ ಪಂಚಾಯಿತಿಯ ವ್ಯಾಪ್ತಿಯಲ್ಲಿರುವ ಕಡಲ ದಂಡೆಯಲ್ಲಿಯೂ ಪ್ರವಾಸಿ ಚಟುವಟಿಕೆಗಳಿಗೆ ಅವಕಾಶ ಕೊಡಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಡಾ.ಉದಯ್‌ ಶೆಟ್ಟಿ ಹೇಳುತ್ತಾರೆ. 

ಸಿಆರ್‌ಜೆಡ್‌ 3ನೇ ವಲಯಕ್ಕೆ 2011ರ ಜನಗಣತಿ ಆಧರಿಸಿ,  ಜನಸಾಂದ್ರತೆಯು 1 ಚದರ ಕಿಲೋಮೀಟರ್‌ಗೆ 2,161 ಇದ್ದಾಗಲಷ್ಟೇ 50 ಮೀಟರ್‌ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಅವಕಾಶ ನೀಡಲಾಗಿದೆ. ಈ ನಿಯಮವನ್ನು ತುಸು ಸಡಿಲಿಸಿದಲ್ಲಿ ಕರಾವಳಿಗೆ ಹೆಚ್ಚಿನ ಅನುಕೂಲವಾಗಬಹುದು. ಯಾಕೆಂದರೆ ಕರ್ನಾಟಕದ ಕರಾವಳಿಯಲ್ಲಿ ಸಿಆರ್‌ಜೆಡ್‌ 3ನೇ ಹಂತಕ್ಕೆ ಸೇರುವ ಯಾವುದೇ ಪ್ರದೇಶದಲ್ಲಿ ಇಷ್ಟೊಂದು ಜನಸಂಖ್ಯೆ ಇಲ್ಲ. ಕರಾವಳಿಯಲ್ಲಿ ಸರಾಸರಿ ಚದರ ಕಿಲೋಮೀಟರ್‌ಗೆ 430 ಜನಸಾಂದ್ರತೆಯಷ್ಟೇ ಇದೆ. ಆದ್ದರಿಂದ ಜನಸಾಂದ್ರತೆ ಕಡಿಮೆ ಇದ್ದಾಗಲೂ ಅಭಿವೃದ್ಧಿ ಕಾಮಗಾರಿಗೆ ಅವಕಾಶ ನೀಡಬೇಕು ಎಂದು ಮನವಿಯಲ್ಲಿ ವಿವರಿಸಲಾಗಿದೆ. ಈ ಎರಡು ಅವಕಾಶಗಳು ದೊರೆತಲ್ಲಿ ಕರಾವಳಿಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶ ಲಭ್ಯವಾಗಲಿದೆ ಎಂದು ಉದಯ್‌ ಶೆಟ್ಟಿ ವಿವರಿಸಿದರು. 

ಈ ಹಿಂದೆ ಸಿಆರ್‌ಜೆಡ್‌ 3ನೇ ವಲಯದಲ್ಲಿ 200 ಮೀಟರ್‌ವರೆಗೆ ಚಟುವಟಿಕೆಗಳಿಗೆ ಅವಕಾಶ ಇರಲಿಲ್ಲ. ಇನ್ನು ಮುಂದೆ ಎಚ್‌ಟಿಎಲ್‌ನಿಂದ (ಹೈಟೈಡ್‌ ಲೈನ್) 50 ಮೀಟರ್‌ ಬಳಿಕ ಚಟುವಟಿಕೆಗಳಿಗೆ ಅವಕಾಶ ದೊರೆಯುವ ನಿರೀಕ್ಷೆ ಇದೆ.

ಸಿಆರ್‌ಜೆಡ್ 4ನೇ ವಲಯ ಅಂದರೆ ನದಿ ಬದಿಯಲ್ಲಿಯೂ ಎಚ್‌ಟಿಎಲ್‌ (ಅಂದರೆ ನದಿಯು ನೆರೆ ಸಂದರ್ಭದಲ್ಲಿಯೂ ಅತಿ ಹೆಚ್ಚು ಉಕ್ಕಿ ಹರಿಯುವ ಪ್ರದೇಶದ ಅಂಚಿನಿಂದ)ನಿಂದ 50 ಮೀಟರ್‌ವರೆಗೆ ಅಭಿವೃದ್ಧಿ ಚಟುವಟಿಕೆಗೆ ಅವಕಾಶ ಇರಲಿಲ್ಲ. ಈ ಅಂತರವನ್ನು 20 ಮೀಟರ್‌ಗೆ ಇಳಿಸಲಾಗಿದೆ. 

‘ಹೊಸ ಅಧಿಸೂಚನೆಯಿಂದ ಕರಾವಳಿಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಹೆಚ್ಚಿನ ಅವಕಾಶ ಸಿಗಬಹುದು. ಅದೇ ವೇಳೆಗೆ ಸೂಕ್ಷ್ಮ ಪ್ರದೇಶಗಳಿಗೆ ಧಕ್ಕೆಯಾಗದಂತೆ ಎಚ್ಚರ ವಹಿಸುವ ಜವಾಬ್ದಾರಿಯೂ ನಮ್ಮ ಮೇಲಿದೆ’ ಎಂದು ಸಿಆರ್‌ಜೆಡ್‌ ನಿಯಮ ಸಡಿಲಿಕೆ ಕುರಿತು ಮಾತನಾಡಿದ  ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಮಹೇಶ್‌ ಕುಮಾರ್‌ ಹೇಳುತ್ತಾರೆ. 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು ನಗರ ಪ್ರದೇಶದ ಐದು ಪ್ರದೇಶಗಳು ಹಾಗೂ 39 ಗ್ರಾಮಗಳು ಸಿಆರ್‌ಜೆಡ್‌ 1ನೇ ವಲಯದಲ್ಲಿ ಸೇರಿವೆ. 18 ಗ್ರಾಮಗಳು ಸಿಆರ್‌ಜೆಡ್‌ 2ನೇ ವಲಯದಲ್ಲಿ ಹಾಗೂ  37 ಗ್ರಾಮಗಳು ಸಿಆರ್‌ಝಡ್‌ 3ನೇ ವಲಯದಲ್ಲಿ ಇವೆ.       

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !