ಈರುಳ್ಳಿ ನೆಲಕ್ಕೆ ಹಾಕಿ ಆಕ್ರೋಶ

7
ಈರುಳ್ಳಿಗೆ ವೈಜ್ಞಾನಿಕ ಬೆಲೆ ನೀಡಲು ಒತ್ತಾಯಿಸಿ ಬೆಳೆಗಾರರಿಂದ ಪ್ರತಿಭಟನೆ

ಈರುಳ್ಳಿ ನೆಲಕ್ಕೆ ಹಾಕಿ ಆಕ್ರೋಶ

Published:
Updated:
Prajavani

ವಿಜಯಪುರ: ಈರುಳ್ಳಿಗೆ ವೈಜ್ಞಾನಿಕ ಬೆಲೆ ನೀಡುವಂತೆ ಒತ್ತಾಯಿಸಿ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಈರುಳ್ಳಿ ಬೆಳೆಗಾರರು, ಉಳ್ಳಾಗಡ್ಡಿ ನೆಲಕ್ಕೆ ಹಾಕಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಅಖಂಡ ಕರ್ನಾಟಕ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ‘ಈರುಳ್ಳಿ ಬೆಳೆಗಾರರು ವೈಜ್ಞಾನಿಕ ಬೆಲೆ ಇಲ್ಲದೇ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಬರದ ಹೊಡೆತದಿಂದ ಮೊದಲೇ ನಲುಗಿದ್ದ ರೈತರಿಗೆ, ಈರುಳ್ಳಿ ಬೆಲೆ ತೀವ್ರಗತಿಯಲ್ಲಿ ಕುಸಿತಗೊಂಡಿದ್ದರಿಂದ ಮತ್ತಷ್ಟು ಹೊಡೆತ ಬಿದ್ದಂತಾಗಿದೆ. ಸರ್ಕಾರದ ಬೆಂಬಲ ಬೆಲೆ ಸಿಗಬಹುದು ಎಂಬ ಆಶಾಭಾವನೆ ಹೊಂದಿದ್ದ ರೈತರಿಗೆ ಸ್ಪಂದನೆ ದೊರಕಿಲ್ಲ, ಹೀಗಾಗಿ ಸಂಗ್ರಹಿಸಿಟ್ಟ ಅರ್ಧಕ್ಕಿಂತಲೂ ಹೆಚ್ಚು ಪ್ರಮಾಣದ ಈರುಳ್ಳಿ ಕೊಳೆತು ನಾಶವಾಗಿದೆ’ ಎಂದು ಅಸಮಾಧಾನ ಹೊರಹಾಕಿದರು.

‘ಮಾರುಕಟ್ಟೆಗೆ ಹೋದರೆ ದಲ್ಲಾಳಿಗಳ ಹಾವಳಿ ಅತಿಯಾಗಿದೆ. ದಲ್ಲಾಳಿಗಳು ತಮಗಿಷ್ಟ ಬಂದಂತೆ ಬೆಳೆ ಖರೀದಿ ಮಾಡುತ್ತಾರೆ. ಹೀಗಾಗಿ ಹೆಚ್ಚುವರಿಯಾಗಿ ವಾಹನ ಖರ್ಚು ಮಾಡಿಕೊಂಡು, ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಪುನಃ ಈರುಳ್ಳಿ ಹೇರಿಕೊಂಡು ವಾಪಾಸ್ಸಾಗಬೇಕಾದ ಅನಿವಾರ್ಯತೆ ಎದುರಾಗಿದೆ. ಈ ರೀತಿಯಾದರೆ ರೈತ ಬದುಕುವುದಾದರೂ ಹೇಗೆ ? ಈ ಎಲ್ಲ ಸಮಸ್ಯೆಗಳಿಂದಾಗಿಯೇ ಅನ್ನದಾತ ಆತ್ಮಹತ್ಯೆಯಂತಹ ಕಠಿಣ ನಿರ್ಧಾರ ಕೈಗೊಳ್ಳುವಂತಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸರ್ಕಾರಿ ನೌಕರರು ಒಂದು ದಿನ ಮುಷ್ಕರಕ್ಕೆ ಕರೆ ನೀಡಿದರೆ ಸಾಕು, ಅವರ ಸಂಬಳ ಏರಿಕೆಯಾಗುತ್ತಿದೆ. ಮಂತ್ರಿ-ಮಹೋದಯರು ತಮ್ಮ ಸಂಬಳ ಹೆಚ್ಚಿಸಿಕೊಂಡಿದ್ದಾರೆ. ಆದರೆ ಸರ್ಕಾರಗಳಿಗೆ ರೈತರ ನೋವು ಮಾತ್ರ ಅರ್ಥವಾಗುತ್ತಿಲ್ಲ. ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ದೊರಕದೆ, ಕಷ್ಟದಲ್ಲಿರುವ ಸಂಗತಿ ಮಾತ್ರ ನಮ್ಮನ್ನು ಆಳುವವರ ಗಮನಕ್ಕಿಲ್ಲ ಎಂದು ಕಿಡಿಕಾರಿದ ಅವರು, ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ತೊಂದರೆಯಲ್ಲಿರುವ ಈರುಳ್ಳಿ ಬೆಳೆಗಾರರ ಹಿತ ಕಾಪಾಡಲು, ಈರುಳ್ಳಿ ಖರೀದಿ ಕೇಂದ್ರ ಆರಂಭಿಸಿ ಸೂಕ್ತ ಹಾಗೂ ವೈಜ್ಞಾನಿಕ ಬೆಲೆಯಲ್ಲಿ ಈರುಳ್ಳಿಯನ್ನು ಖರೀದಿಸಬೇಕು ಎಂದು ಒತ್ತಾಯಿಸಿದರು.

ಸದಾಶಿವ ಬರಟಗಿ, ಸಿದ್ದರಾಮ ಅಂಗಡಗೇರಿ, ರಾಮಪ್ಪ ವಾಲೀಕರ, ಸದಾಶಿವ ಬರಟಗಿ, ಶಾರದಾ ಲಮಾಣಿ, ರಜಿಯಾ ಬಿಜಾಪುರ, ಗಂಗಮ್ಮ ಮಾದರ, ಮಾಚಪ್ಪ ಹೊರ್ತಿ, ಶಾಂತಗೌಡ ಬಿರಾದಾರ, ಸಿದ್ರಾಮ ಅಂಗಡಗೇರಿ, ಚಂದ್ರಾಮ ತೆಗ್ಗಿ, ಶಿವಪ್ಪ ಮಂಗೊಂಡ, ರಾಮಣ್ಣ ವಾಲೀಕಾರ, ಚಂದ್ರಾಮ ತೆಗ್ಗಿ, ಈರಣ್ಣ ದೇವರಗುಡಿ, ಕೃಷ್ಣಪ್ಪ ಬಮರದಡ್ಡಿ, ರಾಮಪ್ಪ ವಾಲೀಕಾರ, ಚಂದ್ರಾಮ ಹಿಪ್ಪಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !