ಬ್ಯಾಂಕ್‌ಗಳ ದುಸ್ಥಿತಿಗೆ ಅತಿ ಆತ್ಮವಿಶ್ವಾಸವೂ ಕಾರಣ: ರಘುರಾಂ ರಾಜನ್‌

7
ಬ್ಯಾಂಕ್‌ಗಳು ಸರ್ಕಾರದಿಂದ ಅಂತರ ಕಾಯ್ದುಕೊಳ್ಳಬೇಕು

ಬ್ಯಾಂಕ್‌ಗಳ ದುಸ್ಥಿತಿಗೆ ಅತಿ ಆತ್ಮವಿಶ್ವಾಸವೂ ಕಾರಣ: ರಘುರಾಂ ರಾಜನ್‌

Published:
Updated:
Deccan Herald

ನವದೆಹಲಿ: ‘ಬ್ಯಾಂಕ್‌ಗಳಲ್ಲಿ ಎನ್‌ಪಿಎ (ವಸೂಲಾಗದ ಸಾಲ) ಪ್ರಮಾಣ ಹೆಚ್ಚಾಗಲು ಬ್ಯಾಂಕ್ ಅಧಿಕಾರಿಗಳ ಅತಿಆತ್ಮವಿಶ್ವಾಸ, ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ನಿಧಾನಗತಿಯ ಧೋರಣೆ ಅನುಸರಿಸುತ್ತಿರುವ ಸರ್ಕಾರದ ವರ್ತನೆ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಆದ  ಬದಲಾವಣೆಗಳು ಮುಖ್ಯ ಕಾರಣ’ ಎಂದು ರಿಸರ್ವ್‌ ಬ್ಯಾಂಕ್‌ನ ಮಾಜಿ ಗವರ್ನರ್ ರಘುರಾಮ್ ರಾಜನ್ ಸಂಸದೀಯ ಮಂಡಳಿಗೆ ನೀಡಿರುವ ಪ್ರತಿಕ್ರಿಯೆಯಲ್ಲಿ ಹೇಳಿದ್ದಾರೆ.

ಎನ್‌ಪಿಎ ಸಮಸ್ಯೆಯನ್ನು ಗುರುತಿಸಿ ಅದನ್ನು ಪರಿಹರಿಸಲು ರಾಜನ್ ಅವರು ಮಾಡಿದ್ದ ಪ್ರಯತ್ನಗಳನ್ನು ಈಚೆಗಷ್ಟೇ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣ್ಯಂ ಕೊಂಡಾಡಿದ್ದರು. ಈ ಹಿನ್ನೆಲೆಯಲ್ಲಿ ಸಂಸದೀಯ ಸಮಿತಿಯು ರಾಜನ್ ಅವರನ್ನು ಸಲಹೆ ನೀಡುವಂತೆ ಆಹ್ವಾನಿಸಿತ್ತು. ಸೆಪ್ಟೆಂಬರ್ 2016ರವರೆಗೆ ಆರ್‌ಬಿಐ ಗವರ್ನರ್ ಆಗಿದ್ದ ರಾಜನ್, ಪ್ರಸ್ತುತ ಚಿಕಾಗೋದ ಬೂತ್ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ರಘುರಾಮ್ ರಾಜನ್ ಅವರು ಅಂದಾಜುಪತ್ರಗಳ ಸಮಿತಿಯ ಅಧ್ಯಕ್ಷ ಮುರಳಿ ಮನೋಹರ ಜೋಶಿ ಅವರಿಗೆ ನೀಡಿರುವ ಲಿಖಿತ ಪ್ರತಿಕ್ರಿಯೆಯ ಮುಖ್ಯಾಂಶಗಳು ಇಲ್ಲಿವೆ...

‘ಹಿಂದಿನ ಯುಪಿಎ ಮತ್ತು ಇಂದಿನ ಎನ್‌ಡಿಎ ಸರ್ಕಾರಗಳಲ್ಲಿ ಆಡಳಿತ ಒಂದೇ ವೇಗದಲ್ಲಿದೆ. ಅನುಮಾನಾಸ್ಪದವಾಗಿ ಕಲ್ಲಿದ್ದಲು ಗಣಿಗಳ ಹಂಚಿಕೆಯಾಗಿರುವುದು ಸೇರಿದಂತೆ ಕೆಲ ವಿದ್ಯಮಾನಗಳಿಂದ ತನಿಖೆ ಮತ್ತು ಬಂಧನ ಭೀತಿಯನ್ನು ಕೆಲವರು ಅನುಭವಿಸುತ್ತಿದ್ದಾರೆ. ಹೀಗಾಗಿ ದೆಹಲಿಯಲ್ಲಿ ಸರ್ಕಾರದ ನಿರ್ಧಾರಗಳು ತಡವಾಗುತ್ತಿವೆ.

‘ಸ್ಥಗಿತಗೊಂಡ ಮತ್ತು ಕಾರ್ಯಾರಂಭ ಮಾಡದ ಯೋಜನೆಗಳ ಅನುಷ್ಠಾನ ಮತ್ತು ನಿರ್ವಹಣಾ ವೆಚ್ಚ ಹೆಚ್ಚಾಗುತ್ತವೆ. ಇಂಥ ಯೋಜನೆಗಳಿಗಾಗಿ ಪಡೆದ ಸಾಲದ ಮರುಪಾವತಿ ದೊಡ್ಡ ಸವಾಲಾಗುತ್ತದೆ. ಭಾರತ ವಿದ್ಯುತ್ ಕೊರತೆ ಎದುರಿಸುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತು. ಆದರೂ ವಿದ್ಯುತ್ ಉತ್ಪಾದನನಾ ಘಟಕಗಳು ನಷ್ಟದಲ್ಲಿಯೇ ನಡೆಯುತ್ತಿವೆ. ಪ್ರಾಮುಖ್ಯತೆ ಪಡೆದುಕೊಂಡಿರುವ ಯೋಜನೆಗಳಿಗೂ ಸಕಾಲದಲ್ಲಿ ಅನುಮೋದನೆ ಸಿಗುತ್ತಿಲ್ಲ. ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆ ಮತ್ತು ವೇಗ ಕಾಲಕ್ಕೆ ತಕ್ಕಂತೆ ಬದಲಾಗಿಲ್ಲ.

‘ಆರ್ಥಿಕ ಪ್ರಗತಿಯ ವೇಗ ಚೆನ್ನಾಗಿದ್ದಾಗ ಅಂದರೆ, 2006ರಿಂದ 2008ರ ಅವಧಿಯಲ್ಲಿ ಮಂಜೂರು ಮಾಡಿದ ಸಾಕಷ್ಟು ಸಾಲಗಳು ಇದೀಗ ಕೆಟ್ಟ ಸಾಲಗಳಾಗಿವೆ. ಇದಕ್ಕೂ ಹಿಂದೆ ವಿದ್ಯುತ್ ಉತ್ಪಾದನಾ ಘಟಕಗಳು ಸೇರಿದಂತೆ ಮೂಲಸೌಕರ್ಯ ಯೋಜನೆಗಳಿಗೆ ನೀಡಿದ್ದ ಸಾಕಷ್ಟು ಸಾಲ ಸಕಾಲಕ್ಕೆ ಮರುಪಾವತಿಯಾಗಿತ್ತು. ಬಹುತೇಕ ಘಟಕಗಳು ಯೋಜನಾವೆಚ್ಚದ ಮಿತಿಯೊಳಗೆ ಪೂರ್ಣಗೊಂಡಿತ್ತು.

‘ದೇಶ ಚೆನ್ನಾಗಿ ನಡೆಯುತ್ತಿದೆ ಎನ್ನುವಾಗಲೇ ಬ್ಯಾಂಕುಗಳು ದಾರಿತಪ್ಪುವುದು. ಹಿಂದೆ ಸಾಧಿಸಿದ ಅಭಿವೃದ್ಧಿಯ ವೇಗದ ಆಧಾರದ ಮೇಲೆ ಭವಿಷ್ಯವನ್ನು ಊಹಿಸಿಕೊಂಡು ಸಾಲಗಳನ್ನು ಕೊಡಲು ಆರಂಭಿಸುತ್ತವೆ. ಪ್ರವರ್ತರ ಬಂಡವಾಳ ಹೂಡಿಕೆಯ ಪ್ರಮಾಣ ಕಡಿಮೆ ಇದ್ದರೂ ಪರವಾಗಿಲ್ಲ ಎಂದುಕೊಂಡು ಪ್ರಾಜೆಕ್ಟ್‌ಗಳ ಮೇಲೆ ಹೆಚ್ಚಿನ ಪಾಲು ಹೊಂದಲು ಬಯಸುತ್ತವೆ. ಕೆಲ ಸಂದರ್ಭಗಳಲ್ಲಿ ಬ್ಯಾಂಕುಗಳು ಪ್ರವರ್ತಕರ ಇನ್‌ವೆಸ್ಟ್‌ಮೆಂಟ್ ಬ್ಯಾಂಕ್‌ಗಳು ಸಲ್ಲಿಸುವ ಯೋಜನಾ ವರದಿಗಳನ್ನು ಸ್ವಸಾಮರ್ಥ್ಯದಿಂದ ಪುನರ್‌ ವಿಮರ್ಶಿಸುವ ಗೋಜಿಗೇ ಹೋಗುವುದಿಲ್ಲ.

‘ಪ್ರವರ್ತಕರೊಬ್ಬರನ್ನು ಓಲೈಸಲು ಬಂದಿದ್ದ ಬ್ಯಾಂಕ್‌ನ ಪ್ರತಿನಿಧಿಗಳು ‘ನಿಮಗೆಷ್ಟು ಹಣ ಬೇಕು ತಿಳಿಸಿ’ ಎಂದು ಚೆಕ್ ಪುಸ್ತಕ ಬೀಸಿದ್ದರಂತೆ. ಈ ಅನುಭವವನ್ನು ಆ ಪ್ರವರ್ತಕರೇ ಖುದ್ದು ನನ್ನೊಡನೆ ಹಂಚಿಕೊಂಡಿದ್ದರು.  ಒಮ್ಮೊಮ್ಮೆ ಅತ್ಯುತ್ಸಾಹದಲ್ಲಿ ನಮ್ಮ ಶಕ್ತಿಯನ್ನು ನಾವು ಅತಿಯಾಗಿ ಅಂದಾಜಿಸಿಕೊಳ್ಳುತ್ತೇವೆ. ಅಭಿವೃದ್ಧಿಶೀಲ ದೇಶಗಳ ವಿಚಾರದಲ್ಲಿ ಇದು ಆವರ್ತವಾಗಿ (ಸೈಕಲ್) ಮರುಕಳಿಸುವ ಐತಿಹಾಸಿಕ ವಿದ್ಯಮಾನವಾಗಿರುತ್ತದೆ. 

‘ಅಭಿವೃದ್ಧಿಯ ವೇಗ ಸದಾ ನಮ್ಮ ನಿರೀಕ್ಷೆಗೆ ಅನುಗುಣವಾಗಿಯೇ ಇರುವುದಿಲ್ಲ. ಹಿಂದೊಮ್ಮೆ ಜಾಗತಿಕ ಆರ್ಥಿಕತೆಯು ಬಹುಕಾಲ ವೇಗದಿಂದ ಮುನ್ನಡೆಯುತ್ತಿತ್ತು. ಆ ವೇಗವನ್ನು ಆರ್ಥಿಕ ಬಿಕ್ಕಟ್ಟು ಮತ್ತು ನಂತರ ಕಾಣಿಸಿಕೊಂಡ ಆರ್ಥಿಕ ಹಿಂಜರಿತಗಳು ತಗ್ಗಿಸಿದವು. ಈ ಬೆಳವಣಿಗೆ ಈಗ ಭಾರತಕ್ಕೂ ವಿಸ್ತರಿಸಿದೆ. ಜಾಗತಿಕ ವಿದ್ಯಮಾನಗಳೊಂದಿಗೆ ಭಾರತದ ಆರ್ಥಿಕತೆಯು ಹೊಂದಿರುವ ಸಂಬಂಧಗಳನ್ನು ಈ ವಿದ್ಯಮಾನ ಎತ್ತಿತೋರಿಸಿದೆ.

‘ಬ್ಯಾಂಕ್‌ಗಳಿಗೆ ಸಾಲಕೋರಿ ಸಲ್ಲಿಸುವ ಯೋಜನಾ ವರದಿಗಳಲ್ಲಿ ‘ಸ್ಥಳೀಯ ಬೇಡಿಕೆ ಚೆನ್ನಾಗಿದೆ’ ಎಂಬ ಪ್ರಸ್ತಾಪ ಇರುತ್ತದೆ. ಆದರೆ ಈಗ ದೇಶೀಯ ಮಾರುಕಟ್ಟೆಯಲ್ಲಿಯೂ ಬೇಡಿಕೆ ಕುಂದುತ್ತಿದೆ. ಇಂಥ ಸಾಲುಗಳು ಅವಾಸ್ತವ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಬ್ಯಾಂಕ್‌ಗಳು ತಪ್ಪು ಮಾಡಲು ಕೇವಲ ಭ್ರಷ್ಟಾಚಾರವೊಂದೇ ಕಾರಣವಾಗಿರುವುದರಿಲ್ಲ. ಬ್ಯಾಂಕ್‌ ಅಧಿಕಾರಿಗಳಲ್ಲಿರುವ ಇರುವ ನಿರುತ್ಸಾಹ, ಮಾಹಿತಿ ಕೊರತೆ ಮತ್ತು ಭ್ರಷ್ಟಾಚಾರಗಳನ್ನು ಪ್ರತ್ಯೇಕಿಸಿ ಕಾರಣ ಮತ್ತು ಪರಿಣಾಮಗಳನ್ನು ವಿಶ್ಲೇಷಿಸುವುದು ಅಷ್ಟು ಸುಲಭವಲ್ಲ.

‘ಸಾಲ ಮಂಜೂರು ಮಾಡುವ ಸಂದರ್ಭದಲ್ಲಿ ಅತಿಆತ್ಮವಿಶ್ವಾಸದಿಂದ ಬೀಗುತ್ತಿದ್ದ ಬ್ಯಾಂಕ್ ಅಧಿಕಾರಿಗಳು ಯೋಜನಾ ವರದಿಗಳನ್ನು ಮರುಪರಿಶೀಲನೆಗೆ ಒಳಪಡಿಸಲು ಹೆಚ್ಚು ಶ್ರಮ ತೆಗೆದುಕೊಳ್ಳಲಿಲ್ಲ. ಕೆಲವರಂತೂ ಸ್ವಂತ ವಿಶ್ಲೇಷಣೆಗೂ ಗಮನ ಕೊಡಲಿಲ್ಲ. ಮರುಪರಿಶೀಲನೆಯ ಹೊಣೆಯನ್ನು ಎಸ್‌ಬಿಐ ಕ್ಯಾಪ್ಸ್ ಮತ್ತು ಐಡಿಬಿಐಗಳಿಗೆ ಕೊಟ್ಟು ಸುಮ್ಮನೆ ಉಳಿದರು. ಯೋಜನಾ ವರದಿಗಳ ಮೌಲ್ಯಮಾಪನದ ಹೊಣೆಯನ್ನೂ ಹೊರಗುತ್ತಿಗೆ ನೀಡುವುದು ನಮ್ಮ ವ್ಯವಸ್ಥೆಯಲ್ಲಿರುವ ದೋಷ. ಇದು ನಮ್ಮ ನಿರ್ಧಾರವನ್ನು ಸಲ್ಲದ ವಿಚಾರಗಳು ಪ್ರಭಾವಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ.

‘ಸರ್ಕಾರಿ ಬ್ಯಾಂಕ್‌ಗಳ ಆಡಳಿತ ಸುಧಾರಣೆಗೆ ತುರ್ತಾಗಿ ಗಮನ ಕೊಡಬೇಕಾದ ಅಗತ್ಯವಿದೆ. ಪ್ರಾಜೆಕ್ಟ್‌ಗಳ ಮೌಲ್ಯಮಾಪನ ಮತ್ತು ನಿಗಾ ವ್ಯವಸ್ಥೆ ಇನ್ನಷ್ಟು ಸುಧಾರಿಸಬೇಕಿದೆ. ಸರ್ಕಾರಿ ಬ್ಯಾಂಕ್‌ಗಳು ಸರ್ಕಾರದಿಂದ ಅಂತರ ಕಾಯ್ದುಕೊಳ್ಳಬೇಕು. ಸಾಲ ವಸೂಲಾತಿ ಇನ್ನಷ್ಟು ಚುರುಕಾಗಿ ನಡೆಯಬೇಕು’.

ರಾಜನ್‌ ಸಲಹೆಗಳು

* ಕೃಷಿ ಕ್ಷೇತ್ರದ ಬೇಕು, ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. ಹಾಗಂತ ಸಾಲಮನ್ನಾವೊಂದೇ ದಾರಿಯಲ್ಲ

* ಕಾಲಕಾಲಕ್ಕೆ ಎನ್‌ಪಿಎ ಸಮಸ್ಯೆ ಬಗ್ಗೆ ಸರ್ಕಾರದ ಗಮನ ಸೆಳೆಯುವುದು ಆರ್‌ಬಿಐ ಜವಾಬ್ದಾರಿ

* ಬ್ಯಾಂಕ್‌ಗಳಿಗೆ ವಂಚನೆ ಪ್ರಕರಣಗಳ ಬಗ್ಗೆ ಪ್ರಧಾನಿ ಕಚೇರಿಗೆ ಮಾಹಿತಿ ನೀಡಲಾಗಿತ್ತು. ಆದರೆ, ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ವಂಚಕರ ವಿರುದ್ಧ ಇನ್ನೂ ಯಾವುದೇ ಕ್ರಮಕೈಗೊಂಡಿಲ್ಲ

* ಸರ್ಕಾರ ಮತ್ತು ತನಿಖಾ ಸಂಸ್ಥೆಗಳು ಎನ್‌ಪಿಎ ಸಮಸ್ಯೆಗೆ ಬ್ಯಾಂಕ್‌ ಅಧಿಕಾರಿಗಳನ್ನು ಹೊಣೆ ಮಾಡುವುದು ಸರಿಯಲ್ಲ

* ಬೃಹತ್‌ ವಾಣಿಜ್ಯ ಸಾಲ ವಸೂಲು ಮಾಡುವ ಹೆಚ್ಚಿನ ಅಧಿಕಾರ ಬ್ಯಾಂಕ್‌ ಅಧಿಕಾರಿಗಳಿಗಿಲ್ಲ.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 2

  Frustrated
 • 0

  Angry

Comments:

0 comments

Write the first review for this !