ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಡಿಕೆಗೆ ಮಹಿಳೆಯರ ಆದ್ಯತೆ ಯಾವುದು? ಚಿನ್ನವೋ? ಮನೆಯೋ?: ಅನರಾಕ್ ವರದಿ ಇಲ್ಲಿದೆ

Last Updated 5 ಮಾರ್ಚ್ 2023, 17:55 IST
ಅಕ್ಷರ ಗಾತ್ರ

ನವದೆಹಲಿ: ಮಹಿಳೆಯರಲ್ಲಿ ಹೆಚ್ಚಿನವರು ಚಿನ್ನದ ಮೇಲೆ ಮೋಹ ಹೊಂದಿರುತ್ತಾರೆ ಎಂಬ ನಂಬಿಕೆಯೊಂದು ಇದೆ. ಆದರೆ ಅನರಾಕ್ ಸಂಸ್ಥೆ ನಡೆಸಿರುವ ಅಧ್ಯಯನವು ಬೇರೆಯದೇ ವಿಚಾರವೊಂದನ್ನು ಹೇಳುತ್ತಿದೆ.

ಮಹಿಳೆಯರ ಪೈಕಿ ಶೇಕಡ 65ರಷ್ಟು ಮಂದಿ ರಿಯಲ್‌ ಎಸ್ಟೇಟ್ ಆಸ್ತಿಗಳಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೊಂದಿದ್ದಾರೆ. ಚಿನ್ನದ ಮೇಲೆ ಹೂಡಿಕೆ ಮಾಡಲು ಆಸಕ್ತಿ ಹೊಂದಿರುವ ಮಹಿಳೆಯರ ಪ್ರಮಾಣ ಶೇಕಡ 8ರಷ್ಟು ಮಾತ್ರ.

ಮಹಿಳೆಯರಲ್ಲಿ ಶೇಕಡ 20ರಷ್ಟು ಮಂದಿ, ಷೇರುಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಅನರಾಕ್ ಸಂಸ್ಥೆಯು ಒಟ್ಟು 5,500 ಮಂದಿಯನ್ನು ಸಮೀಕ್ಷೆಯಲ್ಲಿ ತೊಡಗಿಸಿಕೊಂಡಿತ್ತು. ಈ ಪೈಕಿ ಅರ್ಧದಷ್ಟು ಮಂದಿ ಮಹಿಳೆಯರು. ಮಹಿಳೆಯರ ಪೈಕಿ ಶೇ 7ರಷ್ಟು ಮಂದಿ ಮಾತ್ರ ನಿಶ್ಚಿತ ಠೇವಣಿಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದಾರೆ ಎಂದು ಸಮೀಕ್ಷೆಯ ವರದಿಯು ಹೇಳಿದೆ.

ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರ ಪೈಕಿ ಶೇ 83ರಷ್ಟು ಮಂದಿ, ₹ 45 ಲಕ್ಷಕ್ಕಿಂತ ಹೆಚ್ಚಿನ ಬೆಲೆಯ ಮನೆಗಳನ್ನು ಅರಸುತ್ತಿದ್ದಾರೆ. ₹ 45 ಲಕ್ಷಕ್ಕಿಂತ ಕಡಿಮೆ ಬೆಲೆಯ, ಕೈಗೆಟಕುವ ಬೆಲೆಯ ಮನೆಗಳನ್ನು ಬಯಸುತ್ತಿರುವವರ ಪ್ರಮಾಣ ತೀರಾ ಕಡಿಮೆ ಇದೆ.

‘ಕಳೆದ ಒಂದು ದಶಕದ ಅವಧಿಯಲ್ಲಿ ರಿಯಲ್ ಎಸ್ಟೇಟ್ ಆಸ್ತಿ ಖರೀದಿದಾರರ ವರ್ಗದಲ್ಲಿ ಮಹಿಳೆಯರು ಪ್ರಮುಖ ಸ್ಥಾನ ಪಡೆದಿದ್ದಾರೆ. ಇದು ನಗರ ಪ್ರದೇಶಗಳಲ್ಲಿ ಹೆಚ್ಚಿದೆ’ ಎಂದು ಅನರಾಕ್ ಸಂಸ್ಥೆಯ ಉಪಾಧ್ಯಕ್ಷ ಸಂತೋಷ್ ಕುಮಾರ್ ಹೇಳಿದ್ದಾರೆ.

‘ಮಹಿಳೆಯರ ಬಯಕೆಗಳು ಏನಿರುತ್ತವೆ ಎಂಬುದು, ರಿಯಲ್ ಎಸ್ಟೇಟ್ ಡೆವಲಪರ್‌ಗಳು ಮಾರುಕಟ್ಟೆಗೆ ಏನನ್ನು ತರುತ್ತಾರೆ ಎಂಬುದನ್ನು ತೀರ್ಮಾನಿಸುತ್ತಿವೆ’ ಎಂದು ಕುಮಾರ್ ಹೇಳಿದ್ದಾರೆ. ಮಹಿಳೆಯರು ಈಗ ಆಸ್ತಿಯನ್ನು ಹೂಡಿಕೆಯ ದೃಷ್ಟಿಯಿಂದ ಖರೀದಿಸುತ್ತಿರುವುದೂ ಹೆಚ್ಚುತ್ತಿದೆ.

ಮಹಿಳೆಯರ ಹೆಸರಿನಲ್ಲಿ ಮನೆಗಳನ್ನು ನೋಂದಾಯಿಸಿದರೆ, ಮುದ್ರಾಂಕ ಶುಲ್ಕ ಕಡಿಮೆ ಇರುತ್ತದೆ. ಕೆಲವು ಬ್ಯಾಂಕ್‌ಗಳು ಮಹಿಳೆಯರಿಗೆ ಗೃಹ ಸಾಲಕ್ಕೆ ಕಡಿಮೆ ಬಡ್ಡಿ ದರ ವಿಧಿಸುತ್ತಿವೆ ಎಂದು ಅನರಾಕ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT