ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಣಿಜ್ಯ ಪ್ರಶ್ನೋತ್ತರ: ಮೂಲ ವೇತನ, ಡಿಎ, ಮನೆ ಬಾಡಿಗೆ ಭತ್ಯೆ, ವಿಶೇಷ ಭತ್ಯೆ

Last Updated 31 ಜನವರಿ 2023, 19:12 IST
ಅಕ್ಷರ ಗಾತ್ರ

ಹರಿಣಾಕ್ಷ ನಾವಡ, ಎಣ್ಮಕಜೆ

l ಪ್ರಶ್ನೆ: ನಾನು ನನ್ನ ಹೆಸರಲ್ಲಿರುವ ಜಮೀನೊಂದನ್ನು ಮಾರುವವನಿದ್ದೇನೆ. ನನ್ನಿಂದ ಜಮೀನು ಖರೀದಿಸುವವರು, ನಗದು ರೂಪದಲ್ಲಷ್ಟೇ ವ್ಯವಹರಿಸುವುದಾಗಿ ಹೇಳುತ್ತಿದ್ದಾರೆ. ಒಟ್ಟಾರೆಯಾಗಿ ಜಮೀನು ₹ 25 ಲಕ್ಷಕ್ಕೆ ಮಾರಾಟವಾಗಬಹುದು. ಇದು ನಮ್ಮ ಭಾಗಶಃ ಕೃಷಿ ತೋಟ ಮತ್ತು ಇತರ ಖಾಲಿ ಪ್ರದೇಶವನ್ನು ಒಳಗೊಂಡಿದೆ. ಇದರಲ್ಲಿ ಒಂದಷ್ಟು ಭಾಗ ಮುಂಗಡ ನಗದು ಮತ್ತು ಬಾಕಿ ಮೊತ್ತ ರಿಜಿಷ್ಟ್ರೇಶನ್ ದಿವಸ ಸಂದಾಯ ಮಾಡುವವರಿದ್ದಾರೆ. ಈ ರೀತಿಯ ನಗದು ವ್ಯವಹಾರದಿಂದ ನಮಗೆ ಏನಾದರೂ ತೊಂದರೆ ಇದೆಯೇ? ತೆರಿಗೆ ಅನ್ವಯಿಸುತ್ತದೆಯೇ?

ಉತ್ತರ: ಕೇಂದ್ರ ಸರ್ಕಾರವು ನಗದು ವ್ಯವಹಾರವನ್ನು ಆದಷ್ಟರಮಟ್ಟಿಗೆ ನಿಯಂತ್ರಣದಲ್ಲಿರಿಸುವ ಉದ್ದೇಶದಿಂದ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇಂತಹ ಕ್ರಮಗಳಲ್ಲಿ, ನಗದು ರೂಪದಲ್ಲಿನ ಯಾವುದೇ ಸ್ವೀಕೃತಿಗಳಿಗೆ ನಿರ್ಬಂಧ ಹಾಕಲಾಗಿದೆ.

ಯಾವುದೇ ಒಬ್ಬ ವ್ಯಕ್ತಿ, ಒಂದೇ ವ್ಯವಹಾರಕ್ಕೆ ಸಂಬಂಧಿಸಿ ಮತ್ತು ಒಂದು ನಿರ್ದಿಷ್ಟ ಘಟನೆಗೆ ಸಂಬಂಧಿಸಿ ಒಂದು ದಿನದಲ್ಲಿ ₹ 2 ಲಕ್ಷಕ್ಕಿಂತ ಅಧಿಕ ಮೊತ್ತ ನಗದು ಪಡೆಯುತ್ತಿದ್ದರೆ ಅದು ಆದಾಯ ತೆರಿಗೆಯ ನಿಯಮ ‘269 ಎಸ್ ಟಿ’ಯ ಉಲ್ಲಂಘನೆಯಾಗುತ್ತದೆ. ಇಂತಹ ಉಲ್ಲಂಘನೆಗೆ ಸಂಬಂಧಿಸಿ, ಪಡೆದ ಮೊತ್ತಕ್ಕೆ ಸಮಾನವಾದ ಮೊತ್ತದ ದಂಡ ಇರುತ್ತದೆ. ಇದನ್ನು ನಗದು ಸ್ವೀಕರಿಸಿದ ವ್ಯಕ್ತಿ ಅಥವಾ ಸಂಸ್ಥೆಗಳ ಮೇಲೆ ಹೇರಲಾಗುತ್ತದೆ ಎಂಬುದನ್ನು ಇಲ್ಲಿ ಗಮನಿಸಬೇಕು. ಇಲ್ಲಿ ನಗದು ಪಾವತಿದಾರರಿಗೂ ತಮ್ಮ ವಾಣಿಜ್ಯ ವ್ಯವಹಾರಕ್ಕೆ ಸಂಬಂಧಿಸಿ ಬೇರೆ ನಿಯಮಗಳ ಅಡಿ ಕೆಲವೆಲ್ಲ ಪ್ರತಿಕೂಲ ಪರಿಣಾಮಗಳಿವೆ. ಜಮೀನು ವ್ಯವಹಾರವಲ್ಲದೆ, ಇತರ ಯಾವುದೇ ಕೊಡು–ಕೊಳ್ಳುವ ವ್ಯವಹಾರವಾಗಿದ್ದರೂ (ಉದಾ: ಚಿನ್ನ ಮಾರಾಟ, ಮದುವೆ ಸಮಾರಂಭದ ಸಭಾಂಗಣಕ್ಕಾಗಿರುವ ಬಾಡಿಗೆ ಸ್ವೀಕೃತಿ, ವೈದ್ಯಕೀಯ ವೆಚ್ಚದ ಸ್ವೀಕೃತಿ ಇತ್ಯಾದಿ ದಿನವಹಿ ವ್ಯವಹಾರಗಳು) ಕೇಂದ್ರ ಸರ್ಕಾರ ನಿರ್ದಿಷ್ಟ ವಿನಾಯಿತಿ ಕೊಡದ ಹೊರತು ಇಂತಹ ನಿರ್ಬಂಧಗಳು ಎಲ್ಲದಕ್ಕೂ ಅನ್ವಯವಾಗುತ್ತವೆ.

ಪ್ರಶ್ನೆಯಲ್ಲಿ ಉಲ್ಲೇಖಿಸಿರುವಂತೆ, ಖರೀದಿದಾರರು ಮುಂಗಡ ಮೊತ್ತವನ್ನು ಹಾಗೂ ಬಾಕಿ ಮೊತ್ತವನ್ನು ನಗದು ರೂಪದಲ್ಲೇ ಪಾವತಿಸುವ ಇರಾದೆ ವ್ಯಕ್ತಪಡಿಸಿರುತ್ತಾರೆ. ಮೇಲೆ ಉಲ್ಲೇಖಿಸಿರುವ ನಿಯಮದಂತೆ, ನಿಮ್ಮ ಈ ಹಣಕಾಸು ವ್ಯವಹಾರ ಒಂದು ನಿರ್ದಿಷ್ಟ ಸನ್ನಿವೇಶಕ್ಕೆ ಸಂಬಂಧಿಸಿದ್ದು. ಅಂದರೆ ನಿಮ್ಮ ಜಮೀನನ್ನು ಮಾರಾಟ ಮಾಡುವ ಒಂದು ವ್ಯವಹಾರಕ್ಕೆ ಸಂಬಂಧಿಸಿದ್ದು. ಅದಲ್ಲದೆ ಈ ನಿರ್ದಿಷ್ಟ ವ್ಯವಹಾರಕ್ಕೆ ಸಂಬಂಧಿಸಿ ಪಾವತಿ ಮಾಡಲಾಗುವ ಒಟ್ಟು ಮೊತ್ತವೂ ₹ 2 ಲಕ್ಷ ಮಿರಿದ್ದು. ಹೀಗಾಗಿ, ಈ ಖರೀದಿಗೆ ಸಂಬಂಧಿಸಿ ₹ 2 ಲಕ್ಷಕ್ಕೂ ಹೆಚ್ಚಿನ ಮೊತ್ತವನ್ನು ನಗದು ರೂಪದಲ್ಲಿ ಸ್ವೀಕರಿಸುವುದು ಕಾನೂನಿನ ಉಲ್ಲಂಘನೆಯಾಗುತ್ತದೆ. ಹೀಗಾಗಿ ಡಿ.ಡಿ, ಆರ್‌ಟಿಜಿಎಸ್ ಇತ್ಯಾದಿ ವಿಶ್ವಸನೀಯ ಬ್ಯಾಂಕಿಂಗ್ ಮೂಲಗಳ ಮೂಲಕ ಹಣ ಸ್ವೀಕರಿಸುವ ಬಗ್ಗೆ ಮಾತುಕತೆ ನಡೆಸಿ.

***

ಎಚ್.ಸಿ. ಸುಜಾತ, ಶಿವಮೊಗ್ಗ

l ಪ್ರಶ್ನೆ: ನಾನು ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು ನನ್ನ ತೆರಿಗೆಗೆ ಸಂಬಂಧಿಸಿದ ಮಾಹಿತಿಯನ್ನು ನಿಮಗೆ ಪ್ರತ್ಯೇಕವಾಗಿ ಕಳುಹಿಸಿರುತ್ತೇನೆ. ಮೂಲ ವೇತನ, ಡಿಎ, ಮನೆ ಬಾಡಿಗೆ ಭತ್ಯೆ, ವಿಶೇಷ ಭತ್ಯೆ, ವಾರ್ಡನ್ ಭತ್ಯೆ, ಸಣ್ಣ ಕುಟುಂಬ ಭತ್ಯೆ, ಹಾಗೂ ಇತರ ಭತ್ಯೆಗಳ ವಿವರ ಅದರಲ್ಲಿದೆ. ವಿಮಾ ಮೊತ್ತ, ವೃತ್ತಿ ತೆರಿಗೆ, ಪಿ.ಎಫ್, ಗೋರಕ್ಷಾ ದೇಣಿಗೆ, ಚಿನ್ನದ ಬಾಂಡ್, ಎಸ್‌ಐಪಿ, ಟಾಟಾ ಪವರ್ ಷೇರು ಖರೀದಿ, ಮನೆ ಕಟ್ಟುವ ಉದ್ದೇಶಕ್ಕೆ ಪಡೆದ ವೈಯಕ್ತಿಕ ಸಾಲದ ಮೇಲಣ ಬಡ್ಡಿ (ಮನೆ ಸಾಲವು ಪತಿಯ ಹೆಸರಲ್ಲಿದೆ), ಮಗಳ ಮದುವೆ ಉಡುಗೊರೆ ಹೀಗೆ ಅನೇಕ ಪಾವತಿಗಳನ್ನು ಮತ್ತು ಹೂಡಿಕೆಗಳನ್ನು ಮಾಡಿರುತ್ತೇನೆ. ಕಳೆದ ವರ್ಷದ (2021-22) ಗಳಿಕೆ ರಜಾ ನಗದೀಕರಣಕ್ಕೆ ಸಂಬಂಧಿಸಿ ಪಡೆದ ₹ 30,000ಕ್ಕೆ ತೆರಿಗೆ ಪಾವತಿಸಿರುತ್ತೇನೆ. ಈ ಮೊತ್ತದ ಮೇಲೆ ಪಾವತಿಸಿದ ತೆರಿಗೆಯನ್ನು ಸೆಕ್ಷನ್ 10ರ ಪ್ರಕಾರ ವಿನಾಯಿತಿ ಪಡೆದು ಹಿಂಪಡೆಯಬಹುದೆ? ಮೇಲೆ ಉಲ್ಲೇಖಿಸಿರುವ ಅಂಶಗಳಲ್ಲಿ ಯಾವೆಲ್ಲವನ್ನು ವಿನಾಯಿತಿಗೆ ಪರಿಗಣಿಸಬಹುದು?

ಉತ್ತರ: ನೀವು ನಿಮಗೆ ಸಿಗುವ ಎಲ್ಲಾ ಭತ್ಯೆಗಳು ಹಾಗೂ ವಿವಿಧ ಹೂಡಿಕೆಗಳ ವಿವರ ಕೊಟ್ಟಿರುತ್ತೀರಿ. ಇದರೊಡನೆ, ಇತರ ಕೆಲವೆಲ್ಲ ಪಾವತಿ ವಿವರಗಳೂ ಇವೆ. ಇವನ್ನು ಸ್ಥೂಲವಾಗಿ ನೋಡಿದಾಗ ನೀವು ಈ ಕೆಳಗಿನ ಅಂಶಗಳನ್ನು ಪರಿಗಣಿಸಬೇಕು.

1) ಮನೆ ಬಾಡಿಗೆ ನೀಡುತ್ತಿದ್ದರೆ ಅದಕ್ಕೆ ಸಂಬಂಧಿಸಿ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 10 (13ಎ) ಅಡಿ ವಿನಾಯಿತಿ ಸಿಗುತ್ತದೆ. ಇದು ನಿಮ್ಮ ಮೂಲ ವೇತನ, ಡಿಎ, ಪಾವತಿಸುವ ಬಾಡಿಗೆ ಮೊತ್ತವನ್ನು ಆಧರಿಸಿರುತ್ತದೆ. 2) ವಿಶೇಷ ಭತ್ಯೆ, ಇತರ ಯಾವುದೇ ಭತ್ಯೆಗಳು ತೆರಿಗೆಗೆ ಒಳಪಡುತ್ತವೆ. 3) ವೃತ್ತಿ ತೆರಿಗೆಗೆ ಸಂಬಂಧಿಸಿ ತೆರಿಗೆ ವಿನಾಯಿತಿ ಇದೆ. 4) ಉದ್ಯೋಗಿಯಿಂದ ಕಡಿತಗೊಳಿಸಲಾಗುವ ಪಿಎಫ್ ಮೊತ್ತ, ಸ್ವಂತ ಹಾಗೂ ಕುಟುಂಬದವರ ಹೆಸರಲ್ಲಿ ಕಟ್ಟುವ ವಿಮಾ ಮೊತ್ತದ ಪಾವತಿಗೆ ತೆರಿಗೆ ವಿನಾಯಿತಿ ಸಿಗುತ್ತದೆ. 5) ಯಾವುದೇ ದೇಣಿಗೆ ನೀಡಿದ್ದಲ್ಲಿ, ನಿಮ್ಮ ಪ್ಯಾನ್ ವಿವರದೊಂದಿಗೆ ರಸೀದಿ ಹೊಂದಿದ್ದಲ್ಲಿ ಆದಾಯ ತೆರಿಗೆಯ 80 ಜಿ ಅಡಿ ಮಿತಿ ಆಧಾರಿತ ಕಡಿತ ಸಿಗುತ್ತದೆ. 6) ಚಿನ್ನದ ಬಾಂಡ್, ಷೇರು ಖರೀದಿ ಇತ್ಯಾದಿಗೆ ಸಂಬಂಧಿಸಿ ಯಾವುದೇ ತೆರಿಗೆ ವಿನಾಯಿತಿ ಇಲ್ಲ. ಇವು ಆದಾಯ ವೃದ್ಧಿಗಾಗಿ ಇರುವ ಹೂಡಿಕೆಗಳು, ಮಾರಾಟದಿಂದ ಲಾಭವಾದರೆ ತೆರಿಗೆ ಪಾವತಿಸಬೇಕಾಗುತ್ತದೆ. 7) ಉದ್ಯೋಗದಲ್ಲಿದ್ದಾಗ ರಜಾ ವೇತನ ನಗದೀಕರಿಸಿದ್ದಲ್ಲಿ, ಪಾವತಿಸಲಾಗುವ ಮೊತ್ತಕ್ಕೆ ತೆರಿಗೆ ಇರುತ್ತದೆ. ಆದರೆ, ನೀವು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 89ರ ಅಡಿಯಲ್ಲಿ ‘ಫಾರ್ಮ್ 10 ಇ’ಯನ್ನು ವಿವರ ಸಲ್ಲಿಸುವ ಮೊದಲು ಭರ್ತಿಮಾಡಿ ಒಂದಷ್ಟು ತೆರಿಗೆ ಕಡಿಮೆ ಮಾಡುವ ಅವಕಾಶವಿದೆ. ಇದು ಹಿಂದಿನ ಕೆಲವು ವರ್ಷಗಳಿಗೆ ಸಂಬಂಧಿಸಿದ ರಜಾ ನಗದೀಕರಣ ಆಗಿರಬೇಕು ಹಾಗೂ ಅಗತ್ಯ ವಿವರ ನಿಮ್ಮಲ್ಲಿರಬೇಕು. ಸಮಯ ಮಿತಿ ಕಳೆದಿರುವುದರಿಂದ ವಿವರ ಪರಿಷ್ಕರಿಸುವುದು ಅಸಾಧ್ಯ. 8) ವೈಯಕ್ತಿಕ ಸಾಲಗಳ ಮೇಲಣ ಬಡ್ಡಿ ಪಾವತಿಗೆ ಗೃಹ ಸಾಲದ ಅಡಿ ಬಡ್ಡಿ ವಿನಾಯಿತಿ ಇರುವುದಿಲ್ಲ.

ನಿಮ್ಮ ತೆರಿಗೆಯ ನಿಖರ ಮಾಹಿತಿಗೆ ನಿಮ್ಮ ಸಂಸ್ಥೆಯಿಂದ ಸಿಗುವ ಫಾರಂ 16ರ ಕರಡು ತೆರಿಗೆ ಲೆಕ್ಕದ ವಿವರದೊಂದಿಗೆ ಸಮೀಪದ ತೆರಿಗೆ ಸಲಹೆಗಾರರನ್ನು ಖುದ್ದು ಭೇಟಿಯಾಗಿ. ನಿಖರ ತೆರಿಗೆ ಲೆಕ್ಕಾಚಾರಕ್ಕೆ ಇನ್ನಷ್ಟು ವಿವರಗಳು ಬೇಕಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT