ಶನಿವಾರ, ಮಾರ್ಚ್ 25, 2023
23 °C

ಪ್ರಶ್ನೋತ್ತರ | ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಪ್ರಮೋದ ಶ್ರೀಕಾಂತ ದೈತೋಟ Updated:

ಅಕ್ಷರ ಗಾತ್ರ : | |

ಅವಿನಾಶ್, ಕೋಲಾರ

ಪ್ರಶ್ನೆ: ನಾವು ನಮ್ಮ ಮನೆಯಲ್ಲಿ ತಂದೆ, ತಾಯಿ ಹಾಗೂ ನಮ್ಮ ಕೂಡು ಕುಟುಂಬದ ಜೊತೆ ವಾಸವಾಗಿದ್ದೇವೆ. ನನ್ನ ಪತ್ನಿಗೆ ಆಕೆಯ ಮನೆ ಕಡೆಯಿಂದ ಒಂದಷ್ಟು ಜಮೀನು ಹಾಗೂ ಅದಕ್ಕೆ ಸಂಬಂಧಿಸಿದ ಮನೆಯೊಂದನ್ನು ವರ್ಗಾಯಿಸುವ ಯೋಚನೆ ಇದೆ. ಇದಕ್ಕೆ ಪ್ರತಿಯಾಗಿ ನಾವು ಹಣ ಪಾವತಿಸುತ್ತಿಲ್ಲ. ಆಕೆಯ ತಂದೆ, ತಾಯಿಗೆ ಬೇರೆ ಮಕ್ಕಳು ಇಲ್ಲದ ಕಾರಣ ಮುಂದೆ ಅವರೊಡನೆ ನಾವು ವಾಸವಾಗಲಿದ್ದೇವೆ. ಈ ವರ್ಗಾವಣೆಗೆ ಸಂಬಂಧಿಸಿ ಆದಾಯ ತೆರಿಗೆ ಪಾವತಿಸಬೇಕಾದ ಪ್ರಮೇಯ ಇರುತ್ತದೆಯೇ?

ಉತ್ತರ: ನಿಮ್ಮ ಪತ್ನಿಯ ಮನೆ ಕಡೆಯ ಜಮೀನು ಹಾಗೂ ಅದಕ್ಕೆ ಸಂಬಂಧಿಸಿದ ಆಸ್ತಿಯನ್ನು ನಿಮ್ಮ ಅಥವಾ ನಿಮ್ಮ ಪತ್ನಿಯ ಹೆಸರಲ್ಲಿ ವರ್ಗಾಯಿಸಿಕೊಳ್ಳುವುದಕ್ಕೆ ತೆರಿಗೆ ಅನ್ವಯಿಸುತ್ತದೆಯೇ ಎಂದು ಕೇಳಿರುತ್ತೀರಿ. ಸಾಮಾನ್ಯ ಆದಾಯ ತೆರಿಗೆ ಕಾನೂನಿನ ಪ್ರಕಾರ, ಒಬ್ಬ ವ್ಯಕ್ತಿಯು ಒಂದು ವರ್ಷದಲ್ಲಿ ಸ್ವೀಕರಿಸಿದ ಎಲ್ಲಾ ಉಡುಗೊರೆಗಳ ಮೌಲ್ಯವು ₹ 50,000 ಮೀರಿರದಿದ್ದರೆ ಸಂಪೂರ್ಣವಾಗಿ ತೆರಿಗೆ ವಿನಾಯಿತಿ ಸಿಗುತ್ತದೆ. ಒಂದು ವೇಳೆ ಅಂತಹ ಉಡುಗೊರೆಗಳ ಒಟ್ಟು ಮೌಲ್ಯವು ₹ 50,000 ಮೀರಿದರೆ, ಸ್ವೀಕರಿಸಿದ ಉಡುಗೊರೆಗಳ ಒಟ್ಟು ಮೊತ್ತವು ಯಾವುದೇ ವಿನಾಯಿತಿ ಮಿತಿ ಇಲ್ಲದೆ ತೆರಿಗೆಗೆ ಒಳಪಡುತ್ತದೆ.

ಆದರೆ, ಆದಾಯ ತೆರಿಗೆ ಕಾನೂನಿನ ಸೆಕ್ಷನ್ 56(2)ರ ಪ್ರಕಾರ ಇಬ್ಬರು ನಿಕಟ ಸಂಬಂಧಿಗಳ ನಡುವಿನ ಉಡುಗೊರೆಗಳಿಗೆ ಸಂಬಂಧಿಸಿದಂತೆ ತೆರಿಗೆ ವಿನಾಯಿತಿ ಇದೆ. ಇದರ ಪರಿಣಾಮವಾಗಿ, ಸಮೀಪದ ಸಂಬಂಧಿಗಳಿಗೆ ಮಾಡಿದ ಯಾವುದೇ ಸ್ವತ್ತಿನ (ಚರ ಅಥವಾ ಸ್ಥಿರ) ಉಡುಗೊರೆಯನ್ನು ಮೇಲಿನ ಯಾವುದೇ ಮಿತಿಯಿಲ್ಲದೆ, ಸ್ವೀಕರಿಸುವವರಿಗೆ ತೆರಿಗೆಯಿಂದ ಸಂಪೂರ್ಣವಾಗಿ ವಿನಾಯಿತಿ ಸಿಗುತ್ತದೆ. ನಿಕಟ ಸಂಬಂಧಿಗಳ ಪಟ್ಟಿಯಲ್ಲಿ ಪೋಷಕರು, ಪತಿ-ಪತ್ನಿ, ಒಡಹುಟ್ಟಿದವರು... ಹೀಗೆ ಇನ್ನೂ ಅನೇಕ ಸಂಬಂಧಗಳನ್ನು ಉಲ್ಲೇಖಿಸಲಾಗಿದೆ. ಹೀಗಾಗಿ ನಿಮ್ಮ ಪತ್ನಿ ಅವರ ತಂದೆ-ತಾಯಿಯಿಂದ ಉಡುಗೊರೆ ಪಡೆದ ಸಂದರ್ಭದಲ್ಲಿ ಯಾವುದೇ ತೆರಿಗೆ ಇರುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಕಾನೂನು ಪ್ರಕಾರ ಇರುವ ದಾಖಲೆ ಇಟ್ಟುಕೊಳ್ಳಿ ಹಾಗೂ ಅಗತ್ಯ ಮುದ್ರಾಂಕ ಶುಲ್ಕ ಇತ್ಯಾದಿಗಳನ್ನು ಭರಿಸಿ.

ಮುಂದೆ ಯಾವುದೇ ಸಂದರ್ಭದಲ್ಲಿ ನೀವು ಅಂತಹ ಆಸ್ತಿಯನ್ನು ಮಾರಾಟ ಮಾಡುವುದಿದ್ದರೆ ಬಂಡವಾಳ ಲಾಭದ ಮೇಲೆ ತೆರಿಗೆ ಸಹಜವಾಗಿ ಪಾವತಿಸಬೇಕಾಗುತ್ತದೆ. ಆದಾಯ ತೆರಿಗೆಯ ಉದ್ದೇಶಕ್ಕಾಗಿ ಹಿಂದಿನ ಮಾಲೀಕರು ಆಸ್ತಿಗಾಗಿ ಪಾವತಿಸಿದ ಮೊತ್ತವನ್ನು ನಿಮ್ಮ ವೆಚ್ಚವೆಂದು ಪರಿಗಣಿಸಿ ಲಾಭ–ನಷ್ಟ ಲೆಕ್ಕ ಹಾಕಲಾಗುತ್ತದೆ. ನಿಮ್ಮ ಹಾಗೂ ಹಿಂದಿನ ಮಾಲೀಕರು ಹೊಂದಿದ ಮಾಲೀಕತ್ವದ ಅವಧಿ 24 ತಿಂಗಳುಗಳಿಗಿಂತ ಹೆಚ್ಚಿದ್ದರೆ, ದೀರ್ಘಾವಧಿ ಹಾಗೂ ಅದಕ್ಕಿಂತ ಕಡಿಮೆ ಇದ್ದರೆ ಅಲ್ಪಾವಧಿ ಲಾಭ-ನಷ್ಟವೆಂದು ವಿಂಗಡಿಸಿ ತೆರಿಗೆ ಲೆಕ್ಕ ಹಾಕಲಾಗುತ್ತದೆ. ಬಂಡವಾಳ ಲಾಭದ ಮೇಲೆ ಶೇಕಡ 20ರಷ್ಟು ತೆರಿಗೆ ಇರುತ್ತದೆ.

****

ದಿಲೀಪ್ ಕುಮಾರ್, ರಾಜಾಜಿನಗರ, ಬೆಂಗಳೂರು

ಪ್ರಶ್ನೆ: ನಾನು ಕ್ರಿಪ್ಟೊಕರೆನ್ಸಿಯಲ್ಲಿ ವ್ಯವಹರಿಸಬೇಕೆಂದಿದ್ದೇನೆ. ಕಳೆದ ವರ್ಷದ ಬಜೆಟ್ಟಿನಲ್ಲಿ ಇದಕ್ಕೆ ತೆರಿಗೆ ನಿಯಮ ತರಲಾಗಿದೆ ಎಂದು ತಿಳಿದಿದ್ದೇನೆ. ಇದರಲ್ಲಿ ವ್ಯವಹರಿಸುವುದು ಸೂಕ್ತವೇ? ಇದಕ್ಕೆ ಸಂಬಂಧಿಸಿದ ತೆರಿಗೆ ಬಗ್ಗೆ ತಿಳಿಸಿ.

ಉತ್ತರ: ಜಾಗತಿಕ ಡಿಜಿಟಲ್ ಹಣಕಾಸು ವ್ಯವಹಾರವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರವು ಕ್ರಿಪ್ಟೊಕರೆನ್ಸಿಗಳಿಗೆ ಸಂಬಂಧಿಸಿದಂತೆ ಅನೇಕ ತೆರಿಗೆ ನಿಯಮಗಳನ್ನು ಜಾರಿಗೊಳಿಸಿದೆ. ಜನರ ಸಾಮಾನ್ಯ ಗ್ರಹಿಕೆಯ ಪ್ರಕಾರ ಇದು ಕ್ರಿಪ್ಟೊಕರೆನ್ಸಿಗೆ ವಿಧಿಸಿರುವ ತೆರಿಗೆ ಎಂದು ಕಂಡುಬಂದರೂ ಇದನ್ನು ಆದಾಯ ತೆರಿಗೆ ಕಾನೂನಿನ ಅಡಿಯಲ್ಲಿ ಕ್ರಿಪ್ಟೊ ಎನ್ನುವ ಹೆಸರು ಉಲ್ಲೇಖಿಸದೆ ‘ವರ್ಚುವಲ್ ಡಿಜಿಟಲ್ ಆಸ್ತಿ’ (ವಿಡಿಎ) ಎಂಬ ಹೆಸರಿನಡಿ ತೆರಿಗೆಗೆ ಒಳಪಡಿಸಲಾಗಿದೆ. ಇದರ ಅಡಿ ಕ್ರಿಪ್ಟೊ ಮಾತ್ರವೇ ಅಲ್ಲದೆ, ನಾನ್-ಫಂಜಿಬಲ್ ಟೋಕನ್ (ಎನ್‌ಎಫ್‌ಟಿ), ಡಿಜಿಟಲ್ ಆರ್ಟ್ ಇತ್ಯಾದಿಗಳನ್ನೂ ತೆರಿಗೆ ವ್ಯಾಪ್ತಿಯಲ್ಲಿ ತರಲಾಗಿದೆ.

ಈ ವರ್ಷದ ಏಪ್ರಿಲ್ 1ರಿಂದ ವರ್ಚುವಲ್ ಡಿಜಿಟಲ್ ಆಸ್ತಿಯ ಮಾರಾಟ ಅಥವಾ ವರ್ಗಾವಣೆಯ ಮೇಲಿನ ಯಾವುದೇ ಲಾಭವು ಶೇ 30ರ ಮೂಲ ದರದಲ್ಲಿ ತೆರಿಗೆಗೆ ಒಳಪಟ್ಟಿರುತ್ತದೆ. ಕ್ರಿಪ್ಟೊಕರೆನ್ಸಿ ಇತ್ತೀಚಿಗೆ ಪ್ರವರ್ಧಮಾನಕ್ಕೆ ಬಂದಿರುವ ವ್ಯವಹಾರ ಮಾಧ್ಯಮ. ಇದನ್ನು ಡಿಜಿಟಲ್ ಆಸ್ತಿಯ ವರ್ಗದಲ್ಲಿ ತೆರಿಗೆಗೆ ಒಳಪಡಿಸಲಾಗಿದೆ. ಯಾವುದೇ ವ್ಯಕ್ತಿ ಕ್ರಿಪ್ಟೊಕರೆನ್ಸಿಯನ್ನು ಮಾರಾಟ ಮಾಡಿದರೆ, ಗಳಿಸಿದ ಲಾಭದ ಮೇಲೆ ಶೇ 30ರ ದರದಲ್ಲಿ ಆದಾಯ ತೆರಿಗೆ ಪಾವತಿಸಬೇಕಾಗುತ್ತದೆ. ಆದರೆ, ತೆರಿಗೆಗೆ ಒಳಪಡುವ ಇತರ ಆದಾಯಗಳಿಗೆ ಇರುವಂತೆ, ಕ್ರಿಪ್ಟೊಕರೆನ್ಸಿ ಆದಾಯದಿಂದ ನೀವು ಯಾವುದೇ ನಷ್ಟ ಅಥವಾ ಖರ್ಚುಗಳನ್ನು ಸರಿದೂಗಿಸಿ ಉಳಿದ ಮೊತ್ತದ ಮೇಲಷ್ಟೇ ತೆರಿಗೆ ಪಾವತಿಸುವ ಅವಕಾಶ ಇರುವುದಿಲ್ಲ. ಖರೀದಿ ಮೌಲ್ಯವನ್ನು ಹೊರತುಪಡಿಸಿ ಮಾರಾಟದ ಬೆಲೆಯಿಂದ ಇತರ ಯಾವುದೇ ವೆಚ್ಚ ಸರಿದೂಗಿಸಲು ಆಸ್ಪದವಿಲ್ಲ. ನೀವು ಯಾವುದೇ ಅಲ್ಪಾವಧಿಯ ಅಥವಾ ದೀರ್ಘಾವಧಿಯ ನಷ್ಟವನ್ನು ಅನುಭವಿಸಿದ್ದರೆ, ವಿಡಿಎ ವರ್ಗಾವಣೆಯಿಂದ ಉಂಟಾಗುವ ಆದಾಯದಿಂದ ಅದನ್ನು ಮುಂದಿನ ವರ್ಷಗಳಲ್ಲಿ ಸರಿಹೊಂದಿಸಲು ಅನುಮತಿ ನೀಡಲಾಗುವುದಿಲ್ಲ. ನೀವು ಡಿಜಿಟಲ್ ಆಸ್ತಿಗಳನ್ನು ಉಡುಗೊರೆಯಾಗಿ ನೀಡಿದರೂ ಅದನ್ನು ದಾನ ಮಾಡುವವರ ಅಥವಾ ಸ್ವೀಕರಿಸುವವರ ಕೈಯಲ್ಲಿ ತೆರಿಗೆ ವಿಧಿಸಲಾಗುತ್ತದೆ. 

ಒಂದು ದೃಷ್ಟಿಯಲ್ಲಿ ಷೇರು ಮಾರುಕಟ್ಟೆಗಿಂತ ಎಷ್ಟೋ ಪಾಲು ಹೆಚ್ಚು ಲಾಭವನ್ನು ಈ ವ್ಯವಹಾರವು ನೀಡುವಂತೆ ಕಂಡರೂ ನಮ್ಮ ದೇಶದಲ್ಲಿ ಪ್ರಸ್ತುತ ಕ್ರಿಪ್ಟೊಕರೆನ್ಸಿ ವ್ಯವಹಾರಕ್ಕೆ ಸಂಬಂಧಿಸಿ ನಿರ್ದಿಷ್ಟ ಕಾನೂನು ಇಲ್ಲ. ತೆರಿಗೆ ಕಾನೂನಿನ ಅಡಿ ಮಾತ್ರ ಹಣದ ವ್ಯವಹಾರವನ್ನು ನಿಯಂತ್ರಿಸುವ ದೃಷ್ಟಿಯಿಂದ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಕ್ರಿಪ್ಟೊಕರೆನ್ಸಿಗಳಲ್ಲಿ ಹೂಡಿಕೆ ಮಾಡುವುದು, ಅವುಗಳಲ್ಲಿ ವ್ಯವಹಾರ ನಡೆಸುವುದರಲ್ಲಿ ಬಹಳಷ್ಟು ಅಪಾಯ ಇದೆ. ಇಲ್ಲಿ ಆಗಬಹುದಾದ ವಂಚನೆಗೆ ಕಾನೂನಿನ ಅಡಿಯಲ್ಲಿ ನ್ಯಾಯ ಕೇಳಲು ಅವಕಾಶ ಇಲ್ಲ. ಇಲ್ಲಿ ವ್ಯವಹರಿಸುವುದು ವೈಯಕ್ತಿಕ ನಿರ್ಧಾರಕ್ಕೆ ಬಿಟ್ಟದ್ದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು