ಸೋಮವಾರ, ಸೆಪ್ಟೆಂಬರ್ 20, 2021
21 °C

ದುಡಿಮೆ ಆರಂಭಿಸಿದವರಿಗೆ ಹಣಕಾಸಿನ ಪಾಠಗಳು

ಪ್ರೀತಾ ವಾಲಿ Updated:

ಅಕ್ಷರ ಗಾತ್ರ : | |

Prajavani

ಮೊದಲ ವೇತನ ಪಡೆದ ದಿನವನ್ನು ನಾನು ಈಗಲೂ ನೆನಪಲ್ಲಿ ಇಟ್ಟುಕೊಂಡಿದ್ದೇನೆ. ‘ಇದು ನನ್ನ ದುಡ್ಡು’ ಎಂಬ ಭಾವನೆಯು ನನ್ನಲ್ಲಿ ‘ನಾನು ಸ್ವತಂತ್ರಳು’ ಎಂಬ ಭಾವವನ್ನೂ ಮೂಡಿಸಿತ್ತು. ಆ ಹಣದಲ್ಲಿ ಒಂದಿಷ್ಟು ವಸ್ತುಗಳನ್ನು ಖರೀದಿಸಬೇಕು, ಸ್ನೇಹಿತರ ಜೊತೆ ಸಿನಿಮಾ ನೋಡಬೇಕು ಎಂದು ಬಯಸಿದ್ದೆ. ಅವೆಲ್ಲವನ್ನೂ ಮಾಡಿದೆ ಸಹ. ಆದರೆ, ನನ್ನ ಕುಟುಂಬ ಕಷ್ಟ ಅನುಭವಿಸಿದ್ದ ದಿನಗಳು ಇದ್ದಕ್ಕಿದ್ದಂತೆ ನನಗೆ ನೆನಪಾದವು.

ಖುಷಿಯ ಜೀವನಕ್ಕೆ ಒಗ್ಗಿಹೋದವರು ನಾವಾಗಿದ್ದರೆ, ನಮಗೆ ಹಣಕಾಸಿನ ವಿಚಾರದಲ್ಲಿ ಸರಿಯಾದ ಹೆಜ್ಜೆಗಳನ್ನು ಇರಿಸಲು ತುಸು ಹೆಚ್ಚು ಸಮಯ ಬೇಕಾಗಬಹುದು. ನನ್ನ ಕುಟುಂಬಕ್ಕೆ ಬಂದಿದ್ದ ಕಷ್ಟದ ದಿನಗಳ ನೆನಪು ಮಾಸಿದ್ದಿದ್ದರೆ, ನಾನು ಸಂಪಾದಿಸಿದ್ದನ್ನೆಲ್ಲ ಖರ್ಚು ಮಾಡುತ್ತಿದ್ದೆ. ಹಾಗೆ ಮಾಡಿದ್ದಕ್ಕೆ ನಂತರ ಒಂದು ದಿನ ಮರುಗುತ್ತಿದ್ದೆ.

ನಾವು ವೃತ್ತಿಯನ್ನು ಆರಂಭಿಸಿದಾಗ ನಮ್ಮಲ್ಲಿ ಬಹಳ ಉತ್ಸಾಹ ಇರುತ್ತದೆ, ಏನೇನೋ ಮಾಡಬೇಕು ಅಂದುಕೊಂಡಿರುತ್ತೇವೆ. ಆದರೆ, ವೈಯಕ್ತಿಕ ಹಣಕಾಸಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದೆಯೇ ನಾವು ನಮ್ಮ ಹೊಸ ಜೀವನ ಆರಂಭಿಸುವ ಕಾರಣ, ಉಳಿತಾಯದ ಪ್ರವೃತ್ತಿಯನ್ನು ಆರಂಭದಿಂದಲೇ ಬೆಳೆಸಿಕೊಳ್ಳಲು ಮರೆಯುತ್ತೇವೆ. ಉಳಿತಾಯ ಮಾಡುವುದು ಮತ್ತು ಹೂಡಿಕೆ ಮಾಡುವುದನ್ನು ಕಲಿಯುವ ಮೊದಲೇ ತಪ್ಪುತಪ್ಪಾಗಿ ಹಣ ಖರ್ಚು ಮಾಡುವುದನ್ನು ಕಲಿತುಬಿಟ್ಟಿರುತ್ತೇವೆ. ಇದು ನಮ್ಮನ್ನು ಸಾಲದ ಸುಳಿಗೆ ಸಿಲುಕಿಸಬಹುದು.

ನಮ್ಮ ದುಡಿಮೆಯ ಹಣವನ್ನು ನಾವು ಖುಷಿಯಿಂದ ಖರ್ಚು ಮಾಡಬಾರದು ಎಂದಲ್ಲ. ಹಣಕಾಸಿನ ತೀರ್ಮಾನಗಳು ಸರಿಯಾಗಿದ್ದರೆ ಖುಷಿಯಿಂದ ಖರ್ಚು ಮಾಡಬಹುದು. ಜೊತೆಯಲ್ಲೇ, ಹಣಕಾಸಿನ ವಿಚಾರದಲ್ಲಿ ನೆಮ್ಮದಿಯನ್ನೂ ಕಾಣಬಹುದು. ವೈಯಕ್ತಿಕ ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ಮೂಲಭೂತ ಅಂಶಗಳು ಇಲ್ಲಿವೆ. ಯುವಕರು, ಈಗಷ್ಟೇ ದುಡಿಮೆ ಆರಂಭಿಸಿರುವವರು ಹೂಡಿಕೆ ಮಾಡಲು ಸಾಕಷ್ಟು ಸಮಯ ಇರುತ್ತದೆ. ತೆರಿಗೆ ಉಳಿತಾಯ ಮಾಡುವ ಒಂದೇ ಉದ್ದೇಶದಿಂದ ಹಣಕಾಸಿನ ಉತ್ಪನ್ನಗಳನ್ನು ಖರೀದಿಸಬೇಡಿ. ಹಾಗಾದರೆ, ಯುವಕರು, ಯುವತಿಯರು ಮಾಡಬೇಕಿರುವುದು ಏನನ್ನು?

* ನಿಮ್ಮದೇ ಆದ ಬಜೆಟ್ ಸಿದ್ಧ ಮಾಡಿಕೊಳ್ಳಿ. ದುಡ್ಡು ಖರ್ಚು ಮಾಡಬೇಕಿರುವುದು ಯಾವುದಕ್ಕೆ, ಆದರೆ ಖರ್ಚಾಗುತ್ತಿರುವುದು ಯಾವುದಕ್ಕೆ ಎಂಬುದರ ಸ್ಪಷ್ಟ ಚಿತ್ರಣ ಇದರಿಂದ ಸಿಗುತ್ತದೆ. ನಿಮ್ಮ ವೇತನದ ಶೇ 30ರಷ್ಟನ್ನು ಹೂಡಿಕೆಗಾಗಿ ತೆಗೆದಿರಿಸಿ. ಸುತ್ತಾಟಕ್ಕೆ, ಮನರಂಜನೆಗೆ ಎಂದು ಒಂದಿಷ್ಟು ಮೊತ್ತ ತೆಗೆದಿರಿಸಿ. ನಂತರ, ಉಳಿದ ಮೊತ್ತವನ್ನು ಮನೆಯ ಖರ್ಚುಗಳಿಗೆ ಇರಿಸಿಕೊಳ್ಳಬಹುದು. ಇಷ್ಟು ಮಾಡಿದರೆ, ಇದನ್ನು ಕಟ್ಟುನಿಟ್ಟಾಗಿ ಮುಂದುವ ರಿಸಿಕೊಂಡು ಹೋದರೆ, ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳುವುದರಿಂದ ತಪ್ಪಿಸಿಕೊಳ್ಳಬಹುದು. ಹಣಕಾಸಿನ ವಿಚಾರದಲ್ಲಿ ಕೆಟ್ಟ ತೀರ್ಮಾನಗಳು ನಮ್ಮಿಂದ ಆಗದಂತೆಯೂ ಇದು ನಿಗಾ ವಹಿಸುತ್ತದೆ.

* ಅಗತ್ಯ ಪ್ರಮಾಣದಲ್ಲಿ ವಿಮೆಯನ್ನು ಮಾಡಿಸಿಟ್ಟುಕೊಳ್ಳಿ. ನಿಮ್ಮನ್ನು ಅವಲಂಬಿಸಿದವರು ಇದ್ದಾರೆ ಎಂದಾದರೆ ಒಂದು ಜೀವವಿಮೆ ಬೇಕು. ಹಾಗೆಯೇ, ನಿಮ್ಮ ಕುಟುಂಬದವರಿಗಾಗಿ ಒಂದು ಆರೋಗ್ಯ ವಿಮೆ ಬೇಕು. ನಿಮಗೆ ನಿಮ್ಮ ಕಂಪನಿಯ ಕಡೆಯಿಂದ ವಿಮಾ ಸೌಲಭ್ಯ ಇದ್ದರೂ, ವೈಯಕ್ತಿಕವಾಗಿ ಒಂದು ವಿಮೆ ಖರೀದಿಸಿಕೊಳ್ಳಿ. ಉದ್ಯೋಗ ನಷ್ಟವಾದರೆ ಅಥವಾ ಉದ್ಯೋಗ ಬದಲಾಯಿಸಬೇಕಾದ ಸಂದರ್ಭ ಎದುರಾದರೆ, ಅದೇ ಹೊತ್ತಿನಲ್ಲಿ ಕುಟುಂಬದಲ್ಲಿ ಯಾರಾದರೂ ಅನಾರೋಗ್ಯಕ್ಕೆ ತುತ್ತಾದರೆ ಹಣಕಾಸಿನ ಸಮಸ್ಯೆ ಎದುರಾಗದಂತೆ ಈ ವಿಮೆ ನೋಡಿಕೊಳ್ಳುತ್ತದೆ. 

* ಹಣಕಾಸಿನ ಗುರಿಗಳನ್ನು ಒಂದೆಡೆ ಬರೆದಿಟ್ಟುಕೊಳ್ಳಿ. ಅವುಗಳನ್ನು ಕಿರು, ಮಧ್ಯಮ ಮತ್ತು ದೀರ್ಘ ಅವಧಿಯದ್ದಾಗಿ ವಿಭಾಗ ಮಾಡಿಕೊಳ್ಳಿ. ಹೊಸ ಕನ್ನಡಕ ಖರೀದಿಸುವುದು ಕಿರು ಅವಧಿಯ ಗುರಿ. ಹೊಸ ವಾಹನ ಖರೀದಿ ಮಧ್ಯಮ ಅವಧಿಯ ಗುರಿ. ಮಕ್ಕಳ ಕಾಲೇಜು ಶಿಕ್ಷಣಕ್ಕೆ ಹಣ ಕೂಡಿಡುವುದು ದೀರ್ಘಾವಧಿಯ ಗುರಿ. ಇದು ಹೊಸದಾಗಿ ಉದ್ಯೋಗ ಆರಂಭಿಸಿದವರು ಮಾಡಬೇಕಾದ ಮೊದಲ ಕೆಲಸ. ಏಕೆಂದರೆ, ಗುರಿಯನ್ನು ಆಧರಿಸಿ ಹೂಡಿಕೆ ಕುರಿತ ತೀರ್ಮಾನಗಳನ್ನು ಕೈಗೊಳ್ಳಬೇಕಾಗುತ್ತದೆ. ಇನ್ನು ಮೂರು ತಿಂಗಳಲ್ಲಿ ಒಂದು ಮೊಬೈಲ್‌ ಖರೀದಿಸಬೇಕು ಎಂದಾದರೆ, ಅದಕ್ಕೆ ಬೇಕಾಗುವ ಹಣವನ್ನು ಒಂದು ಬ್ಯಾಂಕ್‌ ಖಾತೆಯಲ್ಲಿ ಇರಿಸಬಹುದು. ನಿಮ್ಮ ನಿವೃತ್ತಿಗೆ ಹಣ ಕೂಡಿಡಬೇಕು ಎಂದಾದರೆ, ಆ ಹಣವನ್ನು ಮ್ಯೂಚುವಲ್‌ ಫಂಡ್‌ಗಳಲ್ಲಿ ಅಥವಾ ಪಿಪಿಎಫ್‌ನಲ್ಲಿ ಇರಿಸಬೇಕು. 

* ಎಫ್‌.ಡಿ., ಮ್ಯೂಚುವಲ್‌ ಫಂಡ್‌, ರಿಯಲ್‌ ಎಸ್ಟೇಟ್‌, ಚಿನ್ನ, ಈಕ್ವಿಟಿ, ಇಎಲ್‌ಎಸ್‌ಎಸ್‌, ಪಿಪಿಎಫ್, ಎನ್‌ಪಿಎಸ್‌... ಇವೆಲ್ಲವುಗಳ ಬಗ್ಗೆ ಒಂಚೂರಾ ದರೂ ಓದಿಕೊಳ್ಳಿ. ಆಗ ನಿಮಗೆ ನಿಮ್ಮ ಹಣವನ್ನು ಬೇರೆ ಬೇರೆ ಕಡೆಗಳಲ್ಲಿ ಹೂಡಿಕೆ ಮಾಡಬೇಕಾದುದರ ಮಹತ್ವ ಏನು ಎಂಬುದು ಗೊತ್ತಾಗುತ್ತದೆ.

* ಹಣಕಾಸಿನ ಯೋಜನೆಗಳನ್ನು ರೂಪಿಸುವಾಗ ಹಣದುಬ್ಬರವನ್ನು ಅಲಕ್ಷ್ಯ ಮಾಡಬೇಡಿ. ಭಾರತದ್ದು ಬೆಳವಣಿಗೆ ಹೊಂದುತ್ತಿರುವ ಅರ್ಥವ್ಯವಸ್ಥೆ. ಹಾಗಾಗಿ ಇಲ್ಲಿ ಹಣದುಬ್ಬರ ಇದ್ದೇ ಇರುತ್ತದೆ. ಇಂದು ದೇಶದಲ್ಲಿ ಹಣದುಬ್ಬರದ ಪ್ರಮಾಣ ಶೇ 7ರಷ್ಟು ಇದೆ. ಆದರೆ, ವಾಸ್ತವದಲ್ಲಿ ಆರೋಗ್ಯ, ಶಿಕ್ಷಣ ಸೇವೆಗಳ ಹಣದುಬ್ಬರ ದರವು ಎರಡಂಕಿಯಲ್ಲಿ ಇದೆ. ಮಕ್ಕಳ ಶಿಕ್ಷಣಕ್ಕೆ ಬೇಕಿರುವ ಹಣದ ಮೊತ್ತ ಲೆಕ್ಕಹಾಕುವಾಗ ಶೇ 7ರ ಹಣದುಬ್ಬರ ದರವನ್ನು ಮನಸ್ಸಿನಲ್ಲಿ ಇರಿಸಿಕೊಂಡರೆ, ನಮ್ಮ ಲೆಕ್ಕವೇ ತಪ್ಪಾಗುತ್ತದೆ. ಕೊನೆಯಲ್ಲಿ, ಮಕ್ಕಳ ಶಿಕ್ಷಣಕ್ಕಾಗಿ ಸಾಲ ಮಾಡಬೇಕಾಗುತ್ತದೆ.

* ಕೊನೆಯ ಮಾತು; ಆದರೆ, ಬಹುಮುಖ್ಯವಾದುದು. ಸಾಲದ ಸುಳಿಯಲ್ಲಿ ಯಾವತ್ತೂ ಸಿಲುಕಬೇಡಿ. ಇಂದು ಸಾಲವು ಬಹಳ ಸುಲಭವಾಗಿ ಸಿಗುತ್ತಿದೆ. ಹಾಗಾಗಿಯೇ ಅದು ಹೆದರಿಕೆಯನ್ನೂ ಹುಟ್ಟಿಸುತ್ತಿದೆ! ಸಾಲದ ಕಂತುಗಳನ್ನು ಸರಿಯಾಗಿ ಪಾವತಿಸದೆ ಇದ್ದರೆ ನಮ್ಮ ಸಿಬಿಲ್‌ ಅಂಕಗಳ ಮೇಲೆ ಬಹುಕಾಲದವರೆಗೆ ನಕಾರಾತ್ಮಕ ಪರಿಣಾಮ ಉಂಟಾಗಿರುತ್ತದೆ ಎಂಬುದನ್ನು ಮನಸ್ಸಿನಲ್ಲಿ ಇರಿಸಿಕೊಳ್ಳಬೇಕು.

ನಾವು ಕಷ್ಟಪಟ್ಟು ದುಡಿದ ಹಣವನ್ನು ಹೂಡಿಕೆ ಮಾಡುವ ಮೊದಲು, ಆ ಹೂಡಿಕೆಯ ಬಗ್ಗೆ ಒಂದಿಷ್ಟು ಓದಿಕೊಂಡರೆ ಸಂಪತ್ತು ಸೃಷ್ಟಿಗೆ ಸಹಾಯವಾಗುತ್ತದೆ. ಅದು ನಮ್ಮನ್ನು ಆರ್ಥಿಕವಾಗಿ ಸುದೃಢವಾಗಿ ಇರಿಸುತ್ತದೆ.

ಲೇಖಕಿ: ವೈಯಕ್ತಿಕ ಹಣಕಾಸು ಮಾರ್ಗದರ್ಶಕಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು