ಮಂಗಳವಾರ, ಮಾರ್ಚ್ 21, 2023
28 °C

ಹಣವೆಂಬುದು ಮಾರ್ಗ, ಅದೇ ಗುರಿಯಲ್ಲ

ಕಾರ್ತಿಕ್ ರಾಮನ್ Updated:

ಅಕ್ಷರ ಗಾತ್ರ : | |

Prajavani

ಉತ್ತಮವಾದ ಮತ್ತು ಸಂತೃಪ್ತಿಯ ಜೀವನ ಸಾಗಿಸಲು ಹಣದ ಜೊತೆಗೆ ವಿವೇಕಯುತವಾದ ಸಂಬಂಧವನ್ನು ಹೊಂದುವುದು ಅಗತ್ಯ. ನಮ್ಮ ಆರ್ಥಿಕ ಗುರಿಗಳು, ಅಗತ್ಯಗಳು ಮತ್ತು ಬಯಕೆಗಳು ಯಾವುವು ಎಂಬುದನ್ನು ಗುರುತಿಸುವುದು ಹಾಗೂ ನಂತರ ಅವುಗಳನ್ನು ಸಾಧಿಸಲು ಅಗತ್ಯವಿರುವ ಹಣಕಾಸು ಯೋಜನೆ ರೂಪಿಸುವುದು ಅತ್ಯಂತ ಅಗತ್ಯ. ಸರಿಯಾದ ಯೋಜನೆ ಇಲ್ಲದಿದ್ದರೆ ಗೊತ್ತುಗುರಿ ಇಲ್ಲದ ಗಳಿಕೆ ಮತ್ತು ವೆಚ್ಚದ ಜೀವನಶೈಲಿಗೆ ಸಿಲುಕುತ್ತೀರಿ.

ನಮ್ಮ ಸುತ್ತಲಿನ ಪರಿಸರವನ್ನು ಅರ್ಥ ಮಾಡಿಕೊಳ್ಳುವ ಹೊತ್ತಿನಿಂದಲೇ ನಮಗೆ ಜೀವನದ ಸ್ಪರ್ಧೆಯಲ್ಲಿ ಭಾಗಿಯಾಗುವುದಕ್ಕೂ ತರಬೇತಿ ಶುರು ಮಾಡಿರುತ್ತಾರೆ. ಪುಟ್ಟ ಮಕ್ಕಳು ಪ್ರತಿಷ್ಠಿತ ಶಾಲೆಗಳಲ್ಲಿ ನರ್ಸರಿಗೆ ಪ್ರವೇಶ ಪಡೆಯಲು ಕಠಿಣ ತರಬೇತಿ ಪಡೆದುಕೊಳ್ಳುತ್ತಾರೆ. ಅಲ್ಲಿಂದಲೇ ಜೀವನದಲ್ಲಿ ‘ಸ್ಫರ್ಧೆ’ ಶುರುವಾಗಿರುತ್ತದೆ. ಅಲ್ಲಿಂದ ಮುಂದೆ, ಜೀವನದಲ್ಲಿ ಉತ್ತಮ ಸಾಧನೆ ಮಾಡುವುದಕ್ಕಾಗಿ ನಿರಂತರ ಹೋರಾಟ ನಡೆಯುತ್ತಲೇ ಇರುತ್ತದೆ. ಹೋರಾಡುತ್ತಲೇ ಇರಬೇಕು ಎಂದು ಶಿಕ್ಷಕರು ಪದೇ ಪದೇ ಹೇಳುತ್ತಿರುತ್ತಾರೆ, ಪಾಲಕರು ಅದನ್ನೇ ನಾಟಕೀಯವಾಗಿ ಹೇಳುತ್ತಿರುತ್ತಾರೆ ಮತ್ತು ಆತ್ಮೀಯರು ಎಂದು ಹೇಳಿಕೊಳ್ಳುವ ಪ್ರತಿಯೊಬ್ಬರೂ ಅದನ್ನೇ ಒತ್ತಿ ಒತ್ತಿ ಹೇಳುತ್ತಾರೆ. ಆಧುನಿಕ ಕಾಲದ ಪದಕೋಶದ ಪ್ರಕಾರ ‘ಸಾಧನೆ ಚೆನ್ನಾಗಿರಬೇಕು’ ಅಂದರೆ ‘ಚೆನ್ನಾಗಿ ಗಳಿಸಬೇಕು’ ಎಂದೇ ಅರ್ಥ.

‘ಜೋರಾಗಿ ಓಡು, ಇಲ್ಲದಿದ್ದರೆ ಹಿಂದೆ ಬೀಳುವೆ’ ಎಂದು ಸ್ಪರ್ಧೆಯ ವಿಚಾರವಾಗಿ ಪ್ರಜ್ಞೆಯೊಂದನ್ನು ನಮ್ಮ ಬಾಲ್ಯದಲ್ಲೇ ಮೂಡಿಸಿರುತ್ತಾರೆ. ಇದು ನಮ್ಮ ಜೀವನದ ಉದ್ದಕ್ಕೂ ಚಾಲ್ತಿಯಲ್ಲಿರುತ್ತದೆ. ನಾವು ಯಾವುದರ ಬೆನ್ನತ್ತಿ ಓಡುತ್ತಿದ್ದೇವೆ ಎಂಬ ಬಗ್ಗೆ ನಾವು ಎಂದಿಗೂ ಸಾವಧಾನದಿಂದ ವಿಶ್ಲೇಷಣೆ ಮಾಡುವುದಿಲ್ಲ. ಜೀವನ ಸಾಗಿಸಲು ಬೇಕಿರುವ ಹಣವೇ ಜೀವನದ ಗುರಿಯೂ ಆಗಿಬಿಡುತ್ತದೆ. ಹೀಗಾಗಿ, ನಾವು ಯಾವಾಗಲೂ ‘ಇನ್ನಷ್ಟು ಹಣ ಬೇಕು’ ಎಂದು ಹಂಬಲಿಸುತ್ತೇವೆ.
ಮಹತ್ವಾಕಾಂಕ್ಷಿ ಆಗಿರುವುದರಲ್ಲಿ ಯಾವ ತಪ್ಪೂ ಇಲ್ಲ. ಆದರೆ ‘ಇನ್ನಷ್ಟು’ ಪಡೆಯಬೇಕು ಎಂಬ ಹಂಬಲವು ಮನುಷ್ಯನ ದಾರಿ ತಪ್ಪಿಸಬಹುದು, ಹಣಕಾಸಿನ ವಿಚಾರವಾಗಿ ವಿಕ್ಷಿಪ್ತ ನಡವಳಿಕೆಗಳಿಗೆ ಕಾರಣವಾಗಬಹುದು. ಹಣಕ್ಕೆ ಸಂಬಂಧಿಸಿದ ಹವ್ಯಾಸಗಳನ್ನು ಜನರು ನಿಯಂತ್ರಿಸಿದರೆ ಇಂತಹ ನಡವಳಿಕೆಗಳು ಹುಟ್ಟುವುದಿಲ್ಲ – ವಿಪರೀತ ವೆಚ್ಚ ಮಾಡುವುದು, ಹಣ ಕೂಡಿಡುವ ಬಗ್ಗೆ ಅತಿ ವ್ಯಾಮೋಹ ಇತ್ಯಾದಿಯನ್ನು ನಿಯಂತ್ರಿಸಬೇಕು.

ಉತ್ತಮವಾದ ಮತ್ತು ಸಂತೃಪ್ತಿಯ ಜೀವನ ಸಾಗಿಸಲು ಹಣದ ಜೊತೆಗೆ ವಿವೇಕಯುತವಾದ ಸಂಬಂಧವನ್ನು ಹೊಂದುವುದು ಅಗತ್ಯ. ನಮ್ಮ ಆರ್ಥಿಕ ಗುರಿಗಳು, ಅಗತ್ಯಗಳು ಮತ್ತು ಬಯಕೆಗಳು ಯಾವುವು ಎಂಬುದನ್ನು ಗುರುತಿಸುವುದು ಹಾಗೂ ನಂತರ ಅವುಗಳನ್ನು ಸಾಧಿಸಲು ಅಗತ್ಯವಿರುವ ಹಣಕಾಸು ಯೋಜನೆ ರೂಪಿಸುವುದು ಅತ್ಯಂತ ಅಗತ್ಯ. ಸರಿಯಾದ ಯೋಜನೆ ಇಲ್ಲದಿದ್ದರೆ ಗೊತ್ತುಗುರಿ ಇಲ್ಲದ ಗಳಿಕೆ ಮತ್ತು ವೆಚ್ಚದ ಜೀವನಶೈಲಿಗೆ ಸಿಲುಕುತ್ತೀರಿ. ಅಗತ್ಯವಿದ್ದಾಗ ಹಣದ ಕೊರತೆಗೆ ಸಿಲುಕುತ್ತೀರಿ. ಈ ಕೆಳಗಿನ ಅಂಶಗಳು ಹಣಕಾಸಿನ ಯೋಜನೆ ಆರಂಭಿಸಲು ನಿಮಗೆ ಸಹಾಯ ಮಾಡಬಲ್ಲವು:

* ಮೊದಲ ಹೆಜ್ಜೆಯಾಗಿ, ಜೀವನದ ಆರ್ಥಿಕ ಗುರಿಗಳನ್ನು ಗುರುತಿಸಿ ಮತ್ತು ಅವುಗಳನ್ನು ಆದ್ಯತೆಯ ಅನುಸಾರವಾಗಿ ಪಟ್ಟಿ ಮಾಡಿಕೊಳ್ಳಿ. ಉದಾಹರಣೆಗೆ, ಬಹುತೇಕರಿಗೆ ನಿವೃತ್ತಿ ನಂತರದ ಜೀವನಕ್ಕೆ ಯೋಜನೆ ರೂಪಿಸುವುದು ಅತ್ಯಂತ ಮುಖ್ಯ ಆದ್ಯತೆಯಾಗಿರುತ್ತದೆ. ಇನ್ನು ಕೆಲವರಿಗೆ ಪ್ರಮುಖ ಗುರಿಗಳೆಂದರೆ, ಮಕ್ಕಳ ಶಿಕ್ಷಣ ಮತ್ತು ವಿವಾಹಕ್ಕೆ ಹಣ ಹೊಂದಿಸುವುದು, ಮನೆ ಖರೀದಿಗೆ ಹಣ ಒಗ್ಗೂಡಿಸುವುದು ಮುಖ್ಯವಾಗುತ್ತದೆ.

* ಎರಡನೆಯ ಹಂತವೆಂದರೆ ಹಣಕಾಸಿನ ಗುರಿಗಳನ್ನು ‘ಅಗತ್ಯ’ಗಳು ಮತ್ತು ‘ಬಯಕೆ’ಗಳು ಎಂಬ ಎರಡು ವಿಭಾಗಗಳನ್ನಾಗಿ ಮಾಡುವುದು. ಅಗತ್ಯಗಳು ಎಂದರೆ ನಿವೃತ್ತಿ ನಂತರದ ಜೀವನಕ್ಕೆ ರೂಪಿಸುವ ಯೋಜನೆಯಂಥವು. ಬಯಕೆಗಳು ಎಂದರೆ ಜೀವನದ ಕೆಲವು ನಿರೀಕ್ಷೆಗಳು. ಇವು ಜೀವನ ನಡೆಸಲು ಅನಿವಾರ್ಯವೇನೂ ಅಲ್ಲ. ಉದಾಹರಣೆಗೆ,
ವಿಶ್ವ ಪರ್ಯಟನೆ ಮಾಡುವುದು.

* ಮುಂದಿನದ್ದು, ಗುರಿಗಳನ್ನು ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಗುರಿಗಳು ಎಂದು ವರ್ಗೀಕರಿಸುವುದು. ಅಲ್ಪಾವಧಿ ಗುರಿಗಳು ಅಂದರೆ ಒಂದು ವರ್ಷದಲ್ಲಿ ಸಾಧಿಸಬೇಕಾದ ಗುರಿಗಳು; ಮಧ್ಯಮಾವಧಿ ಗುರಿಗಳು ಅಂದರೆ ಮೂರರಿಂದ ಐದು ವರ್ಷಗಳ ಅವಧಿ ಇರುವಂಥವು; ದೀರ್ಘಾವಧಿ ಗುರಿಗಳು ಎಂದರೆ ಕನಿಷ್ಠ 10 ವರ್ಷಗಳ ಕಾಲಾವಕಾಶ ಇರುವಂಥವು.

* ಗುರಿಗಳನ್ನು ಪಟ್ಟಿ ಮಾಡಿಕೊಂಡ ನಂತರದಲ್ಲಿ ನಿಮ್ಮ ಕುಟುಂಬದ ಆದಾಯ, ವೆಚ್ಚ ಮತ್ತು ಉಳಿತಾಯದ ಬಗ್ಗೆ ಒಂದಿಷ್ಟು ವಿಚಾರ ಅರ್ಥವಾಗಿರುತ್ತದೆ. ಗುರಿ ಸಾಧಿಸಲು ಉಳಿತಾಯ, ಹೂಡಿಕೆಗಳು ಅತ್ಯಂತ ಅಗತ್ಯವಾದವು. ಈ ನಿಟ್ಟಿನಲ್ಲಿ ನಿಮಗೆ ನೆರವಿಗೆ ವೃತ್ತಿಪರ ಹಣಕಾಸು ಸಲಹೆಗಾರರನ್ನು ಸಂಪರ್ಕಿಸುವುದು ಒಳ್ಳೆಯದು.

* ಅಂತಿಮವಾಗಿ, ಜೀವನದಲ್ಲಿ ಬದಲಾಗುವ ಸಂದರ್ಭಗಳಿಗೆ ಅನುಗುಣವಾಗಿ ನಿಮ್ಮ ಹಣಕಾಸು ಯೋಜನೆಯನ್ನು ಆಗಾಗ ಪುನರ್‌ ಪರಿಶೀಲಿಸುವುದು ಮತ್ತು ಅಗತ್ಯವಾದ ಪರಿಷ್ಕರಣೆಗಳನ್ನು ಮಾಡುವುದು ಬಹಳ ಅಗತ್ಯ. ಹೀಗೆ ಮಾಡುವುದರಿಂದ ನಿಮ್ಮ ಯೋಜನೆಗಳು ಹಳಿ ತಪ್ಪದಂತೆ ನೋಡಿಕೊಳ್ಳಲು ಸಾಧ್ಯವಾಗುತ್ತದೆ.

ಹಣಕಾಸಿನ ವಿಚಾರವಾಗಿ ಯೋಜನೆಯೊಂದನ್ನು ಹೊಂದುವುದರಿಂದ, ಹಣಕಾಸಿನ ವಿಷಯಗಳ ಮೇಲೆ ನಿಮಗೆ ನಿಯಂತ್ರಣ ಇರುತ್ತದೆ. ಆಗ ‘ಇನ್ನಷ್ಟು ಹಣ ಸಂಪಾದಿಸಬೇಕು’ ಎಂಬ ಬಯಕೆಯ ಸುತ್ತಲಿನ ಆತಂಕವನ್ನು ತಗ್ಗಿಸಲು ಸಾಧ್ಯವಾಗುತ್ತದೆ. ‘ಇನ್ನಷ್ಟು ಹಣ’ವನ್ನು ಬೆನ್ನತ್ತುವ ಸಂದರ್ಭದಲ್ಲಿ ಮನುಷ್ಯ ಅಧಃಪತನದ ಸುಳಿಯಲ್ಲಿ ಸಿಲುಕುವ ಸಾಧ್ಯತೆಯೂ ಇರುತ್ತದೆ. ನೀವು ‘ಇನ್ನಷ್ಟು ಹಣ’ ಗಳಿಸಿದಂತೆಲ್ಲ ಇನ್ನಷ್ಟು ವೆಚ್ಚ ಮಾಡಲು ಆರಂಭಿಸುತ್ತೀರಿ. ಇನ್ನಷ್ಟು ಹಣ ವೆಚ್ಚ ಮಾಡುವುದು ಅಭ್ಯಾಸವಾದಂತೆಲ್ಲ ನಿಮಗೆ ಇನ್ನಷ್ಟು ಹಣ ಬೇಕಾಗುತ್ತದೆ!

ಸಂತೋಷದ ಹಾಗೂ ಸಂತೃಪ್ತಿಯ ಬದುಕು ಸಾಗಿಸಲು ನೆರವಾಗುವ ಕನಸುಗಳು ಮತ್ತು ಗುರಿಗಳನ್ನು ಹೊಂದಿರಿ. ಅಂತಹ ಬದುಕು ಸಾಗಿಸಲು ಹಣವೆಂಬುದು ಒಂದು ಸಾಧನ ಎಂದು ಕಾಣಿ. ಆದರೆ, ಹಣ ಸಂಪಾದಿಸುವುದೇ ಜೀವನದ ಗುರಿ ಎಂದು ಭಾವಿಸದಿರಿ.

(ಲೇಖಕ ಏಜೀಸ್ ಫೆಡರಲ್‌ ಲೈಫ್‌ ಇನ್ಶುರೆನ್ಸ್ ಕಂಪನಿಯ ಉತ್ಪನ್ನಗಳ ವಿಭಾಗದ ಮುಖ್ಯಸ್ಥ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು