ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡವಾಳ ಮಾರುಕಟ್ಟೆ: ಮಕ್ಕಳಿಗೆ ಹಣಕಾಸಿನ ಪಾಠ ಹೇಗೆ?

Last Updated 1 ಜನವರಿ 2023, 21:13 IST
ಅಕ್ಷರ ಗಾತ್ರ

ಮಕ್ಕಳಿಗೆ ನಾವು ಹಣಕಾಸು ನಿರ್ವಹಣೆಯ ಪಾಠವನ್ನು ಎಷ್ಟು ಬೇಗ ಕಲಿಸುತ್ತೇವೆಯೋ ಅಷ್ಟು ಉತ್ತಮ ರೀತಿಯಲ್ಲಿ ಅವರು ಹಣದ ಮೌಲ್ಯ ಅರ್ಥ ಮಾಡಿಕೊಳ್ಳುತ್ತಾರೆ. ವಯಸ್ಸಿಗೆ ಅನುಗುಣವಾಗಿ ಮಕ್ಕಳಿಗೆ ಹಣಕಾಸು ನಿರ್ವಹಣೆಯನ್ನು ತಿಳಿಸಿಕೊಡಬೇಕಾಗುತ್ತದೆ. ಹಾಗಾದರೆ ಯಾವ ವಯಸ್ಸಿಗೆ ಏನು ಹೇಳಬೇಕು? ಇಲ್ಲಿದೆ ಒಂದಿಷ್ಟು ಮಾಹಿತಿ.

5ರಿಂದ 8 ವರ್ಷದ ಮಕ್ಕಳಿಗೆ ಹಣಕಾಸು ಪಾಠ: ಐದರಿಂದ ಎಂಟು ವರ್ಷದ ನಡುವಿನ ಮಕ್ಕಳಿಗೆ ವಿವಿಧ ನೋಟು, ನಾಣ್ಯಗಳನ್ನು ಗುರುತಿಸುವುದನ್ನು ಕಲಿಸುವ ಜೊತೆಗೆ ಎಣಿಕೆ ಮಾಡುವುದನ್ನು ಹೇಳಿಕೊಡಿ. ಮಕ್ಕಳು ಒಳ್ಳೆಯ ಕೆಲಸಗಳನ್ನು ಮಾಡಿದಾಗ, ಉತ್ತಮ ಅಂಕ ಗಳಿಸಿದಾಗ, ಅಲ್ಪ ಮೊತ್ತದ ಹಣ ನೀಡುವ ಮೂಲಕ ಅವರ ಒಳ್ಳೆಯ ಕಾರ್ಯಗಳಿಗೆ ಪ್ರೋತ್ಸಾಹ ನೀಡಿ.

ಅಂಗಡಿಗೆ ಕರೆದುಕೊಂಡು ಹೋಗಿ, ಒಂದಿಷ್ಟು ಹಣ ನೀಡಿ ವಸ್ತುಗಳನ್ನು ಖರೀದಿಸಲು ತಿಳಿಸಿ. ಇದರಿಂದ ಮಕ್ಕಳಿಗೆ ಯಾವುದನ್ನು ಖರೀದಿಸಬೇಕು ಮತ್ತು ಯಾವುದನ್ನು ಖರೀದಿಸಬಾರದು ಎನ್ನುವ ಗ್ರಹಿಕೆ ಬರುತ್ತದೆ. ಮಕ್ಕಳಿಗೆ ಒಂದು ಪಿಗ್ಗಿ ಬಾಕ್ಸ್ (ಹುಂಡಿ) ಕೊಡಿಸಿ ಅದರಲ್ಲಿ ಹಣ ಸಂಗ್ರಹಿಸಲು ಪ್ರೋತ್ಸಾಹ ಕೊಡಿ. ಹೀಗೆ ಮಾಡುವುದರಿಂದ ಉಳಿತಾಯದ ಮೂಲಕ ಹೇಗೆ ದುಡ್ಡು ನಮ್ಮ ಬಳಿ ಇರುವಂತೆ ನೋಡಿಕೊಳ್ಳಬಹುದು ಎಂಬ ಅಂದಾಜು ಸಿಗುತ್ತದೆ. ಮಕ್ಕಳು ಸಿಕ್ಕಿದ್ದನ್ನೆಲ್ಲ ಖರೀದಿಸಬೇಕು ಎಂದು ಹಠ ಹಿಡಿದಾಗ ನಿಮ್ಮ ಬಳಿ ಇಷ್ಟೇ ಹಣ ಇದೆ ಎಂದು ಹೇಳಿ ಅತ್ಯಗತ್ಯ ಎನ್ನಿಸುವ ವಸ್ತುಗಳನ್ನು ಮಾತ್ರ ಕೊಡಿಸಿ. ಇದರಿಂದ ಮಕ್ಕಳು ಕೊಳ್ಳುಬಾಕತನದಿಂದ ದೂರ ಉಳಿಯುತ್ತಾರೆ.

9ರಿಂದ 12 ವರ್ಷದ ಮಕ್ಕಳಿಗೆ: ಮಕ್ಕಳು 9ನೇ ವಯಸ್ಸಿಗೆ ಬರುವಷ್ಟರಲ್ಲಿ ಒಂದಷ್ಟು ಪ್ರಾಪಂಚಿಕ ಜ್ಞಾನ ಬಂದಿರುತ್ತದೆ. ಅವರನ್ನು ಬ್ಯಾಂಕಿಗೆ ಕರೆದುಕೊಂಡು ಹೋಗಿ ಅದು ಹೇಗೆ ಕಾರ್ಯನಿರ್ವಹಣೆ ಮಾಡುತ್ತದೆ ಎನ್ನುವುದನ್ನು ವಿವರಿಸಿ. ಜೊತೆಗೆ ಒಂದು ಮೈನರ್ ಅಕೌಂಟ್ ಆರಂಭಿಸಿ. ಬ್ಯಾಂಕ್ ಪಾಸ್ ಬುಕ್, ಖಾತೆಯ ಜಮಾ–ಖರ್ಚು ವಿವರ, ಚೆಕ್ ಬುಕ್, ಡಿಮ್ಯಾಂಡ್ ಡ್ರಾಫ್ಟ್... ಹೀಗೆ ಬ್ಯಾಂಕ್‌ನ ವಿವಿಧ ವಹಿವಾಟುಗಳ ಬಗ್ಗೆಯೂ ತಿಳಿವಳಿಕೆ ಕೊಡಿ. ಅವರಿಗೆ ಸದ್ಯದಲ್ಲಿ ಖರೀದಿ ಮಾಡ
ಬೇಕಾಗಿರುವ ವಸ್ತುಗಳ ಪಟ್ಟಿ ಮಾಡಲು ಹೇಳಿ. ಆ ಖರೀದಿ ಗುರಿಗಳಿಗೆ ಅನುಗುಣವಾಗಿ ಉಳಿತಾಯ ಮಾಡುವುದು ಹೇಗೆ ಎನ್ನುವುದನ್ನು ಕಲಿಸಿಕೊಡಿ. ಮಕ್ಕಳಿಗೆ ಉಳಿತಾಯದ ಪಾಠ ಹೇಳಿಕೊಡುವ ಜೊತೆಗೆ ಸತ್ಕಾರ್ಯಗಳಿಗೆ ಕೈಲಾದ ಮಟ್ಟಿಗೆ ಧನ ಸಹಾಯ ಮಾಡಬೇಕು ಎನ್ನುವುದನ್ನು ತಿಳಿಸಿಕೊಡಿ. ಯಾವ ಒಳ್ಳೆಯ ಕೆಲಸಕ್ಕೆ ಮಕ್ಕಳು ಧನ ಸಹಾಯ ಮಾಡಲು ಬಯಸುತ್ತಾರೋ ಅದರಂತೆ ನಡೆದುಕೊಳ್ಳಲು ಪ್ರೇರೇಪಿಸಿ.

13ರಿಂದ 18 ವರ್ಷ: ಮಕ್ಕಳ ಹೆಸರಿನಲ್ಲಿ ತೆರೆದಿರುವ ಮೈನರ್ ಬ್ಯಾಂಕ್ ಖಾತೆಯನ್ನು ಅವರಿಗೆ ನಿರ್ವಹಣೆ ಮಾಡಲು ಬಿಡಿ. ಉಳಿತಾಯ ಖಾತೆ, ಚಾಲ್ತಿ ಖಾತೆ, ನಿಶ್ಚಿತ ಠೇವಣಿ, ರೆಕರಿಂಗ್ ಡೆಪಾಸಿಟ್ ಮುಂತಾದ ಸಾಂಪ್ರದಾಯಿಕ ಹೂಡಿಕೆ ವಿಧಾನಗಳನ್ನು ಪರಿಚಯ ಮಾಡಿಕೊಡಿ. ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಹೇಗೆ ನಿರ್ವಹಿಸಬೇಕು ತಿಳಿಸಿಕೊಡಿ.

ಅವರ ಶಿಕ್ಷಣ ವೆಚ್ಚ, ದೈನಂದಿನ ಖರ್ಚು ಇತ್ಯಾದಿಗಳನ್ನು ಖಾತೆ ಮೂಲಕವೇ ನಿರ್ವಹಿಸಲು ಸೂಚಿಸಿ. ನಾವು ಹೆಚ್ಚು ಕೌಶಲ ಹೊಂದಿದ್ದರೆ ಹೇಗೆ ಹೆಚ್ಚು ಹಣ ಗಳಿಸಬಹುದು ಎನ್ನುವುದರ ಅರಿವು ಮೂಡಿಸಿ. ವಿವಿಧ ಕೌಶಲಗಳಿಂದ ಒಬ್ಬ ವ್ಯಕ್ತಿ ಹೇಗೆ ಹಲವು ಆದಾಯ ಮೂಲಗಳನ್ನು ಕಂಡುಕೊಳ್ಳಬಹುದು ಎಂಬುದನ್ನು ವಿವರಿಸಿ.

18 ವರ್ಷ ತುಂಬಿದಾಗ ಈ ಕೆಲಸ ಮಾಡಿ: ಮಕ್ಕಳಿಗೆ 18 ವರ್ಷ ತುಂಬಿದ ತಕ್ಷಣ ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್, ಚಾಲನಾ ಪರವಾನಗಿ, ಆಧಾರ್ ಮುಂತಾದ ಪ್ರಮುಖ ಗುರುತಿನ ದಾಖಲೆಗಳನ್ನು ಮಾಡಿಸಿಕೊಡಿ. ಕೆಲವು ದಾಖಲೆಗಳನ್ನು ಮಕ್ಕಳು ಚಿಕ್ಕವರಿದ್ದಾಗಲೇ ಪಡೆದಿದ್ದರೆ ಅವುಗಳಲ್ಲಿ ಇರುವ ಮಾಹಿತಿಯನ್ನು ಪರಿಷ್ಕರಿಸಿ. ಕೆವೈಸಿ ದಾಖಲೆಗಳನ್ನು ನೀಡುವ ಮೂಲಕ ಮಕ್ಕಳ ಮೈನರ್ ಉಳಿತಾಯ ಖಾತೆಯನ್ನು ರೆಗ್ಯೂಲರ್‌ ಖಾತೆಯನ್ನಾಗಿ ಪರಿವರ್ತಿಸಿ.

ಪ್ಯಾನ್ ಸಂಖ್ಯೆಗಾಗಿ ಅರ್ಜಿ ಸಲ್ಲಿಸಿ ಅದನ್ನು ಪಡೆದುಕೊಳ್ಳಿ. ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಸಕ್ರಿಯಗೊಳಿಸಿಕೊಡುವುದರ ಜೊತೆಗೆ ಸಣ್ಣ ಮಟ್ಟದಲ್ಲಿ ಷೇರು ಹೂಡಿಕೆ ಆರಂಭಿಸಲು ನೆರವಾಗುವಂತೆ ಒಂದು ಡಿ-ಮ್ಯಾಟ್ ಖಾತೆ ಮಾಡಿಸಿ. ಅದು ಬೇಡ ಎಂದಾದಲ್ಲಿ ಮ್ಯೂಚುವಲ್ ಫಂಡ್ ಹೂಡಿಕೆಗೆ ನೆರವಾಗುವ ಆ್ಯಪ್‌ಗಳ ಬಗ್ಗೆ ತಿಳಿಸಿಕೊಟ್ಟು ಅದರಲ್ಲಿ ಎಸ್ಐಪಿ ಮೂಲಕ ಹೂಡಿಕೆ ಮಾಡಲು ಪ್ರೇರೇಪಿಸಿ.

(ಲೇಖಕ ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT