ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕಾಸು ಸಾಕ್ಷರತೆ: ಶ್ರೀಮಂತಿಕೆಗೆ ನೆರವಾಗುವ ಸಾಲ

Last Updated 30 ಅಕ್ಟೋಬರ್ 2022, 20:33 IST
ಅಕ್ಷರ ಗಾತ್ರ

ಸಾಲ ಅಂದರೆ ಸಾಕು ಅನೇಕರು ಭಯ ಬೀಳುತ್ತಾರೆ. ಸಾಲದಿಂದ ಹೊರಬರುವುದು ಹೇಗೆ ಎನ್ನುವುದನ್ನು ತಿಳಿಸುವ ಅನೇಕ ಪುಸ್ತಕಗಳು, ವಿಡಿಯೊಗಳು, ಟಿ.ವಿ. ಕಾರ್ಯಕ್ರಮಗಳು ಇವೆ. ಆದರೆ, ನಿಮಗೆ ಗೊತ್ತಾ? ಸರಿಯಾದ ರೀತಿಯಲ್ಲಿ ಸಾಲವನ್ನು ಬಳಸಿಕೊಂಡರೆ ಅದರಿಂದ ಸಂಪತ್ತು ಸೃಷ್ಟಿಸಲು ಸಾಧ್ಯವಿದೆ. ಸಂಪತ್ತು ವೃದ್ಧಿಗೆ ಸಾಲ ಮಾಡುವುದನ್ನು ಹಣಕಾಸು ನಿರ್ವಹಣೆಯ ಪರಿಭಾಷೆಯಲ್ಲಿ ‘ಲೀವರೇಜಿಂಗ್’ ಎಂದು ಕರೆಯುತ್ತಾರೆ. ಲೀವರೇಜಿಂಗ್ ಹೇಗೆ ಕೆಲಸ ಮಾಡುತ್ತದೆ, ಅದರಿಂದ ನೀವು ಹೇಗೆ ಪ್ರಯೋಜನ ಪಡೆಯಬಹುದು?

ಲೀವರೇಜಿಂಗ್ ಅಂದರೆ: ಸಾಲವಾಗಿ ಪಡೆದ ಹಣವನ್ನು ಸದ್ವಿನಿಯೋಗ ಮಾಡಿಕೊಂಡು, ಸಂಪತ್ತು ಸೃಷ್ಟಿಸಿ, ಶ್ರೀಮಂತಿಕೆಯತ್ತ ಹೆಜ್ಜೆ ಇರಿಸುವ ಪ್ರಕ್ರಿಯೆಯನ್ನು ‘ಲೀವರೇಜಿಂಗ್’ ಎಂದು ಕರೆಯಬಹುದು. ಇಲ್ಲಿ ಸಾಲವಾಗಿ ಪಡೆದ ಬಂಡವಾಳಕ್ಕೆ ಪಾವತಿಸುವ ಬಡ್ಡಿಗಿಂತ ಹೆಚ್ಚಿನ ಲಾಭವನ್ನು ಕಂಡುಕೊಳ್ಳುವುದು ಬಹಳ ಮುಖ್ಯ. ಉದಾಹರಣೆಗೆ, ಸುಮಾರು ₹ 1 ಕೋಟಿ ಮೌಲ್ಯದ ವಾಣಿಜ್ಯ ಆಸ್ತಿಯೊಂದು ಮಾರಾಟಕ್ಕೆ ಲಭ್ಯವಿದ್ದು ಅದನ್ನು ಖರೀದಿಸಬೇಕು ಎನ್ನುವ ಬಯಕೆ ನಿಮ್ಮದು ಎಂದುಕೊಳ್ಳಿ. ಈ ಸನ್ನಿವೇಶದಲ್ಲಿ ನಿಮ್ಮ ಬಳಿ ₹ 30 ಲಕ್ಷ ಉಳಿತಾಯದ ಹಣವಿದೆ ಎಂದು ಭಾವಿಸಿ. ಆ ಹಣದ ಜೊತೆಗೆ ₹ 70 ಲಕ್ಷ ಸಾಲ ಪಡೆದು ನೀವು ವಾಣಿಜ್ಯ ಆಸ್ತಿ ಖರೀದಿಸಿ, ಅದರಿಂದ ಬರುವ ಆದಾಯದಲ್ಲಿ ಸಾಲ ತೀರಿಸಿಕೊಂಡು, ಆ ವಾಣಿಜ್ಯ ಆಸ್ತಿಯನ್ನು ನಿಮ್ಮದಾಗಿಸಿಕೊಳ್ಳಬಹುದು.

ಈ ರೀತಿ ಆಸ್ತಿ ಗಳಿಕೆಗಾಗಿ ಸಾಲ ಬಳಸಿಕೊಳ್ಳುವುದನ್ನು ‘ಲೀವರೇಜಿಂಗ್’ ಎಂದು ಕರೆಯ
ಬಹುದು. ದಿಗ್ಗಜ ಉದ್ಯಮಿಗಳೂ ‘ಲೀವರೇಜಿಂಗ್’ ಬಳಸಿ ಸಂಪತ್ತು ಸೃಷ್ಟಿಸಿದ್ದಾರೆ. ಉತ್ತಮ ಕಂಪನಿಗಳು ಖರೀದಿಗೆ ಸಿಕ್ಕಾಗ ಅವುಗಳನ್ನು ತೆಕ್ಕೆಗೆ ತೆಗೆದುಕೊಳ್ಳಲು ಸಾಲದ ಮೊರೆ ಹೋದ ಉದ್ಯಮಿಗಳ ಸಂಖ್ಯೆ ದೊಡ್ಡದಿದೆ. ಸಾಲ ಮಾಡಿ ಮತ್ತೊಂದು ಸಹವರ್ತಿ ಉದ್ಯಮವನ್ನು ಖರೀದಿ
ಸಿದಾಗ ತಮ್ಮ ಉದ್ದಿಮೆಯ ವಿಸ್ತರಣೆ ಸಾಧ್ಯವಾಗಿ ಮತ್ತಷ್ಟು ಸಂಪತ್ತು ಸೃಷ್ಟಿಸಲು ಸಾಧ್ಯವಾಗುತ್ತದೆ.

ಒಳ್ಳೆಯ ಸಾಲ, ಕೆಟ್ಟ ಸಾಲ: ಎಲ್ಲದಕ್ಕೂ ನಿಮಗೆ ಸುಲಭದಲ್ಲಿ ಸಾಲ ಸಿಗುವ ಕಾಲವಿದು. ಆದರೆ ಸಾಲ ಸಿಗುತ್ತದೆ ಎಂಬ ಕಾರಣಕ್ಕೆ ಎಲ್ಲವನ್ನೂ ಸಾಲದ ಮೂಲಕವೇ ಖರೀದಿ ಮಾಡುವ ಗೋಜಿಗೆ ಹೋಗಬೇಡಿ. ಸಾಲದಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುತ್ತದೆ ಎಂದಾದರೆ, ಅಂತಹ ಸಾಲ ಮಾಡಿದರೆ ತೊಂದರೆ ಇಲ್ಲ. ಉದಾಹರಣೆಗೆ ಮನೆ ಖರೀದಿಗೆ, ನಿವೇಶನ ಖರೀದಿಗೆ, ವಾಣಿಜ್ಯ ಕಟ್ಟಡ ಖರೀದಿಗೆ, ವಾಣಿಜ್ಯೋದ್ಯಮ ಆರಂಭಿಸಲು, ಉನ್ನತ ವಿದ್ಯಾಭ್ಯಾಸಕ್ಕೆ, ವಾಣಿಜ್ಯ ವಾಹನ ಖರೀದಿಗೆ ಮಾಡುವಂತಹ ಸಾಲಗಳು ಒಳ್ಳೆಯ ಸಾಲಗಳು. ಈ ರೀತಿಯ ಸಾಲಗಳಿಂದ ನಿಮ್ಮ ಆದಾಯ ಗಳಿಕೆ ಹೆಚ್ಚುತ್ತದೆ. ಆದರೆ ಮದುವೆ, ವಿದೇಶ ಪ್ರವಾಸದಂತಹ ವೆಚ್ಚ
ಗಳಿಗೆ ಅನುತ್ಪಾದಕ ಸಾಲ ಮಾಡುವುದು ಕೆಟ್ಟದ್ದು. ಅದರಿಂದ ಸಂಪತ್ತು ಸೃಷ್ಟಿ ಸಾಧ್ಯ
ವಾಗುವುದಿಲ್ಲ.

‘ಲೀವರೇಜಿಂಗ್’ಗೆ ಉದಾಹರಣೆಗಳು:

-ವಾಣಿಜ್ಯ ಆಸ್ತಿ ಖರೀದಿಗಾಗಿ ಸಾಲ ಮಾಡುವುದು ‘ಲೀವರೇಜಿಂಗ್’. ಏಕೆಂದರೆ ಇಲ್ಲಿ ಆಸ್ತಿ ಖರೀದಿಸಿದ ತಕ್ಷಣ ಆದಾಯ ಬರಲು ಶುರುವಾಗುತ್ತದೆ. ದಿನ ಕಳೆದಂತೆ ಆ ವಾಣಿಜ್ಯ ಆಸ್ತಿಯ ಮೌಲ್ಯವೂ ವೃದ್ಧಿಸುತ್ತದೆ.

-ಉನ್ನತ ವಿದ್ಯಾಭ್ಯಾಸಕ್ಕಾಗಿ ಸಾಲ ಮಾಡುವುದು ‘ಲೀವರೇಜಿಂಗ್’. ಸಾಲ ಮಾಡಿ ಉನ್ನತ ವಿದ್ಯಾಭ್ಯಾಸ ಪೂರೈಸಿದ ನಂತರ ಉತ್ತಮ ಉದ್ಯೋಗ ದೊರೆತರೆ ನಿರಂತರ ಆದಾಯ ಬರಲು ಶುರುವಾಗುತ್ತದೆ. ಹಾಗಾಗಿ ಶಿಕ್ಷಣದ ಉದ್ದೇಶಕ್ಕಾಗಿ ಮಾಡುವ ಸಾಲ ಉತ್ಪಾದಕ ಸಾಲ ಎನಿಸಿಕೊಳ್ಳುತ್ತದೆ.

-ನಿಮ್ಮ ಬಳಿ ಒಂದಿಷ್ಟು ಉಳಿತಾಯದ ಹಣವಿದ್ದು ಅದರ ಜೊತೆಗೆ ಒಂದಿಷ್ಟು ಸಾಲ ಮಾಡಿ ಕೃಷಿ ಜಮೀನು ಖರೀದಿಸುತ್ತೀರಿ ಎಂದರೆ ಅದು ‘ಲೀವರೇಜಿಂಗ್’.

ಕೊನೆಯ ಮಾತು: ಸಾಲ ಮಾಡಿ ಆಸ್ತಿ ಖರೀದಿಸು
ವುದು ಸಾಂಪ್ರದಾಯಿಕ ಹಣಕಾಸು ನಿರ್ವಹಣೆಗೆ ವಿರುದ್ಧ. ಅನೇಕರು ಈಗಲೂ ಈ ಹೂಡಿಕೆ ತಂತ್ರಗಾರಿಕೆಯನ್ನು ಒಪ್ಪುವುದಿಲ್ಲ. ಆದರೆ ಸಾಲ ಮಾಡದೆ ದೊಡ್ಡ ಮಟ್ಟದ ಸಂಪತ್ತು ಸೃಷ್ಟಿಸುತ್ತೇವೆ ಎಂದರೆ ಅದು ಆಗದ ಮಾತು. ಉತ್ಪಾದಕ ಸಾಲ, ಅಂದರೆ ಸಂಪತ್ತು ಗಳಿಕೆಯ ಉದ್ದೇಶಕ್ಕಾಗಿ ಪಡೆಯುವ ಸಾಲದಿಂದ ಹಾನಿಯಿಲ್ಲ.

(ಲೇಖಕ ಚಾರ್ಟರ್ಡ್ ಅಕೌಂಟೆಂಟ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT