ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮೆ: ಚೂಟಿ ಜನ ಮಾಡುವ ತಪ್ಪುಗಳು!

Last Updated 27 ಸೆಪ್ಟೆಂಬರ್ 2021, 6:01 IST
ಅಕ್ಷರ ಗಾತ್ರ

ನೀವು ಹಣಕಾಸಿನ ವಿಚಾರದಲ್ಲಿ ಹೆಚ್ಚು ತಿಳಿದುಕೊಂಡ ವ್ಯಕ್ತಿ ಆಗಿರಬಹುದು. ಹೀಗಿದ್ದರೂ ಕೆಟ್ಟ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳು ಇರುತ್ತವೆ. ಬಜೆಟ್‌ ರೂಪಿಸುವಲ್ಲಿ ತಪ್ಪು ಹೆಜ್ಜೆ ಇರಿಸುವುದು, ತಕ್ಷಣಕ್ಕೆ ಬೇಕು ಅನಿಸಿದ್ದನ್ನು ಹಿಂದೆ–ಮುಂದೆ ಆಲೋಚಿಸದೆಯೇ ಖರೀದಿಸುವುದು, ಆಪತ್ತಿನ ಕಾಲಕ್ಕೆ ಎಂದು ಸರಿಯಾಗಿ ಹಣ ಇರಿಸಿಕೊಳ್ಳದೆ ಇರುವುದು ಸೇರಿದಂತೆ ಕೆಟ್ಟ ತೀರ್ಮಾನಗಳ ಪಟ್ಟಿ ದೊಡ್ಡದಾಗಿ ಇರುತ್ತದೆ. ಹಣಕಾಸಿನ ತಪ್ಪುಗಳನ್ನು ಮಾಡದೆ ಇರುವವರು ಯಾರೂ ಇಲ್ಲ.

ತಪ್ಪುಗಳನ್ನು ಮಾಡುವುದು ಅಪರಾಧವೇನೂ ಅಲ್ಲ. ಆತ್ಮಾವಲೋಕನ ಮತ್ತು ತಪ್ಪುಗಳಿಂದ ಒಂದಿಷ್ಟು ಕಲಿತುಕೊಳ್ಳುವುದು ನಮಗೆ ಅಗತ್ಯ ಇರುವ ಹಣಕಾಸಿನ ನಿರ್ವಹಣೆಯ ದಾರಿಯನ್ನು ಅರಿಯುವುದನ್ನು ಒಳ್ಳೆಯ ಮಾರ್ಗ. ಆದರೆ, ಜೀವ ವಿಮೆ ವಿಚಾರದಲ್ಲಿ ತಪ್ಪುಗಳನ್ನು ಮಾಡಲು ಹೆಚ್ಚಿನ ಅವಕಾಶ ಇಲ್ಲ. ಇಲ್ಲಿ ತಪ್ಪುಗಳನ್ನು ಮಾಡಿದರೆ ಅದರ ಪರಿಣಾಮವು ನಿಮ್ಮನ್ನು ನೆಚ್ಚಿಕೊಂಡವರ ಮೇಲೆ ಆಗುತ್ತದೆ. ಜೀವ ವಿಮೆ ಎಂಬುದು ಸಂಕಷ್ಟದ ಸಂದರ್ಭದಲ್ಲಿ ನೆರವಿಗೆ ಬರುವಂಥದ್ದು. ಇದು ನಿಮ್ಮನ್ನು ನೆಚ್ಚಿಕೊಂಡವರ ಆರ್ಥಿಕ ಅಗತ್ಯಗಳನ್ನು ನಿಮ್ಮ ಅನುಪಸ್ಥಿತಿಯಲ್ಲಿ ಪೂರೈಸಬೇಕು. ಹಾಗಾಗಿ, ಇಲ್ಲಿ ಯಾವ ತಪ್ಪುಗಳೂ ಆಗದಂತೆ ನೋಡಿಕೊಳ್ಳಬೇಕಿರುವುದು ಬಹಳ ಮುಖ್ಯ.

ವಿಮೆ ಖರೀದಿಸುವಾಗ ಆಗುವ ಸಾಮಾನ್ಯ ತಪ್ಪುಗಳು ಯಾವುವು? ಆ ತಪ್ಪುಗಳು ಆಗದಂತೆ ನೋಡಿಕೊಳ್ಳುವುದು ಹೇಗೆ? ಈ ಬಗ್ಗೆ ಒಂದು ನೋಟ ಹರಿಸೋಣ.

1) ಅವಧಿ ವಿಮೆ ಇಲ್ಲದಿರುವುದು: ಜನರು ತಮ್ಮಲ್ಲಿರುವ ಹಣವನ್ನು ಹೆಚ್ಚು ಮಾಡಲು ಜಾಸ್ತಿ ಆದ್ಯತೆ ನೀಡುತ್ತಾರೆ. ಇದರಿಂದಾಗಿ ಅವರು ಹೂಡಿಕೆಯ ಉದ್ದೇಶದೊಂದಿಗೆ ಹಾಗೂ ಸಂಪತ್ತು ಒಗ್ಗೂಡಿಸುವ ಉದ್ದೇಶದೊಂದಿಗೆ ಜೀವ ವಿಮೆ ಖರೀದಿ ಮಾಡುವುದಿದೆ. ಅವರು ಅವಧಿ ವಿಮೆಯನ್ನು ಖರೀದಿಸುವ ಗೋಜಿಗೆ ಹೋಗುವುದಿಲ್ಲ. ಹೀಗೆ ಮಾಡುವುದಕ್ಕೆ ಅವರಿಗೆ ತಮ್ಮದೇ ಆದ ಒಂದಿಷ್ಟು ಕಾರಣಗಳು ಇರುತ್ತವೆ. ತಾವು ಬೇರೆ ಬೇರೆ ಕಡೆ ಮಾಡಿರುವ ಹೂಡಿಕೆಗಳು ಕುಟುಂಬಕ್ಕೆ ನೆರವಿಗೆ ಬರಲು ಸಾಕು ಎಂದು ಭಾವಿಸಿರುತ್ತಾರೆ.

ಆದರೆ, ಕುಟುಂಬಕ್ಕೆ ಹಣಕಾಸಿನ ವಿಚಾರವಾಗಿ ಯಾವ ತೊಂದರೆಯೂ ಆಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಅವಧಿ ವಿಮೆಯನ್ನು ರೂಪಿಸಲಾಗಿರುತ್ತದೆ ಎಂಬ ಅಂಶವನ್ನು ಬಹುತೇಕರು ಗುರುತಿಸಿರುವುದಿಲ್ಲ. ನೀವು ಬೇರೆ ಬೇರೆ ಕಡೆ ಮಾಡುವ ಹೂಡಿಕೆಗಳು ನಿವೃತ್ತಿ ನಂತರದ ಬದುಕಾಗಿ, ಮಕ್ಕಳ ಶಿಕ್ಷಣಕ್ಕಾಗಿ ಅಥವಾ ಇತರ ಯಾವುದಾದರೂ ನಿರ್ದಿಷ್ಟ ಗುರಿಯನ್ನು ಈಡೇರಿಸಿಕೊಳ್ಳಲು ಆಗಿರುತ್ತವೆ. ಕುಟುಂಬದ ಹಣಕಾಸಿನ ಅಗತ್ಯಗಳನ್ನೆಲ್ಲ ನೋಡಿಕೊಳ್ಳಲಿ ಎಂಬ ಉದ್ದೇಶದಿಂದ ಇಡಿಗಂಟು ರೂಪಿಸುವವರು ಕಡಿಮೆ. ಹಾಗಾಗಿ, ನಿಮ್ಮನ್ನು ನೆಚ್ಚಿಕೊಂಡವರು ಇದ್ದಾರೆ ಎಂದಾದಲ್ಲಿ ನೀವು ಅವಧಿ ವಿಮೆಯನ್ನು ಖರೀದಿಸಲೇಬೇಕು.

2) ಹಲವು ಉದ್ದೇಶಗಳನ್ನು ಈಡೇರಿಸುವುದಿಲ್ಲ: ಜೀವ ವಿಮೆ ಎಂಬುದು ದೀರ್ಘಾವಧಿಯದ್ದು. ಇದನ್ನು ಖರೀದಿಸುವುದು ನಿಮ್ಮನ್ನು ನೆಚ್ಚಿಕೊಂಡವರ ಹಿತಕ್ಕಾಗಿ. ಈ ವಿಮೆಯನ್ನು ಖರೀದಿಸಿದವರಿಗೆ ಇದರ ಲಾಭ ಅನುಭವಿಸಲು ಆಗದೆಯೂ ಇರಬಹುದು. ಒಂದು ವಿಮೆಯನ್ನು ಖರೀದಿಸಿ, ಅದರಿಂದ ಹಣಕಾಸಿನ ಹಲವು ಉದ್ದೇಶಗಳನ್ನು ಈಡೇರಿಸಿಕೊಳ್ಳಬಹುದು ಎಂದು ಭಾವಿಸುವುದು ಇದೆ. ಇದು ಸರಿಯಲ್ಲ. ಜೀವ ವಿಮೆಯು ಜೀವನದ ಒಂದು ನಿರ್ದಿಷ್ಟ ಹಂತದಲ್ಲಿ ಮಹತ್ವದ ಹಣಕಾಸಿನ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಇರುವಂಥದ್ದು. ಹಾಗಾಗಿ, ಒಂದು ಜೀವ ವಿಮೆ ಖರೀದಿಸಿದರೆ ಎಲ್ಲ ಅಗತ್ಯಗಳಿಗೂ ಅದು ನೆರವಿಗೆ ಬರುತ್ತದೆ ಎಂದು ಭಾವಿಸುವುದನ್ನು ನಿಲ್ಲಿಸಿ. ಈ ರೀತಿಯ ಭಾವನೆ ನಿಮ್ಮ ಮನಸ್ಸಿನಲ್ಲಿ ಇದ್ದರೆ, ಅದು ಇಡೀ ಹಣಕಾಸಿನ ಜೀವನವನ್ನು ಹಳಿತಪ್ಪಿಸಬಹುದು.

3) ಪೂರ್ತಿ ಮಾಹಿತಿ ನೀಡದಿರುವುದು: ವಿಮೆಯನ್ನು ಖರೀದಿಸುವಾಗ ಅಗತ್ಯವಾದ ಮಾಹಿತಿಗಳನ್ನು ಪೂರ್ತಿಯಾಗಿ ನೀಡದೆ ಇರುವುದು ಜನರು ಮಾಡುವ ಅತಿದೊಡ್ಡ ತಪ್ಪುಗಳಲ್ಲಿ ಒಂದು. ವಿಮೆಯ ಪ್ರೀಮಿಯಂ ಮೊತ್ತವನ್ನು ಕಡಿಮೆ ಇರಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಕೆಲವರು ಅಗತ್ಯ ಮಾಹಿತಿಗಳನ್ನು ಪೂರ್ತಿಯಾಗಿ ನೀಡುವುದಿಲ್ಲ. ಆದರೆ ಇಂತಹ ತಪ್ಪುಗಳು ಮುಂದೊಂದು ದಿನ ವಿಮಾ ಕಂಪನಿಯು ವ್ಯಕ್ತಿಯ ಕ್ಲೇಮ್ ಅರ್ಜಿಯನ್ನು ತಿರಸ್ಕರಿಸಲು ಕಾರಣವಾಗಬಹುದು. ಆಗ ವಿಮೆಯನ್ನು ಖರೀದಿಸಿದ್ದ ಉದ್ದೇಶವೇ ಈಡೇರದಂತೆ ಆಗುತ್ತದೆ.

4) ಕುಟುಂಬಕ್ಕೆ ಮಾಹಿತಿ ಇಲ್ಲದಿರುವುದು: ನಿಮ್ಮ ಹಣಕಾಸಿನ ತೀರ್ಮಾನಗಳ ಬಗ್ಗೆ ನಿಮ್ಮ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡದೆ ಇರುವುದು ನೀವು ಮಾಡುವ ಅತಿದೊಡ್ಡ ಅಪರಾಧ. ವಿಮೆಯ ವಿವರಗಳು ನಿಮ್ಮ ಕುಟುಂಬದ ಸದಸ್ಯರಿಗೆ ಗೊತ್ತಿಲ್ಲದಿದ್ದರೆ, ನೀವು ಜೀವ ವಿಮೆ ಖರೀದಿ ಮಾಡಿದ ಉದ್ದೇಶ ಈಡೇರುವುದಿಲ್ಲ.

5) ವಿಮಾ ಮೊತ್ತದ ಪರಿಶೀಲನೆ: ಜೀವ ವಿಮೆಯನ್ನು ಖರೀದಿಸುವುದು ದೀರ್ಘಾವಧಿಯ ಉದ್ದೇಶಕ್ಕೆ. ಆದರೆ, ವಿಮೆಯನ್ನು ಒಮ್ಮೆ ಖರೀದಿಸಿದರೆ ಸಾಕು, ಉದ್ದೇಶ ಈಡೇರಿಬಿಟ್ಟಿತು ಎಂದು ಕೆಲವರು ಭಾವಿಸುವುದು ಇದೆ. ನೀವು ಜೀವನದಲ್ಲಿ ಮುಂದೆ ಸಾಗಿದಂತೆಲ್ಲ ಹಣಕಾಸಿನ ಅಗತ್ಯಗಳು ಬದಲಾಗುತ್ತ ಸಾಗುತ್ತವೆ. ಹಾಗಾಗಿ, ವಿಮೆಯ ಮೊತ್ತವು ಸಾಕಾಗುವಂತೆ ಇದೆಯೇ ಎಂಬುದನ್ನು ಪ್ರತಿ ವರ್ಷವೂ ಪರಿಶೀಲಿಸುತ್ತ ಇರಬೇಕು.

6) ಹೋಲಿಕೆ ಮಾಡುವುದು: ವಿಮೆ ಹಾಗೂ ಹಣಕಾಸಿನ ಇತರ ಉತ್ಪನ್ನಗಳ ನಡುವೆ ಹೋಲಿಕೆ ಮಾಡುವುದು ಕೂಡ ಒಂದು ತಪ್ಪು. ಉದಾಹರಣೆಗೆ, ಸಿಗುವ ಮೊತ್ತದ ವಿಚಾರದಲ್ಲಿ ಖಾತರಿ ಇರುವ ವಿಮಾ ಯೋಜನೆ ಹಾಗೂ ನಿಶ್ಚಿತ ಠೇವಣಿ ನಡುವೆ ಕೆಲವರು ಹೋಲಿಕೆ ಮಾಡಿ ನೋಡುವುದಿದೆ. ಆದರೆ ಇವೆರಡೂ ಹಣಕಾಸಿನ ಉತ್ಪನ್ನಗಳು ಬೇರೆ ಬೇರೆ ಉದ್ದೇಶಗಳನ್ನು ಈಡೇರಿಸುತ್ತವೆ. ಯೂಲಿಪ್ ಯೋಜನೆಗಳನ್ನು ಎಸ್‌ಐಪಿ ಜೊತೆ ಕೆಲವರು ಹೋಲಿಸುವುದು ಇದೆ. ಇವು ಕೂಡ ಒಂದೇ ಅಲ್ಲ.

ಹಣಕಾಸಿ ‍ಪ್ರತಿ ನಿರ್ಧಾರದ ಹಿಂದೆಯೂ ಒಂದು ಉದ್ದೇಶ ಇರುತ್ತದೆ. ಅದೇ ರೀತಿ, ಜೀವ ವಿಮೆಯನ್ನು ಖರೀದಿಸುವುದು ವ್ಯಕ್ತಿಯನ್ನು ನಂಬಿರುವ ಕುಟುಂಬದ ಸದಸ್ಯರ ಕನಸುಗಳನ್ನು ಈಡೇರಿಸಲು. ವಿಮೆ ಖರೀದಿಸುವ ಸಂದರ್ಭದಲ್ಲಿ ತಪ್ಪು ಆಗದಂತೆ ನೋಡಿಕೊಳ್ಳಲು ಒಂದು ಪ್ರಶ್ನೆಯನ್ನು ಕೇಳಿಕೊಳ್ಳಿ. ‘ನಾನು ನನ್ನ ಕುಟುಂಬದ ಹಣಕಾಸಿನ ಚಟುವಟಿಕೆಗಳು ಅಡೆತಡೆ ಇಲ್ಲದಂತೆ ಹೇಗೆ ಖಾತರಿಪಡಿಸಲಿ?’. ಈ ಪ್ರಶ್ನೆಗೆ ಉತ್ತರ ದೊರೆತಾಗ ಇತರ ಎಲ್ಲ ಸಂಗತಿಗಳೂ ಹೊಳೆಯುತ್ತವೆ.

ಲೇಖಕ ಎಡೆಲ್‌ವೈಸ್ ಟೋಕ್ಯೊ ಲೈಫ್ ಇನ್ಶೂರೆನ್ಸ್ ಕಂಪನಿಯ ಮುಖ್ಯ ವಿತರಣಾ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT