ಬುಧವಾರ, ಮಾರ್ಚ್ 22, 2023
33 °C

ವಿಷಮ ಸನ್ನಿವೇಶಕ್ಕೆ ಹಣಕಾಸಿನ ಪಾಠಗಳು

ಪ್ರೀತಾ ವಾಲಿ Updated:

ಅಕ್ಷರ ಗಾತ್ರ : | |

Prajavani

ನಾವೀಗ ತೀರಾ ಅಸಾಮಾನ್ಯ ಸಂದರ್ಭದಲ್ಲಿ ಬದುಕುತ್ತಿದ್ದೇವೆ, ಅತ್ಯಂತ ಅನಿಶ್ಚಿತತೆಯ ದಿನಗಳನ್ನು ಕಾಣುತ್ತಿದ್ದೇವೆ. ಕೋವಿಡ್–19 ಎಂಬ ಪಿಡುಗಿನ ನಡುವೆ ಬದುಕು ಸಾಗಿಸಬೇಕಾಗುತ್ತದೆ ಎಂದು ನಾವು ಕನಸಿನಲ್ಲೂ ಊಹಿಸಿರಲಿಲ್ಲ. ಆದರೂ, ಕಳೆದ ಕೆಲವು ತಿಂಗಳುಗಳಿಂದ ಸಂಪೂರ್ಣ ಭಿನ್ನವಾದ ಪರಿಸ್ಥಿತಿಯಲ್ಲಿ ಬದುಕುತ್ತಿದ್ದೇವೆ. ಇಂಥ ಸ್ಥಿತಿಯಲ್ಲಿ ನಮ್ಮ ಹಣಕಾಸಿನ ವಿಚಾರಗಳನ್ನು ನಿರ್ವಹಿಸುವುದು ಹೇಗೆ?

ಲಾಕ್‌ಡೌನ್‌ನಿಂದಾಗಿ ಭಾರತದ ಅರ್ಥವ್ಯವಸ್ಥೆಗೆ ದೊಡ್ಡ ಹೊಡೆತ ಬಿದ್ದಿದೆ. ಅನೇಕ ಕಂಪನಿಗಳು ತಮ್ಮ ವಹಿವಾಟನ್ನೇ ಸ್ಥಗಿತಗೊಳಿಸಬೇಕಾಗಿ ಬಂದಿದೆ. ವೇತನ ಕಡಿತ, ವೆಚ್ಚಗಳನ್ನು ನಿಯಂತ್ರಿಸುವುದು, ಸಾಮರ್ಥ್ಯಕ್ಕಿಂತ ಕಡಿಮೆ ಉತ್ಪಾದನೆ, ಕಾರ್ಮಿಕರ ಸಂಖ್ಯೆಯನ್ನು ಕಡಿಮೆ ಮಾಡುವುದು... ಇವೆಲ್ಲವೂ ಕಾಯಿಲೆಯ ಜೊತೆ ಬಂದಿರುವ ಹೆಚ್ಚುವರಿ ಅಪಾಯಗಳು. ಸಾಂಕ್ರಾಮಿಕ ರೋಗವೇ ಒಂದು ಭಯಾನಕ ವಾಸ್ತವ. ಇದಕ್ಕೆ, ಉದ್ಯೋಗ ನಷ್ಟದ ಭಯವೂ ಸೇರಿಕೊಂಡಿದೆ.

ಇಂಥ ಸಮಯದಲ್ಲಿ ಏನು ಮಾಡಬಹುದು? ಎಲ್ಲಕ್ಕಿಂತ ಮುಖ್ಯವಾಗಿ ಪ್ರತಿಯೊಬ್ಬರೂ ಸಕಾರಾತ್ಮಕ ಚಿಂತನೆ ಹೊಂದುವುದು ಅಗತ್ಯ. ಇದನ್ನು ಹೇಳುವುದು ಸುಲಭ, ಮಾಡುವುದು ಸುಲಭವಲ್ಲ ಎಂಬುದು ನಿಜ. ಆದರೆ, ಮುಂದಿನ ಯೋಜನೆಗಳನ್ನು ರೂಪಿಸಿಕೊಳ್ಳಲು ಸಮಚಿತ್ತದಿಂದ ಯೋಚಿಸುವುದೊಂದೇ ದಾರಿ. ಹತಾಶೆ, ಅಹಂ, ಭ್ರಮನಿರಸನಗಳು ಯಾವತ್ತೂ ಒಳ್ಳೆಯ ಪರಿಹಾರ ಒದಗಿಸಲಾರವು. ಆದ್ದರಿಂದ, ಉದ್ಯೋಗನಷ್ಟ ಅಥವಾ ವೇತನ ಕಡಿತದ ಭೀತಿಯಲ್ಲಿ ಇರುವವರು ನೆನಪಿನಲ್ಲಿಡಬೇಕಾದ ಒಂದಷ್ಟು ಅಂಶಗಳು ಇಲ್ಲಿವೆ.

ಹೆಜ್ಜೆ–1:

ನಿಮ್ಮಲ್ಲಿರುವ ಎಲ್ಲಾ ಸ್ವತ್ತುಗಳು (ಚಿನ್ನಾಭರಣ, ನಿಶ್ಚಿತ ಠೇವಣಿ, ಷೇರು, ಮ್ಯೂಚುವಲ್‌ ಫಂಡ್‌ ಯೂನಿಟ್‌ಗಳು ಇತ್ಯಾದಿ), ಬಾಧ್ಯತೆಗಳು (ಶಾಲಾ ಶುಲ್ಕ, ಸಾಲದ ಕಂತುಗಳು, ಬಾಡಿಗೆ ಇತ್ಯಾದಿ) ಹಾಗೂ ವೆಚ್ಚಗಳನ್ನು (ಮನೆಯ ಖರ್ಚುವೆಚ್ಚಗಳು, ಸಾರಿಗೆ ಇತ್ಯಾದಿ) ಒಮ್ಮೆ ಲೆಕ್ಕ ಹಾಕಿಕೊಳ್ಳಿ. ಇದಾದ ನಂತರ ಆದಾಯ ಮೂಲಗಳನ್ನು (ಬಡ್ಡಿ, ಬಾಡಿಗೆ ಮೂಲಕ ಬರುವ ಆದಾಯ ಇತ್ಯಾದಿ) ಲೆಕ್ಕ ಹಾಕಿಕೊಳ್ಳಿ. ನಿಮ್ಮ ಕುಟುಂಬಕ್ಕೆ ಸಾಕಾಗುವಷ್ಟು ವಿಮೆ ಇದೆಯೇ ಎಂಬುದನ್ನೂ ಖಾತರಿಪಡಿಸಿಕೊಳ್ಳಿ. ಈ ಎಲ್ಲಾ ಲೆಕ್ಕಾಚಾರಗಳನ್ನು ಕಾಗದ ಅಥವಾ ಕಂಪ್ಯೂಟರ್ ಬಳಸಿ, ನಿಖರವಾಗಿ ಮಾಡಿ.

ಹೆಜ್ಜೆ–2:

ಕಳೆದ ಕೆಲವು ತಿಂಗಳುಗಳಲ್ಲಿ ಮಾಡಿರುವ ಖರ್ಚುಗಳ ಅಂದಾಜು ಪಟ್ಟಿ ತಯಾರಿಸಿ. ಲಾಕ್‌ಡೌನ್‌ ಕಾರಣದಿಂದ ಮನೆಯಲ್ಲೇ ಹೆಚ್ಚಿನ ಸಮಯ ಕಳೆದಿದ್ದರಿಂದ, ಅಗತ್ಯಗಳು ಮತ್ತು ಬಯಕೆಗಳ ನಡುವಿನ ವ್ಯತ್ಯಾಸವೇನೆಂಬುದು ನಮ್ಮೆಲ್ಲರಿಗೂ ಮನವರಿಕೆ ಆಗಿದೆ. ಅವುಗಳನ್ನು ವಿಂಗಡಣೆ ಮಾಡಿಕೊಳ್ಳಿ. ಉದಾಹರಣೆಗೆ, ಆಹಾರ, ಬಾಡಿಗೆ... ಇವೆಲ್ಲವೂ ಅಗತ್ಯಗಳು. ಹೊರಗಡೆ ಆಹಾರ ಸೇವನೆ, ಸಿನಿಮಾ ಅಥವಾ ಪ್ರವಾಸಕ್ಕೆ ಹೋಗುವುದು ಇವೆಲ್ಲಾ ಬಯಕೆಗಳು.

ಹೆಜ್ಜೆ–3:

ಇವುಗಳಲ್ಲಿ ಅತ್ಯಗತ್ಯ ಅಥವಾ ತಪ್ಪಿಸಲಾಗದವುಗಳನ್ನು, ಅಂದರೆ ಶಾಲಾ ಶುಲ್ಕ, ಸಾಲದ ಕಂತು, ಬಾಡಿಗೆ ಮುಂತಾದವುಗಳನ್ನು ಬೇರ್ಪಡಿಸಿ.

ಹೆಜ್ಜೆ–4:

ತಪ್ಪಿಸಬಹುದಾದ ಅಥವಾ ಮುಂದೂಡ ಬಹುದಾದ ಖರ್ಚುಗಳನ್ನು ಗುರುತಿಸಿ, ಉದಾಹರಣೆಗೆ, ಹೊಸ ಫೋನ್‌ ಅಥವಾ ಕನ್ನಡಕ ಖರೀದಿ ಮುಂತಾದವುಗಳನ್ನು ಸಾಧ್ಯವಾದರೆ ಸದ್ಯದ ಮಟ್ಟಿಗೆ ಮುಂದೂಡಿರಿ.

ಹೆಜ್ಜೆ–5:

ಒಂದು ವೇಳೆ ನೀವು ಸಾಲ ಪಡೆದಿದ್ದರೆ, ಎರಡು ಸಾಧ್ಯತೆಗಳ ಕಡೆಗೆ ಗಮನಹರಿಸಬಹುದು. ಸಾಲ ನೀಡಿದ ಸಂಸ್ಥೆಯನ್ನು ಸಂಪರ್ಕಿಸಿ, ಕಂತಿನ ಮೊತ್ತ ಅಥವಾ ಬಡ್ಡಿ ಪ್ರಮಾಣವನ್ನು ಕಡಿಮೆ ಮಾಡುವ ಮೂಲಕ ಸಾಲದ ಮರುಹೊಂದಾಣಿಕೆಗೆ ಮನವಿ ಮಾಡಬಹುದು. ಅನೇಕ ಹಣಕಾಸು ಸಂಸ್ಥೆಗಳು ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತುಕೊಂಡಿರುವುದರಿಂದ, ಗ್ರಾಹಕರಿಗೆ ನೆರವಾಗಲು ಸಿದ್ಧ ಇರುವುದರಿಂದ ಈ ಪ್ರಯತ್ನ ಮಾಡಬಹುದು. ಕೆಲವು ಸಂಸ್ಥೆಗಳು ಕಂತು ಮುಂದೂಡುವ ವ್ಯವಸ್ಥೆ ಒದಗಿಸಿವೆ. ಇದು ಸಾಲದ ಕಂತುಗಳನ್ನು ಮುಂದೂಡುವ ವ್ಯವಸ್ಥೆಯೇ ವಿನಾ ಮನ್ನಾ ಮಾಡುವುದಲ್ಲ. ಆದ್ದರಿಂದ ತೀರಾ ಅನಿವಾರ್ಯ ಸಂದರ್ಭ ಇಲ್ಲದಿದ್ದರೆ, ಈ ಸೌಲಭ್ಯವನ್ನು ಆಯ್ಕೆ ಮಾಡಿಕೊಳ್ಳಬೇಡಿ.

ಎರಡನೆಯದಾಗಿ, ತುರ್ತು ನಿಧಿಯಿಂದ ಒಂದಷ್ಟು ಹಣವನ್ನು ನಗದೀಕರಿಸಿಕೊಳ್ಳಿ. ಇನ್ನೂ ಹೆಚ್ಚಿನ ಹಣದ ಅಗತ್ಯಬಿದ್ದರೆ ಸಣ್ಣ ಉಳಿತಾಯ, ಮ್ಯೂಚುವಲ್‌ ಫಂಡ್ ಯೂನಿಟ್‌ಗಳನ್ನು ಬಳಸಿಕೊಂಡು, ಕ್ರೆಡಿಟ್‌ ಕಾರ್ಡ್ ಬಾಕಿ‌, ವೈಯಕ್ತಿಕ ಸಾಲ ಮುಂತಾದ ಹೆಚ್ಚು ಬಡ್ಡಿಯ ಸಾಲಗಳನ್ನು ಆದ್ಯತೆಯ ಮೇಲೆ ಪಾವತಿಸಿ.

ಹೆಜ್ಜೆ–6:

ಜೀವನದ ಕೆಲವು ಆಯಾಮಗಳನ್ನು ವ್ಯವಸ್ಥಿತಗೊಳಿಸಿಕೊಳ್ಳಲು ಈ ಸಮಯ ಬಳಸಿಕೊಳ್ಳಿ. ಒಂದು ಒಳ್ಳೆಯ ವ್ಯಕ್ತಿವಿವರವನ್ನು ತಯಾರಿಸಿ. ಅದನ್ನು ಇಮೇಲ್‌ ಅಥವಾ ದೂರವಾಣಿ ಮೂಲಕ ಹಂಚಿಕೊಳ್ಳಿ. ಕೌಶಲ ಅಭಿವೃದ್ಧಿಪಡಿಸಿಕೊಳ್ಳಿ. ಇದಕ್ಕೆ ಕೆಲವು ಉಚಿತ ಕೋರ್ಸ್‌ಗಳು ಆನ್‌ಲೈನ್‌ನಲ್ಲಿ ಲಭ್ಯವಿವೆ. ಇದು ನಿಮಗೆ ನೆರವಾಗುವುದರ ಜತೆಗೆ ಸುಧಾರಣೆ ಮಾಡಿಕೊಳ್ಳಲು ನೀವು ಶ್ರಮಿಸುತ್ತಿರುವಿರಿ ಎಂಬುದು ನಿಮ್ಮ ಉದ್ಯೋಗದಾತರಿಗೂ ತಿಳಿಯುತ್ತದೆ. ಮನಸ್ಸು ಮತ್ತು ದೇಹವನ್ನು ಕ್ರಿಯಾಶೀಲವಾಗಿರಿಸಲು ವ್ಯಾಯಾಮ ಮಾಡುವುದನ್ನು ಮರೆಯಬೇಡಿ. ಅಗತ್ಯ ಎನಿಸಿದರೆ ಅರೆಕಾಲಿಕ ಉದ್ಯೋಗವೊಂದನ್ನು ಹುಡುಕಿಕೊಳ್ಳಿ. ಆದರೆ ಹೊಸ ವೃತ್ತಿಯನ್ನು ಆರಂಭಿಸಲು ಆತುರ ತೋರಬೇಡಿ.

ಹೆಜ್ಜೆ–7:

ಆರ್ಥಿಕ ಸ್ಥಿತಿಯ ಬಗ್ಗೆ ಕುಟುಂಬದವರ ಜತೆ ಮಾತನಾಡಿ. ಇದರಿಂದ ಹಲವು ಉಪಯೋಗಗಳಿವೆ. ಮೊದಲನೆಯದಾಗಿ ಇಂತಹ ಸಂಕಷ್ಟದ ಸಂದರ್ಭದಲ್ಲಿ ನಿಮಗೆ ಬೆಂಬಲವಾಗಿ ಅವರು ನಿಲ್ಲಲು ಇದು ದಾರಿ ಮಾಡಿಕೊಡುತ್ತದೆ. ಹತಾಶೆಯ ಕ್ಷಣಗಳಲ್ಲಿ ನಿಮಗೆ ಒಂದಿಷ್ಟು ಧನ ಸಹಾಯ ಮಾಡಲು ಯಾರಾದರೂ ಮುಂದೆ ಬರಬಹುದು.

ವೈಯಕ್ತಿಕ ಹಣಕಾಸಿನ ವಿಚಾರದಲ್ಲಿ ಎರಡು ಸಂಗತಿಗಳ ಮೇಲೆ ಗಮನ ಇರಲಿ – ಹಣದುಬ್ಬರ (ಇದು ನಿಮ್ಮ ಹಣದ ಮೌಲ್ಯವನ್ನು ತಗ್ಗಿಸುತ್ತದೆ); ಠೇವಣಿ ಇರಿಸಿದ ಹಣಕ್ಕೆ ಬಡ್ಡಿ ಮತ್ತು ಚಕ್ರಬಡ್ಡಿಯಿಂದ ಸಿಗುವ ಲಾಭ (ಇದು ಸಂಪತ್ತು ಸೃಷ್ಟಿಸಲು ಇರುವ ಅತ್ಯುತ್ತಮ ಮಾರ್ಗ). ಹೂಡಿಕೆಯ ಅಪಾಯಗಳು, ಗಳಿಕೆ, ತೆರಿಗೆ ಮುಂತಾದವುಗಳಂತೆ ಈ ವಿಚಾರಗಳ ಕಡೆಗೂ ಲಕ್ಷ್ಯ ಹರಿಸಲೇಬೇಕು.

ಇವಿಷ್ಟು ನಾವು ನೀಡಬಹುದಾದ ಸ್ಥೂಲ ಸಲಹೆಗಳು. ಇನ್ನೂ ಎಷ್ಟೋ ಜನ ನಾವು ಅನುಭವಿಸುತ್ತಿರುವಂಥ ಅಥವಾ ನಮಗೆ ಎದುರಾಗಿರುವುದಕ್ಕಿಂತಲೂ ಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂಬುದನ್ನು ಮರೆಯಬಾರದು. ಈ ಸಂಕಷ್ಟದ ಕಾಲವೂ ದೂರವಾಗಲಿದೆ.

ಹಣಕಾಸಿನ ಆರೋಗ್ಯಕ್ಕೆ...

ಸರಿಯಾದ ದಿಕ್ಕಿನಲ್ಲಿ ಆರ್ಥಿಕ ಪ್ರಯಾಣವನ್ನು ಆರಂಭಿಸಲು ಸಹ ಇದು ಸರಿಯಾದ ಸಮಯವಾದ್ದರಿಂದ ಆರೋಗ್ಯಕರ ಹಣಕಾಸು ಯೋಜನೆ ರೂಪಿಸಲು ಒಂದಿಷ್ಟು ಸಲಹೆಗಳು ಇಲ್ಲಿವೆ.

1. ಒಂದು ತುರ್ತು ನಿಧಿಯನ್ನು ಸ್ಥಾಪಿಸಿಕೊಳ್ಳಿ (6 ರಿಂದ 8 ತಿಂಗಳ ಖರ್ಚಿಗೆ ಬೇಕಾದಷ್ಟು ಹಣವು ತಕ್ಷಣಕ್ಕೆ ಸಿಗುವಂತೆ ಇರಲಿ). ಇಂಥ ಒಂದು ತುರ್ತು ನಿಧಿಯನ್ನು ಪ್ರತಿಯೊಬ್ಬರೂ ಹೊಂದಿದ್ದರೆ, ಸಂಕಷ್ಟ ಎದುರಾದಾಗ ಯಾರೂ ತಪ್ಪು ಹೆಜ್ಜೆ ಇಡಲಾರರು.

2. ಇಡೀ ಕುಟುಂಬಕ್ಕೆ ಅಗತ್ಯವಿರುವಷ್ಟು ಆರೋಗ್ಯ ವಿಮೆ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಉದ್ಯೋಗದಾತ ಕಂಪನಿ ನೀಡಿದ ಆರೋಗ್ಯ ವಿಮೆ ಇರುವವರು, ವೈಯಕ್ತಿಕವಾಗಿ ಇನ್ನೊಂದು ಆರೋಗ್ಯ ವಿಮೆ ಹೊಂದುವುದು ಸೂಕ್ತ. ಏಕೆಂದರೆ ಉದ್ಯೋಗ ಕಳೆದುಕೊಂಡರೆ ವಿಮೆ ಸೌಲಭ್ಯವೂ ಕೊನೆಗೊಳ್ಳುವ ಅಪಾಯ ಇರುತ್ತದೆ. ವಿಮಾ ಕಂಪನಿಗಳೀಗ ಕೋವಿಡ್‌–19 ವಿಮೆಯನ್ನೂ ನೀಡುತ್ತಿವೆ. ಅಂಥ ವಿಮೆ ಹೊಂದುವ ಬಗ್ಗೆ ಯೋಚಿಸಿ.

3. ಗುರಿ ನಿರ್ಧರಿಸಿ: ಮಕ್ಕಳ ಶಿಕ್ಷಣಕ್ಕೆ ಎಷ್ಟು ಹಣ ಬೇಕಾಗಬಹುದು, ಆರೋಗ್ಯ ವಿಮೆಗೆ ಎಷ್ಟು ಬೇಕು ಎಂಬೆಲ್ಲ ವಿಚಾರಗಳನ್ನು ಪರಿಗಣಿಸಿ, ಮುಂದಿನ ಕೆಲವು ವರ್ಷಗಳಲ್ಲಿ ನಿಮಗೆಷ್ಟು ವೆಚ್ಚಗಳು ಬರಬಹುದು ಎಂಬುದನ್ನು ಪಟ್ಟಿ ಮಾಡಿ. ಹೀಗೆ ಪಟ್ಟಿ ಮಾಡುವಾಗ ಹಣದುಬ್ಬರದ ಮೇಲೂ ಗಮನ ಇರಲಿ. ಹಣದುಬ್ಬರ ಶೇಕಡ 6ರಿಂದ 7ರಷ್ಟು ಇದೆ ಎಂದು ವರದಿಯಾಗುತ್ತಿದೆ. ಆದರೆ ಶಿಕ್ಷಣದ ವೆಚ್ಚಗಳ ಹಣದುಬ್ಬರ ಶೇಕಡ 10ಕ್ಕಿಂತ ಹೆಚ್ಚಿದೆ ಎಂಬುದನ್ನು ಮರೆಯದಿರಿ.

4. ನಿಮ್ಮ ಗುರಿಗಳನ್ನು ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಎಂದು ವಿಂಗಡಿಸಿದ ನಂತರ ನಿಮಗೆ ಸೂಕ್ತವೆನಿಸುವ ಹಣಕಾಸು ಉತ್ಪನ್ನದಲ್ಲಿ ಹೂಡಿಕೆ ಮಾಡಿ.

ಲೇಖಕಿ: ವೈಯಕ್ತಿಕ ಹಣಕಾಸು ಮಾರ್ಗದರ್ಶಕಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು