ಸೋಮವಾರ, ಸೆಪ್ಟೆಂಬರ್ 20, 2021
22 °C

ಪ್ರಶ್ನೋತ್ತರ | ಹಣದ ಉಳಿತಾಯ ಹೇಗೆ?

ಪುರಾಣಿಕ್ Updated:

ಅಕ್ಷರ ಗಾತ್ರ : | |

ಹೆಸರು ಬೇಡ, ಬೆಂಗಳೂರು

ನಾನು ನಿವೃತ್ತ ಸರ್ಕಾರಿ ನೌಕರ. ತಿಂಗಳ ಪಿಂಚಣಿ ₹ 27 ಸಾವಿರ. ವಯಸ್ಸು 74. ಮಾಸಿಕ ಬರುವ ಮನೆ ಬಾಡಿಗೆ ₹ 20 ಸಾವಿರ. ಇವೆರಡೂ ಸೇರಿ ವಾರ್ಷಿಕ ₹ 5.64 ಲಕ್ಷ ಆದಾಯವಿದೆ. ತೆರಿಗೆ–ರಿಟರ್ನ್ಸ್‌ ತುಂಬುವ ವಿಚಾರ ತಿಳಿಸಿ.

ಉತ್ತರ: ನಿಮ್ಮ ಪಿಂಚಣಿಯಲ್ಲಿ ಸ್ಟ್ಯಾಂಡರ್ಡ್‌ ಡಿಡಕ್ಷನ್‌ ಸೆಕ್ಷನ್ 16 ಆಧಾರದ ಮೇಲೆ ವಾರ್ಷಿಕವಾಗಿ ₹ 50 ಸಾವಿರ ಕಳೆಯಬಹುದು. ಸೆಕ್ಷನ್‌ 24 (ಎ) ಆಧಾರದ ಮೇಲೆ ಬಾಡಿಗೆಯಲ್ಲಿ ಶೇ 30 ಕಳೆಯಬಹುದು. ಹೀಗೆ ಮಾಡಿದಲ್ಲಿ ನಿಮ್ಮ ಪಿಂಚಣಿ ಹಾಗೂ ಬಾಡಿಗೆ ಆದಾಯ ವಾರ್ಷಿಕ ₹ 4.42 ಲಕ್ಷ ಆಗಲಿದೆ (₹2.74 ಲಕ್ಷ ಪಿಂಚಣಿ+ ₹ 1.68 ಲಕ್ಷ ಬಾಡಿಗೆ) 1–4–2019ರಿಂದ ಎಲ್ಲಾ ವರ್ಗದ ಜನರಿಗೆ ₹ 5 ಲಕ್ಷ ಆದಾಯದ ತನಕ ಆದಾಯ ತೆರಿಗೆ ವಿನಾಯಿತಿ ಇರುವುದರಿಂದ ನೀವು ತೆರಿಗೆಗೆ ಒಳಗಾಗುವುದಿಲ್ಲ. ಆದರೆ ನಿಮ್ಮ ವಾರ್ಷಿಕ ಆದಾಯ ₹ 3 ಲಕ್ಷ ದಾಟುವುದರಿಂದ ರಿಟರ್ನ್ಸ್‌ ಸಲ್ಲಿಸಬೇಕಾಗುತ್ತದೆ.

**

ಕೆ. ಹನುಮಂತಯ್ಯ, ಹೆಣ್ಣೂರು, ಬೆಂಗಳೂರು

ನಾನು ಸರ್ಕಾರಿ ಸೇವೆಯಿಂದ ನಿವೃತ್ತನಾಗುತ್ತಿದ್ದೇನೆ. ನಿವೃತ್ತಿಯಿಂದ ₹ 35 ರಿಂದ ₹ 40 ಲಕ್ಷ ಬರಬಹುದು. ನಿವೃತ್ತಿ ವೇತನ ₹ 26 ಸಾವಿರ. ಊರಿನಲ್ಲಿ 5 ಎಕರೆ ಕೃಷಿ ಜಮೀನಿದೆ. ಮದುವೆ ಆಗಿರುವ ಇಬ್ಬರು ಮಕ್ಕಳು ಜತೆಗೆ ಇದ್ದಾರೆ. ನಿವೃತ್ತಿ ವೇತನ ನನಗೆ ಸಾಕಾಗುತ್ತದೆ. ಬರಲಿರುವ ಹಣ ಹೇಗೆ ಉಳಿತಾಯ ಮಾಡಿದರೆ ಅನುಕೂಲ ತಿಳಿಸಿ. ಸ್ವಂತ ಮನೆ ಇದೆ.

ಉತ್ತರ: ನೀವು ನಿವೃತ್ತಿಯಿಂದ ಬರುವ ಹಣದಲ್ಲಿ ₹ 15 ಲಕ್ಷ ಅಂಚೆ ಕಚೇರಿ ಠೇವಣಿಯಲ್ಲಿ (ಹಿರಿಯ ನಾಗರಿಕರ ಠೇವಣಿ) ಇರಿಸಿ. ಇಲ್ಲಿ ನೀವು ಶೇ 8.6 ಬಡ್ಡಿ ಪಡೆಯಬಹುದು. ಪ್ರತಿ ಮೂರು ತಿಂಗಳಿಗೆ ಬಡ್ಡಿ ನಿಮ್ಮ ಉಳಿತಾಯ ಖಾತೆಗೆ ಜಮೆ ಆಗಲಿದೆ. ಹೀಗೆ ಬರುವ ಬಡ್ಡಿಯಿಂದ ಅಲ್ಲಿಯೇ ತಿಂಗಳು ತುಂಬುವ ಆರ್‌.ಡಿ ಮಾಡಿ. ಉಳಿದ ₹ 20–25 ಲಕ್ಷ ₹ 5 ಲಕ್ಷದಂತೆ ವಿಂಗಡಿಸಿ ನಿಮ್ಮ ಮನೆಗೆ ಸಮೀಪದ ಬ್ಯಾಂಕ್‌ನಲ್ಲಿ ಒಮ್ಮೆಲೇ ಬಡ್ಡಿ ಬರುವ ಯೋಜನೆಯಲ್ಲಿ 5 ವರ್ಷಗಳ ಅವಧಿಗೆ ಇಡಿ. ಎಲ್ಲಾ ಠೇವಣಿಗೂ ಮಕ್ಕಳ ಹಾಗೂ ನಿಮ್ಮ ಹೆಂಡತಿಯ ನಾಮ ನಿರ್ದೇಶನ ಮಾಡಿ. ಕೃಷಿ ಜಮೀನಿನಿಂದ ಬರುವ ಆದಾಯಕ್ಕೆ ಸೆಕ್ಷನ್‌ 10(I) ಆಧಾರದ ಮೇಲೆ ಸಂಪೂರ್ಣ ವಿನಾಯಿತಿ ಇದೆ. ಬ್ಯಾಂಕ್‌ ಠೇವಣಿ ಮೇಲಿನ ಬಡ್ಡಿಯಲ್ಲಿ ಗರಿಷ್ಠ ₹ 50 ಸಾವಿರದ ತನಕ ಸೆಕ್ಷನ್‌ 80ಟಿಟಿಬಿ ಆಧಾರದ ಮೇಲೆ ವಿನಾಯಿತಿ ಇದೆ. ಸ್ಟ್ಯಾಂಡರ್ಡ್‌ ಡಿಡಕ್ಷನ್‌ ಸೆಕ್ಷನ್‌ 16ರ ಆಧಾರದ ಮೇಲೆ ₹ 50 ಸಾವಿರ ಒಟ್ಟು ಆದಾಯದಿಂದ ಕಳೆದು ತೆರಿಗೆ ಕಟ್ಟಬೇಕಾಗುತ್ತದೆ. ನಿಮ್ಮ ವಾರ್ಷಿಕ ಪಿಂಚಣಿ ಆದಾಯ ₹ 3.12 ಲಕ್ಷ, ಬಡ್ಡಿ ಆದಾಯ ಗರಿಷ್ಠ ₹ 3 ಲಕ್ಷ. ಇದರಲ್ಲಿ ಕ್ರಮವಾಗಿ ಸೆಕ್ಷನ್ 80ಟಿಟಿಬಿ ಹಾಗೂ ಸೆಕ್ಷನ್‌ 16ರಲ್ಲಿ ಬರುವ ಒಟ್ಟು ಮೊತ್ತ ₹ 1 ಲಕ್ಷ ಕಳೆದಲ್ಲಿ ನಿಮ್ಮ ವಾರ್ಷಿಕ ಆದಾಯ ₹ 5.12 ಲಕ್ಷ ಆಗಲಿದೆ.  ಅಂಚೆ ಕಚೇರಿ ಹಿರಿಯ ನಾಗರಿಕರ ಠೇವಣಿಯಲ್ಲಿ ಹಣ ತೊಡಗಿಸಿರುವುದರಿಂದ ಸೆಕ್ಷನ್‌ 80ಸಿ ಆಧಾರದ ಮೇಲೆ ಗರಿಷ್ಠ ₹ 1.50 ಲಕ್ಷ ವಿನಾಯಿತಿ ಇರುವುದರಿಂದ ನಿಮಗೆ ಆದಾಯ ತೆರಿಗೆ ಬರುವುದಿಲ್ಲ. ಆದರೆ ಐ.ಟಿ ರಿಟರ್ನ್ಸ್‌ ತುಂಬಬೇಕಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು