ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ: ಸರ್ಕಾರಿ, ಖಾಸಗಿ ಕಂಪನಿಗಳ ಸಾಲಪತ್ರದಲ್ಲಿ ಹೂಡಿಕೆ ಭದ್ರವೇ?

Last Updated 26 ಜುಲೈ 2022, 19:09 IST
ಅಕ್ಷರ ಗಾತ್ರ

ಮಲ್ಲಿಕಾರ್ಜುನಯ್ಯ,ಗಿರಿನಗರ, ಬೆಂಗಳೂರು‌

lಪ್ರಶ್ನೆ: ಬಹಳಷ್ಟು ಸರ್ಕಾರಿ ಕಂಪನಿಗಳು ಮತ್ತು ಖಾಸಗಿ ಕಂಪನಿಗಳು ಬಾಂಡ್ (ಸಾಲಪತ್ರ) ವಿತರಿಸುತ್ತವೆ. ಇವುಗಳಲ್ಲಿ ಹೂಡಿಕೆ ಭದ್ರವೇ? ಇವುಗಳಲ್ಲಿ ನಾವು ಹಣ ತೊಡಗಿಸುವ ಮುನ್ನ ಏನೇನು ಗಮನಿಸಬೇಕು?

ಉತ್ತರ: ಯಾವುದೇ ಕಂಪನಿ ತನ್ನ ಹಣಕಾಸು ಅಗತ್ಯಗಳಿಗಾಗಿ ಬಾಂಡ್ ವಿತರಿಸಿ ಸಾರ್ವಜನಿಕರಿಂದ ಅಥವಾ ಇತರ ಸಂಸ್ಥೆಗಳಿಂದ ಹಣ ಸಂಗ್ರಹಿಸುತ್ತದೆ. ವ್ಯಾಪಾರ ವಹಿವಾಟಿಗೆ ಬ್ಯಾಂಕ್‌ನಿಂದ ಸಾಲ ಪಡೆಯುವಾಗ ಸಾಮಾನ್ಯವಾಗಿ ಸುಮಾರು ಶೇಕಡ 12ರಿಂದ ಶೇ 14ರತನಕ ಬಡ್ಡಿ ವಿಧಿಸಲಾಗುತ್ತದೆ. ಹೀಗಾಗಿ ಉತ್ತಮ ವ್ಯಾಪಾರ ವಹಿವಾಟು ಹಾಗೂ ಮರುಪಾವತಿ ಸಾಮರ್ಥ್ಯವುಳ್ಳ ಕಂಪನಿಗಳು ಹಣಕಾಸಿನ ಅಗತ್ಯ ಇರುವಾಗ ಅಧಿಕ ಬಡ್ಡಿಯ ಬ್ಯಾಂಕ್ ಸಾಲಗಳ ಮೊರೆ ಹೋಗದೆ ಸಾರ್ವಜನಿಕರಿಗೆ ನೇರವಾಗಿ ಸಾಲಪತ್ರಗಳನ್ನು ವಿತರಿಸಿ ಹಣ ಸಂಗ್ರಹಿಸುತ್ತವೆ. ಇದಕ್ಕೆ ಪ್ರತಿಯಾಗಿ ಹೂಡಿಕೆದಾರರಿಗೆ ಶೇ 8ರಿಂದ ಶೇ 10ರತನಕ ಬಡ್ಡಿ ನೀಡುತ್ತವೆ. ಸಾರ್ವಜನಿಕ ಹೂಡಿಕೆದಾರರಿಗೆ ನಿಶ್ಚಿತ ಠೇವಣಿಯ ಮೇಲೆ ಬ್ಯಾಂಕ್‌ಗಳು ನೀಡುವ ಗರಿಷ್ಠ ಬಡ್ಡಿದರಕ್ಕಿಂತ ಬಾಂಡ್ ಬಡ್ಡಿ ದರ ಶೇ 2ರಿಂದ ಶೇ 3ರಷ್ಟು ಹೆಚ್ಚು ಇರುತ್ತದೆ. ಸಾಲಪತ್ರ ವಿತರಿಸುವ ಕಂಪನಿಗಳು ಅಧಿಕ ಬಡ್ಡಿಯ ಬ್ಯಾಂಕ್ ಸಾಲದ ಮೊರೆ ಹೋಗಬೇಕಾಗಿಲ್ಲ, ಹೂಡಿಕೆದಾರರು ಬ್ಯಾಂಕ್‌ಗಳು ಠೇವಣಿಗಳ ಮೇಲೆ ನೀಡುವ ಕಡಿಮೆ ಬಡ್ಡಿಗೆ ತೃಪ್ತಿಪಟ್ಟುಕೊಳ್ಳಬೇಕಿಲ್ಲ. ಇಂತಹ ವ್ಯವಸ್ಥೆಯನ್ನು ಬಾಂಡ್ ಮಾರುಕಟ್ಟೆ ಕಲ್ಪಿಸಿಕೊಡುತ್ತದೆ. ಇದು ಕಂಪನಿ ಹಾಗೂ ಹೂಡಿಕೆದಾರರ ನಡುವಿನ ನೇರ ವ್ಯವಹಾರ.

ಬಾಂಡ್‌ ಭದ್ರತೆ ಹಾಗೂ ಸುರಕ್ಷತೆಯ ವಿಚಾರ: ಹೂಡಿಕೆದಾರರಿಗೆ ಅನುಕೂಲ ಮಾಡಿಕೊಡಲು ಹಾಗೂ ಸುಲಭವಾಗಿ ನಿರ್ಧಾರ ಕೈಗೊಳ್ಳುವಂತೆ ಆಗಲು, ಸಾಲಪತ್ರ ವಿತರಿಸುವ ಕಂಪನಿಗಳು ಕೆಲವು ಅಂಶಗಳನ್ನು ಅಗತ್ಯವಾಗಿ ಪ್ರಕಟಿಸಬೇಕು. AAA ರೇಟಿಂಗ್ ಎನ್ನುವುದು ಯಾವುದೇ ಪ್ರಮುಖ ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳು ಬಾಂಡ್‌ಗಳಿಗೆ ಕೊಡುವ ಅತ್ಯಧಿಕ ರೇಟಿಂಗ್. ನಂತರದ ಸ್ಥಾನದಲ್ಲಿ AA ಹಾಗೂ A ರೇಟಿಂಗ್ ಇರುತ್ತವೆ. A ರೇಟಿಂಗ್ ಇರುವ ಯಾವುದೇ ಬಾಂಡ್‌ಅನ್ನು ಉತ್ತಮ ಆರ್ಥಿಕ ಕ್ಷಮತೆ ಹೊಂದಿರುವ ಬಾಂಡ್ ಎಂದು ಪರಿಗಣಿಸಲಾಗುತ್ತದೆ. ಅಂದರೆ ಸಾಲಪತ್ರ ನೀಡುವ ಕಂಪನಿ ಅದರ ಹೂಡಿಕೆದಾರರಿಗೆ ಹಣಕಾಸಿನ ಜವಾಬ್ದಾರಿಗಳನ್ನು ಪೂರೈಸುವ ಬಲವಾದ ಸಾಧ್ಯತೆಯನ್ನು ಹೊಂದಿದೆ ಎಂದು ಅರ್ಥ. ಅದೇ ರೀತಿ B ರೇಟಿಂಗ್ ಇರುವ ಬಾಂಡ್‌ಗಳು ಮಧ್ಯಮ ಗುಣಮಟ್ಟದ ಆರ್ಥಿಕ ಕ್ಷಮತೆ ಹೊಂದಿರುತ್ತವೆ. C ರೇಟಿಂಗ್ ಅತಿ ಹೆಚ್ಚಿನ ಆರ್ಥಿಕ ಅಪಾಯ ಹೊಂದಿದ್ದು, D ರೇಟಿಂಗ್ ಇರುವ ಬಾಂಡ್‌ಗಳು ಹಣದ ಮರುಪಾವತಿಯಲ್ಲಿ ಈಗಾಗಲೇ ತೊಂದರೆಗೆ ಒಳಗಾಗಿವೆ ಎಂದು ಅರ್ಥ. ಹೀಗಾಗಿ ಯಾವುದೇ ಬಾಂಡ್ ಖರೀದಿಸುವ ಮುನ್ನ ಮೇಲಿನ ಅಂಶಗಳನ್ನು ಪರಿಗಣಿಸಿ ನಿರ್ಧಾರ ಕೈಗೊಳ್ಳುವುದು ಒಳಿತು.

ಚಂದ್ರಶೇಖರ್ ಕೆ.ಎನ್.,ಬೆಂಗಳೂರು

lಪ್ರಶ್ನೆ: ನಾನು ಕೇಂದ್ರ ಸರ್ಕಾರದ ನಿವೃತ್ತ ಉದ್ಯೋಗಿ. ವಯಸ್ಸು 66 ವರ್ಷ. ವಾರ್ಷಿಕ ₹ 4,15,436 ನಿವೃತ್ತಿ ವೇತನ ಪಡೆಯುತ್ತಿದ್ದೇನೆ. ಇದರೊಡನೆ ₹ 2,91,375 ಬಡ್ಡಿ ಆದಾಯವಿದೆ. ನಾನು ಆರೋಗ್ಯ ವಿಮಾ ಯೋಜನೆಗೆ ಸಂಬಂಧಿಸಿದಂತೆ ₹ 50,000 ಕಟ್ಟಿರುತ್ತೇನೆ. ಹಿರಿಯ ನಾಗರೀಕನಾದ ನನಗೆ ಬರಬಹುದಾದ ತೆರಿಗೆ ಎಷ್ಟೆಂದು ತಿಳಿಸಬಹುದೇ?

ಉತ್ತರ: ನಿಮ್ಮ ವಯಸ್ಸು 60 ವರ್ಷ ಮೀರಿರುವುದರಿಂದ, ಹಿರಿಯ ನಾಗರೀಕರಾಗಿರುತ್ತೀರಿ. ಹೀಗಾಗಿ ನಿಮ್ಮ ಒಟ್ಟು ಆದಾಯದಲ್ಲಿ ಮೊದಲ ₹ 3 ಲಕ್ಷದ ಆದಾಯಕ್ಕೆ ತೆರಿಗೆ ವಿನಾಯಿತಿ ಇದೆ. ನಿಮಗೆ ₹ 50,000ದ ಮೂಲ ಆದಾಯ ಕಡಿತ ಇದೆ. ನೀವು ಪಾವತಿಸುವ ಆರೋಗ್ಯ ವಿಮಾ ಯೋಜನೆಯ ಮೇಲೆ ಸೆಕ್ಷನ್ 80ಡಿ ಅಡಿ ₹ 50,000 ಕಡಿತ ಸಿಗುತ್ತದೆ. ಮಾತ್ರವಲ್ಲದೆ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಟಿಟಿಬಿ ಅಡಿ, ಬ್ಯಾಂಕ್‌, ಅಂಚೆ ಕಚೇರಿ ಅಥವಾ ಸಹಕಾರಿ ಬ್ಯಾಂಕ್‌ಗಳಲ್ಲಿಟ್ಟ ಠೇವಣಿಗಳಿಂದ ಹಿರಿಯ ನಾಗರೀಕರು ಗಳಿಸುವ ಬಡ್ಡಿಯ ಮೇಲೆ ₹ 50 ಸಾವಿರದವರೆಗೆ ತೆರಿಗೆ ವಿನಾಯಿತಿ ಇದೆ. ಉಳಿತಾಯ ಠೇವಣಿ ಮತ್ತು ಸ್ಥಿರ ಠೇವಣಿಗಳ ಮೇಲೆ ಗಳಿಸಿದ ಬಡ್ಡಿ ಎರಡೂ ಈ ನಿಬಂಧನೆಯ ಅಡಿಯಲ್ಲಿ ವಿನಾಯಿತಿಗೆ ಅರ್ಹ.

ನಿಮಗೆ ಮೇಲಿನ ಎಲ್ಲಾ ವರ್ಗಗಳಲ್ಲಿ ಒಟ್ಟು ₹ 1.50 ಲಕ್ಷದ ಆದಾಯದ ಮೇಲೆ ತೆರಿಗೆ ಬರುವುದಿಲ್ಲ. ಮೊದಲ ₹ 3 ಲಕ್ಷಕ್ಕೆ ತೆರಿಗೆ ಇರುವುದಿಲ್ಲ. ನಂತರ, ₹ 3 ಲಕ್ಷದಿಂದ ₹ 5 ಲಕ್ಷದವರೆಗೆ ಶೇ 5ರಷ್ಟು ತೆರಿಗೆ, ಹಾಗೂ ₹ 5 ಲಕ್ಷಕ್ಕೂ ಮಿಕ್ಕ ₹ 10 ಲಕ್ಷದ ತನಕದ ಆದಾಯಕ್ಕೆ ಶೇ 20ರಷ್ಟು ತೆರಿಗೆ ಇರುತ್ತದೆ. ಉಳಿದ ಮೊತ್ತವಾದ ₹ 5.56 ಲಕ್ಷವನ್ನಷ್ಟೇ ತೆರಿಗೆಗೊಳಪಡಿಸಲಾಗುತ್ತದೆ. ಮೇಲಿನ ದರಗಳಂತೆ ಅನ್ವಯವಾಗುವ ಮೊತ್ತಕ್ಕೆ ಶೇ 4ರಷ್ಟು ಸೆಸ್ ಸೇರಿ ₹ 22 ಸಾವಿರ ಅಂದಾಜು ತೆರಿಗೆ ಬರುತ್ತದೆ. ಈಗಾಗಲೇ ನಿಮ್ಮ ಬಡ್ಡಿ ಅಥವಾ ಪಿಂಚಣಿ ವೇತನದಲ್ಲಿ ತೆರಿಗೆ ಮುರಿದುಕೊಂಡಿದ್ದಲ್ಲಿ, ಉಳಿದ ಮೊತ್ತವನ್ನಷ್ಟೇ ನೀವು ಪಾವತಿಸಬೇಕಾಗಿರುತ್ತದೆ.

ಸೆಕ್ಷನ್ 80ಸಿ ಅಡಿ ಪರಿಗಣಿಸಲಾಗುವ ಯಾವುದೇ ಹೂಡಿಕೆ, ಉಳಿತಾಯವನ್ನು ಆಯಾ ಆರ್ಥಿಕ ವರ್ಷದಲ್ಲಿ ನೀವು ಮಾಡಿದ್ದರೆ ಆ ಮೊತ್ತಕ್ಕೂ ತೆರಿಗೆ ವಿನಾಯಿತಿ ಇರುತ್ತದೆ. ಈ ಸೆಕ್ಷನ್ ಅಡಿ ತೆರಿಗೆ ಲಾಭ ಪಡೆಯಲು ನೀವು ಅಂಚೆ ಕಚೇರಿಯಲ್ಲಿ ಅಥವಾ ತೆರಿಗೆ ವಿನಾಯಿತಿ ಸಿಗುವ 5 ವರ್ಷಗಳ ಬ್ಯಾಂಕ್ ಠೇವಣಿಗಳಲ್ಲಿ ₹ 1.50 ಲಕ್ಷದತನಕ ಪ್ರತಿ ವರ್ಷ ಹೂಡಿಕೆ ಮಾಡುವ ಮೂಲಕ ತೆರಿಗೆ ಪ್ರಮಾಣವನ್ನು ತಗ್ಗಿಸಬಹುದು.

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ.
ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001
ಇ–ಮೇಲ್‌: businessdesk@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT