ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕಾಸು ಸಾಕ್ಷರತೆ: ಅಲ್ಪಾವಧಿ ಹೂಡಿಕೆಗೆ ಮಹಿಳಾ ಸಮ್ಮಾನ್

Last Updated 5 ಫೆಬ್ರುವರಿ 2023, 21:34 IST
ಅಕ್ಷರ ಗಾತ್ರ

ಯಾವುದೇ ಹೂಡಿಕೆ ಉತ್ತಮ ಎನ್ನಲು ಎರಡು ಅಂಶಗಳು ಬಹಳ ಮುಖ್ಯ. ಒಂದನೆಯದ್ದು ಹೂಡಿಕೆಯ ಸುರಕ್ಷತೆ, ಎರಡನೆಯದ್ದು ಲಾಭಾಂಶ. ಈ ಎರಡೂ ಅಂಶಗಳನ್ನು ಒಳಗೊಂಡಿರುವ ಜೊತೆಗೆ ಸುಲಭವಾಗಿ ನಗದೀಕರಣಕ್ಕೂ ಅವಕಾಶವಿರುವ ಹೂಡಿಕೆ ಆಯ್ಕೆಯೊಂದನ್ನು ಕೇಂದ್ರ ಸರ್ಕಾರವು ಮಹಿಳೆಯರಿಗಾಗಿ ಬಜೆಟ್ ಮೂಲಕ ಪ್ರಕಟಿಸಿದೆ. ಅದೇ ಮಹಿಳಾ ಸಮ್ಮಾನ್ ಉಳಿತಾಯ ಪತ್ರ. ಏನಿದರ ವೈಶಿಷ್ಟ್ಯ ಎಂಬುದನ್ನು ತಿಳಿಯೋಣ.

ಮಹಿಳಾ ಸಮ್ಮಾನ್ ಉಳಿತಾಯ ಪತ್ರ: ಮಹಿಳೆಯರಿಗೆ ಮತ್ತು ಹೆಣ್ಣು ಮಕ್ಕಳಿಗೆ ಸುರಕ್ಷಿತವಾಗಿ ಹೂಡಿಕೆ ಮಾಡಲು ಅನುವಾಗುವಂತೆ 2023–24ನೆಯ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಮಹಿಳಾ ಸಮ್ಮಾನ್ ಉಳಿತಾಯ ಪತ್ರ (ಎಂಎಸ್‌ಎಸ್‌ಸಿ) ಯೋಜನೆಯನ್ನು ಪ್ರಕಟಿಸಲಾಗಿದೆ. ಈ ವರ್ಷದ ಏಪ್ರಿಲ್‌ನಿಂದ 2025ರ ಮಾರ್ಚ್‌ವರೆಗೆ ಈ ಯೋಜನೆ ಚಾಲ್ತಿಯಲ್ಲಿ ಇರಲಿದೆ.

ಶೇಕಡ 7.5ರ ಬಡ್ಡಿ ಲಾಭಾಂಶ ಖಾತ್ರಿ ನೀಡುವ ಈ ಯೋಜನೆಯಲ್ಲಿ ಎರಡು ವರ್ಷಗಳ ಅವಧಿಗೆ ₹ 2 ಲಕ್ಷ ಹೂಡಿಕೆ ಮಾಡಬೇಕಾಗುತ್ತದೆ. ಅಗತ್ಯಬಿದ್ದಾಗ ಅವಧಿಗೆ ಮುನ್ನ ಹಣವನ್ನು ಭಾಗಶಃ ಹಿಂಪಡೆದುಕೊಳ್ಳಲು ಮಹಿಳಾ ಸಮ್ಮಾನ್ ಉಳಿತಾಯ ಪತ್ರ ಯೋಜನೆ ಅವಕಾಶ ಕಲ್ಪಿಸುತ್ತದೆ. ಆದರೆ ಹೂಡಿಕೆ ಮಾಡಿದವರಿಗೆ ಯಾವುದೇ ತೆರಿಗೆ ಅನುಕೂಲ ಸಿಗುವುದಿಲ್ಲ.

ನೀವು ಮಹಿಳಾ ಸಮ್ಮಾನ್ ಉಳಿತಾಯ ಪತ್ರದಲ್ಲಿ ₹ 2 ಲಕ್ಷ ಹೂಡಿಕೆ ಮಾಡಿದರೆ, ಮೊದಲ ವರ್ಷ ₹ 15,000 ಬಡ್ಡಿ ಮತ್ತು ಎರಡನೇ ವರ್ಷ ₹ 16,125 ಬಡ್ಡಿ ಲಾಭ ಸಿಗುತ್ತದೆ. ಇದರಿಂದಾಗಿ ಎರಡು ವರ್ಷಗಳಲ್ಲಿ ನಿಮ್ಮ ₹ 2 ಲಕ್ಷ ಹೂಡಿಕೆ ಮೊತ್ತವು ₹ 2.31 ಲಕ್ಷವಾಗುತ್ತದೆ. (ಪಟ್ಟಿಯನ್ನು ಗಮನಿಸಿ.)

ಸುಕನ್ಯಾ ಸಮೃದ್ಧಿ ಜೊತೆ ಹೋಲಿಕೆ: ಹೆಣ್ಣು ಮಕ್ಕಳಿಗಾಗಿ ಈಗಾಗಲೇ ಸುಕನ್ಯಾ ಸಮೃದ್ಧಿ ಯೋಜನೆ ಜಾರಿಯಲ್ಲಿದೆ. 10 ವರ್ಷ ವಯಸ್ಸಿನೊಳಗಿನ ಹೆಣ್ಣು ಮಕ್ಕಳ ಹೆಸರಿನಲ್ಲಿ ಈ ಖಾತೆ ತೆರೆಯಬಹುದಾಗಿದ್ದು ಅವರಿಗೆ 21 ವರ್ಷ ವಯಸ್ಸಾದ ನಂತರ ಯೋಜನೆಯ ಹಣ ಮೆಚ್ಯೂರಿಟಿಗೆ ಬರುತ್ತದೆ. ಹಣದ ಅಗತ್ಯವಿದೆ ಎಂದಾಗ ಈ ಯೋಜನೆಯಲ್ಲಿ ನಗದೀಕರಣ ಕಷ್ಟ. ಹೆಣ್ಣು ಮಗುವಿಗೆ 18 ವರ್ಷ ತುಂಬಿದ ಬಳಿಕವಷ್ಟೇ ಶಿಕ್ಷಣದ ಉದ್ದೇಶಕ್ಕಾಗಿ ಶೇ 50ರಷ್ಟು ಹಣ ಹಿಂಪಡೆಯಬಹುದು. ಪೂರ್ತಿ ಹಣ ಪಡೆಯಲು ಮೆಚ್ಯೂರಿಟಿ ಅವಧಿ ಪೂರೈಸಬೇಕು.

ಆದರೆ ಮಹಿಳಾ ಸಮ್ಮಾನ್ ಉಳಿತಾಯ ಪತ್ರ ಯೋಜನೆಯಲ್ಲಿ ಬೇಕೆಂದಾಗ ಹಣ ಪಡೆದುಕೊಳ್ಳುವ ಅವಕಾಶವಿದೆ. ಹೂಡಿಕೆಗೆ ವಯಸ್ಸಿನ ಮಿತಿಯಿಲ್ಲ. ಇನ್ನು, ಹೂಡಿಕೆ ಅವಧಿ 2 ವರ್ಷ ಮಾತ್ರ ಆಗಿರುವುದರಿಂದ ಹೂಡಿಕೆದಾರರಿಗೆ ಕಷ್ಟವೆನಿಸುವುದಿಲ್ಲ. ಬಡ್ಡಿ ವಿಚಾರಕ್ಕೆ ಬಂದರೆ, ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಶೇ 7.6ರಷ್ಟು ಬಡ್ಡಿ ಸಿಗುತ್ತದೆ, ಮಹಿಳಾ ಸಮ್ಮಾನ್ ಉಳಿತಾಯ ಪತ್ರ ಯೋಜನೆಯಲ್ಲಿ ಶೇ 7.5ರಷ್ಟು ಬಡ್ಡಿ ಲಾಭ ಸಿಗುತ್ತೆದೆ.

ಅಲ್ಪಾವಧಿ ಹೂಡಿಕೆಯ ಉದ್ದೇಶ ಇರುವವರಿಗೆ ಮಹಿಳಾ ಸಮ್ಮಾನ್ ಉತ್ತಮವಾಗಿದೆ. ದೀರ್ಘಾವಧಿ ಹೂಡಿಕೆಗೆ ಸುಕನ್ಯಾ ಸಮೃದ್ಧಿ ಒಂದು ಒಳ್ಳೆಯ ಆಯ್ಕೆ.

ನಿಶ್ಚಿತ ಠೇವಣಿಗೆ (ಎಫ್‌.ಡಿ) ಹೋಲಿಸಿದರೆ ಮಹಿಳಾ ಸಮ್ಮಾನ್ ಯೋಜನೆಯು ಹೂಡಿಕೆ ಹೂಡಿಕೆ ಆಯ್ಕೆ ಅನಿಸಿಕೊಳ್ಳುತ್ತದೆ. ಈಗಿನ ಸಂದರ್ಭದಲ್ಲಿ ನಿಶ್ಚಿತ ಠೇವಣಿಗಳಲ್ಲಿ ಬ್ಯಾಂಕುಗಳು ಗರಿಷ್ಠ ಶೇ 7ರಿಂದ ಶೇ 7.25ರಷ್ಟು ಬಡ್ಡಿ ನಿಗದಿ ಮಾಡುತ್ತಿವೆ. ಆದರೆ ಮಹಿಳಾ ಸಮ್ಮಾನ್ ಯೋಜನೆಯಲ್ಲಿ ಶೇ 7.50ರಷ್ಟು ಬಡ್ಡಿ ಲಾಭ ಲಭಿಸುತ್ತದೆ.

ಬಜೆಟ್ ವಾರದಲ್ಲಿ ಜಿಗಿದ ಷೇರುಪೇಟೆ

ಫೆಬ್ರುವರಿ 3ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಉತ್ತಮ ಗಳಿಕೆ ದಾಖಲಿಸಿವೆ. 60,841 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 2.54ರಷ್ಟು ಗಳಿಕೆ ಕಂಡಿದೆ. 17,854 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 1.41ರಷ್ಟು ಜಿಗಿದಿದೆ. ಕೇಂದ್ರ ಬಜೆಟ್ ಘೋಷಣೆಗಳು, ಅದಾನಿ ಸಮೂಹ ಎದುರಿಸುತ್ತಿರುವ ಆರೋಪ, ಕಂಪನಿಗಳ ತ್ರೈಮಾಸಿಕ ಸಾಧನೆಯಲ್ಲಿ ಮಿಶ್ರ ಫಲಿತಾಂಶ, ಅಮೆರಿಕ ಫೆಡರಲ್ ಬ್ಯಾಂಕ್, ಯೂರೋಪಿಯನ್ ಸೆಂಟ್ರಲ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಇಂಗ್ಲೆಂಡ್‌ನಿಂದ ಬಡ್ಡಿ ದರ ಹೆಚ್ಚಳ, ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಮಾರಾಟದ ಒತ್ತಡ ಸೇರಿ ಹಲವು ಅಂಶಗಳು ಷೇರುಪೇಟೆ ಸೂಚ್ಯಂಕಗಳ ಮೇಲೆ ಪರಿಣಾಮ ಬೀರಿವೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಎಫ್ಎಂಸಿಜಿ ಸೂಚ್ಯಂಕ ಶೇ 3.5ರಷ್ಟು, ನಿಫ್ಟಿ ಕನ್ಸ್ಯೂಮರ್ ಡೂರೆಬಲ್ಸ್ ಸೂಚ್ಯಂಕ ಶೇ 3.3ರಷ್ಟು, ನಿಫ್ಟಿ ಬ್ಯಾಂಕ್ ಸೂಚ್ಯಂಕ ಶೇ 2.86ರಷ್ಟು ಮತ್ತು ನಿಫ್ಟಿ ಮಾಹಿತಿ ತಂತ್ರಜ್ಞಾನ ಸೂಚ್ಯಂಕ ಶೇ 2.79ರಷ್ಟು ಜಿಗಿದಿವೆ. ನಿಫ್ಟಿ ಅನಿಲ ಮತ್ತು ತೈಲ ಸೂಚ್ಯಂಕ ಶೇ 9ರಷ್ಟು, ಲೋಹ ಸೂಚ್ಯಂಕ ಶೇ 7.6ರಷ್ಟು ಮತ್ತು ಎನರ್ಜಿ ಸೂಚ್ಯಂಕ ಶೇ 6.3ರಷ್ಟು ಕುಸಿದಿವೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಕಳೆದ ವಾರ ₹ 14,445.02 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶಿಯ ಸಾಂಸ್ಥಿಕ ಹೂಡಿಕೆದಾರರು ₹ 14,184.51 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಬಿಎಸ್ಇ ಲಾರ್ಜ್ ಕ್ಯಾಪ್‌ನಲ್ಲಿ ನೈಕಾ, ಶ್ರೀ ಸಿಮೆಂಟ್ಸ್, ಐಟಿಸಿ, ಎಸ್‌ಬಿಐ ಕಾರ್ಡ್ಸ್ ಆ್ಯಂಡ್ ಪೇಮೆಂಟ್ಸ್, ಅಲ್ಟ್ರಾಟೆಕ್ ಸಿಮೆಂಟ್, ಐಸಿಐಸಿಐ ಬ್ಯಾಂಕ್, ಟೈಟನ್, ಬ್ರಿಟಾನಿಯಾ ಇಂಡಸ್ಟ್ರೀಸ್, ಇನ್ಫೊಸಿಸ್ ಮತ್ತು ಮಹಿಂದ್ರ ಆ್ಯಂಡ್ ಮಹಿಂದ್ರ ಶೇ 5ರಿಂದ ಶೇ 12ರಷ್ಟು ಜಿಗಿದಿವೆ. ಅದಾನಿ ಟೋಟಲ್ ಗ್ಯಾಸ್, ಅದಾನಿ ಎಂಟರ್‌ಪ್ರೈಸಸ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಟ್ರಾನ್ಸ್‌ಮಿಷನ್, ಅದಾನಿ ವಿಲ್ಮರ್, ಅದಾನಿ ಪೋರ್ಟ್ಸ್ ಆ್ಯಂಡ್‌ ಸ್ಪೆಷಲ್ ಎಕನಾಮಿಕ್ ಜೋನ್, ಎಚ್‌ಡಿಎಫ್‌ಸಿ ಲೈಫ್ ಇನ್ಶೂರೆನ್ಸ್ ಕಂಪನಿ, ಡಿವೀಸ್ ಲ್ಯಾಬೊರೇಟರೀಸ್ ಮತ್ತು ಐಸಿಐಸಿಐ ಪ್ರೂಡೆನ್ಷಿಯಲ್ ಲೈಫ್ ಇನ್ಶೂರೆನ್ಸ್ ಕಂಪನಿ ಶೇ 10ರಿಂದ ಶೇ 45ರಷ್ಟು ಕುಸಿದಿವೆ.

ಮುನ್ನೋಟ: ಈ ವಾರ ಎನ್‌ಡಿಟಿವಿ, ಎನ್‌ಸಿಸಿ, ಹೋಂಡಾ ಪವರ್, ಜೆಟ್ ಏರ್‌ವೇಸ್, ಎಂಆರ್‌ಎಫ್, ಲುಪಿನ್, ಏರ್‌ಟೆಲ್, ಬಾರ್ಬಿಕ್ಯೂ ನೇಷನ್, ಅದಾನಿ ಪವರ್, ಅದಾನಿ ಗ್ರೀನ್, ಅದಾನಿ ಪೋರ್ಟ್ಸ್, ಟಿಎನ್ ಪೆಟ್ರೋ, ಟಾಟಾ ಸ್ಟೀಲ್, ಬಾಂಬೆ ಡೈಯಿಂಗ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸುತ್ತಿವೆ. ಫೆಬ್ರುವರಿ 6ರಿಂದ 8ರವರೆಗೆ ಆರ್‌ಬಿಐ ಹಣಕಾಸು ನೀತಿ ಸಮಿತಿ ಸಭೆ ನಡೆಯಲಿದ್ದು ಬಡ್ಡಿ ದರ ಹೆಚ್ಚಳದ ಬಗ್ಗೆ ತೀರ್ಮಾನ ಹೊರಬೀಳುವ ಸಾಧ್ಯತೆ ಇದೆ. ಜಾಗತಿಕ ವಿದ್ಯಮಾನಗಳ ಜೊತೆ ದೇಶಿ ಬೆಳವಣಿಗಗಳು ಷೇರುಪೇಟೆ ಮೇಲೆ ಪರಿಣಾಮ ಬೀರಲಿವೆ.

(ಲೇಖಕ ಚಾರ್ಟರ್ಡ್ ಅಕೌಂಟೆಂಟ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT