ಗುರುವಾರ , ಆಗಸ್ಟ್ 18, 2022
26 °C

ಮೊದಲ ಸಂಬಳ: ಇವು ನೆನಪಿರಲಿ

ರಾಜೇಶ್ ಕುಮಾರ್ ಟಿ.ಆರ್. Updated:

ಅಕ್ಷರ ಗಾತ್ರ : | |

ಕೆಲಸಕ್ಕೆ ಸೇರಿದ ನಂತರ, ಮೊದಲ ಸಂಬಳದಲ್ಲಿ ಅಮ್ಮನಿಗೆ ಒಡವೆ ಮಾಡಿಸಿ ಕೊಡಬೇಕು, ತಂದೆಗೊಂದು ಒಳ್ಳೆಯ ಸ್ಕೂಟರ್ ಕೊಡಿಸಬೇಕು, ತಂಗಿಗೊಂದು ಡ್ರೆಸ್ ಕೊಡಿಸಬೇಕು, ಅಜ್ಜ–ಅಜ್ಜಿಗೆ ಒಳ್ಳೆಯ ಬಟ್ಟೆ ತಂದುಕೊಡಬೇಕು... ಹೀಗೆ= ಪ್ರತಿಯೊಬ್ಬರಿಗೂ ಮೊದಲ ಸಂಬಳವನ್ನು ಖರ್ಚು ಮಾಡುವ ಬಗ್ಗೆ ಹಲವು ಕನಸುಗಳಿರುತ್ತವೆ.

ಆದರೆ ಕೆಲಸಕ್ಕೆ ಸೇರಿ, ಮೊದಲ ಸಂಬಳ ಪಡೆದಾಗ ಬಹುತೇಕರಿಗೆ ಅದನ್ನು ಹೇಗೆ ನಿರ್ವಹಣೆ ಮಾಡಬೇಕು ಎನ್ನುವ ಅಂದಾಜಿರುವುದಿಲ್ಲ. ನಮ್ಮ ಶಿಕ್ಷಣವು ಹಣಕಾಸು ನಿರ್ವಹಣೆಯ ಬಗ್ಗೆ ಅಷ್ಟೇನೂ ತಿಳಿಸಿಕೊಡುವುದಿಲ್ಲ. ಹೀಗಾಗಿ, ಅನೇಕರು ಈ ಹಂತದಲ್ಲಿ ಎಡವುತ್ತಾರೆ. ಹಾಗಾದರೆ ಮೊದಲ ಸಂಬಳದ ಹಣವನ್ನು ಅರ್ಥಪೂರ್ಣವಾಗಿ ಖರ್ಚು ಮಾಡುವುದು ಹೇಗೆ?

1 ಹೊಡಿಕೆ ಆರಂಭಿಸಿ: ಗುಬ್ಬಚ್ಚಿಯೊಂದು ಧಾನ್ಯದ ಒಂದೊಂದೇ ಕಾಳನ್ನು ಹೆಕ್ಕಿ ಹೆಕ್ಕಿ ಡಬ್ಬದಲ್ಲಿ ಇಡುತ್ತಿತ್ತು. ಕೆಲವು ದಿನಗಳ ನಂತರ ಆ ಡಬ್ಬ ಪೂರ್ತಿ ಧಾನ್ಯ ಸಂಗ್ರಹವಾಗಿತ್ತು ಎನ್ನುವ ಕಥೆಯನ್ನು ನೀವು ಬಾಲ್ಯದಲ್ಲಿ ಕೇಳಿರಬೇಕಲ್ಲಾ? ಹೌದು ಹನಿ ಹನಿ ಕೂಡಿದರೆ ಹಳ್ಳ ಎನ್ನುವ ಮಾತಿನಂತೆ ಸಣ್ಣ ಪ್ರಮಾಣದಲ್ಲಾದರೂ ಸರಿ ಹೂಡಿಕೆಯನ್ನು ಮೊದಲ ಸಂಬಳದಿಂದಲೇ ಆರಂಭಿಸಬೇಕು. ನಿಮ್ಮ ಸಂಬಳ ₹ 15 ಸಾವಿರ, ₹ 20 ಸಾವಿರ ಇದ್ದರೂ ಸರಿ ಒಂದಿಷ್ಟು ಉಳಿತಾಯ ಮಾಡಲು ಶುರು ಮಾಡಬೇಕು.

ಹೆಚ್ಚು ರಿಸ್ಕ್ ಇರುವ ಹೂಡಿಕೆ ಬೇಡ, ಸುರಕ್ಷತೆ ಇರುವ ಹಾಗೂ ಸರ್ಕಾರದ ಒತ್ತಾಸೆ ಸಿಗುವ ಹೂಡಿಕೆ ಇದ್ದರೆ ಒಳ್ಳೆಯದು ಎನ್ನುವವರು ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಖಾತೆ ತೆರೆದು ಹೂಡಿಕೆ ಆರಂಭಿಸಿಬಹುದು. ಈ ಖಾತೆಯನ್ನು ಅಂಚೆ ಕಚೇರಿ ಅಥವಾ ಆಯ್ದ ಬ್ಯಾಂಕುಗಳಲ್ಲಿ ತೆರೆಯ
ಬಹುದು. ಪಿಪಿಎಫ್‌ನಲ್ಲಿ ಪ್ರತಿ ವರ್ಷ ಮಾಡಬೇ
ಕಿರುವ ಕನಿಷ್ಠ ಹೂಡಿಕೆ ಕೇವಲ ₹ 500. ಇನ್ನು ಪಿಪಿಎಫ್ ಜೊತೆ ಎನ್‌ಪಿಎಸ್, ಅಂದರೆ ರಾಷ್ಟ್ರೀಯ ಪಿಂಚಣಿ ಯೋಜನೆ, ಹೂಡಿಕೆ ಪರಿಗಣಿಸಬಹುದು. ನಿವೃತ್ತಿ ಜೀವನಕ್ಕೆ ಇದರಿಂದ ನೆರವಾಗುತ್ತದೆ. ಸ್ವಲ್ಪ ರಿಸ್ಕ್ ಇದ್ದರೂ ತೊಂದರೆಯಿಲ್ಲ ಹೆಚ್ಚು ಲಾಭ ಸಿಗುವ ಕಡೆ ತೊಡಗಿಸಬೇಕು ಎನ್ನುವವರು ಈಕ್ವಿಟಿ ಮ್ಯೂಚುವಲ್ ಫಂಡ್ ಮತ್ತು ಷೇರು ಮಾರುಕಟ್ಟೆ ಹೂಡಿಕೆ
ಮಾಡಬಹುದು. ಮ್ಯೂಚುವಲ್ ಫಂಡ್ ಮತ್ತು ಷೇರು ಮಾರುಕಟ್ಟೆಯಲ್ಲಿ ಸಣ್ಣ ಮೊತ್ತ ಅಂದರೆ ₹ 100ರಿಂದಲೂ ಹೂಡಿಕೆ ಸಾಧ್ಯ. ನೆನಪಿಡಿ ಎಷ್ಟು ಬೇಗ ಹೂಡಿಕೆ ಆರಂಭಿಸುತ್ತಿರೋ ನಿಮಗೆ ಅಷ್ಟು ಹೆಚ್ಚು ಅನುಕೂಲವಾಗುತ್ತದೆ. ಹೂಡಿಕೆ ತಡವಾದರೆ ನಿವೃತ್ತಿಗೆ ಬೇಕಿರುವ ದೊಡ್ಡ ಮೊತ್ತದ ಉಳಿತಾಯದ ಗಂಟು ಮಾಡಿಕೊಳ್ಳುವುದು ಕಷ್ಟ.

2 ವಿಮೆ ತೆಗೆದುಕೊಳ್ಳಿ: ಕೆಲಸಕ್ಕೆ ಸೇರಿದ ನಂತರದಲ್ಲಿ ಮಾಡಬೇಕಿರುವ ಅತ್ಯಂತ ಮುಖ್ಯವಾದ ಕೆಲಸ ಅವಧಿ ವಿಮೆ ಮತ್ತು ಆರೋಗ್ಯ ವಿಮೆ ಪಡೆದುಕೊಳ್ಳುವುದು. ಉಳಿತಾಯ ಮತ್ತು ಹೂಡಿಕೆಯ ಹಾದಿ ಸುಗಮವಾಗಿರಬೇಕಾದರೆ ಈ ಎರಡು ವಿಮೆಗಳನ್ನು ಕಡ್ಡಾಯವಾಗಿ ಪಡೆದುಕೊಳ್ಳಿ. ಅವಧಿ ವಿಮೆಯು ವ್ಯಕ್ತಿ ಆಕಸ್ಮಿಕವಾಗಿ ಮೃತಪಟ್ಟ ಸಂದರ್ಭದಲ್ಲಿ ಆತನ ಕುಟುಂಬಕ್ಕೆ ಆರ್ಥಿಕ ಭದ್ರತೆ ಒದಗಿಸುತ್ತದೆ. 21ರಿಂದ 23ನೆಯ ವಯಸ್ಸಿನ ವ್ಯಕ್ತಿ ವಾರ್ಷಿಕ ಸುಮಾರು ₹ 8 ಸಾವಿರದಿಂದ ₹ 10 ಸಾವಿರದವರೆಗೆ ಪ್ರೀಮಿಯಂ ಪಾವತಿಸಿ ಸುಮಾರು ₹ 1 ಕೋಟಿ ಕವರೇಜ್ ಇರುವ ಅವಧಿ ವಿಮೆ ಪಡೆಯಬಹುದು. ಇನ್ನು ಆರೋಗ್ಯ ವಿಮೆ ಸಹ ಬಹಳ ಮುಖ್ಯ. ಅನಾರೋಗ್ಯ ಉಂಟಾದಾಗ ಉಳಿತಾಯದ ದುಡ್ಡನ್ನೆಲ್ಲ ಆಸ್ಪತ್ರೆಗೆ ಕಟ್ಟುವ ಬದಲು ಸಣ್ಣ ಮೊತ್ತದ
ಪ್ರೀಮಿಯಂ ಕಟ್ಟಿ ಅಗತ್ಯವಿದ್ದಾಗ ಆರೋಗ್ಯ ವಿಮೆಯ ಸೌಲಭ್ಯ ಪಡೆದುಕೊಳ್ಳುವುದು ಜಾಣತನ.

3 ಮನೆಯ ಜವಾಬ್ದಾರಿ ತೆಗೆದುಕೊಳ್ಳಿ: ಕೆಲಸಕ್ಕೆ ಸೇರಿ ದುಡಿಮೆ ಆರಂಭಿಸುವತನಕ ತಂದೆ-ತಾಯಿ ನಿಮ್ಮ ಏಳ್ಗೆಗಾಗಿ ಶ್ರಮಿಸಿರುತ್ತಾರೆ. ಮನೆಯ ಹಣಕಾಸಿನ ಅಗತ್ಯಗಳನ್ನು ಅವರು ಪೂರೈಸಿರುತ್ತಾರೆ. ಆದರೆ ಕೆಲಸಕ್ಕೆ ಸೇರಿದ ತಕ್ಷಣ ಈ ಜವಾಬ್ದಾರಿಯನ್ನು ಸ್ವಯಂ ಪ್ರೇರಣೆಯಿಂದ ನಿಮ್ಮ ಹೆಗಲಿಗೇರಿಸಿಕೊಳ್ಳಿ. ದುಡಿಯಲು ಆರಂಭಿಸಿದ ಮೇಲೆ ನಿಮ್ಮ ಅಗತ್ಯಗಳಿಗೆ ತಂದೆ–ತಾಯಿಯಿಂದ ಹಣಕಾಸು ನೆರವು ಪಡೆಯುವುದನ್ನು ತಪ್ಪಿಸಿ. ಹೀಗೆ ಮಾಡುವುದರಿಂದ ವ್ಯವಹಾರ ಜ್ಞಾನ ಹೆಚ್ಚುತ್ತದೆ. ಯಾವುದಕ್ಕೆ ಖರ್ಚು ಮಾಡಬೇಕು, ಯಾವುದಕ್ಕೆ ಮಾಡಬಾರದು ಎನ್ನುವ ವಿವೇಚನೆ ಬರುತ್ತದೆ.

4 ಪೋಷಕರಿಗೆ ಉಡುಗೊರೆ ನೀಡಿ: ಮೊದಲ ಸಂಬಳ ಅನ್ನೋದು ಒಂದು ಭಾವನಾತ್ಮಕ ವಿಚಾರ. ಇದರಲ್ಲಿ ಪೋಷಕರಿಗೆ
ಉಡುಗೊರೆ ಕೊಡುವುದನ್ನು ಮರೆಯಬೇಡಿ. ಉಡುಗೊರೆಯ ಮೌಲ್ಯ ಎಷ್ಟು ಎನ್ನುವ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಅದು
ಕಡಿಮೆ ಬೆಲೆಯದ್ದಾದರೂ ಸರಿಯೇ ಪ್ರೀತಿಯಿಂದ ನಿಮ್ಮ ಪ್ರೀತಿಪಾತ್ರರಿಗೊಂದು ಗಿಫ್ಟ್ ಕೊಡಿ.

5 ದಾನ ಮಾಡಿ: ದಾನ ಮಾಡಲು ಬೇಕಾದ ದೊಡ್ಡ ಸಂಬಳ ಇಲ್ಲ ಎನ್ನುವ ಮನಃಸ್ಥಿತಿ ಬೇಡ. ನಿಮ್ಮ ಆದಾಯದ ಕನಿಷ್ಠ ಶೇ 1ರಷ್ಟನ್ನಾದರೂ ದಾನಕ್ಕೆ ಮೀಸಲಿಡಿ. ನೀವು ಹತ್ತಿಪ್ಪತ್ತು ಸಾವಿರ ರೂಪಾಯಿ ಸಂಬಳ ಪಡೆದರೂ ಅದರಲ್ಲಿ ಇನ್ನೂರರಿಂದ ಐನೂರು ರೂಪಾಯಿ ದಾನಕ್ಕೆ ಮೀಸಲಿಡುವುದು ಕಷ್ಟವಾಗಲಿಕ್ಕಿಲ್ಲ. ದುಡಿಯುವ ಸಮಯದಲ್ಲಿ ಸಮಾಜದಿಂದ ಪಡೆದಿದ್ದನ್ನು ಸಮಾಜಕ್ಕೆ ಹಿಂದಿರುಗಿಸುವ ಜವಾಬ್ದಾರಿಯಿಂದ ಹಿಂದೆ ಸರಿಯಬಾರದು.

(ಲೇಖಕ ಚಾರ್ಟರ್ಡ್ ಅಕೌಂಟೆಂಟ್)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು