ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ ಅಂಕಣ | ಹಣಕಾಸಿನ ಪ್ರಶ್ನೆಗೆ ತಜ್ಞರ ಉತ್ತರ

Published 26 ಏಪ್ರಿಲ್ 2023, 2:58 IST
Last Updated 26 ಏಪ್ರಿಲ್ 2023, 2:58 IST
ಅಕ್ಷರ ಗಾತ್ರ

ಗುಂಡಪ್ಪ, ಊರು ಬೇಡ

ಪ್ರ

ನನ್ನೂರು ಹಳ್ಳಿ. ಯಾವುದೇ ನಗರಸಭಾ ವ್ಯಾಪ್ತಿಗೆ ಬರುವುದಿಲ್ಲ. ನನ್ನ ವಯಸ್ಸು 75 ವರ್ಷ. ವಾರ್ಷಿಕ ಆದಾಯ ₹ 5 ಲಕ್ಷ. ನಾನು ಒಂದು ಎಕರೆಗೆ ಸುಮಾರು ₹ 7 ಲಕ್ಷದಂತೆ ಜಮೀನು ಮಾರಾಟ ಮಾಡಿರುವೆ, ಮಾರಾಟದಿಂದ ನನಗೆ ಒಟ್ಟು ₹ 22.75 ಲಕ್ಷ ಬಂದಿದೆ. 3 ಎಕರೆ 20 ಗುಂಟೆ ಜಮೀನನ್ನು ತಿಂಗಳಿಗೆ ₹ 15 ಸಾವಿರದಂತೆ 29 ವರ್ಷ 11 ತಿಂಗಳಿಗೆ ಪವನ ವಿದ್ಯುತ್ ಕಂಪನಿಗೆ ಲೀಸ್‌ಗೆ ಕೊಟ್ಟಿರುವೆ. ಈ ಹಣವನ್ನು ಕೃಷಿ ಆದಾಯವೆಂದು ಪರಿಗಣಿಸಬಹುದೇ? ಹೌದಾದರೆ ತೆರಿಗೆ ಇದೆಯೇ? ಯಾವುದರಲ್ಲಿ ಹೂಡಿಕೆ ಮಾಡಿದರೆ ತೆರಿಗೆ ಕಡಿಮೆ? ನಾನು ನಗರ ವ್ಯಾಪ್ತಿಯಲ್ಲಿ ಒಂದು ನಿವೇಶನ ಕೊಂಡರೆ ತೆರಿಗೆ ಉಳಿಸಬಹುದೇ?

ನಿಮ್ಮ ಪ್ರಶ್ನೆಯಲ್ಲಿ ಎರಡು ವಿಷಯಗಳನ್ನು ಉಲ್ಲೇಖಿಸಲಾಗಿದೆ. ಮೊದಲನೆಯದು, ಜಮೀನು ಮಾರಾಟ. ಎರಡನೆಯದು, ಜಮೀನಿನ ಲೀಸಿಂಗ್. ಕೃಷಿಯಿಂದ ಬಂದ ಆದಾಯಕ್ಕೆ ತೆರಿಗೆ ಇಲ್ಲ ಎನ್ನುವುದು ಸಾಮಾನ್ಯ ನಿಯಮ. ಆದರೆ ಇದಕ್ಕೆ ಜಮೀನು ಕೃಷಿಗಾಗಿಯೇ ಉಪಯೋಗ ಆಗಿರಬೇಕು. ಉದಾಹರಣೆಗೆ, ತೆಂಗು, ಭತ್ತ, ಮಾವು, ತರಕಾರಿ, ಹೂವಿನ ಕೃಷಿ ಇತ್ಯಾದಿ. ನೀವು ಉಲ್ಲೇಖಿಸಿರುವಂತೆ, ನಿಮಗೆ ಪ್ರತಿ ತಿಂಗಳು ಬರುತ್ತಿರುವ ಆದಾಯ ಪವನ ವಿದ್ಯುತ್ ಕಂಪನಿಗೆ ಬಾಡಿಗೆಗೆ ನೀಡಿರುವುದರಿಂದ. ಈ ಆದಾಯವು ಜಮೀನಿನ ಕಾರಣದಿಂದ ಬಂದುದಾದರೂ, ಅದು ವ್ಯವಸಾಯ ಮಾಡಿ ಬಂದದ್ದಲ್ಲ. ಹೀಗಾಗಿ ಇದಕ್ಕೆ ತೆರಿಗೆ ಅನ್ವಯಿಸುತ್ತದೆ.

ಹಳ್ಳಿಯಲ್ಲಿ ಕೃಷಿಗಾಗಿ ಉಪಯೋಗಿಸುವ ಜಮೀನನ್ನು ಮಾರಾಟ ಮಾಡಿದಾಗ ತೆರಿಗೆ ಬರುವುದಿಲ್ಲ. ಕಾರಣ ಅಂತಹ ಜಮೀನು ಬಂಡವಾಳ ಆಸ್ತಿಯ ವ್ಯಾಖ್ಯಾನದಿಂದ ಹೊರತಾಗಿದೆ. ಆದರೆ ಇದರ ಹೊರತಾಗಿ ಯಾವುದೇ ಆಸ್ತಿ ಮಾರಾಟ ಮಾಡಿದಾಗಲೂ ತೆರಿಗೆ ಇರುತ್ತದೆ. ನಿಮ್ಮ ಜಮೀನು ಮಾರಾಟದಿಂದ ಬಂದ ಲಾಭವನ್ನು ನಿಖರವಾಗಿ ತಿಳಿಯಲು ದಾಖಲೆಗಳೊಂದಿಗೆ ಸಮೀಪದ ತೆರಿಗೆ ಸಲಹೆಗಾರರಿಂದ ಸಲಹೆ ಪಡೆದುಕೊಳ್ಳಿ. ನೀವು ತೆರಿಗೆ ಉಳಿಸಲು ಮುಂದಿನ ಮೂರು ವರ್ಷಗಳೊಳಗೆ ಮನೆ ಕಟ್ಟಿಸಬಹುದು. ಅಲ್ಲಿಯತನಕ ನಿಮ್ಮ ಮೊತ್ತವನ್ನು ತಾತ್ಕಾಲಿಕವಾಗಿ ಬಂಡವಾಳ ವೃದ್ಧಿ ಖಾತೆ ಯೋಜನೆಯಲ್ಲಿ ಠೇವಣಿ ಮಾಡಿ.

ವ್ಯವಸಾಯ ಹೊರತುಪಡಿಸಿ ನಿಮ್ಮ ಆದಾಯ ₹ 5 ಲಕ್ಷ. ಇದಲ್ಲದೆ, ನಿಮಗೆ ವಾರ್ಷಿಕವಾಗಿ ₹ 1.80 ಲಕ್ಷ ಬಾಡಿಗೆ ಆದಾಯವಿದೆ. ನೀವು ಹೊಸ ಆದಾಯ ತೆರಿಗೆ ಪದ್ಧತಿ ಆಯ್ಕೆ ಮಾಡಿ ತೆರಿಗೆ ವಿವರ ಸಲ್ಲಿಸಬಹುದು. ₹ 7 ಲಕ್ಷದತನಕ ತೆರಿಗೆ ಹೊರೆ ಇಲ್ಲ ಎನ್ನುವುದು ಈ ವರ್ಷದ ಬಜೆಟ್ ಘೋಷಣೆ.

ಸುಮಂತ್ ಎಂ.ಕೆ.

ಪ್ರ

ನಾನು ನನ್ನ ಬ್ಯಾಂಕ್ ಖಾತೆಯನ್ನು ಸ್ವೀಪ್ ಖಾತೆಯಾಗಿ ಬದಲಾಯಿಸಬೇಕೆಂದಿದ್ದೇನೆ. ಇದು ಅನುಕೂಲಕರವೇ?

ಸ್ವೀಪ್ ಖಾತೆ ತೆರೆಯುವ ಅವಕಾಶವನ್ನು ಇಂದು ಬಹುತೇಕ ಬ್ಯಾಂಕ್‌ಗಳು ನೀಡುತ್ತಿವೆ. ಇದು ನಿಮ್ಮ ಉಳಿತಾಯ ಖಾತೆಯಲ್ಲಿರುವ ಹಣವು ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚಾದಲ್ಲಿ, ಹೆಚ್ಚುವರಿ ಬಡ್ಡಿ ಸಿಗುವ ಖಾತೆಗೆ (ಸ್ವೀಪ್ ಖಾತೆ) ವರ್ಗಾವಣೆ ಮಾಡುವ ಅವಕಾಶ ಕೊಡುತ್ತದೆ. ಮೊಬೈಲ್ ಬ್ಯಾಂಕಿಂಗ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಇಂತಹ ಖಾತೆ ತೆರೆಯುವ ಅವಕಾಶವಿದೆ. ಹೀಗಾಗಿ ಬ್ಯಾಂಕ್ ಇಂತಹ ಸೌಲಭ್ಯ ಒದಗಿಸಿದಲ್ಲಿ ಅದನ್ನು ಸರಳ ಹೂಡಿಕೆ ಸೌಲಭ್ಯವನ್ನಾಗಿ ಬಳಸಿಕೊಳ್ಳಬಹುದು.

ಸ್ವೀಪ್ ಖಾತೆಯಲ್ಲಿ ಹಣ ಹೂಡಿಕೆ ಸುಲಭ. ನಿಮ್ಮ ಉಳಿತಾಯ ಖಾತೆಯಲ್ಲಿನ ಹಣವು ನಿರ್ದಿಷ್ಟ ಮೊತ್ತ ತಲುಪಿದ ನಂತರ ಹೆಚ್ಚುವರಿ ಹಣವನ್ನು ಹೂಡಿಕೆಯನ್ನಾಗಿ ಮಾರ್ಪಡಿಸಲಾಗುತ್ತದೆ. ಹೂಡಿಕೆ ಮಾಡಿದ ಹಣವನ್ನು ನಿಮ್ಮ ಅಗತ್ಯಕ್ಕೆ ತಕ್ಕಂತೆ ನೇರವಾಗಿ ಎಟಿಎಂ, ಚೆಕ್, ನೆಫ಼್ಟ್ ಇತ್ಯಾದಿ ಮೂಲಕ ಹಿಂಪಡೆಯಬಹುದು ಅಥವಾ ಇತರರಿಗೆ ವರ್ಗಾಯಿಸಬಹುದು. ಇದಕ್ಕೆ ಸಾಮಾನ್ಯವಾಗಿ ಯಾವುದೇ ದಂಡ ಇರುವುದಿಲ್ಲ. ಮಾತ್ರವಲ್ಲ, ಸಾಮಾನ್ಯ ನಿಶ್ಚಿತ ಠೇವಣಿಗೆ ಅನ್ವಯವಾಗುವ ಸಮಯ ಮಿತಿ ಇರುವುದಿಲ್ಲ. ಸ್ವೀಪ್ ಖಾತೆ ಬಗೆಗಿನ ನಿಯಮಗಳು ಬ್ಯಾಂಕ್‌ನಿಂದ ಬ್ಯಾಂಕ್‌ಗೆ ತುಸು ಭಿನ್ನವಾಗಿರಬಹುದು. ಈ ಬಗ್ಗೆ ಮೊದಲೇ ತಿಳಿದುಕೊಳ್ಳಿ.

ಸಾಮಾನ್ಯವಾಗಿ ಉಳಿತಾಯ ಖಾತೆಯ ಬಡ್ಡಿ ಶೇ 4ರಷ್ಟಿರುತ್ತದೆ. ಚಾಲ್ತಿ ಖಾತೆಗೆ ಬಡ್ಡಿ ಸಿಗುವುದಿಲ್ಲ. ಇಂತಹ ಸನ್ನಿವೇಶದಲ್ಲಿ, ಉಪಯೋಗಿಸದೆ ಖಾತೆಯಲ್ಲೇ ಅನಿರ್ದಿಷ್ಟಾವಧಿಗೆ ಉಳಿದುಕೊಳ್ಳುವ ಮೊತ್ತವನ್ನು ಒಂದೆರಡು ಪ್ರತಿಶತ ಹೆಚ್ಚುವರಿ ಬಡ್ಡಿ ಬರುವ ಖಾತೆಗೆ ವರ್ಗಾಯಿಸುವುದು ಅನುಕೂಲಕರ.

ನಿಮ್ಮ ಸ್ವೀಪ್ ಖಾತೆಗೆ ಜಮಾ ಆಗುವ ಬಡ್ಡಿಗೆ ತೆರಿಗೆ ಕಡಿತ ಇರುತ್ತದೆ. ಸೆಕ್ಷನ್ 194 ಎ ಅನ್ವಯ ವಾರ್ಷಿಕ ಬಡ್ಡಿ ಮೊತ್ತವು ₹ 40,000 ಮೀರಿದಾಗ ಯಾವುದೇ ನಿಶ್ಚಿತ ಠೇವಣಿ- ಸ್ವೀಪ್ ಖಾತೆ ಮೇಲೆ ಶೇ 10ರ ತೆರಿಗೆ ಅನ್ವಯವಾಗುತ್ತದೆ. ಹಿರಿಯ ನಾಗರಿಕರಿಗೆ ಈ ಮಿತಿಯನ್ನು ₹ 50,000ಕ್ಕೆ ನಿಗದಿಪಡಿಸಲಾಗಿದೆ. ಸಿಗುವ ಒಟ್ಟು ವಾರ್ಷಿಕ ಬಡ್ಡಿಯು ಈ ಮಿತಿಯನ್ನು ಮೀರಿದರೆ, ತೆರಿಗೆ ಕಡಿತ ಸಂಪೂರ್ಣ ಮೊತ್ತಕ್ಕೆ ಅನ್ವಯವಾಗುತ್ತದೆ. ಉಳಿತಾಯ ಖಾತೆಗಾದರೆ ಬರುವ ಬಡ್ಡಿಗೆ ತೆರಿಗೆ ಕಡಿತ ಅನ್ವಯವಾಗುವುದಿಲ್ಲ. ಸೆಕ್ಷನ್ 80 ಟಿಟಿಎ ಅನ್ವಯ ₹ 10,000ತನಕ ತೆರಿಗೆ ವಿವರ ಸಲ್ಲಿಸುವಾಗ ವಿನಾಯಿತಿ ಇದೆ. ಅದೇ ರೀತಿ, ಹಿರಿಯ ನಾಗರಿಕರಿಗೆ ಸೆಕ್ಷನ್ 80 ಟಿಟಿಬಿ ಅಡಿ ₹ 50,000ದವರೆಗೆ ತೆರಿಗೆ ವಿನಾಯಿತಿ ಇದೆ. ಯಾವುದೇ ಹೆಚ್ಚಿನ ಮೊತ್ತಕ್ಕೆ ತೆರಿಗೆ ಅನ್ವಯಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT