ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಪ್ರಶ್ನೋತ್ತರ | ಹಣಕಾಸು, ತೆರಿಗೆ ಸಮಸ್ಯೆಗಳಿಗೆ ಪರಿಹಾರ

Published : 18 ಜೂನ್ 2025, 4:29 IST
Last Updated : 18 ಜೂನ್ 2025, 4:29 IST
ಫಾಲೋ ಮಾಡಿ
Comments
ಪ್ರ

ನಾನು ನನ್ನ ವೇತನದ ನಾಲ್ಕನೇ ಒಂದು ಭಾಗವನ್ನು ಮ್ಯೂಚುವಲ್ ಫಂಡ್‌ಗಳಲ್ಲಿ ಎಸ್ಐಪಿ ಮೂಲಕ ಹೂಡಿಕೆ ಮಾಡುತ್ತಿದ್ದೇನೆ. ಈಗ ನನಗೆ ತುರ್ತು ಸಾಲದ ಅಗತ್ಯವಿದೆ. ಈ ಸಾಲವನ್ನು ಕಡಿಮೆ ಅವಧಿಯಲ್ಲಿ ತೀರಿಸಲು ನಾನು ಎಸ್ಐಪಿ ಸ್ಥಗಿತಗೊಳಿಸಬೇಕೇ ಎಂಬ ಪ್ರಶ್ನೆ ಎದುರಾಗಿದೆ. ನನ್ನ ದ್ವಂದ್ವ ಏನೆಂದರೆ, ಎಸ್‌ಐಪಿ ಸ್ಥಗಿತಗೊಳಿಸಿ ಕಡಿಮೆ ಅವಧಿಯಲ್ಲಿ ಸಾಲವನ್ನು ಮುಗಿಸಬಹುದೇ ? ಅಥವಾ ಎಸ್‌ಐಪಿ ಮುಂದುವರಿಸಿ ಒಂದೆರಡು ವರ್ಷ ಹೆಚ್ಚುವರಿ ಸಮಯ ತೆಗೆದುಕೊಂಡು ಸಾಲ ತೀರಿಸಬಹುದೇ?

ನಿಮ್ಮ ಪ್ರಶ್ನೆ ಅತ್ಯಂತ ಸಹಜವಾದುದು. ಆರ್ಥಿಕ ವಿಚಾರದ ತೀರ್ಮಾನದಲ್ಲಿ ಇದು ನಿರ್ಣಾಯಕ. ಸಾಲ ತೆಗೆದುಕೊಳ್ಳುವ ಸಂದರ್ಭದಲ್ಲಿ ಎಸ್‌ಐಪಿಯನ್ನು ಸ್ಥಗಿತ ಗೊಳಿಸಬೇಕೇ ಅಥವಾ ಬೇಡವೇ ಎಂಬುದು ನಿಮ್ಮ ಪ್ರಮುಖ ಪ್ರಶ್ನೆ. ಇಂತಹ ವಿಚಾರ ಬಂದಾಗ ಸಮತೋಲನ ಅವಶ್ಯಕ. ಕೆಲವು ಯೋಜಿತ ಹಾಗೂ ನಿರೀಕ್ಷಿತ ಅಂಶಗಳ ಪರಿಗಣನೆಯ ಆಧಾರದಲ್ಲಿ ನಿರ್ಣಯ ಕೈಗೊಳ್ಳಬೇಕು. ಅವುಗಳಲ್ಲಿ ಕೆಲವು ಮುಖ್ಯ ಅಂಶಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ.

1. ಸಾಲದ ಬಡ್ಡಿದರ ಹಾಗೂ ಎಸ್‌ಐಪಿಯ ಲಾಭ: ಸಾಲದ ಬಡ್ಡಿದರ ಹೆಚ್ಚಾಗಿದ್ದರೆ (ಉದಾಹರಣೆಗೆ: ಶೇ 10–12) ಹಾಗೂ ನಿಮಗೆ ಮ್ಯೂಚುವಲ್ ಫಂಡ್‌ಗಳಿಂದ ಸಿಗಬಹುದಾದ ಅಂದಾಜು ಲಾಭ (ಉದಾಹರಣೆಗೆ: ಶೇ 8–10) ಕಡಿಮೆ ಇದ್ದರೆ, ಅಂತಹ ಪರಿಸ್ಥಿತಿಯಲ್ಲಿ ಸಾಲವನ್ನು ಬೇಗ ತೀರಿಸುವುದು ಹಣಕಾಸು ದೃಷ್ಟಿಯಿಂದ ಲಾಭದಾಯಕ. ಇದಕ್ಕೆ ನೀವು ತಾತ್ಕಾಲಿಕವಾಗಿ ಮ್ಯೂಚುವಲ್ ಫಂಡ್ ಹೂಡಿಕೆ ಸ್ಥಗಿತಗೊಳಿಸಬಹುದು ಅಥವಾ ನಿಮ್ಮ ಆರ್ಥಿಕ ಅಗತ್ಯಗಳನ್ನು ಪೂರೈಸಲು ಬೇಕಿರುವ ಒಟ್ಟು ಮೊತ್ತದಲ್ಲಿ ಅಗತ್ಯವಿರುವಷ್ಟೇ ಸಾಲ ಪಡೆದು ಉಳಿದ ಹಣವನ್ನು ನಿಮ್ಮ ಒಟ್ಟಾರೆ ಹೂಡಿಕೆಗಳಲ್ಲಿ ಅತಿ ಕಡಿಮೆ ಲಾಭ ನೀಡುತ್ತಿರುವ ಫಂಡ್‌ಗಳಿಂದ ಹಿಂಪಡೆದು ಭರಿಸಿಕೊಳ್ಳುವುದು ಸೂಕ್ತವಾಗಬಹುದು.

ಇದಕ್ಕಾಗಿ ನಿಮ್ಮ ಒಟ್ಟು ಹೂಡಿಕೆ, ಅವುಗಳ ಮೇಲಿನ ಪ್ರತ್ಯೇಕಿತ ಲಾಭದ ಪ್ರತಿಶತ ಪ್ರಮಾಣ ಇತ್ಯಾದಿಗಳ ಮಾಹಿತಿಯನ್ನು ನಿಮ್ಮ ಬ್ರೋಕರ್ ಅಥವಾ ಫಂಡ್ ಹೌಸ್‌ಗಳಿಂದ ಪಡೆದು ನಿರ್ಣಯ ಕೈಗೊಳ್ಳಿ.

2. ಲಾಭದಾಯಕ ಫಂಡ್‌ಗಳು: ಇನ್ನೊಂದು ಪ್ರಮುಖ ಅಂಶವೆಂದರೆ, ನಿಮ್ಮ ಈಗಿರುವ ಫಂಡ್‌ಗಳು ಉತ್ತಮ ಲಾಭ ನೀಡುತ್ತಿದ್ದು (ಉದಾಹರಣೆಗೆ: ಶೇ 15-20) ಮುಂದೆಯೂ ಅದೇ ಪ್ರಮಾಣದ ಲಾಭದ ನಿರೀಕ್ಷೆ ನಿಮಗಿದ್ದರೆ, ಹೂಡಿಕೆಗಳನ್ನು ಮೊಟಕುಗೊಳಿಸದೆ  ಹೆಚ್ಚಿನ ಅವಧಿಯ ಸಾಲ ಪಡೆದು ಹೂಡಿಕೆಯನ್ನು ಮುಂದುವರಿಸುತ್ತಲೇ ಇಎಂಐ ಪಾವತಿ ಮಾಡಬಹುದು.

ಮೇಲಿನ ಎರಡೂ ಆಯ್ಕೆಗಳನ್ನು ನಿರೀಕ್ಷಿತ ಲಾಭದ ಅಂದಾಜಿನ ಆಧಾರದಲ್ಲಿ ಲೆಕ್ಕ ಹಾಕಿ ಹಾಗೂ ಇವನ್ನು ಪಾವತಿಸುವ ಬಡ್ಡಿ ಹಾಗೂ ನಿರೀಕ್ಷಿಸುವ ಲಾಭದೊಡನೆ ತುಲನೆ ಮಾಡಿ. ಸಾಮಾನ್ಯವಾಗಿ ಈಕ್ವಿಟಿ ಫಂಡ್‌ಗಳು ಷೇರು ಮಾರುಕಟ್ಟೆಯ ಏರಿಳಿತಕ್ಕೆ ಹೊಂದಿಕೊಂಡಿರುವುದರಿಂದ ಭವಿಷ್ಯದ ಲಾಭವನ್ನು ನಿಖರವಾಗಿ ಅಂದಾಜಿಸುವುದು ಕಷ್ಟ. ಹಾಗಿದ್ದರೂ, ನಮ್ಮ ನಿರ್ಣಯಗಳು ಆಯಾ ಸಂದರ್ಭದಲ್ಲಿ ಹೆಚ್ಚು ಪ್ರಸ್ತುತವಾಗುವ ಅಂಶಗಳನ್ನು ಪರಿಗಣಿಸಿ ಕೈಗೊಳ್ಳುವುದಾಗಿರಬೇಕು.

ಪ್ರ

ನಾನು ರಾಜ್ಯ ಸರ್ಕಾರದ ನಿವೃತ್ತ ಉದ್ಯೋಗಿ, ನನ್ನ ವಯಸ್ಸು 74 ವರ್ಷ. ನಾನು ನಿಯಮಿತವಾಗಿ ಅಂಚೆ ಕಚೇರಿ ಆರ್‌ಡಿ, ಎಸ್‌ಸಿಎಸ್‌ಎಸ್, ಎನ್‌ಎಸ್‌ಸಿ ಇತ್ಯಾದಿಗಳಲ್ಲಿ ಹೂಡಿಕೆ ಮಾಡುತ್ತಿರುತ್ತೇನೆ. 2014ರಲ್ಲಿ ನಾನು ಎರಡು ಆರ್‌ಡಿ ಖಾತೆಗಳಲ್ಲಿ ಪ್ರತಿ ತಿಂಗಳು ₹4,000 ಹೂಡಿಕೆ ಆರಂಭಿಸಿದ್ದೆ. ಅವು 10 ವರ್ಷಗಳ ಅವಧಿಯನ್ನು ಪೂರೈಸಿದ ನಂತರ, 2024ರಲ್ಲಿ ಆ ಎರಡು ಆರ್‌ಡಿ ಖಾತೆಗಳಿಂದ ₹5,43,254 ಬಡ್ಡಿ ಮೊತ್ತ ಒಂದೇ ಬಾರಿಗೆ ಪಡೆದಿದ್ದೇನೆ. ಈ ಹಣವನ್ನು ಸೇರಿಸಿ ನನ್ನ ಒಟ್ಟು ಆದಾಯ ₹14,74,326 ಆಗಿದೆ. ನಾನು ಈ ಆರ್‌ಡಿ ಮೇಲಿನ ಬಡ್ಡಿಯನ್ನು ಹೇಗೆ ಲೆಕ್ಕ ಹಾಕಬೇಕು ಹಾಗೂ ಅದು ಆದಾಯ ತೆರಿಗೆ ವಿವರ ನೀಡುವಾಗ (AY 2025–26) ಎಲ್ಲಿ ಸೇರಿಸಬೇಕು ಎಂಬುದನ್ನು ದಯವಿಟ್ಟು ವಿವರಿಸಿ. ಆದಾಯ ತೆರಿಗೆ ನಿಯಮ 80ಸಿ ಅಡಿಯಲ್ಲಿ, ನಾನು 2024ರ ಆಗಸ್ಟ್‌ನಲ್ಲಿ ₹2,00,000 ಮೌಲ್ಯದ ಎನ್‌ಎಸ್‌ಸಿ ಖರೀದಿಸಿದ್ದೇನೆ.-

ನೀವು ಪ್ರಶ್ನೆಯಲ್ಲಿ ತಿಳಿಸಿರುವಂತೆ ಆರ್‌ಡಿ ಖಾತೆಗಳ ಬಡ್ಡಿ ಮೊತ್ತ ₹5,43,254ನ್ನು ನೀವು ಆರ್ಥಿಕ ವರ್ಷ 2024-25ರಲ್ಲಿ ಒಂದೇ ಬಾರಿಗೆ ಪಡೆದಿದ್ದೀರಿ. ಆದರೆ, ಈ ಗಳಿಕೆ ಒಂದೇ ವರ್ಷದ್ದಲ್ಲ. ಅದು ಕಳೆದ ಹತ್ತು ವರ್ಷಗಳ ಸಂಚಿತ ಮೊತ್ತ. ಹೀಗಾಗಿ, ಬ್ಯಾಂಕಿನವರು ನಿಮ್ಮಿಂದ ಆಯಾ ವರ್ಷಕ್ಕೆ ಗಳಿಕೆಯಾದ ಮೊತ್ತದ ಮೇಲೆ ತೆರಿಗೆ ಅನ್ವಯವಾಗುವುದಿದ್ದರೆ, ಆಯಾ ವರ್ಷದಲ್ಲೇ ತೆರಿಗೆ ಕಡಿತಗೊಳಿಸಿರುತ್ತಾರೆ ಅಥವಾ ನೀವು ನಿಮ್ಮ ಹಿಂದಿನ ವಾರ್ಷಿಕ ವಿವರ ಸಲ್ಲಿಸಿದ್ದಾಗ ಅಂತಹ ವಾರ್ಷಿಕ ಬಡ್ಡಿಯನ್ನು ಆಯಾ ವರ್ಷದಲ್ಲೇ ಘೋಷಣೆ ಮಾಡಿರಬೇಕಾಗಿರುತ್ತದೆ. ನಗದು ರೂಪದಲ್ಲಿ ಒಟ್ಟಾಗಿ ಬಡ್ಡಿ ಗಳಿಸಿದಾಗ (ಪ್ರಸ್ತುತ ವರ್ಷ) ಹಾಗೂ ನಿಮ್ಮ ಖಾತೆಗೆ ವಾರ್ಷಿಕ ಬಡ್ಡಿ ಸಂಚಿತಗೊಂಡಾಗ, ಒಂದೇ ಆದಾಯಕ್ಕೆ ಎರಡು ಬಾರಿ ತೆರಿಗೆ ಪಾವತಿಸುವ ಅಗತ್ಯವಿಲ್ಲ. ಇದನ್ನು ಖಚಿತಪಡಿಸಿಕೊಳ್ಳಲು, ನಿಮ್ಮ ಹಳೆಯ ಹಾಗೂ ಪ್ರಸ್ತುತ ವರ್ಷದ ಎಐಎಸ್ ಹಾಗೂ ಎಎಸ್ 26 ಇವೆರಡನ್ನೂ ನಿಮ್ಮ ಆದಾಯ ತೆರಿಗೆ ಖಾತೆಗೆ ಲಾಗಿನ್ ಆಗಿ ಮಾಹಿತಿ ಪಡೆಯಿರಿ. ಈ ಮಾಹಿತಿಯ ಆಧಾರದಲ್ಲಿ ಅಗತ್ಯ ಬಿದ್ದರೆ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿ ಯಾವುದಾದರೂ ಆದಾಯ ಅಘೋಷಿತವಾಗಿ ಉಳಿದಿದೆಯೇ, ತೆರಿಗೆ ಪಾವತಿ ಅಗತ್ಯವೇ ಎಂಬುದನ್ನು ಧೃಢಪಡಿಸಿಕೊಳ್ಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT