
ನಾನು ಷೇರುಪೇಟೆ, ಇಟಿಎಫ್ ಹಾಗೂ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಅನುಭವ ಹೊಂದಿದ್ದೇನೆ. ಈಚೆಗೆ ಡಾಲರ್ ಮೌಲ್ಯವು ವೃದ್ಧಿಯಾಗುತ್ತಿದೆ. ಇದು ಹೂಡಿಕೆಯ ದೃಷ್ಟಿಯಿಂದ ನಮಗೆ ಲಾಭದಾಯಕವೇ? ನಾನು ಈ ವ್ಯವಹಾರದಲ್ಲಿ ಹಣ ತೊಡಗಿಸಬೇಕು ಅಂದುಕೊಂಡಿದ್ದೇನೆ. ಇದಕ್ಕೆ ಪ್ರತ್ಯೇಕ ಖಾತೆ ಬೇಕೆ ಅಥವಾ ಪ್ರಸ್ತುತ ಇರುವ ಡಿಮ್ಯಾಟ್ ಮೂಲಕ ವ್ಯವಹರಿಸಬಹುದೇ? ಯಾವೆಲ್ಲಾ ಮುಂಜಾಗೃತಾ ಕ್ರಮಗಳನ್ನು ವಹಿಸಬೇಕು? ಡಾಲರ್–ರೂಪಾಯಿ ವಹಿವಾಟು ಉತ್ತಮವೇ ಅಥವಾ ಯೂರೊ, ಪೌಂಡ್, ಯೆನ್ ಇತ್ಯಾದಿಗಳಲ್ಲೂ ವ್ಯವಹರಿಸುವುದು ಲಾಭದಾಯಕವೇ?
–ಜಯಕುಮಾರ್, ಆರ್.ಟಿ. ನಗರ, ಬೆಂಗಳೂರು
ಭಾರತದಲ್ಲಿ ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್ ಹಾಗೂ ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್‌ಗಳಲ್ಲಿ (ಇಟಿಎಫ್) ಹೂಡಿಕೆ ಮಾಡುವವರು ಇತ್ತೀಚೆಗೆ ಇತರ ಹೂಡಿಕೆ ವರ್ಗಗಳಾದ ಕಮಾಡಿಟಿ, ಕರೆನ್ಸಿ ಮಾರುಕಟ್ಟೆಯತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ವಿಶೇಷವಾಗಿ ಅಮೆರಿಕದ ಡಾಲರ್ ಮೌಲ್ಯವು ನಿರಂತರವಾಗಿ ಬಲವಾಗುತ್ತಿರುವ ಹಿನ್ನೆಲೆಯಲ್ಲಿ ‘ಡಾಲರ್–ರೂಪಾಯಿ ವ್ಯವಹಾರ’ ಲಾಭದಾಯಕವೇ ಎಂಬ ಪ್ರಶ್ನೆ ಸಾಮಾನ್ಯವಾಗಿದೆ. ಕರೆನ್ಸಿ ಮಾರುಕಟ್ಟೆಯಲ್ಲಿ ನೇರವಾಗಿ ಡಾಲರ್ ಖರೀದಿ ಮಾಡಿ ನಮ್ಮ ಖಾತೆಯಲ್ಲಿ ಇಟ್ಟುಕೊಳ್ಳಲು ಅನುಮತಿ ಇಲ್ಲ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಅಡಿಯಲ್ಲಿ ಭಾರತೀಯ ನಿವಾಸಿಗಳು ವಿದೇಶಿ ಕರೆನ್ಸಿಯನ್ನು ಪ್ರವಾಸ, ಶಿಕ್ಷಣ, ವೈದ್ಯಕೀಯ ಅಥವಾ ಮಾನ್ಯ ಹೂಡಿಕೆ ಉದ್ದೇಶಗಳಿಗೆ ಮಾತ್ರ ನಿರ್ದಿಷ್ಟ ನಿಯಮಗಳ ಅಡಿಯಲ್ಲಿ ಹೊಂದಿರಬಹುದು. ಮೌಲ್ಯ ಏರಿಕೆಯ ನಿರೀಕ್ಷೆಯಲ್ಲಿ ಭೌತಿಕ ವಿದೇಶಿ ಕರೆನ್ಸಿಯನ್ನು ಸಂಗ್ರಹಿಸುವುದು ಷೇರು, ಮ್ಯೂಚುವಲ್ ಫಂಡ್ ಇತ್ಯಾದಿ ಖರೀದಿಸಿದಂತೆ ಸಾಮಾನ್ಯ ಹೂಡಿಕೆ ಮಾರ್ಗವಲ್ಲ.
ಭಾರತೀಯ ಹೂಡಿಕೆದಾರರಿಗೆ ಷೇರು ವಿನಿಮಯ ಕೇಂದ್ರಗಳಾದ ಎನ್‌ಎಸ್ಇ ಮತ್ತು ಬಿಎಸ್‌ಇ ಮೂಲಕ ಕರೆನ್ಸಿ ಡೆರಿವೇಟಿವ್ ವಿಭಾಗದಲ್ಲಿ ಡಾಲರ್–ರೂಪಾಯಿ, ಯೂರೊ–ರೂಪಾಯಿ, ಪೌಂಡ್–ರೂಪಾಯಿ ಹಾಗೂ ಯೆನ್–ರೂಪಾಯಿ ‘ಫ್ಯೂಚರ್ಸ್ ಮತ್ತು ಆಪ್ಷನ್’ ಒಪ್ಪಂದಗಳಲ್ಲಿ ವ್ಯವಹರಿಸುವ ಅವಕಾಶವಿದೆ. ಈಗಿರುವ ಟ್ರೇಡಿಂಗ್ ಹಾಗೂ ಡಿಮ್ಯಾಟ್ ಖಾತೆಯಲ್ಲಿಯೇ ಕರೆನ್ಸಿ ವಿಭಾಗವನ್ನು ಸಕ್ರಿಯಗೊಳಿಸಿ ವ್ಯವಹರಿಸಬಹುದು; ಪ್ರತ್ಯೇಕ ಬ್ಯಾಂಕ್ ಖಾತೆ ಅಗತ್ಯವಿಲ್ಲ. ಪ್ರತ್ಯೇಕ ಕರೆನ್ಸಿ ವಿಭಾಗವು ಅನುಮತಿ ಹಾಗೂ ದಾಖಲೆಗಳನ್ನು ಕೇಳಬಹುದು. ಈ ಮಾರುಕಟ್ಟೆಗಳಲ್ಲಿ ವ್ಯವಹಾರಗಳು ಮುಖ್ಯವಾಗಿ ‘ಫ್ಯೂಚರ್ಸ್ ಮತ್ತು ಆಪ್ಷನ್’ ಒಪ್ಪಂದಗಳಲ್ಲಿ ನಡೆಯುತ್ತವೆ. ಎನ್‌ಎಸ್‌ಇ ಮೂಲಕ ನಡೆಯುವ ವ್ಯವಹಾರಕ್ಕೆ ಹೆಚ್ಚಿನ ದ್ರವ್ಯತೆ ಇದೆ; ಭೌತಿಕ ಕರೆನ್ಸಿ ವಿತರಣೆ ಸಾಮಾನ್ಯವಾಗಿ ನಡೆಯುವುದಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ನಿಮ್ಮ ಬ್ರೋಕರೇಜ್ ಸಂಸ್ಥೆಯನ್ನು ಸಂಪರ್ಕಿಸಿ.
ಕರೆನ್ಸಿ ಮಾರುಕಟ್ಟೆಯ ಸಮಯ ಸಾಮಾನ್ಯ ಈಕ್ವಿಟಿ ಮಾರುಕಟ್ಟೆಗಿಂತ ಹೆಚ್ಚಿರುತ್ತದೆ. ಸಾಮಾನ್ಯವಾಗಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸಕ್ರಿಯ ವಹಿವಾಟು ನಡೆಯುತ್ತದೆ. ಜಾಗತಿಕ ಆರ್ಥಿಕ ಮಾಹಿತಿ, ಫೆಡರಲ್ ರಿಸರ್ವ್ ಬಡ್ಡಿದರ ನಿರ್ಧಾರಗಳು, ಕಚ್ಚಾ ತೈಲದ ಬೆಲೆ, ಜಾಗತಿಕ ರಾಜಕಾರಣ, ವಿದೇಶಿ ಬಂಡವಾಳ ಹೂಡಿಕೆ, ಭಾರತದ ವ್ಯಾಪಾರ ಕೊರತೆ ಹಾಗೂ ರಿಸರ್ವ್ ಬ್ಯಾಂಕ್ ನಿರ್ಧಾರ ಇತ್ಯಾದಿಗಳು ಡಾಲರ್–ರೂಪಾಯಿ ಮೌಲ್ಯವನ್ನು ಪ್ರಭಾವಿಸುತ್ತವೆ. ಭಾರತದಲ್ಲಿ ತೈಲ, ಚಿನ್ನ ಆಮದು ಹೆಚ್ಚಿರುವುದರಿಂದ ಡಾಲರ್ ಬೇಡಿಕೆ ಸಾಮಾನ್ಯವಾಗಿ ಹೆಚ್ಚು ಇರುತ್ತದೆ. ಈ ಕಾರಣದಿಂದ ಡಾಲರ್-ರೂಪಾಯಿ ಒಪ್ಪಂದಗಳಲ್ಲಿ ಹೆಚ್ಚಿನ ವಹಿವಾಟು ಮತ್ತು ದ್ರವ್ಯತೆ ಇರುತ್ತದೆ. ಯೂರೊ, ಪೌಂಡ್ ಹಾಗೂ ಯೆನ್ ಕರೆನ್ಸಿಗಳಲ್ಲಿ ವ್ಯವಹಾರ ಸಾಧ್ಯವಿದ್ದರೂ, ಅವುಗಳಲ್ಲಿ ವಹಿವಾಟಿನ ಪ್ರಮಾಣ ಕಡಿಮೆ ಇರುವ ಕಾರಣ ಸ್ಪ್ರೆಡ್ ಮತ್ತು ಅಸ್ಥಿರತೆ ಹೆಚ್ಚಿರಬಹುದು.
ತೆರಿಗೆ ದೃಷ್ಟಿಯಿಂದ ಕರೆನ್ಸಿ ‘ಫ್ಯೂಚರ್ಸ್ ಮತ್ತು ಆಪ್ಷನ್’ ವ್ಯವಹಾರಗಳಿಗೆ ವಿಶೇಷ ಗಮನ ಅಗತ್ಯ. ಷೇರು ವಿನಿಮಯದಲ್ಲಿ ನಡೆಯುವ ಕರೆನ್ಸಿ ಡೆರಿವೇಟಿವ್ ವ್ಯವಹಾರಗಳನ್ನು ಅಂದರೆ ಅದರ ಲಾಭ ಅಥವಾ ನಷ್ಟವನ್ನು ಸಾಮಾನ್ಯವಾಗಿ ‘ವ್ಯವಹಾರ ಆದಾಯ’ ಎಂದು ಪರಿಗಣಿಸಲಾಗುತ್ತದೆ. ಇದು ಸಾಮಾನ್ಯ ಷೇರು ಹೂಡಿಕೆಗಳಂತೆ ‘ಅಲ್ಪಾವಧಿ ಬಂಡವಾಳ ವೃದ್ಧಿ’ ಅಥವಾ ‘ದಿರ್ಘಾವಧಿ ಬಂಡವಾಳ ವೃದ್ಧಿ’ ವಿಭಾಗಕ್ಕೆ ಸೇರುವುದಿಲ್ಲ. ಏಕೆಂದರೆ ಈ ಒಪ್ಪಂದಗಳು ಹೂಡಿಕೆ ಆಸ್ತಿ ಹೊಂದಿರುವುದಕ್ಕಿಂತ ವ್ಯಾಪಾರ ಒಪ್ಪಂದದ ಸ್ವರೂಪ ಹೊಂದಿರುತ್ತವೆ. ಇಂತಹ ವ್ಯವಹಾರಗಳಲ್ಲಿ ಲಾಭ ಉಂಟಾದರೆ ಸಾಮಾನ್ಯ ಆದಾಯ ತೆರಿಗೆ ಹಂತದ ಪ್ರಕಾರ ತೆರಿಗೆ ವಿಧಿಸಲಾಗುತ್ತದೆ; ನಷ್ಟ ಉಂಟಾದರೆ ನಿಯಮಾನುಸಾರ ಮುಂದಿನ ವರ್ಷಗಳಿಗೆ ಅದನ್ನು ವರ್ಗಾಯಿಸಿಕೊಳ್ಳುವ ಅವಕಾಶವೂ ಇರಬಹುದು.
ಹೂಡಿಕೆದಾರರ ದೃಷ್ಟಿಯಿಂದ ಕರೆನ್ಸಿ ವ್ಯವಹಾರವು ಸಾಮಾನ್ಯ ಹೂಡಿಕೆಗೆ ಹೋಲಿಸಿದರೆ ಹೆಚ್ಚು ಸಂವೇದನಾಶೀಲ ಮತ್ತು ಲಿವರೇಜ್ ಆಧಾರಿತವಾಗಿದೆ. ಕಡಿಮೆ ಮಾರ್ಜಿನ್‌ನಲ್ಲಿ ದೊಡ್ಡ ಒಪ್ಪಂದ ಮೌಲ್ಯವನ್ನು ನಿಯಂತ್ರಿಸಬಹುದಾದ್ದರಿಂದ ಲಾಭದೊಂದಿಗೆ ನಷ್ಟವೂ ವೇಗವಾಗಿ ಉಂಟಾಗಬಹುದು. ವಿಶೇಷವಾಗಿ ‘ಫ್ಯೂಚರ್ಸ್ ಮತ್ತು ಆಪ್ಷನ್’ ವ್ಯವಹಾರಗಳಲ್ಲಿ ಅನುಭವವಿಲ್ಲದೆ ಪ್ರವೇಶಿಸುವುದು ಅಪಾಯಕಾರಿ. ಕರೆನ್ಸಿ ಚಲನೆಗಳನ್ನು ‘ಡಾಲರ್ ಏರುತ್ತಿದೆ’ ಎಂಬ ಸರಳ ನಿರೀಕ್ಷೆಯ ಮೇಲೆ ಅಂದಾಜಿಸಲು ಸಾಧ್ಯವಿಲ್ಲ; ಕೇಂದ್ರೀಯ ಬ್ಯಾಂಕ್ ನೀತಿಗಳು ಮತ್ತು ಜಾಗತಿಕ ಆರ್ಥಿಕ ಬೆಳವಣಿಗೆಗಳು ತೀವ್ರ ಪರಿಣಾಮ ಬೀರುತ್ತವೆ. ದೀರ್ಘಾವಧಿ ಸಂಪತ್ತಿನ ನಿರ್ಮಾಣಕ್ಕೆ ಷೇರು ಮತ್ತು ಮ್ಯೂಚುವಲ್ ಫಂಡ್ ಹೂಡಿಕೆಗಳು ಹೆಚ್ಚು ಸ್ಥಿರವಾದ ಮಾರ್ಗಗಳಾಗಿದ್ದರೆ, ಕರೆನ್ಸಿ ಡೆರಿವೇಟಿವ್ ವ್ಯವಹಾರವು ಅನುಭವ ಮತ್ತು ನಿರಂತರ ಮಾರುಕಟ್ಟೆ ಗಮನ ಬೇಡುವ ವಿಶೇಷ ವಿಭಾಗವೆಂದು ಪರಿಗಣಿಸಬೇಕು. ಹೀಗಾಗಿ ಈ ವ್ಯವಹಾರದಲ್ಲಿ ತೊಡಗುವ ಮುನ್ನ ಮಾಹಿತಿ ಹಾಗೂ ಅನುಭವ ಪಡೆದುಕೊಳ್ಳಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.