ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ| ಉಳಿತಾಯದ ಹಣದಿಂದ ಅದಾಯ ಗಳಿಸುವುದು ಹೇಗೆ?

Last Updated 24 ಜನವರಿ 2023, 19:31 IST
ಅಕ್ಷರ ಗಾತ್ರ

ವಸಂತ ಕುಮಾರ್, ಹಾಸನ

l ಪ್ರಶ್ನೆ: ನನ್ನಲ್ಲಿ ಸುಮಾರು ₹ 15 ಲಕ್ಷ ಹೂಡಿಕೆಗೆ ಇದೆ. ನನ್ನ ವಯಸ್ಸು ಸುಮಾರು 63 ವರ್ಷ. ನಾನು ಪ್ರತಿ ತಿಂಗಳೂ ಇದರಿಂದ ಆದಾಯ ಬಯಸುತ್ತೇನೆ. ಈ ಬಗ್ಗೆ ಸಲಹೆ ನೀಡಿ.

ಉತ್ತರ: ಆದಾಯ ನಿರೀಕ್ಷಿಸಿ ಮಾಡುವ ಹೂಡಿಕೆಗೆ ನಮ್ಮಲ್ಲಿ ಹೂಡಿಕೆಗೆಂದೇ ನಿಗದಿಪಡಿಸಿದ ಹೆಚ್ಚುವರಿ ಹಣ ಇರುವುದು ಸೂಕ್ತ. ಇದು ನಮ್ಮ ಆರ್ಥಿಕ ಸಮತೋಲನ ಕಾಪಾಡಿಕೊಳ್ಳಲು ಪರಿಗಣಿಸಬೇಕಾದ ಬಹಳ ಮುಖ್ಯ ಅಂಶ. ವೈಯಕ್ತಿಕ ಬದುಕಿನ ಅಗತ್ಯ ಅಥವಾ ಮನೆ, ಮಕ್ಕಳ ವಿದ್ಯಾಭ್ಯಾಸ, ಆರೋಗ್ಯದ ಸಮಸ್ಯೆಗೆಂದು ಕೂಡಿಟ್ಟ ಹಣ ಅವುಗಳದ್ದೇ ಆದ ಸಮಯದಲ್ಲಿ ನೆರವಿಗೆ ಬರುತ್ತವೆ. ಹೀಗಾಗಿ ಕೆಲವು ಬಾರಿ ಅಧಿಕ ಲಾಭ ನೀಡುವ ಹೂಡಿಕೆಯ ಅವಕಾಶಗಳಿದ್ದರೂ ಹೂಡಿಕೆದಾರನ ಆದಾಯ, ವಯಸ್ಸು, ನಿರೀಕ್ಷಿಸುವ ಆದಾಯ, ಅವಧಿ ಇತ್ಯಾದಿಗಳನ್ನು ಗಮನದ
ಲ್ಲಿಟ್ಟು ಹೂಡಿಕೆ ಮಾಡಬೇಕು. ನಿಮ್ಮ ಬಳಿ ಇರುವ ಸುಮಾರು ₹ 15 ಲಕ್ಷವನ್ನು ಹೂಡಿಕೆ ಮಾಡಿ, ಪ್ರತಿ ತಿಂಗಳೂ ಆದಾಯ ನಿರೀಕ್ಷಿಸುತ್ತಿದ್ದೀರಿ. ನಿಮ್ಮ ಈ ವಯಸ್ಸಿನಲ್ಲಿ ಕೆಳಗಿನ ಕೆಲವು ಸುರಕ್ಷಿತ ಹಾಗೂ ನಿಶ್ಚಿತ ಆದಾಯ ನೀಡುವ ಯೋಜನೆಗಳನ್ನು ಆಯ್ಕೆ ಮಾಡಬಹುದು.

ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಅಡಿ ಪ್ರಸ್ತುತ ಸುಮಾರು ಶೇಕಡ 8ರ ಬಡ್ಡಿ ದರದಲ್ಲಿ
₹ 15 ಲಕ್ಷದವರೆಗೆ ಹೂಡಿಕೆಗೆ ಅವಕಾಶವಿದೆ. ಇದರಲ್ಲಿ ಹೂಡಿಕೆಯನ್ನು ಮೊದಲು ಐದು ವರ್ಷಗಳ ಅವಧಿಗೆ ಆಯ್ಕೆ ಮಾಡಿ. ಅಗತ್ಯವಿದ್ದರೆ ಮುಂದಿನ 3 ವರ್ಷದ ಅವಧಿಗೂ ವಿಸ್ತರಿಸಬಹುದು. ಈ ಯೋಜನೆಯ ಅಡಿ ಪ್ರತಿ ತಿಂಗಳ ಬದಲು ಮೂರು ತಿಂಗಳಿಗೊಮ್ಮೆ ಬಡ್ಡಿ ಬರುತ್ತದೆ. ಬಡ್ಡಿ ದರವೂ ಸಮರ್ಪಕವಾಗಿದೆ. ವೈಯಕ್ತಿಕವಾಗಿ ಅಥವಾ ಪತಿ-ಪತ್ನಿ ಜಂಟಿ ಖಾತೆ ತೆರೆಯುವ ಮೂಲಕವೂ ಹೂಡಿಕೆ ಮಾಡಬಹುದು. ಇಲ್ಲಿ 60 ವರ್ಷ ವಯಸ್ಸು ದಾಟಿದ ಹಿರಿಯ ನಾಗರಿಕರಿಗೆ ಹೂಡಿಕೆಗೆ ಅವಕಾಶವಿದೆ. ಈ ಅಂದಾಜಿನಂತೆ ನಿಮಗೆ ಪ್ರತಿ ಮೂರು ತಿಂಗಳಿಗೆ ₹ 30,000 ಬಡ್ಡಿ ಬರುತ್ತದೆ. ನಿಮ್ಮ ಸಮೀಪದ ಅಂಚೆ ಕಚೇರಿ ಅಥವಾ ಬ್ಯಾಂಕ್‌ನಲ್ಲಿ ವಿಚಾರಿಸಿ ಹೂಡಿಕೆ ಮಾಡಬಹುದು.

ಈ ಯೋಜನೆಯಲ್ಲದೆ, ಮಾಸಿಕ ಆದಾಯವನ್ನೇ ನೀವು ಬಯಸುವುದಿದ್ದರೆ, ಹಿರಿಯ ನಾಗರಿಕರಿಗೆ ಗರಿಷ್ಠ ₹ 4.5 ಲಕ್ಷ ಹೂಡಿಕೆಗೆ ಅವಕಾಶ ಕಲ್ಪಿಸುವ ಅಂಚೆ ಇಲಾಖೆಯ ತಿಂಗಳ ಆದಾಯ ಯೋಜನೆಯಲ್ಲಿ ಪಾಲ್ಗೊಳ್ಳಬಹುದು. ಜಂಟಿ ಖಾತೆಯಾದರೆ ಇಲ್ಲಿ ₹ 9 ಲಕ್ಷದವರೆಗೂ ಹೂಡಿಕೆ ಮಾಡಬಹುದು. ಇದೇ ಜನವರಿ ತಿಂಗಳಿನಿಂದ ಶೇ 7.1ರಷ್ಟು ಬಡ್ಡಿ ದರ ಜಾರಿಯಲ್ಲಿದೆ. ಬಡ್ಡಿಯನ್ನು ನೇರ ನಿಮ್ಮ ಖಾತೆಗೆ ಜಮಾ ಮಾಡಿಸುವ ವ್ಯವಸ್ಥೆ ಸಿಬಿಎಸ್ ಆಧಾರಿತ ಅಂಚೆ ಕಚೇರಿಗಳಲ್ಲಿ ಇರುತ್ತದೆ. ಈ ಎರಡು ಯೋಜನೆಗಳಲ್ಲಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಹಣ ಹಂಚಿಕೆ ಮಾಡಿ, ಹೂಡಿಕೆಯ ಪ್ರಯೋಜನ ಪಡೆಯಿರಿ.

ಚಂದ್ರಶೇಖರ್, ಬೆಂಗಳೂರು

l ಪ್ರಶ್ನೆ: ನಾನು ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿದ್ದು, ಈ ಹೂಡಿಕೆಯ ಲಾಭಕ್ಕೆ ತೆರಿಗೆ ಯಾವ ರೀತಿ ಲೆಕ್ಕ ಹಾಕಬೇಕು ಎಂಬ ಬಗ್ಗೆ ಮಾರ್ಗದರ್ಶನ ಕೋರುತ್ತೇನೆ. ನಾನು 2017ರ ಜುಲೈನಿಂದ ಆದಿತ್ಯ ಬಿರ್ಲಾ ಸನ್‌ಲೈಫ್ ಮ್ಯೂಚುವಲ್ ಫಂಡ್ ಒಂದರ ಫ್ಲೆಕ್ಸಿ ಕ್ಯಾಪ್ ಫಂಡ್ (ಗ್ರೋತ್) ರೆಗ್ಯುಲರ್ ಪ್ಲಾನ್‌ನಲ್ಲಿ (ಈಕ್ವಿಟಿ) ತಿಂಗಳಿಗೆ ₹ 3,000 ಎಸ್ಐಪಿ ಮೂಲಕ ಹೂಡಿಕೆ ಮಾಡಿ ₹ 2,72,678/- ಬಂದಿರುತ್ತದೆ. ಅದೇ ರೀತಿ, ಇನ್ನೊಂದು ಫೋಲಿಯೊದಲ್ಲಿ ಒಂದೇ ಬಾರಿಗೆ ₹ 30,000 ಹೂಡಿಕೆ ಮಾಡಿ, ಒಟ್ಟಾರೆ ₹ 49,001 ನನ್ನ ಖಾತೆಗೆ ಜಮಾ ಆಗಿರುತ್ತದೆ. ನಾನು 2022ರ ಡಿಸೆಂಬರ್‌ 26ರಂದು ಎರಡೂ ಫೋಲಿಯೋದ ಮೊತ್ತವನ್ನು ನಗದೀಕರಿಸಿಕೊಂಡಿದ್ದೇನೆ. ಇದಕ್ಕೆ ಆದಾಯ ತೆರಿಗೆ ಪಾವತಿಸಬೇಕೇ?

ಉತ್ತರ: ಹೂಡಿಕೆ ನಿರ್ಧಾರ ಕೈಗೊಳ್ಳುವಾಗ ಹೂಡಿಕೆದಾರರು ಆದಾಯ ತೆರಿಗೆ ಪರಿಣಾಮಗಳ ಬಗ್ಗೆ ಅರಿತು ಹೂಡಿಕೆ ಮಾಡುವುದು ಸೂಕ್ತ. ಹೀಗಾಗಿ ತೆರಿಗೆ ದರಗಳ ಬಗ್ಗೆ ಮೊದಲು ತಿಳಿದುಕೊಳ್ಳುವುದು ಹೂಡಿಕೆದಾರನಿಗೆ ಇರಬೇಕಾದ ಜವಾಬ್ದಾರಿ. ಹೂಡಿಕೆಗೆ ಆಯ್ಕೆ ಮಾಡಿದ ಮ್ಯೂಚುವಲ್ ಫಂಡ್, ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರ ಹಣವನ್ನು ತೊಡಗಿಸಿದ್ದರೆ ಅಂತಹ ಫಂಡ್‌ಗಳನ್ನು ಈಕ್ವಿಟಿ ಫಂಡ್ ಎಂದು ವರ್ಗೀಕರಿಸಲಾಗುತ್ತದೆ. ಯಾವುದೇ ಮ್ಯೂಚುವಲ್ ಫಂಡ್ ಹೌಸ್, ಹೂಡಿಕೆದಾರರ ಶೇ 65ಕ್ಕಿಂತ ಹೆಚ್ಚಿನ ಮೊತ್ತವನ್ನು ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡಿದಾಗಲಷ್ಟೇ ಈ ವರ್ಗದಲ್ಲಿ ಬರಲು ಸಾಧ್ಯ.

ಈಕ್ವಿಟಿ ಫಂಡ್‌ಗಳ ಹೂಡಿಕೆ ಅವಧಿ ಒಂದು ವರ್ಷಕ್ಕಿಂತ ಕಡಿಮೆಯದಾಗಿದ್ದರೆ ಅದು ಅಲ್ಪಾವಧಿ ಹೂಡಿಕೆಯಾಗುತ್ತದೆ. ಇಂತಹ ಈಕ್ವಿಟಿ ಫಂಡ್‌ಗಳಲ್ಲಿನ ಅಲ್ಪಾವಧಿಯ ಬಂಡವಾಳ ಲಾಭಕ್ಕೆ ಶೇ 15ರಷ್ಟು ಮೂಲ ತೆರಿಗೆ ಹಾಗೂ ಶೇ 4ರಷ್ಟು ಸೆಸ್ ಅನ್ವಯವಾಗುತ್ತದೆ. ಅದೇ ಈಕ್ವಿಟಿ ಫಂಡ್‌ಗಳಲ್ಲಿ ದೀರ್ಘಾವಧಿಯ ಬಂಡವಾಳ ಲಾಭದ ಮೊತ್ತಕ್ಕೆ ಶೇ 10ರಷ್ಟು ತೆರಿಗೆ ಹಾಗೂ ಶೇ 4ರಷ್ಟು ಸೆಸ್ ಅನ್ವಯವಾಗುತ್ತದೆ. ಒಂದು ಆರ್ಥಿಕ ವರ್ಷದಲ್ಲಿ ₹ 1 ಲಕ್ಷದವರೆಗಿನ ದೀರ್ಘಾವಧಿ ಬಂಡವಾಳ ಲಾಭಕ್ಕೆ ಸಂಪೂರ್ಣ ತೆರಿಗೆ ವಿನಾಯಿತಿ ಇದೆ. ದೀರ್ಘಾವಧಿ ಬಂಡವಾಳ ಲಾಭದಲ್ಲಿ ಇದಕ್ಕೂ ಹೆಚ್ಚಿನ ಮೊತ್ತವಷ್ಟೇ ಮೇಲೆ ಹೇಳಿರುವ ದರದಲ್ಲಿ ತೆರಿಗೆಗೆ ಒಳಪಡುತ್ತದೆ.

ನೀವು ನೀಡಿರುವ ಮಾಹಿತಿಯಂತೆ, ಮಾರಾಟ ಮಾಡಿದ ಅವಧಿಗಿಂತ ಒಂದು ವರ್ಷ ಹಿಂದೆ ಹೂಡಿಕೆ ಮಾಡಿದ ಎಸ್ಐಪಿಗಳೆಲ್ಲ ದೀರ್ಘಾವಧಿ ಬಂಡವಾಳ ಲಾಭ ವರ್ಗದಲ್ಲಿ ಬರುತ್ತವೆ. ಹಾಗೂ ಅದಕ್ಕಿಂತ ಕಡಿಮೆ ಅವಧಿಯ, ಅಂದರೆ ಕೊನೆಯ 12 ಎಸ್ಐಪಿ ಕಂತುಗಳ ಮೇಲಿನ ಲಾಭ-ನಷ್ಟ ಅಲ್ಪಾವಧಿ ಬಂಡವಾಳ ಲಾಭ ವರ್ಗಕ್ಕೆ ಬರುತ್ತದೆ. ನಿಮ್ಮ ಬಹುತೇಕ ಲಾಭದ ಪ್ರಮಾಣ ದೀರ್ಘಾವಧಿ ಬಂಡವಾಳ ಲಾಭದ ವರ್ಗದಲ್ಲೇ ಬರಬಹುದು. ಇನ್ನು ಎರಡನೆಯ ಫೋಲಿಯೋದಿಂದ ಬಂದಿರುವ ಲಾಭವು ಸಂಪೂರ್ಣವಾಗಿ ದೀರ್ಘಾವಧಿ ಬಂಡವಾಳ ಲಾಭದ ವರ್ಗಕ್ಕೆ ಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT