–ಹೆಸರು ಬೇಡ
ಪ್ರಶ್ನೆ: ನಾನು ಹಿರಿಯ ನಾಗರಿಕ. ನನ್ನ ಪಿಂಚಣಿ ಮೊತ್ತ ₹5.54 ಲಕ್ಷ. ನಾನು ಬ್ಯಾಂಕಿಗೆ ಫಾರಂ 15 ಕೊಡಲು ಯೋಚಿಸಿದ್ದೇನೆ. ಇದಲ್ಲದೆ ನನಗೆ ಬಡ್ಡಿ ಆದಾಯವೂ ಇದೆ. ಇದು ವರ್ಷಕ್ಕೆ ₹3.25 ಲಕ್ಷ. ನಾನು ಫಾರಂ 15 ಸಲ್ಲಿಸಿದರೆ ತೆರಿಗೆ ಶೂನ್ಯವಾಗಬಹುದೇ?
ಉತ್ತರ: ಹಿರಿಯ ನಾಗರಿಕರು ಬ್ಯಾಂಕಿಗೆ ಫಾರಂ 15 ಎಚ್ ಸಲ್ಲಿಸುವ ಮೂಲಕ ತೆರಿಗೆ ಕಡಿತದಿಂದ ವಿನಾಯಿತಿ ಪಡೆಯಬಹುದು. ಆದರೆ ಈ ರೀತಿ ಫಾರಂ ಸಲ್ಲಿಸುವ ಮೊದಲು ಕೆಲವು ಮಾಹಿತಿಯನ್ನು ಗಮನಿಸಬೇಕು.
1) ನೀವು ಸಲ್ಲಿಸುವ ಮಾಹಿತಿ ಸ್ವಯಂ ಘೋಷಿತ ಮಾಹಿತಿಯಾಗಿರುತ್ತದೆಯೇ ವಿನಾ ಅದು ಪ್ರಮಾಣ ಪತ್ರವಲ್ಲ. ಆದರೂ ಇದು ನಿಜವಾಗಿ ಮಾಡಬೇಕಾದ ತೆರಿಗೆ ಕಡಿತವನ್ನು ಅಸಹಜವಾಗಿ ತಡೆಯದಂತೆ ಇರಲಿ. ನೀವು ಫಾರಂ 15 ಎಚ್ ಸಲ್ಲಿಸಿದ್ದೀರಿ ಎಂದಮಾತ್ರಕ್ಕೆ ಅಂತಹ ಆದಾಯ, ತೆರಿಗೆಯಿಂದ ಸಂಪೂರ್ಣ ಮುಕ್ತ ಎಂದರ್ಥವಲ್ಲ.
2) ಇಂತಹ ಘೋಷಣೆಯನ್ನು ಬ್ಯಾಂಕಿಗೆ ಸಲ್ಲಿಸುವ ಮೊದಲು, ಆ ವರ್ಷಕ್ಕೆ ಸಂಬಂಧಿಸಿ ಈಗಾಗಲೇ ಫಾರಂ 15 ಎಚ್ ಅನ್ನು ಇತರೆಡೆಗಳಲ್ಲೂ ಸಲ್ಲಿಸಿದ್ದರೆ, ಅಂತಹ ಎಲ್ಲ ಫಾರಂಗಳ ಒಟ್ಟು ಮಾಹಿತಿ ಪರಿಗಣಿಸಿ ನೀವು ವಿವರ ಭರ್ತಿ ಮಾಡಬೇಕು.
3) ಈ ರೀತಿ ಫಾರಂ ಸಲ್ಲಿಸುವ ಮೊದಲು ನಿಮ್ಮ ಒಟ್ಟಾರೆ ನಿರೀಕ್ಷಿತ ಆದಾಯವು ತೆರಿಗೆ ಮಿತಿಯೊಳಗೆ ಇದೆಯೇ ಎಂಬ ಬಗ್ಗೆ ಖಚಿತಪಡಿಸಿಕೊಳ್ಳಿ. ಒಂದು ವೇಳೆ ನಿಮ್ಮ ಆದಾಯವು ತೆರಿಗೆ ವಿನಾಯಿತಿ ಮೊತ್ತಕ್ಕಿಂತ ಅಧಿಕವಿದ್ದು, ನೀವು ತೆರಿಗೆಗೊಳಪಡುವುದಿದ್ದರೆ, ಇಂತಹ ಸಲ್ಲಿಕೆಗಳು ನೆರವಾಗಲಾರವು.
ನಿಮ್ಮ ಪಿಂಚಣಿ ಆದಾಯಕ್ಕೆ ಸಂಬಂಧಪಟ್ಟು, ₹50,000ದ ಮೂಲ ತೆರಿಗೆ ಕಡಿತ ಮಾಡಿಯೂ ₹5.04 ಲಕ್ಷದ ಪಿಂಚಣಿ ಆದಾಯ ಇದೆ. ಅಲ್ಲದೆ, ಬ್ಯಾಂಕ್ ಬಡ್ಡಿಯೂ ₹3.25 ಲಕ್ಷ ಇದೆ. ಹೀಗೆ ಒಟ್ಟು ಆದಾಯ ₹8.29 ಲಕ್ಷ. ಹಳೆಯ ತೆರಿಗೆ ಪದ್ಧತಿ ಅನುಸರಿಸಿ ತೆರಿಗೆ ಕಟ್ಟುವುದಿದ್ದರೂ, ಸೆಕ್ಷನ್ 80 ಟಿಟಿಬಿ ಅಡಿ ಹಿರಿಯ ನಾಗರಿಕರಿಗೆ ₹50,000ದ ಬಡ್ಡಿ ಆದಾಯದಿಂದ ಕಡಿತ ಪಡೆದರೂ ₹3 ಲಕ್ಷದ ಮೇಲಿನ ಆದಾಯ ತೆರಿಗೆಗೊಳಪಡುತ್ತದೆ. ಹೊಸ ತೆರಿಗೆ ಪದ್ಧತಿ ಅನುಸರಿಸಿದರೂ ನಿಮ್ಮ ಒಟ್ಟು ಆದಾಯ ₹7 ಲಕ್ಷ ಮೀರುವ ನಿರೀಕ್ಷೆ ಇರುವುದರಿಂದ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 87ಎ ಅಡಿ ಸಿಗುವ ರಿಬೇಟ್ ಪಡೆಯಲು ಸಾಧ್ಯವಿಲ್ಲ. ಹೀಗಾಗಿ ನೀವು ತೆರಿಗೆಯಿಂದ ಪೂರ್ಣ ಮುಕ್ತರಲ್ಲ. ₹3.25 ಲಕ್ಷದ ಮೇಲೆ ಮಾಡುವ ತೆರಿಗೆ ಕಡಿತ ಮುಂದಿನ ಒಟ್ಟು ತೆರಿಗೆ ಪಾವತಿಗೆ ಬಳಸಿಕೊಳ್ಳಬಹುದು ಹಾಗೂ ಹೂಡಿಕೆಗಳು ಇಲ್ಲದಿದ್ದರೆ ನಿಮಗೆ ಹೊಸ ತೆರಿಗೆ ಪದ್ದತಿಯೇ ಸೂಕ್ತವಾಗಬಹುದು.
–ಗೋಪಾಲಕೃಷ್ಣ , ಮೈಸೂರು
ಪ್ರಶ್ನೆ: ನಾನು ಸರ್ಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಉದ್ಯೋಗ ಮಾಡಿ ನಿವೃತ್ತಿಯಾಗಿದ್ದೇನೆ. ಪಿಂಚಣಿ ಪಡೆಯುತ್ತಿದ್ದೇನೆ. ಇದಲ್ಲದೆ ಬೇರೆ ಆದಾಯ ನನಗಿಲ್ಲ. 2004ರಲ್ಲಿ ನಾನೊಂದು ನಿವೇಶನ ಖರೀದಿಸಿದ್ದೆ. ಈಗ ನಾನು ವಾಸಿಸುತ್ತಿರುವ ಮನೆ ಬಹಳ ಶಿಥಿಲವಾಗಿದೆ. ಈ ಮನೆಯನ್ನು ಒಡೆದು ಹೊಸದಾಗಿ ಮನೆ ನಿರ್ಮಿಸಲು ಯೋಚಿಸಿದ್ದೇನೆ. ನಾನು ನಿವೇಶನ ಮಾರಾಟ ಮಾಡಿ ಬಂದ ಹಣದಿಂದ ಮನೆ ನಿರ್ಮಿಸಬಹುದೇ? ಬಂಡವಾಳ ವೃದ್ಧಿ ತೆರಿಗೆ ಬರುತ್ತದೆಯೇ? ಎಷ್ಟು ವರ್ಷದೊಳಗೆ ಮನೆ ನಿರ್ಮಿಸಬೇಕು?
ಉತ್ತರ: ಯಾವುದೇ ಆಸ್ತಿ ಅಥವಾ ಜಮೀನು ಮಾರಾಟದಿಂದ ಬರುವ ಬಂಡವಾಳ ಲಾಭದ ಮೇಲಿನ ತೆರಿಗೆಯು ಅದರ ಲಾಭದ ಸ್ವರೂಪದ ಮೇಲೆ ನಿರ್ಧಾರವಾಗುತ್ತದೆ. ಯಾವುದೇ ಸ್ಥಿರಾಸ್ತಿಯನ್ನು ಎರಡು ವರ್ಷಕ್ಕಿಂತ ಅಧಿಕ ಸಮಯ ಖರೀದಿದಾರರ ಹೆಸರಲ್ಲಿ ಹೊಂದಿದಾಗ ಅಂತಹ ಆಸ್ತಿ ದೀರ್ಘಾವಧಿ ಬಂಡವಾಳ ಆಸ್ತಿಯಾಗಿ ಪರಿಗಣಿತವಾಗುತ್ತದೆ. ಮಾರಾಟ ಮಾಡಿದಾಗ ಬರುವ ಸ್ಥಿರ ಆಸ್ತಿಯ ಮೇಲಿನ ಲಾಭ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 112 ಅಡಿಯಲ್ಲಿ ಹಣದುಬ್ಬರ ಸೂಚ್ಯಂಕ ಪ್ರಯೋಜನದೊಂದಿಗೆ ಶೇ 20ರ ಮೂಲ ತೆರಿಗೆಗೆ ಒಳಪಡುತ್ತದೆ.
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 54ರ ಪ್ರಕಾರ, ಮಾರಾಟ ಆದಾಗಿನಿಂದ ಎರಡು ವರ್ಷದೊಳಗೆ ಹೊಸ ಮನೆ ಖರೀದಿ ಮಾಡಬಹುದು ಅಥವಾ ಮೂರು ವರ್ಷದೊಳಗೆ ಹೊಸ ಮನೆ ನಿರ್ಮಾಣ ಮಾಡಬಹುದು. ನಿರ್ಮಾಣ ಕೆಲಸದ ಆರಂಭ ಇನ್ನೂ ನಿರ್ಧಾರವಾಗದಿದ್ದರೆ, ಆಸ್ತಿ ಮಾರಾಟದಿಂದ ಬಂದ ಮೊತ್ತವನ್ನು ‘ಕ್ಯಾಪಿಟಲ್ ಗೇನ್ಸ್ ಅಕೌಂಟ್ ಸ್ಕೀಂ’ ಖಾತೆಯಲ್ಲಿ (ಇದನ್ನು ನಿಗದಿತ ಬ್ಯಾಂಕ್ ಶಾಖೆಗಳಲ್ಲಿ ತೆರೆಯಬಹುದು) ಇರಿಸಿ, ಮೇಲೆ ಉಲ್ಲೇಖಿಸಿರುವ ಸಮಯದೊಳಗೆ ಮನೆ ಖರೀದಿಗೆ ಅಥವಾ ನಿರ್ಮಾಣಕ್ಕೆ ಉಪಯೋಗಿಸಲು ಅವಕಾಶವಿದೆ.
ನೀವು 2004ರಲ್ಲೇ ನಿವೇಶನ ಖರೀದಿಸಿರುವುದರಿಂದ ಅದರ ಮಾರಾಟದಿಂದ ಬರುವ ಲಾಭ-ನಷ್ಟ, ದೀರ್ಘಾವಧಿ ಬಂಡವಾಳ ಲಾಭ ಅಥವಾ ನಷ್ಟ ಆಗಿರುತ್ತದೆ. ನೀವು ನಿವೇಶನ ಖರೀದಿ ಮಾಡಿದ ದಾಖಲೆಗಳ ಆಧಾರದ ಮೇಲೆ, ಖರೀದಿ ಹಾಗೂ ಮಾರಾಟ ಮಾಡುವ ವರ್ಷಕ್ಕೆ ಅನ್ವಯಿಸುವ ಹಣದುಬ್ಬರ ಸೂಚ್ಯಂಕ ಗೊತ್ತುಮಾಡಿ. ಅದರ ಆಧಾರದ ಮೇಲೆ ನಿಮ್ಮ ನಿವೇಶನದ ಪ್ರಸ್ತುತ ಮೌಲ್ಯ ಏನೆಂಬುದನ್ನು ನಿರ್ಧರಿಸಿ ಮಾರಾಟ ಬೆಲೆಗೆ ಇರುವ ವ್ಯತ್ಯಾಸದ ಆಧಾರದ ಮೇಲೆ ಲಾಭ-ನಷ್ಟ ನಿರ್ಣಯವಾಗುತ್ತದೆ. ನಿಮ್ಮ ವಿಚಾರದಲ್ಲಿ ತೆರಿಗೆ ಲೆಕ್ಕ ಹಾಕಲು, ಅಗತ್ಯ ದಾಖಲೆ ಹಾಗೂ ಖರೀದಿ-ಮಾರಾಟ ಮೌಲ್ಯದ ಮಾಹಿತಿಯೊಂದಿಗೆ ಪ್ರತ್ಯೇಕ ತೆರಿಗೆ ಸಲಹೆ ಪಡೆದುಕೊಳ್ಳಿ. ತೆರಿಗೆ ವಿಚಾರಕ್ಕೆ ಸಂಬಂಧಪಟ್ಟು, ಹಳೆಯ ಮನೆ ಒಡೆದು ಹೊಸ ಮನೆಯ ನಿರ್ಮಾಣಕ್ಕೆ ಅವಕಾಶವಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.