ರೇಷ್ಮೆ ಕೂದಲಿಗೆ ಬಿಯರ್‌ ಥೆರಪಿ

7

ರೇಷ್ಮೆ ಕೂದಲಿಗೆ ಬಿಯರ್‌ ಥೆರಪಿ

Published:
Updated:
Deccan Herald

ಬಿಯರ್‌ ನಶೆಪ್ರಿಯರ ನೆಚ್ಚಿನ ಪೇಯ. ಅಂತಹ ಸ್ನೇಹಿತರು ಜೊತೆ ಸೇರಿದಾಗ, ಗೆಟ್‌ ಟುಗೆದರ್‌ ಪಾರ್ಟಿಗಳಲ್ಲಿ ಬಿಯರ್‌ ಇದ್ದೇ ಇರುತ್ತದೆ. ಇದು ಬರೀ ಆಲ್ಕೋಹಾಲ್‌ ಅಂದುಕೊಳ್ಳಬೇಕಾಗಿಲ್ಲ. ಇದರಿಂದ ಸೌಂದರ್ಯ ಕಾಳಜಿ ಮಾಡಬಹುದಲ್ಲದೇ ಕೂದಲಿನ ಆರೋಗ್ಯವನ್ನೂ ಕಾಪಾಡಬಹುದು. ಬಿಯರ್‌ನಲ್ಲಿ ಆ್ಯಂಟಿ ಆಕ್ಸಿಡೆಂಟ್‌ ಹೆಚ್ಚು ಇರುವುದರಿಂದ ಇದನ್ನು ಕುಡಿಯುವುದರಿಂದ ಚರ್ಮ ಹೊಳಪಾಗುತ್ತದೆ ಎಂದು ಲಂಡನ್‌ನ ಗಯ್ಸ್‌ ಆಸ್ಪತ್ರೆ ನಡೆಸಿದ ಅಧ್ಯಯನದಲ್ಲಿ ಸಾಬೀತಾಗಿದೆ. ಬಿಯರ್‌ ಮಾಡಲು ಬಳಸುವ ಬಾರ್ಲಿಯಲ್ಲಿ ಫೆರುಲಿಕ್‌ ಆ್ಯಸಿಡ್‌ ಹೆಚ್ಚು ಇರುವುದು ಇದಕ್ಕೆ ಕಾರಣ ಎನ್ನಲಾಗಿದೆ. 

ಚರ್ಮಕ್ಕೆ ಮಾತ್ರವಲ್ಲ, ಕೂದಲ ಆರೋಗ್ಯಕ್ಕೂ ಬಿಯರ್‌ ಬಳಸಬಹುದು. ಇದನ್ನು ಈಗ ಕೂದಲಿಗೆ ಶ್ಯಾಂಪೂ ಆಗಿಯೂ ಬಳಸುತ್ತಿದ್ದಾರೆ. ಡಿ– ಕಾರ್ಬೋನೇಟೆಡ್‌ ಬಿಯರ್‌ ಅನ್ನು ಕಂಡೀಷನರ್‌ ಆಗಿ ಬಳಸುತ್ತಾರೆ. ಇದು ಬಿಸಿಲು, ದೂಳಿನಿಂದ ಹಾನಿಯಾದ ಕೂದಲನ್ನು ಸರಿಪಡಿಸುತ್ತದೆ. 

ಹಾಲಿವುಡ್‌ ನಟಿ ಕ್ಯಾಥರಿನ್‌ ಝೆಟಾ ಝೋನ್ಸ್‌ ಅವರು ತಮ್ಮ ಕಪ್ಪು ಕೂದಲ ಗುಟ್ಟು ‘ಬಿಯರ್‌ ಹಾಗೂ ಜೇನುತುಪ್ಪ’ ಎಂದು ಹೇಳಿಕೊಂಡಿದ್ದರು. ಇದಾದ ಬಳಿಕ ಸಾವಿರಾರು ಬ್ಯೂಟಿ ಎಕ್ಸ್‌ಪರ್ಟ್‌ಗಳು ಹಾಗೂ ಬ್ಲಾಗರ್ಸ್‌ ಈ ಥೆರಪಿಯನ್ನೇ ಅನುಕರಿಸತೊಡಗಿದರು. ಇದರ ಬೆನ್ನಲೇ ಅನೇಕ ಶ್ಯಾಂಪೂ ಬ್ರ್ಯಾಂಡ್‌ಗಳು ಬಿಯರ್‌ ಶ್ಯಾಂಪೂ ಹಾಗೂ ಕಂಡೀಷನರ್‌ಗಳನ್ನು ಬಿಡುಗಡೆ ಮಾಡಿದವು. 

ಬಿಯರ್‌ ಶ್ಯಾಂಪೂ ಬಳಸುವುದು ಹೀಗೆ: ಬಾಟಲಿನಿಂದ ಬೇಕಾಗುವಷ್ಟು ಬಿಯರ್‌ ಅನ್ನು ಬೌಲ್‌ ಅಥವಾ ಜಗ್‌ಗೆ ಸುರಿದುಕೊಳ್ಳಬೇಕು. ಸ್ವಲ್ಪ ಹೊತ್ತು ತೆರೆದ ಸ್ಥಳದಲ್ಲಿ ಇದನ್ನು ಇಡಬೇಕು. ನಂತರ ತಲೆ ಸ್ನಾನ ಮಾಡುವಾಗ ಇದನ್ನು ಶ್ಯಾಂಪೂವಿನ ರೀತಿ ಬಳಸಬಹುದು. 15 ನಿಮಿಷ ಕಾಲ ಮಸಾಜ್ ಮಾಡಿ, ಕೂದಲಿನ ಬುಡ ಹಾಗೂ ತುದಿಗೆ ಬಿಯರ್ ಅನ್ನು ಸರಿಯಾಗಿ ಹಚ್ಚಿಕೊಳ್ಳಬೇಕು. ಇದು ಕೂದಲನ್ನು ಸ್ವಚ್ಛ ಮಾಡಿ, ಹೊಳಪಾಗುವಂತೆ ಮಾಡುತ್ತದೆ. ವಾರದಲ್ಲಿ ಒಂದು ಅಥವಾ ಎರಡು ಸಲ ಹೀಗೆ ಕೂದಲು ತೊಳೆದರೆ ಕಾಂತಿಯುತ ಹಾಗೂ ರೇಷ್ಮೆಯಂತಹ ಕೂದಲು ನಿಮ್ಮದಾಗುವುದು. 

ನೇರ ಕೂದಲು ಬಯಸುವವರಿಗೆ ಬಿಯರ್‌ ಶ್ಯಾಂಪೂ ಉತ್ತಮ ಆಯ್ಕೆ. ಇದರಲ್ಲಿ ಕೂದಲ ಆರೋಗ್ಯಕ್ಕೆ ಅಗತ್ಯವಾದ ವಿಟಮಿನ್‌ಗಳಿವೆ. ಇವು ಕೂದಲನ್ನು ನೇರ ಹಾಗೂ ಬಲಿಷ್ಠವಾಗಿಸುತ್ತವೆ. ಬಿಯರ್ ಹಾಗೂ ನೀರನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಕೂದಲ ಬುಡ ಹಾಗೂ ಕೂದಲಿಗೆ ಹಚ್ಚಿಕೊಂಡು, ಸ್ವಲ್ಪ ಸಮಯ ಹಾಗೇ ಬಿಟ್ಟು, ತಣ್ಣೀರಿನಿಂದ ಕೂದಲು ತೊಳೆಯಬೇಕು. ಹೀಗೆ ಕೆಲವು ದಿನಗಳ ಕಾಲ ಮಾಡಬೇಕು. 

ಕೂದಲು ದಟ್ಟವಾಗಿ ಮತ್ತು ಹೊಳೆಯುವಂತೆ ಕಾಣಬೇಕೆಂದರೆ ಬಿಯರ್ ಜೊತೆ ಆ್ಯಪಲ್‌ ಸೀಡರ್ ವಿನೆಗರ್‌ನೊಂದಿಗೆ ಬೆರೆಸಿಕೊಂಡು ಕೂದಲಿಗೆ ಶಾಂಪೂ ಹಾಕಿದ ನಂತರ ಹಚ್ಚಿಕೊಳ್ಳಬೇಕು.

ಬಿಯರ್‌ನಲ್ಲಿರುವ ಮೆಗ್ನೀಶಿಯಂ, ಪೊಟಾಶಿಯಂ ಮತ್ತು ಮಾಲ್ಟೋಸ್ ಕೂದಲ ಪೋಷಣೆಗೆ ಉತ್ತಮ. ಇದರಲ್ಲಿನ ಬಯೋಟಿನ್ ಕೂದಲು ಉದುರುವುದನ್ನು ಕಡಿಮೆಗೊಳಿಸಿ ಹೊಟ್ಟನ್ನು ಕಡಿಮೆ ಮಾಡುತ್ತದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !