ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ಶಕ್ತಿಯ ಎರಡು ರೂಪಗಳು

Last Updated 18 ಫೆಬ್ರುವರಿ 2019, 20:01 IST
ಅಕ್ಷರ ಗಾತ್ರ

ಶ್ಯಾಮಸುಂದರನವನೆ ಚಕ್ರಿ ನರಹರಿಯಂತೆ |
ಸೋಮಶಂಕರನೆ ಭೈರವ ರುದ್ರನಂತೆ ||
ಹೈಮವತಿ ಶಿವೆ ತಾನೆ ಕಾಳಿ ಚಂಡಿಕೆಯಂತೆ |
ಪ್ರೇಮ ಘೋರಗಳೊಂದೆ – ಮಂಕುತಿಮ್ಮ || 95 ||

ಪದ-ಅರ್ಥ: ಶ್ಯಾಮಸುಂದರನವನೆ=ಶ್ಯಾಮಸುಂದರನೂ+ಅವನೆ, ಚಕ್ರಿ=ಚಕ್ರವನ್ನು ಧರಿಸಿದವನು-ಕೃಷ್ಣ, ನರಹರಿ=ನರಸಿಂಹ, ಹೈಮವತಿ=ಹಿಮವಂತನ ಮಗಳು ಗೌರಿ
ವಾಚ್ಯಾರ್ಥ: ಪರಮಸುಂದರನಾದ ಶ್ಯಾಮವರ್ಣದ ಕೃಷ್ಣನೂ ಅವನೇ, ಚಕ್ರವನ್ನು ಹಿಡಿದು ಉಗ್ರರೂಪವನ್ನು ತಾಳಿದವನೂ ಅವನೇ, ಹಿರಣ್ಯಕಶಿಪುವನ್ನು ವಧಿಸಲು ಅತ್ಯುಗ್ರರೂಪವನ್ನು ಧರಿಸಿದ ನರಸಿಂಹನೂ ಅವನೇ. ಶುಭವನ್ನುಂಟುಮಾಡುವ ಶಂಕರನೇ ಭೈರವ ರುದ್ರನಾಗುತ್ತಾನೆ. ಹಿಮವಂತನ ಮಗಳು ಸಕಲಮಂಗಳವನ್ನು ಉಂಟುಮಾಡುವ ಗೌರಿಯೇ ಕಾಳಿ ಚಂಡಿಕೆಯಾಗಿ ಉಗ್ರಳಾಗುತ್ತಾಳೆ. ಪ್ರೇಮ ಹಾಗೂ ಘೋರದ ಎರಡು ಮುಖಗಳೂ ಅವನವೇ.

ವಿವರಣೆ: ಭಗವಂತನ ರೂಪ ಯಾವುದು ? ಸೌಮ್ಯವೋ, ಉಗ್ರವೋ? ಎರಡೂ ಅವನ ರೂಪಗಳೇ. ಸರಸಸುಂದರವಾದದ್ದು ಕ್ಷಣಮಾತ್ರದಲ್ಲಿ ಅತ್ಯುಗ್ರವಾಗಿಬಿಡುತ್ತದೆ. ನನ್ನ ಗೆಳೆಯನೊಬ್ಬ ದೊಡ್ಡ ಕಂಪನಿಯ ಡೈರಕ್ಟರ್ಆಗಿದ್ದವನು, ಪರಿವಾರದೊಂದಿಗೆ ಜಮ್ಮುವಿನಿಂದ ಶ್ರೀನಗರಕ್ಕೆ ಕಾರಿನಲ್ಲಿ ಹೊರಟಿದ್ದ. ಹಿಮಚ್ಛಾದಿತವಾದ ಪರ್ವತ ಶಿಖರಗಳು, ನೋಡಿದಲ್ಲೆಲ್ಲ ಸ್ವರ್ಗಸದೃಶ ದೃಶ್ಯಪ್ರಪಂಚ. ಗಂಡ, ಹೆಂಡತಿ, ಮಗ ಸೊಸೆ ತುಂಬ ಸಂತೋಷದಿಂದ ಆ ಚಿತ್ರಗಳನ್ನು ಮನದಲ್ಲಿ ಹಾಗೂ ಕ್ಯಾಮರಾದಲ್ಲಿ ತುಂಬಿಕೊಂಡರು. ಅದು ಸ್ವರ್ಗವೆ ಆಗಿತ್ತು ಆ ಕ್ಷಣ. ವಾಹನಗಳ ದಟ್ಟಣೆಯಿಂದ ಕಾರು ನಿಂತಿತು. ಮುಂದೆ ನೂರಾರು ಕಾರುಗಳು ಸಾಲುಗಟ್ಟಿ ನಿಂತಿವೆ. ನನ್ನ ಗೆಳೆಯ ಯಾಕೆ ತಡೆಯಾಗಿದೆ ಎಂದು ನೋಡಲು ಕಾರಿನಿಂದ ಕೆಳಗಿಳಿದ. ಎಡಕ್ಕೆ ಪರ್ವತಗಳ ಸಾಲು, ಬಲಗಡೆ ಪ್ರಪಾತ. ಅವನು ಹಾಗೆಯೇ ಮುಂದೆ ಆರೆಂಟು ವಾಹನಗಳನ್ನು ದಾಟಿ ಮುಂದೆ ಹೋಗಿ ನೋಡುತ್ತ ನಿಂತಿದ್ದ. ಅವನ ಹೆಂಡತಿ, ಮಗ, ಸೊಸೆ ಅವನನ್ನೇ ಗಮನಿಸುತ್ತಿದ್ದಾರೆ. ಅರೆಕ್ಷಣದಲ್ಲಿ ಹಾಹಾಕಾರ. ಎಡಗಡೆಯಿಂದ ಬಂಡೆಗಳು ಉರುಳುತ್ತಿವೆ! ನನ್ನ ಸ್ನೇಹಿತ ಮುಂದೆಲ್ಲೋ ನೋಡುತ್ತಿದ್ದವನು ಗಮನಿಸಿರಲಿಲ್ಲ. ಒಂದು ಭಾರೀ ಭೀಮಬಂಡೆ ಉರುಳುತ್ತ ಬಂದು ಇವನ ಪಕ್ಕದಲ್ಲಿ ನಿಂತಿದ್ದ ವಾಹನಕ್ಕೆ ಅಪ್ಪಳಿಸಿ, ವಾಹನವನ್ನೂ, ನನ್ನ ಸ್ನೇಹಿತನನ್ನೂ ಸೆಳೆದುಕೊಂಡು ಪ್ರಪಾತಕ್ಕೆ ಹೋಗಿಬಿಟ್ಟಿತು. ಅವನ ಪರಿವಾರದವರು ನೋಡುತ್ತಿದ್ದಂತೆ ಒಂದು ಕ್ಷಣದ ಹಿಂದೆ ಸಂತೋಷವಾಗಿದ್ದ ಸ್ನೇಹಿತನ ದೇಹ ಕೂಡ ದೊರಕದಂತೆ ಮಾಯವಾಯಿತು. ಸ್ವರ್ಗಸದೃಶವಾಗಿದ್ದ ಕ್ಷಣ ಮರೆಯಾಗಿ ನರಕಸೃಷ್ಟಿಯಾಗಿತ್ತು. ಹಾಗಾದರೆ ಕ್ಷಣದ ಹಿಂದೆ ಸ್ವರ್ಗದಂತಿದ್ದುದು ಸುಳ್ಳೇ? ಇಲ್ಲ. ಈಗ ನರಕವಾದದ್ದು ಸುಳ್ಳೇ? ಇಲ್ಲ. ಹಾಗಾದರೆ ಯಾವುದು ಸತ್ಯ? ಎರಡೂ ಸತ್ಯವೇ, ಯಾಕೆಂದರೆ ಎರಡೂ ಆ ಭಗವಂತನ ರೂಪಗಳೇ.

ಪಾಂಡವರಿಗೆ ಅತ್ಯಂತ ಪ್ರಿಯವಾದ ನಯನಮನೋಹರವಾದ ರೂಪ ಕೃಷ್ಣನದು. ಶಿಶುಪಾಲನನ್ನು ಕೊಲ್ಲಲು ಉಗ್ರನಾಗಿ ಚಕ್ರ ಧರಿಸಿದ ಕೃಷ್ಣನೂ (ಚಕ್ರಿಯೂ) ಅವನೇ. ಮದಾಂಧನಾಗಿದ್ದ ಹಿರಣ್ಯಕಶಿಪುವನ್ನು ಅಡಗಿಸಲು ಕಂಭದಿಂದ ಘುಡುಘಡಿಸಿ ಅಬ್ಬರಿಸಿ ಬಂದು ಅತ್ಯುಗ್ರ ತೋರಿದವನೂ ಅವನೇ. ಸದಾ ಶುಭವನ್ನೇ ಮಾಡುವ ಶಂಕರನೇ ಅವಶ್ಯಬಿದ್ದಾಗ ಭಯಂಕರನಾದ ಭೈರವರುದ್ರನೂ ಆಗುತ್ತಾನೆ. ಹಿಮವಂತನ ಮಗಳಾದ, ಸಕಲ ಮಂಗಳಕಾರಿಯಾದ ಶಿವೆ ಗೌರಿಯೇ ಪ್ರಪಂಚವನ್ನೂ ಕಾಪಾಡಲು ಕಾಳಿಯಾಗುತ್ತಾಳೆ, ಉಗ್ರ ಚಂಡಿಕೆಯಾಗುತ್ತಾಳೆ.

ಭಗವಂತ ಯಾವ ರೂಪವನ್ನೂ ತಾಳಬಲ್ಲ. ಕೃಷ್ಣ ಕಪ್ಪಲ್ಲವೇ? ಶಿವ ಬಿಳಿಯನಲ್ಲವೇ ಎಂದು ನಾವು ಸಾಮಾನ್ಯರು ತಕರಾರು ಮಾಡಿಕೊಳ್ಳುತ್ತೇವೆ. ವಿಷ್ಣು ತ್ರಿವಿಕ್ರಮನೂ ಆಗಬಲ್ಲ, ಪುಟ್ಟ ವಾಮನನೂ ಆಗಬಲ್ಲ. ಆದ್ದರಿಂದ ಅವನಿಗೆ ಒಂದು ರೂಪ, ಆಕಾಶ, ಬಣ್ಣವಿಲ್ಲ. ಎಲ್ಲ ಆಕಾರಗಳೂ, ಬಣ್ಣಗಳೂ ಅವನವೇ. ಘೋರ, ಅಘೋರಗಳು ನಮ್ಮ ದೃಷ್ಟಿಗೆ, ಅನುಭವಕ್ಕೆ ಬರುವಂತಹವುಗಳು. ಅವನಿಗೆ ಎರಡೂ ಒಂದೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT