ಸೋಮವಾರ, ಮಾರ್ಚ್ 8, 2021
25 °C
ಸ್ಫೂರ್ತಿಯ ಉದ್ಯಮಿ

ಶೀತಲೀಕರಣ: ಪರಿಸರಸ್ನೇಹಿ ಉಪಕ್ರಮ

ಎಂ. ಶ್ರೀನಿವಾಸ ರಾವ್ Updated:

ಅಕ್ಷರ ಗಾತ್ರ : | |

Prajavani

ತಂತ್ರಜ್ಞಾನ ಕ್ಷೇತ್ರದ ಖ್ಯಾತ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಯಶಸ್ವಿ ಉದ್ಯೋಗಿ ಎಂದು ಕರೆಸಿಕೊಂಡಿದ್ದ ಸುಧಾಕರ್‌ ಅಮಿರಾಪು ಅವರು 2013ರಲ್ಲಿ ತಮ್ಮ ಊಹೆಗೂ ಮೀರಿದ ಸಾಹಸವೊಂದಕ್ಕೆ ಕೈಹಾಕಿದರು. ತಮ್ಮ ಸ್ನೇಹಿತ ಪಿ. ಶ್ರೀನಿವಾಸ ರಾವ್‌ ಜೊತೆಗೂಡಿ ಅವರು ಹೈದರಾಬಾದ್‌ನಲ್ಲಿ ಶೀತಲೀಕರಣ ಯೋಜನೆಯೊಂದನ್ನು ಆರಂಭಿಸಿದರು. ಎರಡು ವರ್ಷಗಳಲ್ಲಿ ಅವರ ವಹಿವಾಟು ನೆರೆಯ ವಿಶಾಖಪಟ್ಟಣ ಮತ್ತು ಅಮರಾವತಿಗೆ ಹರಡಿತು. ಆದರೆ ಸುಧಾಕರ್‌ ಅವರಿಗೆ ಬೇಕಿದ್ದಿದ್ದು ಇದೊಂದೇ ಅಲ್ಲ. ಸಾಮಾಜಿಕವಾಗಿ ಪರಿಣಾಮಕಾರಿ ಎನ್ನಬಹುದಾದ ಕೆಲಸವೊಂದನ್ನು ಮಾಡುವ ತುಡಿತ ಅವರಲ್ಲಿತ್ತು. ಈ ತುಡಿತವೇ ಅವರಿಗೆ 2019ರ ಏಪ್ರಿಲ್‌ನಲ್ಲಿ ಸ್ನೋಟ್ರೀ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಆರಂಭಿಸಲು ಪ್ರೇರಣೆ ನೀಡಿತು. ಸಾಗಾಣಿಕೆಯ ಸಂದರ್ಭದಲ್ಲಿ ಶೀತಲಗೃಹ ಸೌಲಭ್ಯವನ್ನು ಬಯಸುವ ಸಣ್ಣ ಕಂಪನಿಗಳಿಗೆ ಈ ಕಂಪನಿ ನೆರವಾಗುತ್ತಿದೆ.

ತಮ್ಮ ಪ್ರಯತ್ನದ ಕುರಿತು ವಿವರಿಸುವ ಸುಧಾಕರ್‌, ‘ಅಲ್ಪ ವೆಚ್ಚದಲ್ಲಿ ನಿಯಂತ್ರಿತ ತಾಪಮಾನದಲ್ಲಿ ಸರಕುಗಳ ಸಾಗಣೆ ಸಾಧ್ಯವಾಗಿಸುವುದು ಸ್ನೋಟ್ರೀ ಕಂಪನಿಯು ಉದ್ದೇಶ. ಪ್ರಸ್ತುತ ಇಂಥ ಸೇವೆಗಳಿಗೆ ಸುಮಾರು ₹ 15 ಲಕ್ಷದಿಂದ ₹ 20 ಲಕ್ಷದಷ್ಟು ವೆಚ್ಚವಾಗುತ್ತದೆ. ಸ್ನೋಟ್ರೀ ಕಂಪನಿಯು ತಾಪಮಾನವನ್ನು ನಿಯಂತ್ರಣದಲ್ಲಿ ಇರಿಸುವ ಹೊಸ ಮಾದರಿಯೊಂದನ್ನು ಕಂಡುಕೊಂಡಿದೆ. ಇದರಲ್ಲಿ ವಸ್ತುಗಳು ಮೂರು ದಿನಗಳವರೆಗೂ ಕೆಡುವುದಿಲ್ಲ. 30 ಕೆ.ಜಿ.ಯಿಂದ 40 ಕೆ.ಜಿ.ವರೆಗೆ ಸಾಮಗ್ರಿಗಳನ್ನು ಇದರಲ್ಲಿ ಇರಿಸಬಹುದು. ಪರಿಸರಕ್ಕೆ ಧಕ್ಕೆ ತರುವ ಥರ್ಮಾಕೋಲ್‌ಗೆ ಇದು ಸೂಕ್ತವಾದ ಪರ್ಯಾಯ. ಸರಕುಗಳನ್ನು ಸಾಗಿಸಲು ಸಣ್ಣ ಕಂಪನಿಗಳಿಗೆ ಇಂತಹ ಸೌಲಭ್ಯಗಳು ಬೇಕಾಗುತ್ತವೆ. ಆದರೆ, ದುಬಾರಿ ಹಣ ಪಾವತಿಸಿ ಸೌಲಭ್ಯ ಪಡೆಯಲಾಗದವರಿಗೆ ಸ್ನೋಟ್ರೀ ನೆರವಾಗುತ್ತದೆ’ ಎನ್ನುತ್ತಾರೆ.

ವಾಸ್ತವವಾಗಿ ಸುಧಾಕರ್‌ ಅವರು ಈ ಸೇವೆಯನ್ನು 2020ರ ಮಾರ್ಚ್‌ನಲ್ಲಿ ಆರಂಭಿಸಬೇಕೆಂದಿದ್ದರು. ಆದರೆ ಕೋವಿಡ್‌–19ರ ಕಾರಣದಿಂದಾಗಿ ಅದು ಸಾಧ್ಯವಾಗಲಿಲ್ಲ. ಸುಧಾಕರ್‌ ಈ ಸಮಸ್ಯೆಯನ್ನು ಬೇರೆಯದೇ ದೃಷ್ಟಿಯಿಂದ ನೋಡಿದರು. ತಮ್ಮ ವಹಿವಾಟು ಬೆಳೆಸಲು ಸಿಕ್ಕ ಅವಕಾಶ ಇದು ಎಂದು ಭಾವಿಸಿದರು. ಕೋವಿಡ್‌–19 ಸಾಂಕ್ರಾಮಿಕ ತಡೆಯಲು ಸಿದ್ಧಗೊಂಡಿರುವ ಲಸಿಕೆಗಳನ್ನು ಸಾಗಿಸಲು ಸಹ ಇದನ್ನು ಬಳಸಬಹುದು ಎಂದು ಅವರು ಹೇಳುತ್ತಾರೆ.

ಸ್ನೋಟ್ರೀ ಸೇವೆಗಳು 2021ರ ಜನವರಿಯಲ್ಲಿ ಲಭ್ಯವಾಗಲಿದ್ದು, ತರಕಾರಿ, ಹೂವು ಹಣ್ಣು, ಸಂಸ್ಕರಿತ ಆಹಾರ ಪದಾರ್ಥಗಳು ಮತ್ತು ಸಾಗರೋ ತ್ಪನ್ನಗಳನ್ನು ಸಾಗಿಸಲು ನೆರವಾಗಲಿದೆ. ಆಹಾರ ಪದಾರ್ಥಗಳು ಕಲುಷಿತಗೊಳ್ಳಬಹುದು ಎಂಬ ಭಯವಿಲ್ಲದೇ, ಅವುಗಳನ್ನು ಸುರಕ್ಷಿತವಾಗಿ ಸಾಗಿಸಬಹುದು. ಥರ್ಮಾಕೋಲ್‌ ಬಾಕ್ಸ್‌ಗಳಿಗೆ ಹೋಲಿಸಿದರೆ ಸ್ನೋಟ್ರೀ ಬಾಕ್ಸ್‌ಗಳನ್ನು ಮರುಬಳಕೆ ಮಾಡಬಹುದಾದ್ದರಿಂದ ಇದು ಪರಿಸರಸ್ನೇಹಿಯೂ ಹೌದು.


ಎಂ. ಶ್ರೀನಿವಾಸ ರಾವ್

ತಮ್ಮ ಸಹ ಉದ್ಯಮಿ ಗಳಿಗೆ ಸುಧಾಕರ್‌ ಹೇಳುವ ಕಿವಿಮಾತಿದು: ‘ಉದ್ಯಮಿಯಾಗುವ ಪ್ರಯಾಣದಲ್ಲಿ ಪ್ರತಿಯೊಬ್ಬರಿಗೂ ತಾಳ್ಮೆ ಮತ್ತು ನಿರಂತರ ಪರಿಶ್ರಮ ಬೇಕು. ಫಲಿತಾಂಶ ಕಾಣಲು ಕಾಲಾವಕಾಶ ಬೇಕಾಗುತ್ತದೆ. ನಿಮ್ಮ ಉತ್ಪನ್ನ ಮಾರುಕಟ್ಟೆಯ ಅಗತ್ಯಕ್ಕೆ ತಕ್ಕಂತೆ ಇರಬೇಕು, ವ್ಯವಸ್ಥೆಯ ಮೌಲ್ಯವರ್ಧಿಸುವಂತೆ ಇರಬೇಕು’.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು