ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಫೂರ್ತಿಯ ಉದ್ಯಮಿ: ಹನಿ ತಯಾರಿಸಿದ ಕೊಂಬುಚ ಪೇಯ

Last Updated 25 ನವೆಂಬರ್ 2020, 20:55 IST
ಅಕ್ಷರ ಗಾತ್ರ
ADVERTISEMENT
"ಎಂ. ಶ್ರೀನಿವಾಸ್ ರಾವ್"

ಹನಿ ಇಸ್ಲಾಂ ಅವರಿಗೆ ಕೊಂಬುಚ ಪರಿಚಯವಾಗಿದ್ದು 2016ರಲ್ಲಿ. ಕೊಂಬುಚ ಎಂಬುದು ಆರೋಗ್ಯಕರವಾದ, ರುಚಿಯಾದ ಒಂದು ಪೇಯ. ಗೋವಾದಲ್ಲಿ ಕಲಾ ಉತ್ಸವದಲ್ಲಿ ಕಾರ್ಯಕರ್ತೆಯಾಗಿ ಕೆಲಸ ಮಾಡಲು ಹನಿ ಅವರಿಗೆ ಅವಕಾಶ ಸಿಕ್ಕಾಗ ಪಾಕಪ್ರಪಂಚದ ಪ್ರಸಿದ್ಧ ವ್ಯಕ್ತಿಗಳ ಒಡನಾಟ ಕೂಡ ಅಲ್ಲಿ ಲಭಿಸಿತು. ಪ್ರಖ್ಯಾತ ಬಾಣಸಿಗರು, ಕಲಾವಿದರು, ಸಂಗೀತಗಾರರು, ಆಹಾರ ಉದ್ಯಮಗಳ ಮಾಲೀಕರ ಒಡನಾಟ ಲಭಿಸಿತು.

ಹುದುಗಿಸಿದ ಎಲ್ಲ ಬಗೆಯ ಆಹಾರಗಳ ಪೈಕಿ ಕೊಂಬುಚವು ಹನಿ ಅವರ ಗಮನ ಸೆಳೆಯಿತು. ಆದರೆ ಆಗ ಅವರು ಕೊಂಬುಚದ ಬಗ್ಗೆ ಗೆಚ್ಚು ತಿಳಿಯಲು ಮುಂದಾಗಲಿಲ್ಲ. 2017ರಲ್ಲಿ ಕೆಲಸದ ನಿಮಿತ್ತ ಅಮೆರಿಕದಲ್ಲಿದ್ದಾಗ ಸೂಪರ್ ಮಾರ್ಕೆಟ್‌ ಒಂದರಲ್ಲಿ ಹನಿ ಅವರು ವಿವಿಧ ಬಗೆಯ ಕೊಂಬುಚಗಳನ್ನು ಕಂಡರು. ವಿವಿಧ ಬ್ರ್ಯಾಂಡ್‍ಗಳ ಕೊಂಬುಚಗಳ ರುಚಿ ನೋಡಿದ ಹನಿ, ಈ ಪಾನೀಯಕ್ಕೆ ಮಾರುಹೋದರು.

ಕ್ಯಾಲಿಫೋರ್ನಿಯಾದಲ್ಲಿ ಕೊಂಬುಚ ತಯಾರು ಮಾಡುವ ಸ್ನೇಹಿತೆಯನ್ನು ಭೇಟಿಯಾದ ಹನಿ, 2018ರಲ್ಲಿ ಬೆಂಗಳೂರಿಗೆ ಮರಳಿದರು. ಬೆಂಗಳೂರಿನಲ್ಲಿ ಕೊಂಬುಚ ತಯಾರಿಸುವ ಪ್ರಯೋಗಕ್ಕೆ ಮುಂದಾದರು. ಒಂದೆರಡು ತಿಂಗಳು ಕಳೆಯುವಷ್ಟರಲ್ಲಿ, ಮನೆಯಲ್ಲಿಯೇ ತಾವೇ ತಯಾರಿಸಿದ ಕೊಂಬುಚವನ್ನು ರೈತರ ಮಾರುಕಟ್ಟೆಯೊಂದಕ್ಕೆ ಒಯ್ಯಲು ನಿರ್ಧರಿಸಿದರು. ಅಲ್ಲಿ ಅವರ ಕೊಂಬುಚಗಳು ಒಳ್ಳೆಯ ಬೇಡಿಕೆ ಕಂಡುಕೊಂಡವು. ಅಲ್ಲಿಂದ ಮುಂದೆ ಹನಿ ಅವರು, ರೈತರ ಮಾರುಕಟ್ಟೆಗಳಲ್ಲಿ ಪಾಲ್ಗೊಳ್ಳಲು ಆರಂಭಿಸಿದರು. ನಿಧಾನವಾಗಿ, ಹನಿ ಅವರು ಸಿದ್ಧಪಡಿಸಿದ ಕೊಂಬುಚಗಳ ಗ್ರಾಹಕರ ಸಂಖ್ಯೆ ಹೆಚ್ಚಾಯಿತು.

2019ರಲ್ಲಿ ಹನಿ, ತಮ್ಮ ವ್ಯಾಪಾರವನ್ನು ಬೆಂಗಳೂರಿನ ಇಂದಿರಾನಗರಕ್ಕೆ ವರ್ಗಾಯಿಸಿದರು. ಅಲ್ಲಿ ಮೌಂಟೆನ್ ಬೀ ಕೊಂಬುಚ ತಯಾರಿ, ಮಾರಾಟ ಮುಂದುವರಿಸಿದರು. ಇದರ ಜೊತೆಗೆ ಹನಿ, ತಮ್ಮ ಇ-ವಾಣಿಜ್ಯ ವೇದಿಕೆ www.mountainbeekombucha.inಗೆ ಚಾಲನೆ ನೀಡಿದರು. ಬೆಂಗಳೂರು ಹಾಗೂ ಚೆನ್ನೈನಲ್ಲಿ ಕೊಂಬುಚ 10ಕ್ಕೂ ಹೆಚ್ಚು ಅಂಗಡಿಗಳಲ್ಲಿ ಈಗ ಲಭ್ಯವಿದೆ. ಅಂಗಡಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಕೂಡ.

ಉದ್ಯಮಿಯಾಗಿ ಹನಿ ಅವರಿಗೆ ಪ್ರತಿನಿತ್ಯ ಹೊಸ ಸವಾಲುಗಳು ಎದುರಾಗುತ್ತಿದ್ದವು. ಈ ಸವಾಲುಗಳನ್ನು ಎದುರಿಸಲು ಅವರು ಬಹಳಷ್ಟು ಕಸರತ್ತು ಮಾಡುತ್ತ, ಸಮಸ್ಯೆಯನ್ನು ಬೇರೆ ಬೇರೆ ದೃಷ್ಟಿಕೋನಗಳಿಂದ ನೋಡಲಾರಂಭಿಸಿದರು. ಅನೇಕರಿಗೆ ಈ ಪೇಯದ ಬಗ್ಗೆ ತಿಳಿದಿರದ ಕಾರಣ, ತಮ್ಮಉತ್ಪನ್ನ ಎಷ್ಟು ಒಳ್ಳೆಯದು ಎಂಬುದನ್ನು ಗ್ರಾಹಕರಿಗೆ ತಿಳಿಸಲು ಹಾಗೂ ಅವರ ಮನ ಒಲಿಸಲು ಹನಿ ಬಹಳ ಕಷ್ಟಪಟ್ಟರು. ಅದೃಷ್ಟವಶಾತ್, ಜನರಿಗೆ ಕೊಂಬುಚದ ಬಗ್ಗೆ ಆಸಕ್ತಿ ಬೆಳೆಯುತ್ತ ಹೋಯಿತು.

ಎಂ. ಶ್ರೀನಿವಾಸ್ ರಾವ್

ಲಾಕ್‍ಡೌನ್ ಸಂದರ್ಭದಲ್ಲಿ ಇತರ ಸಣ್ಣ ಉದ್ದಿಮೆಗಳು ಸಂಕಷ್ಟ ಎದುರಿಸಿದ ರೀತಿಯಲ್ಲೇ, ಮೌಂಟೆನ್ ಬೀ ಕೊಂಬುಚ ಸಹ ಕಷ್ಟಕ್ಕೆ ಸಿಲುಕಿತು. ಕೆಲವು ತಿಂಗಳ ಕಾಲ ವ್ಯಾಪಾರ ವಹಿವಾಟು ನಡೆಸಲಿಲ್ಲ. ವ್ಯಾಪಾರ ಸಂಪೂರ್ಣವಾಗಿ ಸ್ಥಗಿತಗೊಂಡರೂ ಬ್ರ್ಯಾಂಡ್ ಪ್ರಿಯರ ಸಂಪರ್ಕ ಕಳೆದುಕೊಳ್ಳದ ಹನಿ, ಆನ್ ಲೈನ್ ವೇದಿಕೆಗಳನ್ನು ಬಳಸಿಕೊಂಡು ತಮ್ಮ ಸಂಭಾವ್ಯ ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದರು. ಇದರಲ್ಲಿ ಅವರು ಕರುಳಿನ ಆರೋಗ್ಯ ಹಾಗೂ ಹುದುಗಿದ ಆಹಾರ ಸೇವನೆಯ ಪ್ರಾಮುಖ್ಯತೆ ಬಗ್ಗೆ ತಿಳಿವಳಿಕೆ ಮೂಡಿಸಿದರು. ಮನೆಯಲ್ಲಿ ತಯಾರಿಸಬಹುದಾದ ಕೆಲವು ಸರಳ ಅಡುಗೆಗಳನ್ನು ತಿಳಿಸಿದರು.

ಗ್ರಾಹಕರೊಂದಿಗಿನ ಸಂಪರ್ಕದ ಕಾರಣದಿಂದಾಗಿ ಕೊಂಬುಚ ಸಮುದಾಯದೊಂದಿಗೂ ಸಂಪರ್ಕ ಬೆಳೆಸಲು ಸಾಧ್ಯವಾಯಿತು. ಆನ್‌ಲೈನ್ ಮೂಲಕ ಹನಿ ಅವರು ಅನೇಕ ಕೊಂಬುಚ ಪ್ರಿಯರೊಂದಿಗೆ ಒಡನಾಡುವ ಅವಕಾಶ ಪಡೆದರು. ಮೇ ತಿಂಗಳಲ್ಲಿ ಲಾಕ್‌ಡೌನ್‌ ಸಡಿಲಿಕೆ ಆಗಿ, ಕೊಂಬುಚ ತಯಾರಿ ಮತ್ತು ಮಾರಾಟ ಮತ್ತೆ ಆರಂಭವಾದಾಗ, ರಿಟೇಲ್‌ ಪಾಲುದಾರರು ಕೋವಿಡ್‍ನಿಂದಾಗಿ ಆರ್ಥಿಕವಾಗಿ ದೊಡ್ಡ ಪೆಟ್ಟು ತಿಂದಿದ್ದರು. ಇದರಿಂದಾಗಿ ಮಾರಾಟ ನಿಧಾನವಾಗಿ ನಡೆದಿತ್ತು. ಆದರೆ, ಕಾಲಕ್ರಮೇಣ ಮೌಂಟೆನ್ ಬೀ ಕೊಂಬುಚ ಹೆಚ್ಚು ರಿಟೇಲ್ ಪಾಲುದಾರರನ್ನು ತನ್ನ ತೆಕ್ಕೆಗೆ ಸೆಳೆಯುವಲ್ಲಿ ಯಶಸ್ಸು ಕಂಡಿತು. ಅವಕಾಶಗಳನ್ನು ನಾವು ಸೃಷ್ಟಿಸಿಕೊಳ್ಳಬೇಕು ಎನ್ನುವುದು ಹನಿ ಅವರ ದೃಢ ನಂಬಿಕೆ. ‘ನೀವು ನಿಮ್ಮ ಗುರಿಯ ಕಡೆ ಸಾಗುವ ದೃಢ ಮನಸ್ಸು ಹೊಂದಿದ್ದಾಗ, ಒಂದು ಬಾಗಿಲು ಮುಚ್ಚಿದರೆ, ನೂರು ಬೇರೆ ಬಾಗಿಲುಗಳು ತೆರೆದುಕೊಳ್ಳುತ್ತವೆ’ ಎಂಬುದು ಉದ್ಯಮಿಯಾಗಿ ಹನಿ ಅವರು ಹೇಳುವ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT