ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟಾರ್ಟ್‌ ಅಪ್‌ ಇಂಡಿಯಾದಲ್ಲಿ ಭಾಗವಹಿಸಿ: ಯುವ ಸಮೂಹಕ್ಕೆ ಮೋದಿ ಕರೆ

ಜನವರಿ 15 ಮತ್ತು 16ರಂದು ಅಂತರರಾಷ್ಟ್ರೀಯ ಶೃಂಗಸಭೆ ‘ಪ್ರಾರಂಭ್‌‘
Last Updated 11 ಜನವರಿ 2021, 5:21 IST
ಅಕ್ಷರ ಗಾತ್ರ

ನವದೆಹಲಿ: ಇದೇ 15 ಮತ್ತು 16ರಂದು ನಡೆಯಲಿರುವ ‘ಪ್ರಾರಂಭ್‘ – ಸ್ಟಾರ್ಟ್‌ ಅಪ್‌ ಇಂಡಿಯಾ ಅಂತರರಾಷ್ಟ್ರೀಯ ಶೃಂಗಸಭೆಯಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿಯವರು ಯುವ ಸಮೂಹಕ್ಕೆ ಕರೆ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಈ ಶೃಂಗಸಭೆ, ಸ್ಟಾರ್ಟ್‌ಅಪ್‌ ಕ್ಷೇತ್ರದ ಯುವ ನಾಯಕರ ಜತೆಗೆ, ಉದ್ಯಮ, ಅಕಾಡೆಮಿ, ಹೂಡಿಕೆ, ಬ್ಯಾಂಕಿಂಗ್ ಮತ್ತು ಹಣಕಾಸು ಕ್ಷೇತ್ರಗಳಲ್ಲಿ ಉನ್ನತ ಸ್ಥಾನದಲ್ಲಿ ಕೆಲಸ ಮಾಡುವವರನ್ನು ಒಟ್ಟುಗೂಡಿಸಲು ಪ್ರಯತ್ನಿಸುತ್ತಿದೆ‘ ಎಂದು ಅವರು ಹೇಳಿದ್ದಾರೆ.

ಈ ಟ್ವೀಟ್‌ನಲ್ಲಿ ತಮ್ಮ ಲಿಂಕ್ಡ್‌ಇನ್‌ ಪೋಸ್ಟ್‌ ಅನ್ನೂ ಹಂಚಿಕೊಂಡಿದ್ದಾರೆ. ಇದರಲ್ಲಿ, ಶೃಂಗಸಭೆ ವರ್ಚುವಲ್ ಆಗಿ ನಡೆಯುವ ಕಾರಣ, ತಾವು ಇದ್ದ ಸ್ಥಳದಿಂದಲೇ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಯುವ ಸಮೂಹ ಈ ಶೃಂಗಸಭೆಯ ಭಾಗವಾಗಬಹುದು‘ ಎಂಬ ಮಾಹಿತಿ ಹಂಚಿಕೊಂಡಿದ್ದಾರೆ.

‘ಕೋವಿಡ್‌ 19‘ ಸಾಂಕ್ರಾಮಿಕದ ಸಮಯದಲ್ಲಿ ವರ್ಚುವಲ್‌ (ಆನ್‌ಲೈನ್‌) ಸಭೆ, ಸಮಾರಂಭಗಳು ಸಾಮಾನ್ಯವಾಗಿವೆ. ಹೀಗಾಗಿ, ವರ್ಚುವಲ್ ವೇದಿಕೆ ಯುವ ಸಮೂಹಕ್ಕೆ ಹಲವು ಆಸಕ್ತಿದಾಯಕ ದೇಶೀಯ ಮತ್ತು ಜಾಗತಿಕ ವೇದಿಕೆಗಳ ಭಾಗವಾಗಲು ಉತ್ತಮ ಅವಕಾಶವನ್ನು ಕಲ್ಪಿಸಿದೆ. ಇದೇ ಅವಕಾಶವನ್ನು ಬಳಸಿಕೊಂಡು, ಇದೇ 15 ಮತ್ತು 16 ರಂದು ನಡೆಯುವ ‘ಪ್ರಾರಂಭ್‌‘ ಶೃಂಗಸಭೆಯ ಭಾಗವಾಗಬೇಕೆಂದು ಯುವ ಸಮೂಹವನ್ನು ಕೇಳುತ್ತಿದ್ದೇನೆ‘ ಎಂದು ಮೋದಿಯವರು ಟ್ವೀಟ್‌ ಮಾಡಿದ್ದಾರೆ.

2020ನೇ ವರ್ಷದಲ್ಲಿ ಪ್ರತಿಯೊಬ್ಬರೂ ಮನೆಯಲ್ಲೇ ಕುಳಿತು ಕೆಲಸ ಮಾಡಬೇಕಾದ್ದರಿಂದ, ತಮ್ಮ ಕೆಲಸದ ಶೈಲಿಯನ್ನು ಬದಲಿಸಿಕೊಳ್ಳುವಂತಾಯಿತು. ವರ್ಕ್ ಫ್ರಂ ಹೋಮ್ (ಮನೆಯಿಂದಲೇ ಕೆಲಸ ಮಾಡುವುದು) ಎಂಬ ಪರಿಕಲ್ಪನೆ ಹೆಚ್ಚು ತಂತ್ರಜ್ಞಾನವನ್ನು ಬಳಸಿಕೊಳ್ಳಲು ಕಾರಣವಾಯಿತು ಎಂಬುದನ್ನು ಪ್ರಧಾನಿಯವರು ಗುರುತಿಸಿದ್ದಾರೆ.

‘ಕಳೆದ ವರ್ಷ ಆನ್‌ಲೈನ್ ಮೂಲಕ ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸಿದೆ. ಇದೊಂದು ಅತ್ಯಂತ ಉತ್ಪಾದಕ ಕಾರ್ಯ ಹಾಗೂ ಒಳನೋಟಗಳನ್ನು ನೀಡಿತು. ವಿಜ್ಞಾನಿಗಳು, ವೈದ್ಯಕೀಯ ವೃತ್ತಿಪರರ, ಕೋವಿಡ್ ಯೋಧರು, ಶಿಕ್ಷಣ ತಜ್ಞರು, ಉದ್ಯಮದ ಮುಖಂಡರು, ಯುವ ಸಂಶೋಧಕರು, ಆಧ್ಯಾತ್ಮಿಕ ನಾಯಕರು ಸೇರಿದಂತೆ ಹಲವು ಕ್ಷೇತ್ರದ ಗಣ್ಯರೊಂದಿಗೆ ಸಂವಹನ ನಡೆಸಲು ಆನ್‌ಲೈನ್ ಅನುಕೂಲ ಕಲ್ಪಿಸಿತು‘ ಎಂದು ಮೋದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT