ಭಾನುವಾರ, ಸೆಪ್ಟೆಂಬರ್ 20, 2020
23 °C

ಜನಪ್ರಿಯತೆ ಹಾದಿಯಲ್ಲಿ ಕ್ವಿಕ್‌ ರೈಡ್‌

ಕೇಶವ ಜಿ. ಝಿಂಗಾಡೆ Updated:

ಅಕ್ಷರ ಗಾತ್ರ : | |

ತಂತ್ರಜ್ಞರಾದ ಕೆ. ಎನ್‌. ಎಂ ರಾವ್‌ ಮತ್ತು ಶೋಭನಾ ಶ್ರೀರಾಂ ಅವರು ನಾಲ್ಕೈದು ವರ್ಷಗಳ ಹಿಂದೆ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಗ ಕಾರ್‌ ಪೂಲಿಂಗ್‌ ಪರಿಕಲ್ಪನೆಗೆ ತಂತ್ರಜ್ಞಾನದ ಸ್ಪರ್ಶ ನೀಡಿ ಜನಪ್ರಿಯಗೊಳಿಸುವ ಚಿಂತನೆ ಅವರ ಮನದಲ್ಲಿ ಮೊಳಕೆ ಒಡೆದಿತ್ತು. ಕಾರ್ಪೊರೇಟ್ ಸಂಸ್ಥೆಗಳಲ್ಲಿ ಕೆಲಸ ಮುಗಿಸಿ ಮನೆಗೆ ಹೊರಡುವಾಗ ಪ್ರತಿಯೊಬ್ಬರೂ ಟ್ಯಾಕ್ಸಿಗಾಗಿ ಕಾಯುತ್ತ ನಿಂತಿದ್ದಾಗ ಬಹುತೇಕ ಕಾರ್‌ಗಳು ಒಬ್ಬೊಬ್ಬರನ್ನೇ ಕರೆದುಕೊಂಡು ಸಾಗುತ್ತಿದ್ದವು. ಕೆಲವರು ಅದೇ ಮಾರ್ಗದಲ್ಲಿ ಹೋಗಬೇಕಾಗಿದ್ದರೂ ತಮ್ಮ ಟ್ಯಾಕ್ಸಿ ಬರುವಿಕೆಗೆ ಅವರು ಎದುರು ನೋಡುತ್ತಿದ್ದರು. ಕೆಲವರಿಗೆ ತಮ್ಮ ಜತೆ ಬರುವೀರಾ ಎಂದು ಸಹೋದ್ಯೋಗಿಗಳಿಗೆ ಕೇಳಲು ಮುಜುಗರ. ಇನ್ನೂ ಕೆಲವರಿಗೆ ಬಿಗುಮಾನ ಅಡ್ಡ ಬರುತ್ತಿತ್ತು. ನಾನೂ ನಿಮ್ಮ ಜತೆ ಬರಬಹುದಾ ಎಂದು ಪ್ರಶ್ನಿಸಿದರೆ ಏನೆಂದುಕೊಳ್ಳುವರೋ ಎನ್ನುವ ಹಿಂಜರಿಕೆ ಕಾಡುತ್ತಿತ್ತು. ಇದಕ್ಕೆಲ್ಲ ಪರಿಹಾರ ಕಂಡುಕೊಳ್ಳಲು ತಂತ್ರಜ್ಞಾನ ನೆರವು ಪಡೆಯಬಹುದು. ಕಾರ್‌ನ ಮಾಲೀಕ (ರೈಡ್‌ ಗಿವರ್‌) ಮತ್ತು ಸಹ ಪ್ರಯಾಣಕ್ಕೆ ಸಿದ್ಧರಿರುವ (ರೈಡ್‌ ಟೇಕರ್‌) ಮಧ್ಯೆ ಸಂವಹನ ಏರ್ಪಡಿಸಲು ಇವರಿಬ್ಬರೂ ಕಾರ್ಯಪ್ರವೃತ್ತರಾಗಿದ್ದರು. ಅವರಿಬ್ಬರ ಪರಿಶ್ರಮದಿಂದ ಕ್ವಿಕ್‌ ರೈಡ್‌ (Quick Ride) ಹೆಸರಿನ ನವೋದ್ಯಮವು ಬೆಂಗಳೂರಿನಲ್ಲಿ 2014ರಲ್ಲಿ ಅಸ್ತಿತ್ವಕ್ಕೆ ಬಂದಿತು. ಇದೊಂದು ಸವಾಲಿನ ಆಲೋಚನೆಯಾಗಿತ್ತು. ಆರಂಭದಲ್ಲಿ ಸೀಮಿತ ಸಂಖ್ಯೆಯಲ್ಲಿ ಜಾರಿಗೆ ಬಂದ ಈ ಪರಿಕಲ್ಪನೆಗೆ 2015ರಲ್ಲಿ ಆ್ಯಪ್‌ ಅಭಿವೃದ್ಧಿಪಡಿಸಲಾಗಿತ್ತು. ಅದೀಗ ದೇಶದ 9 ನಗರಗಳಿಗೆ ಸೇವೆ ವಿಸ್ತರಿಸಿರುವುದು ಇದರ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ಸರಳ, ಕ್ಷಿಪ್ರ, ಸುರಕ್ಷಿತ, ನಗದುರಹಿತ ವಹಿವಾಟಿನ ಈ ಸೌಲಭ್ಯವು ಬಳಕೆದಾರ ಸ್ನೇಹಿ ಸೌಲಭ್ಯವಾಗಿದೆ. ಸಹ ಪ್ರಯಾಣಿಕರ ಜತೆ ಕಾರ್‌ ಹಂಚಿಕೊಂಡು ಪ್ರಯಾಣಿಸುವ ಸೌಲಭ್ಯ ಕಲ್ಪಿಸಿರುವ ಕ್ವಿಕ್‌ ರೈಡ್‌, ವೃತ್ತಿನಿರತರನ್ನು ಪರಸ್ಪರ ಸಂಪರ್ಕಿಸಿ, ಪ್ರಯಾಣ ಸಮನ್ವಯಗೊಳಿಸಿ, ಪಯಣದ ವೆಚ್ಚ ಹಂಚಿಕೊಳ್ಳುವ ಸ್ವಯಂಚಾಲಿತ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಬಾಡಿಗೆ ಟ್ಯಾಕ್ಸಿಗಳ ರೈಡ್‌ ಷೇರಿಂಗ್‌ಗಿಂತ ಅಗ್ಗದ ಸೇವೆ ಇದಾಗಿದೆ.

ವೃತ್ತಿನಿರತರು ಮಾತ್ರ ಇದರ ಪ್ರಯೋಜನ ಪಡೆದುಕೊಳ್ಳಬಹುದು. ಕಾರ್‌ ಪೂಲಿಂಗ್‌ ಸೇವೆ ನೀಡುವವರು ಮತ್ತು ಪಡೆಯುವವರು ಹೇಳಿಕೊಂಡಂತೆ ನಿರ್ದಿಷ್ಟ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವುದನ್ನು ಖಚಿತಪಡಿಸಿಕೊಂಡ ನಂತರವೇ ಅವರಿಗೆ ಹೆಸರು ನೋಂದಾಯಿಸಲು ಅವಕಾಶ ಕಲ್ಪಿಸಿಕೊಡಲಾಗುವುದು. ಅನುಚಿತ ವರ್ತನೆ, ದುರ್ಬಳಕೆ ತಡೆಗೆ ಈ ಕ್ರಮ ಅಳವಡಿಸಿಕೊಳ್ಳಲಾಗಿದೆ.

‘ಕಾರ್‌ ಪೂಲಿಂಗ್‌ ಪರಿಕಲ್ಪನೆ ಹೊಸದೇನಲ್ಲ. ಆದರೆ, ಅದನ್ನು ವ್ಯವಸ್ಥಿತವಾಗಿ ನಿರ್ವಹಿಸಿ, ಮುಂದುವರೆಸಿಕೊಂಡು ಹೋಗುವುದು ಮುಖ್ಯ. ಕಾರ್‌ ರೈಡರ್‌, ಹೇಳಿದ ಸಮಯಕ್ಕೆ ಮನೆಯಿಂದ ಹೊರಟು ನಿಗದಿತ ತಾಣ ತಲುಪಬೇಕು. ರೈಡ್‌ ಟೇಕರ್‌ ಕೂಡ ಸರಿಯಾದ ಸಮಯಕ್ಕೆ ನಿಗದಿತ ಸ್ಥಳದಲ್ಲಿ ಬಂದು ಕಾಯುತ್ತಿರಬೇಕು. ಕಾರ್‌ನ ಸಹ ಪ್ರಯಾಣಿಕರೆಲ್ಲ ಒಂದೆಡೆಯೇ ಕೆಲಸ ಮಾಡುತ್ತಿರಬೇಕು. ಹಲವರು ಕಂಪನಿ ಬದಲಿಸಿದರೆ ಅಂತಹ ಸಂಪರ್ಕ ಜಾಲ ಕಡಿದು ಹೋಗುತ್ತದೆ. ಬಳಕೆದಾರರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಿದರೆ ಮಾತ್ರ ಇಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿತ್ತು. ಅದನ್ನು ನಾವೀಗ ಸಾಧಿಸಿದ್ದೇವೆ.  ಕಾರ್ ಪೂಲಿಂಗ್‌ ಸಂಪರ್ಕ ಜಾಲ ಸಮನ್ವಯಗೊಳಿಸುವ ದೊಡ್ಡ ಸವಾಲು ನಮ್ಮೆದುರಿಗೆ ಇತ್ತು. ಅದನ್ನು ಆ್ಯಪ್‌ (quick ride)  ಅಭಿವೃದ್ಧಿಪಡಿಸುವುದರ ಮೂಲಕ ಬಗೆಹರಿಸಿಕೊಳ್ಳಲಾಗಿದೆ’ ಎಂದು ಸಹ ಸ್ಥಾಪಕಿ ಶೋಭನಾ ಶ್ರೀರಾಂ ಹೇಳುತ್ತಾರೆ.

ಬೆಳಿಗ್ಗೆ 7 ರಿಂದ 10 ಮತ್ತು ಮಧ್ಯಾ‌ಹ್ನ 4 ಗಂಟೆಯಿಂದ ರಾತ್ರಿ 8ರವರೆಗೆ ಆ್ಯಪ್‌ನ ಬಳಕೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಕಾರ್‌ ಮಾಲೀಕನೇ ಪ್ರಯಾಣದ ಮೂಲ ದರ ನಿಗದಿಪಡಿಸಬಹುದು. 10 ಕಿ. ಮೀಗೆ ಗರಿಷ್ಠ ₹ 50 ನಿಗದಿಪಡಿಸಲಾಗಿದೆ. ಇದರಾಚೆಗೆ ದರ ನಿಗದಿಪಡಿಸಲು ಕಾರ್‌ ರೈಡರ್‌ಗೆ ಸಾಧ್ಯವಿಲ್ಲ. ಮೂಲ ದರದ ಶೇ 6ರಷ್ಟು ಭಾಗ ಕ್ವಿಕ್‌ ರೈಡ್‌ ಸಂಸ್ಥೆಗೆ ಸೇವಾ ಶುಲ್ಕದ ರೂಪದಲ್ಲಿ ಹೋಗುತ್ತದೆ. ಸ್ವಯಂಚಾಲಿತವಾಗಿ ಹಣವನ್ನು ಕಾರ್‌ ರೈಡರ್‌ ಖಾತೆಗೆ ವರ್ಗಾಯಿಸುವ ಸೌಲಭ್ಯ ಇದರಲ್ಲಿ ಇದೆ.

ಆಯ್ಕೆ ಅವಕಾಶ

ಕಾರ್‌ ಮಾಲೀಕರ ಪರಿಚಯ ಆಧರಿಸಿ ಅವರ ಜತೆ ಕಾರ್‌ನಲ್ಲಿ ಪ್ರಯಾಣಿಸುವುದು ಅಥವಾ ನಿರಾಕರಿಸುವುದು ರೈಡ್‌ ಟೇಕರ್‌ನ ಆಯ್ಕೆಗೆ ಬಿಡಲಾಗಿರುತ್ತದೆ.

ರೈಡ್‌ ಗಿವರ್‌ ಮತ್ತು ರೈಡ್‌ ಟೇಕರ್‌ ಪರಸ್ಪರ ಶ್ರೇಯಾಂಕ ನೀಡಬಹುದು. ಅನುಚಿತವಾಗಿ ವರ್ತಿಸಿದವರನ್ನು ನಿರ್ಬಂಧಿಸಬಹುದು. ಹೀಗೆ ಮಾಡುವುದರಿಂದ ಅನಪೇಕ್ಷಿತ ರೈಡ್‌ ಗಿವರ್‌ನ (ಕಾರ್‌ ಚಾಲಕ / ಮಾಲೀಕ) ಜತೆ ಪ್ರಯಾಣಿಸುವುದನ್ನು ತಪ್ಪಿಸಬಹುದು. ಕಾರ್‌ ಮಾಲೀಕ ಕೂಡ ತನಗೆ ಇಷ್ಟವಿಲ್ಲದ ರೈಡ್‌ ಟೇಕರ್‌ ತನ್ನ ಕಾರ್‌ನಲ್ಲಿ ಪ್ರಯಾಣಿಸುವುದನ್ನು ನಿರ್ಬಂಧಿಸಬಹುದು.

‘ವಾಹನಗಳ ಸಂಖ್ಯೆ ಕಡಿಮೆ, ದಟ್ಟಣೆ ಕಡಿಮೆ, ಮಾಲಿನ್ಯ ಕಡಿಮೆ, ಇಂಧನ ಉಳಿತಾಯ, ಮಾಲೀಕರಿಗೆ ಲಾಭ, ಬಳಕೆದಾರರಿಗೆ ಪ್ರಯಾಣ ವೆಚ್ಚದಲ್ಲಿ ಉಳಿತಾಯ ಮುಂತಾದವು ಇದರ ಪ್ರಯೋಜನಗಳಾಗಿವೆ. ಏಕಾಂಗಿತನ ಬಯಸುವವರಿಗೆ ಆರಂಭದಲ್ಲಿ ಕೆಲ ಕಾಲ ತೊಂದರೆ ಆಗಬಹುದು. ಆದರೆ ಕ್ರಮೇಣ ಈ ಸಂಸ್ಕೃತಿಗೆ ಹೊಂದಿಕೊಳ್ಳುತ್ತಾರೆ. ಬೆಂಗಳೂರಿನಲ್ಲಿ ಆರಂಭಿಸಿದಾಗ ಒಂದೀಡಿ ತಿಂಗಳಲ್ಲಿ ಕಾರ್‌ ಪೂಲಿಂಗ್‌ನ 60 ರೈಡ್‌ಗಳು ಮಾತ್ರ ದಾಖಲಾಗಿದ್ದವು. ಈಗ 9 ಮಹಾನಗರಗಳಲ್ಲಿ ಪ್ರತಿ ದಿನ 60 ಸಾವಿರಕ್ಕೆ ಏರಿಕೆಯಾಗಿದೆ. ಇದರಲ್ಲಿ ಬೆಂಗಳೂರಿನ ಕೊಡುಗೆ (ಶೇ 70) ಗಮನಾರ್ಹವಾಗಿದೆ' ಎಂದು ಶೋಭನಾ ಹೇಳುತ್ತಾರೆ.

ಆರಂಭದಲ್ಲಿ ಕಾರ್‌ ಬಳಕೆದಾರರ ಮನವೊಲಿಕೆ ಮಾಡಲು ಸಹ ಸ್ಥಾಪಕರು ಕಾರ್ಪೊರೇಟ್‌ ಸಂಸ್ಥೆಗಳಿಗೆ ತೆರಳಿ, ಅಲ್ಲಿನ ಉದ್ಯೋಗಿಗಳಿಗೆ ಕಾರ್‌ ಪೂಲಿಂಗ್‌ ಸಂಸ್ಕೃತಿಯ ಪ್ರಯೋಜನ ತಿಳಿಸಿಕೊಡಲು ತಮಗೆ ಅವಕಾಶ ಮಾಡಿಕೊಡಲು ಕೇಳಿಕೊಂಡರು. ಅದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯಿತು. 

ಕೆಲ ಲಿಖಿತ ಮತ್ತು ಅಲಿಖಿತ ನಿಯಮಗಳೂ ಇಲ್ಲಿವೆ. ಕಾರ್‌ ಮಾಲೀಕ ಸಮಯ ಪಾಲನೆ ಮಾಡಬೇಕು. ನಿಗದಿತ ಸಮಯಕ್ಕೆ ಹೊರಡಲು ಸಾಧ್ಯವಾಗದಿದ್ದರೆ ಮೊದಲೇ ತಿಳಿಸಬೇಕು. ಕಾರ್‌ ರೈಡರ್‌ಗಳು (ಸಹ ಪ್ರಯಾಣಿಕರು) ಕಾರ್‌ ಮಾಲೀಕನನ್ನು ಚಾಲಕನಂತೆ ಪರಿಗಣಿಸಬಾರದು.

ವಹಿವಾಟು ಈಗ ಲಾಭದಾಯಕವಾಗಿ ನಡೆದಿದೆ. ಬೆಂಗಳೂರು ಅಷ್ಟೇ ಅಲ್ಲದೆ, ಚೆನ್ನೈ, ಕೋಲ್ಕತ್ತ, ದೆಹಲಿ ಮತ್ತಿತರ 9 ಮಹಾನಗರಗಳಲ್ಲಿ ಸೇವೆ ವಿಸ್ತರಿಸಲಾಗಿದೆ. ಕ್ವಿಕ್‌ ರೈಡ್‌ ಬಳಕೆ ಬಂದಿರುವುದರಿಂದ ಕಚೇರಿಗೆ ಹೋಗಿ ಬರುವುದು ಸುಲಭ ಆಗಿರುವುದರಿಂದ ಅನೇಕ ಮಹಿಳೆಯರು ಕೆಲಸ ಬಿಡುವ ಆಲೋಚನೆ ಕೈಬಿಟ್ಟಿದ್ದಾರೆ. ಕುಟುಂಬದ ಜತೆ ಹೆಚ್ಚಿನ ಸಮಯ ಕಳೆಯಬಹುದು. ಶಿಸ್ತು ಬೆಳೆಸಿದೆ. ವೃತ್ತಿಪರತೆಯ ಸಂಸ್ಕೃತಿ ಮೈಗೂಡಿಸಿದೆ. ವೃತ್ತಿ ನೈಪುಣ್ಯತೆಯ ಮಾಹಿತಿ ವಿನಿಮಯಕ್ಕೆ ಅವಕಾಶ ಮಾಡಿಕೊಟ್ಟಿದೆ.

ಸಂಸ್ಥೆಯು ಬೈಕ್‌ ಪೂಲ್‌ ಸೌಲಭ್ಯವನ್ನೂ ಒದಗಿಸುತ್ತಿದೆ. ಈ ಸೌಲಭ್ಯವು ಚೆನ್ನೈನಲ್ಲಿ ಹೆಚ್ಚು ಜನಪ್ರಿಯತೆ ಪಡೆದಿದೆ. ಸಾಫ್ಟ್‌ವೇರ್‌ ಕಂಪನಿಗಳ ಹಿರಿಯ ಅಧಿಕಾರಿಗಳೂ ಕಾರ್‌ ಪೂಲಿಂಗ್‌ನಲ್ಲಿ ಭಾಗಿಯಾಗಿರುವುದು ಇದರ ಜನಪ್ರಿಯತೆಗೆ ನಿದರ್ಶನವಾಗಿದೆ ಎಂದೂ ಶೋಭನಾ ಶ್ರೀರಾಂ ಹೇಳುತ್ತಾರೆ.

ಕಾರ್‌ ಪೂಲಿಂಗ್‌ ಪರಿಕಲ್ಪನೆ

ಕಾರ್‌ನ ಮಾಲೀಕ ತಾನು ತೆರಳುವ ಮಾರ್ಗದಲ್ಲಿ ಪಯಣಿಸುವ ಸಹೋದ್ಯೋಗಿಗಳು ಅಥವಾ ಇತರ ವೃತ್ತಿನಿರತರನ್ನು ತನ್ನ ಜತೆ ಕರೆದುಕೊಂಡು ಹೋಗುವುದಕ್ಕೆ ಕಾರ್‌ ಪೂಲಿಂಗ್‌ (Car pooling) ಎನ್ನುತ್ತಾರೆ. ಒಂದೇ ಕಚೇರಿ, ತಾಣಕ್ಕೆ ತೆರಳುವವರು ಅಥವಾ ನಿಯಮಿತವಾಗಿ ನಿರ್ದಿಷ್ಟ ಮಾರ್ಗದಲ್ಲಿ ಸಾಗುವ ನಾಲ್ಕೈದು ಜನ ಒಂದೇ ಕಾರ್‌ನಲ್ಲಿ ಪ್ರಯಾಣಿಸುವುದು ಕಾರ್‌ ಪೂಲಿಂಗ್‌ ವ್ಯವಸ್ಥೆಯಾಗಿದೆ. ಇಂಧನ ಬಳಕೆ, ವಾಯುಮಾಲಿನ್ಯ ಮತ್ತು ವಾಹನಗಳ ದಟ್ಟಣೆಗೆ ಇದರಿಂದ ಕಡಿವಾಣ ಬೀಳಲಿದೆ. ಇಂಧನಕ್ಕೆ ಮಾಡುವ ವೆಚ್ಚ ಉಳಿಯಲಿದೆ. ಇದೊಂದು ಪರಿಸರ ಸ್ನೇಹಿ ಉಪಕ್ರಮವೂ ಆಗಿದೆ.

9 - ಬೆಂಗಳೂರು ಸೇರಿದಂತೆ ಸೇವೆ ಲಭ್ಯ ಇರುವ ಮಹಾನಗರ ಸಂಖ್ಯೆ

14 ಲಕ್ಷ - ನೋಂದಾಯಿತ ಬಳಕೆದಾರರು

ಶೇ 24 - ಬಳಕೆದಾರರ ಪೈಕಿ ಮಹಿಳೆಯರು

60 ಸಾವಿರ - ಪ್ರತಿ ದಿನದ ಕಾರ್‌ ಪೂಲಿಂಗ್‌ ಸಂಖ್ಯೆ

ಶೇ 70 - ಬೆಂಗಳೂರಿನಲ್ಲಿನ ವಹಿವಾಟಿನ ಪ್ರಮಾಣ

9 - ಬೆಂಗಳೂರು ಸೇರಿದಂತೆ ಸೇವೆ ಲಭ್ಯ ಇರುವ ಮಹಾನಗರ ಸಂಖ್ಯೆ

14 ಲಕ್ಷ - ನೋಂದಾಯಿತ ಬಳಕೆದಾರರು

24 - ಬಳಕೆದಾರರ ಪೈಕಿ ಮಹಿಳೆಯರು

60 ಸಾವಿರ - ಪ್ರತಿ ದಿನದ ಕಾರ್‌ ಪೂಲಿಂಗ್‌ ಸಂಖ್ಯೆ

ಶೇ 70 - ಬೆಂಗಳೂರಿನಲ್ಲಿನ ವಹಿವಾಟಿನ ಪ್ರಮಾಣ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು