ಮಂಗಳವಾರ, ಮಾರ್ಚ್ 31, 2020
19 °C
ದ್ರಾಕ್ಷಿ ಬೆಳೆಗಾರರಿಗೆ ಅನುಕೂಲ; ಕೂಲಿಯಾಳುಗಳ ಕಿರಿಕಿರಿ ತಪ್ಪಿಸಿದ ಉದ್ಯಮ

ಒಣ ದ್ರಾಕ್ಷಿ ಸಂಸ್ಕರಣೆಯಲ್ಲಿ ರೈತೋದ್ಯಮಿ..!

ಅಮರನಾಥ ಹಿರೇಮಠ Updated:

ಅಕ್ಷರ ಗಾತ್ರ : | |

Deccan Herald

ದೇವರ ಹಿಪ್ಪರಗಿ: ದ್ರಾಕ್ಷಿ ಕೃಷಿಯಲ್ಲಿ ಪಳಗಿದ ರೈತರೊಬ್ಬರು, ಒಣ ದ್ರಾಕ್ಷಿ ಸಂಸ್ಕರಣೆ ಉದ್ಯಮವನ್ನು ತಮ್ಮ ತೋಟದಲ್ಲೇ ಆರಂಭಿಸುವುದರ ಮೂಲಕ, ಸುತ್ತಮುತ್ತಲಿನ ದ್ರಾಕ್ಷಿ ಬೆಳೆಗಾರರಿಗೆ ಸಹಕಾರಿಯಾಗುವ ಜತೆಗೆ; ಯುವ ಸಮೂಹಕ್ಕೆ ಮಾದರಿಯ ರೈತೋದ್ಯಮಿಯಾಗಿ ಹೊರಹೊಮ್ಮಿದ್ದಾರೆ.

ದೇವರ ಹಿಪ್ಪರಗಿ ತಾಲ್ಲೂಕಿನ ಹರನಾಳ ಗ್ರಾಮದ ರೈತ ಮಲ್ಲನಗೌಡ ಸಿಂಗನಳ್ಳಿ ಒಂದೂವರೆ ದಶಕದಿಂದ ದ್ರಾಕ್ಷಿ ಬೆಳೆಗಾರರು. ತಮ್ಮ 75ನೇ ವಯಸ್ಸಿನಲ್ಲಿ ದ್ರಾಕ್ಷಿಯನ್ನು ಒಣ ದ್ರಾಕ್ಷಿಯನ್ನಾಗಿ ಮಾಡಿ, ಗುಣಮಟ್ಟದ ಆಧಾರದ ಮೇಲೆ ವಿಂಗಡಿಸಿ, ಸಂಸ್ಕರಣೆ ಮಾಡುವ ಯಂತ್ರಗಳನ್ನು ₹ 55 ಲಕ್ಷ ವೆಚ್ಚದಲ್ಲಿ ತಮ್ಮ ತೋಟದಲ್ಲೇ ಅಳವಡಿಸಿಕೊಂಡಿದ್ದಾರೆ.

ಈ ಯಂತ್ರದ ಸಹಕಾರದಿಂದ ತಮ್ಮ ಉತ್ಪನ್ನವನ್ನು ಸಂಸ್ಕರಿಸಿ, ಮೌಲ್ಯವರ್ಧನೆಗೊಳಿಸಿಕೊಳ್ಳುವ ಜತೆಯಲ್ಲೇ; ಸುತ್ತಮುತ್ತಲಿನ ದ್ರಾಕ್ಷಿ ಬೆಳೆಗಾರರಿಗೂ ಅನುಕೂಲ ಕಲ್ಪಿಸಿದ್ದಾರೆ.

‘12 ಎಕರೆ ಜಮೀನಿನಲ್ಲಿ ಆರು ಎಕರೆಯಲ್ಲಿ ಮಾತ್ರ ದ್ರಾಕ್ಷಿ ಬೆಳೆಯುತ್ತೇನೆ. ಒಣದ್ರಾಕ್ಷಿ ಉತ್ಪನ್ನ ತಯಾರಿಕೆ, ಗ್ರೇಡಿಂಗ್‌ ಮಾಡಲು ಕೂಲಿಯಾಳುಗಳ ಕೊರತೆ ಸಾಕಷ್ಟಿತ್ತು. ರೊಕ್ಕ ಕೊಟ್ಟರೂ ಸೀಝನ್‌ನಲ್ಲಿ ಕೂಲಿ ಕಾರ್ಮಿಕರು ಸಿಗುತ್ತಿರಲಿಲ್ಲ. ಇದು ನನ್ನೊಬ್ಬನ ಸಮಸ್ಯೆಯಲ್ಲ. ಎಲ್ಲಾ ಬೆಳೆಗಾರರ ಹಣೆಬರಹ ಇದಾಗಿತ್ತು.

ಗ್ರೇಡಿಂಗ್, ಕಲರ್‌ ಸಾಲ್ಟಿಂಗ್‌ ಸಮರ್ಪಕವಾಗಿ ನಡೆಯದಿದ್ದರಿಂದ ಮಾರುಕಟ್ಟೆಯಲ್ಲಿ ನಮ್ಮ ಉತ್ಪನ್ನಕ್ಕೆ ಸೂಕ್ತ ಬೆಲೆ ಸಿಗುತ್ತಿರಲಿಲ್ಲ. ಇದರಿಂದ ಬೇಸತ್ತು ನಾಲ್ಕು ವರ್ಷಗಳ ಹಿಂದೆ ಗ್ರೇಡಿಂಗ್‌ ಉದ್ಯಮಕ್ಕೆ ಕೈ ಹಾಕಿದೆ. ನನಗೆ ಅನುಕೂಲವಾಗುವ ಜತೆಯಲ್ಲೇ ನಮ್ಮೂರಿನ ಸುತ್ತಮುತ್ತಲಿನ 200ಕ್ಕೂ ಹೆಚ್ಚು ರೈತರಿಗೆ ಇದು ಕೃಷಿ ಪೂರಕಸ್ನೇಹಿ ಉದ್ಯಮವಾಗಿದೆ. ಜತೆಗೆ ಮೌಲ್ಯವರ್ಧನೆ ಮೂಲಕ ಹೆಚ್ಚಿನ ಧಾರಣೆ ದೊರಕಲು ಸಹಕಾರಿಯಾಗಿದೆ’ ಎಂದು ಮಲ್ಲನಗೌಡ ಸಿಂಗನಹಳ್ಳಿ ತಮ್ಮ ಉದ್ಯಮದ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ವರ್ಷದಲ್ಲಿ ನಾಲ್ಕು ತಿಂಗಳು ಮಾತ್ರ ಬೇಡಿಕೆಯ ಉದ್ಯಮ. ಫೆಬ್ರುವರಿಯಿಂದ ಮೇ ಮಾಸಾಂತ್ಯದವರೆಗೂ ನಿತ್ಯವೂ ಕಾರ್ಯ ಚಟುವಟಿಕೆ. ಏಳು ಕಾರ್ಮಿಕರು ದುಡಿಯುತ್ತಾರೆ. ದ್ರಾಕ್ಷಿ ಒಣಗಿಸಿಕೊಂಡು ಇಲ್ಲಿಗೆ ತರುವುದಷ್ಟೇ ರೈತರ ಕೆಲಸ. ನಿತ್ಯ 10ರಿಂದ 15 ಟನ್‌ ಕಲರ್ ಸಾಲ್ಟಿಂಗ್‌, ಗ್ರೇಡಿಂಗ್ ನಡೆಯಲಿದೆ.

ಕಡ್ಡಿ, ಕಸ, ಜೊಳ್ಳುಕಾಳುಗಳನ್ನು ಮೊದಲು ರಾಶಿಯಿಂದ ಯಂತ್ರ ಬೇರ್ಪಡಿಸುತ್ತದೆ. ನಂತರ ಕಲರ್‌ ಸಾಲ್ಟಿಂಗ್‌ ನಡೆಯುತ್ತದೆ. ಇದರ ಬಳಿಕ ದಪ್ಪ, ಮಧ್ಯಮ, ಸಣ್ಣ ಗಾತ್ರದ ಕಾಳುಗಳ ವಿಂಗಡಣೆ ಗ್ರೇಡ್‌ ಆಧಾರದಲ್ಲಿ ನಡೆಯಲಿದೆ. ಇದು ರೈತರ ಶ್ರಮ ತಪ್ಪಿಸಿದೆ. ಇಲ್ಲಿಂದ ನೇರವಾಗಿ ಮಾರುಕಟ್ಟೆಗೆ ಕೊಂಡೊಯ್ದು ಮಾರಬಹುದು’ ಎಂದು ಮಲ್ಲನಗೌಡ ಪುತ್ರ ಭೀಮನಗೌಡ ಸಿಂಗನಹಳ್ಳಿ ಹೇಳಿದರು.

‘ಸಬ್ಸಿಡಿ ಸಹಿತ ಸಾಲವಾಗಿ ಸಿಂದಗಿ ಎಸ್‌ಬಿಐ ಶಾಖೆ ಆರ್ಥಿಕ ನೆರವು ನೀಡಿದೆ. ನಾಲ್ಕು ವರ್ಷದಿಂದ ಉದ್ಯಮ ಯಶಸ್ವಿಯಾಗಿ ನಡೆದಿದೆ. ಸಾಲವೂ ಮುಟ್ಟುತ್ತಿದೆ. ನಮ್ಮ ಭಾಗದ ದ್ರಾಕ್ಷಿ ಬೆಳೆಗಾರರ ಬವಣೆಯೂ ತಪ್ಪಿದೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು