ಗುರುವಾರ , ಆಗಸ್ಟ್ 6, 2020
24 °C

ಆರ್ಥಿಕ ಭವಿಷ್ಯ ರೂಪಿಸುವ ಸಾಮಾಜಿಕ ಮಾಧ್ಯಮ

ಚಂದ್ರಮೋಹನ್‌ ಮೆಹ್ರಾ Updated:

ಅಕ್ಷರ ಗಾತ್ರ : | |

Prajavani

ಜಗತ್ತು ಅತ್ಯಂತ ವೇಗವಾಗಿ ಬದಲಾಗುವುದನ್ನು ಕಳೆದ ಒಂದು ದಶಕದಲ್ಲಿ ಎಲ್ಲರೂ ಅನುಭವಿಸುತ್ತಿದ್ದೇವೆ. ಆದರೆ ನಮ್ಮ ‘ಮಿಲೇನಿಯಲ್‌ ತಲೆಮಾರು’ (millennials)  (1981ರಿಂದ 1996ರೊಳಗಿನ ಅವಧಿಯಲ್ಲಿ ಜನಿಸಿದವರು) ಕಂಡಷ್ಟು ವೇಗದ ಅಭಿವೃದ್ಧಿಯನ್ನು ಅದಕ್ಕೂ ಹಿಂದಿನ ಯಾವ ತಲೆಮಾರಿನವರೂ ಕಂಡಿಲ್ಲ. ಸಾಮಾಜಿಕ ಮಾಧ್ಯಮಗಳ ಬಳಕೆಯೂ ಸೇರಿದಂತೆ ಅನೇಕ ತಂತ್ರಜ್ಞಾನ ಬದಲಾವಣೆಗಳು, ಅಭಿವೃದ್ಧಿಗಳಿಗೆ ಸಾಕ್ಷಿಯಾಗಿದ್ದಲ್ಲದೆ ಅದರ ಮೊದಲ ಫಲಾನುಭವಿಗಳೂ ಈ ತಲೆಮಾರಿನವರಾಗಿದ್ದಾರೆ.

ಜಗತ್ತಿನ ಜೊತೆ ನಿರಂತರವಾಗಿ ಸಂಪರ್ಕ ಹೊಂದಿರುವ, ‘ಜನರೇಷನ್‌ ವೈ’, ‘ಜೆನ್‌– ಝೆಡ್‌’ ಎಂದೆಲ್ಲ ಗುರುತಿಸಿಕೊಳ್ಳುವ ಈ ತಲೆಮಾರು, ಸಾಮಾಜಿಕ ಮಾಧ್ಯಮ, ಡಿಜಿಟಲ್‌ ತಂತ್ರಜ್ಞಾನವನ್ನು ದೈನಂದಿನ ಜೀವನದ ಭಾಗವಾಗಿಸಿಕೊಂಡಿದೆ. ಮಾಹಿತಿ ಸಂಗ್ರಹಕ್ಕೆ ಮತ್ತು ಸಾಮಾಜಿಕ ಸಂಪರ್ಕ ಉದ್ದೇಶಕ್ಕೆ ಈ ತಲೆಮಾರಿನವರು ಮೊಬೈಲ್‌ ಫೋನ್‌ ಅನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ. ತಮ್ಮ ಅನುಭವ, ಅಭಿಪ್ರಾಯಗಳನ್ನು ಹಂಚಿಕೊಳ್ಳಲು, ಜ್ಞಾನ ಹೆಚ್ಚಿಸಿಕೊಳ್ಳಲು ಸಹ ಇವರು ಸಾಮಾಜಿಕ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸುತ್ತಿದ್ದಾರೆ.

ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ತಂತ್ರಜ್ಞಾನ ಹಾಗೂ ಸಾಮಾಜಿಕ ಮಾಧ್ಯಮವು ಅವರಿಗೆ ಅತ್ಯುತ್ತಮ ವೇದಿಕೆಯಾಗಿದೆ.
ಒಂದು ತಲೆಮಾರು ಸಾಮಾಜಿಕ ಮಾಧ್ಯಮವನ್ನು ಅಥವಾ ತಂತ್ರಜ್ಞಾನವನ್ನು ಹೆಚ್ಚಾಗಿ ಬಳಸಿದ್ದರೆ ಅದರಲ್ಲೇನು ವಿಶೇಷವಿದೆ ಎಂಬ ಪ್ರಶ್ನೆ ಬರಬಹುದು. 40 ಕೋಟಿಯಷ್ಟಿರುವ ಈ ವಯೋಮಾನದ ಜನಸಂಖ್ಯೆಯು, ದೇಶದ ಒಟ್ಟಾರೆ ಜನಸಂಖ್ಯೆಯ ಮೂರನೇ ಒಂದರಷ್ಟಾಗುತ್ತದೆ. ದೇಶದ ಒಟ್ಟಾರೆ ಕಾರ್ಮಿಕರಲ್ಲಿ ಅವರ ಪ್ರಮಾಣ ಗಣನೀಯವಾಗಿರುವುದರಿಂದ ಈ ಸಮುದಾಯವೇ ಮುಂದೆ ದೇಶದ ಅರ್ಥವ್ಯವಸ್ಥೆಯನ್ನು ಮುನ್ನಡೆಸುವ ಸಾಧ್ಯತೆ ಹೆಚ್ಚಾಗಿದೆ.

ಕುಟುಂಬದ ಒಟ್ಟು ಆದಾಯದ ಶೇ 70ರಷ್ಟನ್ನು ಈ ಸಮುದಾಯವೇ ಗಳಿಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಇವರ ಆಯ್ಕೆಗಳು ಹಾಗೂ ಮಹತ್ವಾಕಾಂಕ್ಷೆಗಳೇ ದೇಶದ ಆರ್ಥಿಕತೆ ಮತ್ತು ಅಭಿವೃದ್ಧಿಯ ಗುರಿಯನ್ನು ನಿರ್ಧರಿಸಲಿವೆ. ಆದ್ದರಿಂದ ‘ಮಿಲೇನಿಯಲ್‌ ತಲೆಮಾರಿನ’ ಆಸೆ– ಆಕಾಂಕ್ಷೆಗಳನ್ನು ಅರ್ಥಮಾಡಿಕೊಳ್ಳದ ಹೊರತು ಭಾರತೀಯರ ನಡವಳಿಕೆ ಮತ್ತು ಬಳಕೆಯ ಮಾದರಿಗಳನ್ನು ಕುರಿತು ನಡೆಸುವ ಯಾವುದೇ ಸಾಮಾಜಿಕ ಸಮೀಕ್ಷೆಯು ಪರಿಪೂರ್ಣ ಎನಿಸಲಾರದು.

ಭಾರತೀಯರ ಜೀವನದ ಗುರಿಗಳ ಬಗ್ಗೆ ನಾವು ‘ಕಾಂಟರ್‌ ಐಎಂಬಿಆರ್‌’ ಜೊತೆ ಸೇರಿ ಅಧ್ಯಯನಕ್ಕೆ ಮುಂದಾದಾಗ, ಮಿಲೇನಿಯಲ್‌ ತಲೆಮಾರಿನ (ಜೆನ್‌– ವೈ) ಆರ್ಥಿಕ ಭವಿಷ್ಯ ನಿರ್ಧರಿಸುವಲ್ಲಿ ಸಾಮಾಜಿಕ ಮಾಧ್ಯಮಗಳು ಮತ್ತು ಅಲ್ಲಿ ಪ್ರಕಟವಾಗುವ ಮಾಹಿತಿಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂಬುದನ್ನು ಕಂಡುಕೊಂಡೆವು. ಈ ತಲೆಮಾರಿನ ಜೀವನ ಗುರಿ ಮತ್ತು ಆಯ್ಕೆಗಳ ಮೇಲೆ ಸಾಮಾಜಿಕ ಜಾಲ ತಾಣಗಳು ಮತ್ತು ಪಾಪ್ ಸಂಸ್ಕೃತಿ ಪರಿಣಾಮ ಬೀರುತ್ತಿದೆ. ಇವರು ವೈಯಕ್ತಿಕ ಆಯ್ಕೆಗೆ ಆದ್ಯತೆ ನೀಡುತ್ತಾರೆ ಎಂಬುದು ಬಜಾಜ್ ಅಲಯನ್ಸ್ ಲೈಫ್ ಸಂಸ್ಥೆ ನಡೆಸಿದ್ದ ಮೊದಲ ಸಮೀಕ್ಷೆಯಲ್ಲಿ ಕಂಡುಬಂದಿತ್ತು.

ಯುವ ಜನಾಂಗದ ಬದುಕಿನಲ್ಲಿ ಸಾಮಾಜಿಕ ಮಾಧ್ಯಮಗಳ ಪರಿಣಾಮ ಎಷ್ಟು ಎಂಬುದನ್ನು ತಿಳಿಯುವುದಕ್ಕೂ ಮುನ್ನ, ಈ ತಲೆಮಾರಿನ ಜೀವನದ ಗುರಿಗಳನ್ನು ತಿಳಿಯುವುದು ಅಗತ್ಯ ಎನಿಸುತ್ತದೆ. ಮಿಲೇನಿಯಲ್‌ ತಲೆಮಾರಿನ ಗುರಿಯಲ್ಲಿ ‘ನಾವು’ ಎನ್ನುವುದು ಇದ್ದರೂ, ‘ನಾನು’ ಎಂಬುದು ಢಾಳಾಗಿ ಪ್ರತಿಬಿಂಬಿಸುತ್ತಿರುವುದನ್ನು ಸಮೀಕ್ಷೆ ಎತ್ತಿ ತೋರಿಸಿದೆ. ಅಂದರೆ ಸ್ವಂತ ಮನೆ ಹೊಂದುವುದು, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಭಾರತೀಯರ ಆದ್ಯತೆಯಾಗಿದ್ದರೂ ಉದ್ಯಮಶೀಲತೆ, ಪ್ರಯಾಣ, ಆರೋಗ್ಯ ಮುಂತಾದವುಗಳು ಸಹ ಇವರ ಆದ್ಯತೆಗಳಾಗುತ್ತಿವೆ.

ಆರೋಗ್ಯಕ್ಕೆ ಸಂಬಂಧಿಸಿದ ಗುರಿ: ಈ ತಲೆಮಾರಿನ ಮೂವರಲ್ಲಿ ಒಬ್ಬರು ಆರೋಗ್ಯಕ್ಕೆ ಸಂಬಂಧಿಸಿದ ಕೆಲವು ಗುರಿಗಳನ್ನು ಇಟ್ಟುಕೊಂಡಿರುತ್ತಾರೆ. ಶೇ 40ರಷ್ಟು ಮಂದಿ ‘ಸಮಾಧಾನಕರ ನಿವೃತ್ತಿ ಜೀವನ’ವನ್ನು ಗುರಿಯಾಗಿಟ್ಟುಕೊಂಡಿದ್ದಾರೆ. ಜೊತೆಗೆ ಇವರು ವ್ಯಾಪಕವಾಗಿ ಪ್ರವಾಸ ಮಾಡುತ್ತಾ, ವೃತ್ತಿ ಹಾಗೂ ವೈಯಕ್ತಿಕ ಆಸಕ್ತಿಗಳ ನಡುವೆ ಸಮತೋಲನ ಕಾಯ್ದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಸಿನಿಮಾಗಳು, ಸುದ್ದಿ ಮಾಧ್ಯಮಗಳು, ಪ್ರೇರಣಾದಾಯಕ ಭಾಷಣಗಳನ್ನು ಮಾಡುವವರು, ಸೆಲೆಬ್ರಿಟಿಗಳು ಹೊಸ ತಲೆಮಾರಿನ ಮಹತ್ವಾಕಾಂಕ್ಷೆಗಳಿಗೆ ಜೀವ ತುಂಬುತ್ತಿದ್ದಾರೆ. ಆದ್ದರಿಂದ ಹಣಕಾಸು ಸೇವೆ ಒದಗಿಸುವ ಕಂಪನಿಗಳು ಇವರ ಮನಸ್ಸನ್ನು ಗೆಲ್ಲಬೇಕಾದರೆ ಸಾಮಾಜಿಕ ಮಾಧ್ಯಮಗಳಿಗೆ ಹೆಚ್ಚಿನ ಒತ್ತು ನೀಡಿ, ಬೇರೆ ಬೇರೆ ಮಾರ್ಗಗಳನ್ನು ಅನುಸರಿಸಬೇಕಾಗಿದೆ.

ಪಾರದರ್ಶಕತೆಗೆ ಈ ತಲೆಮಾರು ಅತ್ಯುಚ್ಚ ಸ್ಥಾನವನ್ನು ನೀಡುತ್ತದೆ. ಆದ್ದರಿಂದ ಹಣಕಾಸು ಸಂಸ್ಥೆಗಳು ತಮ್ಮ ಸಂವಹನ ಹಾಗೂ ಉತ್ಪನ್ನಗಳು ವಿಶ್ವಾಸಾರ್ಹ ಮತ್ತು ತಾರತಮ್ಯರಹಿತವಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಈ ತಲೆಮಾರು ಆರ್ಥಿಕ ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆ ಹಿಂದಿನವರಿಗಿಂತ ಹೆಚ್ಚಾಗಿರುವುದರಿಂದ ಹೆಚ್ಚಿನ ಭದ್ರತೆಯನ್ನು ಕೊಡುವಂಥ ಉತ್ಪನ್ನಗಳಲ್ಲಿ ಹೂಡಿಕೆ ಮಾಡಲು ಅವರು ಬಯಸುತ್ತಾರೆ. ಸಮಾಧಾನಕರ ಸಂಗತಿ ಏನೆಂದರೆ ಇವರಲ್ಲಿ ಶೇ 60ರಷ್ಟು ಮಂದಿ ಜೀವವಿಮೆಯನ್ನು ಹೂಡಿಕೆಗೆ ಮೊದಲ ಆದ್ಯತೆಯಾಗಿ ಪರಿಗಣಿಸುತ್ತಿದ್ದಾರೆ ಎಂಬುದು. ಹೂಡಿಕೆಯ ನಿರಂತರತೆಯನ್ನು ಕಾಯ್ದುಕೊಳ್ಳುವುದರ ಜೊತೆಗೆ ಆ ಹೂಡಿಕೆಯಿಂದ ಇನ್ನಷ್ಟು ಸಂಪತ್ತು ಸೃಷ್ಟಿಸುವುದರ ಸಾಧ್ಯತೆಯ ಬಗ್ಗೆ  ಸಾಮಾಜಿಕ ಮಾಧ್ಯಮಗಳ ಮೂಲಕವೇ ಈ ತಲೆಮಾರಿಗೆ ತಿಳಿವಳಿಕೆ ನೀಡುವ ಅಗತ್ಯವಿದೆ.

ಸಾಮಾಜಿಕ ಮಾಧ್ಯಮ ಮತ್ತು ವೈಯಕ್ತಿಕ ಸಂಪರ್ಕಗಳ ಮೂಲಕ ಮಾತ್ರ ಹೊಸ ತಲೆಮಾರಿನ ಬದುಕಿನ ನಿರ್ಧಾರಗಳ ಮೇಲೆ ಪರಿಣಾಮ ಉಂಟುಮಾಡಬಹುದು. ಈ ಪೀಳಿಗೆಯ ಅಗತ್ಯಗಳಿಗೆ ಸೂಕ್ತವಾಗಿ ಪ್ರತಿಕ್ರಿಯಿಸುವ ಮೂಲಕ ದೇಶದಲ್ಲಿನ ಬಳಕೆಯ ಸಾಮರ್ಥ್ಯವನ್ನು ಪೂರ್ಣ ಪ್ರಮಾಣದಲ್ಲಿ ಅರಿತುಕೊಳ್ಳಲು ಮತ್ತು ಆ ಮೂಲಕ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ಕಂಪನಿಗಳಿಗೆ ಸಾಧ್ಯವಾಗುವುದು.

(ಲೇಖಕ: ಬಜಾಜ್‌ ಅಲಯನ್ಸ್‌ ಲೈಫ್‌ ಇನ್ಶುರೆನ್ಸ್‌ನ ಮುಖ್ಯ ಮಾರುಕಟ್ಟೆ ಅಧಿಕಾರಿ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು